ನವದೆಹಲಿ:ಕೃಷಿ ಸಂಬಂಧಿತ ಮೂರು ಹೊಸ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಭಾನುವಾರ ಸುಮಾರು 4 ತಾಸು ದೆಹಲಿ-ಜೈಪುರ ಯಮುನಾ ಎಕ್ಸ್​ಪ್ರೆಸ್ ಹೆದ್ದಾರಿ ತಡೆ ನಡೆಸಿದರು. ರೈತರು ರಾಜಸ್ಥಾನ-ಹರಿಯಾಣ ಗಡಿಯಲ್ಲಿರುವ ಷಹಜಹಾನ್​ಪುರದಿಂದ ಟ್ರಾಕ್ಟರ್​ಗಳ ಮೆರವಣಿಗೆ ನಡೆಸುವ ಮೂಲಕ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಸ್ವರಾಜ್ ಇಂಡಿಯಾದ ಮುಖ್ಯಸ್ಥ ಯೋಗೇಂದ್ರ ಯಾದವ್ ಮತ್ತು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಸಹ ಟ್ರಾ್ಯಕ್ಟರ್ ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಮಧ್ಯಾಹ್ನದ ವೇಳೆಗೆ ಹೆದ್ದಾರಿಯು ಭಾಗಶಃ ಸಂಚಾರಕ್ಕೆ ಮುಕ್ತವಾಯಿತು.
ಈ ಮಧ್ಯೆ ರೈತ ಮುಖಂಡರ ಜತೆ ಚಿಲ್ಲಾ ಬಳಿಯ ನೋಯ್ಡಾ-ದೆಹಲಿ ಗಡಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಸಂಬಂಧ ರಕ್ಷಣಾ ಸಚಿವ ರಾಜನಾಥ ಸಿಂಗ್ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಶನಿವಾರ ರಾತ್ರಿಯಿಂದ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಪ್ರಾರಂಭವಾಗಿದೆ. ಸೋಮವಾರದಿಂದ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿರುವ ರೈತರು, ದೇಶಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಪ್ರತಿಭಟನೆ ಭಾನುವಾರ 18ನೇ ದಿನಕ್ಕೆ ಕಾಲಿಟ್ಟಿದ್ದು, ಜನರು ಸೇರುವಿಕೆ ಹೆಚ್ಚಿದೆ. ಪಂಜಾಬ್ ಮತ್ತು ಹರಿಯಾಣಗಳಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಧರಣಿ ಸ್ಥಳಕ್ಕೆ ಆಗಮಿಸಿದ್ದಾರೆ.
ಪ್ರತಿಭಟನೆಗೆ ಕೈಜೋಡಿಸಿದ ಕಿರಿಯ ಹೋರಾಟಗಾರ್ತಿ9 ವರ್ಷದ ಪರಿಸರ ಸಂರಕ್ಷಣಾ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾಳೆ. ಸಿಂಘು ಗಡಿಯಲ್ಲಿ ಪೋಸ್ಟರ್​ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಲಿಸಿಪ್ರಿಯಾ, ರೈತರೊಂದಿಗೆ ವಿಶ್ವಾದ್ಯಂತದ ಪರಿಸರ ಕಾರ್ಯಕರ್ತರಿದ್ದಾರೆ, ನನ್ನ ಧ್ವನಿ ಪ್ರಪಂಚದಾದ್ಯಂತ ತಲುಪುತ್ತದೆ ಎಂದು ಹೇಳಿದ್ದಾಳೆ. ರೈತರಿಲ್ಲದಿದ್ದರೆ ಆಹಾರ ಇರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾಳೆ.
ಪಂಜಾಬ್ ಡಿಐಜಿ ರಾಜೀನಾಮೆರೈತರ ಪ್ರತಿಭಟನೆಯನ್ನು ಬೆಂಬಲಿಸಿ ಚಂಡೀಗಢದ ಕಾರಾಗೃಹಗಳ ಡಿಐಜಿ ಲಿಖ್ಮಿಂದರ್ ಸಿಂಗ್ ಜಖರ್ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ. ಮೂರು ತಿಂಗಳ ನೋಟಿಸ್ ಅವಧಿ ಮತ್ತು ಇತರ ಬಾಕಿಗಳ ಹಣವನ್ನು ಜಮಾ ಮಾಡಲು ನಾನು ಸಿದ್ಧನಿದ್ದೇನೆ. ನಾನು ಮೊದಲು ರೈತ, ನಂತರ ಪೊಲೀಸ್ ಅಧಿಕಾರಿ. ಇಂದು ನನಗೆ ಯಾವುದೇ ಸ್ಥಾನ ಸಿಕ್ಕರೂ, ಅದಕ್ಕೆ ಕಾರಣ ನನ್ನ ತಂದೆ ಹೊಲಗಳಲ್ಲಿ ಕೃಷಿಕರಾಗಿ ಕೆಲಸ ಮಾಡುತ್ತಿದ್ದದ್ದು. ಹೀಗಾಗಿ ನಾನು ರೈತರ ಹೋರಾಟವನ್ನು ಬೆಂಬಲಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಲಿಖ್ಮಿಂದರ್ ಸಿಂಗ್ ಹೇಳಿದ್ದಾರೆ.
ರೈತರಿಗೆ ಐಆರ್​ಸಿಟಿಸಿ ಇ-ಮೇಲ್ರೈತರ ಪ್ರತಿಭಟನೆ ತೀವ್ರವಾಗುತ್ತಿರುವ ನಡುವೆಯೇ ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​ಸಿಟಿಸಿ) ಪಂಜಾಬ್​ನ ಜನರು ಹಾಗೂ ಸಿಂಗ್ ಎಂಬ ಉಪನಾಮ ಹೊಂದಿರುವವರಿಗೆ ‘ಸಿಖ್​ರೊಂದಿಗೆ ಮೋದಿ ಮತ್ತು ಅವರ ಸರ್ಕಾರದ ವಿಶೇಷ ಸಂಬಂಧ’ ಎಂಬ 47 ಪುಟಗಳ ಸಂದೇಶವನ್ನು ಇ-ಮೇಲ್ ಮೂಲಕ ಕಳುಹಿಸುತ್ತಿದೆ.
ಕೇಂದ್ರದ ನಿರ್ಧಾರ ವಿಚಿತ್ರವಾಗಿದೆ. ನೂತನ ಕೃಷಿ ಕಾಯ್ದೆಗಳು ರೈತರಿಗೆ ಐತಿಹಾಸಿಕ ಉಡುಗೊರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಕೃಷಿಕರಿಗೆ ಈ ಉಡುಗೊರೆ ಬೇಡವಾಗಿದೆ.| ಯೋಗೇಂದ್ರ ಯಾದವ್ಸ್ವರಾಜ್ ಇಂಡಿಯಾ ಮುಖ್ಯಸ್ಥ
ರೈತರ ಪ್ರತಿಭಟನೆಯ ಲಾಭ ಪಡೆಯಲು ದೇಶ ವಿರೋಧಿ ತುಕ್ಡೆ ತುಕ್ಡೆ ಗ್ಯಾಂಗ್ ಪ್ರಯತ್ನಿಸುತ್ತಿವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರನ್ನು ಗೌರವಿಸುತ್ತದೆ. ಆದರೆ ಅವರ ಮಧ್ಯೆ ಸೇರಿರುವ ತುಕ್ಡೆ ಗ್ಯಾಂಗ್ ವಿರುದ್ಧ ಕ್ರಮ ನಿಶ್ಚಿತ.| ರವಿಶಂಕರ್ ಪ್ರಸಾದ್ಕೇಂದ್ರ ಸಚಿವ
ಖಲಿಸ್ತಾನ ಹೋರಾಟಗಾರರಿಂದ ಗಾಂಧಿ ಪ್ರತಿಮೆ ವಿರೂಪಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ರೈತರನ್ನು ಬೆಂಬಲಿಸಿ ಅಮೆರಿಕದ ವಾಷಿಂಗ್ಟನ್​ನಲ್ಲಿ ಭಾರತೀಯ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗುಂಪೊಂದು ಅಲ್ಲಿದ್ದ ಗಾಂಧೀಜಿಯ ಪ್ರತಿಮೆಯನ್ನು ವಿರೂಪಗೊಳಿಸಿದೆ. ಪ್ರತಿಭಟನಾ ನಿರತರ ಗುಂಪುನ ನಡುವೆ ಖಲಿಸ್ತಾನ ಪ್ರತ್ಯೇಕತಾವಾದಿ ಧ್ವಜಗಳು ಕಂಡು ಬಂದಿದ್ದು, ಪ್ರತಿಮೆ ವಿರೂಪಗೊಳಿಸಿದ ಕೃತ್ಯದಲ್ಲಿ ಅವರು ಭಾಗಿಯಾಗಿದ್ದರು ಎಂದು ರಾಯಭಾರ ಕಚೇರಿ ಆರೋಪಿಸಿದೆ. ಗ್ರೇಟರ್ ವಾಷಿಂಗ್ಟನ್, ಮೇರಿಲ್ಯಾಂಡ್, ವರ್ಜೀನಿಯಾ, ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ, ಇಂಡಿಯಾನಾ, ಓಹಿಯೋ ಮತ್ತು ಉತ್ತರ ಕೆರೊಲಿನಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಿಖ್ಖರು ವಾಷಿಂಗ್ಟನ್​ನಲ್ಲಿ ಶನಿವಾರ ರ‍್ಯಾಲಿ ನಡೆಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + fifteen =
Remember me
