ನವದೆಹಲಿ:ಕೇಂದ್ರದ ಕೃಷಿ ಕಾನೂನುಗಳನ್ನು ವ್ಯಾಪಕವಾಗಿ ವಿರೋಧಿಸುತ್ತಿರುವ ರೈತ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರದ ಸಚಿವರು ಎರಡನೇ ಸುತ್ತಿನ ಮಾತುಕತೆ ನಡೆಸಿದ್ದು, ಒಮ್ಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಡಿ. 5ರಂದು ಮಧ್ಯಾಹ್ನ 2.30ಕ್ಕೆ ಮೂರನೇ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ಸುಮಾರು 7 ಗಂಟೆ ನಡೆದ 2ನೇ ಸುತ್ತಿನ ಮಾತುಕತೆ ಬಿಕ್ಕಟ್ಟು ಶಮನಗೊಳಿಸುವ ಸುಳಿವನ್ನು ನೀಡಿದೆ ಎಂದು ಸರ್ಕಾರ ಮತ್ತು ರೈತ ಮುಖಂಡರು ಭಾವಿಸಿದ್ದಾರೆ. ರೈತರ ಹಿತ ಕಾಪಾಡುವುದಾಗಿ ಭರವಸೆ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕನಿಷ್ಠ ಬೆಂಬಲ ಬೆಲೆ ರದ್ದಾಗುವ ಪ್ರಶ್ನೆಯೇ ಇಲ್ಲ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಪುನರುಚ್ಚರಿಸಿದ್ದಾರೆ. ರೈತರ ಹಿತಾಸಕ್ತಿಗೆ ಅಪಾಯಕಾರಿ ಎಂದು ವಾದಿಸಲಾಗುತ್ತಿರುವ ಅಂಶಗಳ ಬಗ್ಗೆ ಕೇಂದ್ರ ಪರಿಶೀಲನೆ ನಡೆಸಲಿದೆ ಎಂದಿದ್ದಾರೆ.
ಸಭೆ ಬಳಿಕ ಮಾಧ್ಯಮ ಜತೆ ಮಾತನಾಡಿದ ಸಚಿವ ತೋಮರ್, ನಾವು ಮುಕ್ತ ಮನಸ್ಸಿನಿಂದ ರೈತರೊಂದಿಗೆ ಸಂವಾದ ನಡೆಸಿದ್ದೇವೆ. ಸರ್ಕಾರಕ್ಕೆ ಯಾವುದೇ ಅಹಂ ಇಲ್ಲ. ಹೊಸ ಕಾನೂನು ಎಪಿಎಂಸಿಗಳನ್ನು ಕೊನೆಗೊಳಿಸುತ್ತವೆ ಎಂಬುದು ರೈತರ ಆತಂಕ. ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿಗೆ ಕೊಂಡೊಯ್ಯುವ ಅಧಿಕಾರ ವನ್ನು ರೈತರಿಗೆ ಈ ಕಾನೂನು ನೀಡಿದೆ. ಎಸ್​ಡಿಎಂಗಳು ಕೆಳ ನ್ಯಾಯಾಲಯಗಳಾಗಿರುವುದರಿಂದ ಮೇಲ್ಮಟ್ಟದ ನ್ಯಾಯಾಲಯ ಗಳಿಗೆ ಹೋಗುವ ಅವಕಾಶವೂ ಇರಬೇಕು ಎಂಬ ರೈತ ಸಂಘಗಳ ಬೇಡಿಕೆಯನ್ನು ಕೇಂದ್ರ ಪರಿಗಣಿಸಲಿದೆ ಎಂದು ತಿಳಿಸಿದ್ದಾರೆ.
ಖಾಸಗಿ ವ್ಯಾಪಾರಿಗಳ ನೋಂದಣಿ:ಕೃಷಿ ಮಂಡಿಯಿಂದ ಹೊರಗೆ ಖಾಸಗಿಯಾಗಿ ಕೃಷಿ ಉತ್ಪನ್ನಗಳ ವ್ಯಾಪಾರ ನಡೆಯುವುದಾದರೆ, ಅದು ಪ್ಯಾನ್​ಕಾರ್ಡ್​ನ್ನು ಆಧರಿಸಿ ನಡೆಯಲಿದೆ. ಈಗ ಯಾರೂ ಬೇಕಾದರೂ ಪ್ಯಾನ್​ಕಾರ್ಡ್ ಹೊಂದಬಹುದು. ಹೀಗಾಗಿ, ವ್ಯಾಪಾರಿಯನ್ನು ಅಧಿಕೃತವಾಗಿ ನೋಂದಾಯಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿದೆ. ಇದನ್ನೂ ನಾವು ಪರಿಗಣಿಸಲಿದ್ದೇವೆ ಎಂದು ತೋಮರ್ ಮಾಹಿತಿ ಹಂಚಿಕೊಂಡಿದ್ದಾರೆ. ಎಪಿಎಂಸಿಗಳ ಬಳಕೆ ಹಾಗೂ ಅವುಗಳ ಬಲ ಹಿಗ್ಗಿಸುವ ಬಗ್ಗೆ ಕೇಂದ್ರ ಚಿಂತನೆ ನಡೆಸಲಿದೆ. ಎಪಿಎಂಸಿ ಅಲ್ಲದೆ, ಖಾಸಗಿ ಮಂಡಿಗಳಲ್ಲಿ ಕೃಷಿ ಉತ್ಪನ್ನ ವ್ಯಾಪಾರ ವಹಿವಾಟಿಗೆ ಹೊಸ ಕಾನೂನು ಅವಕಾಶ ನೀಡಿದೆ. ಎಪಿಎಂಸಿ ಕಾಯ್ದೆ ಅಡಿಯಲ್ಲಿ ಖಾಸಗಿ ಮಂಡಿಗಳಿಗೂ ಸಮಾನ ತೆರಿಗೆ ವಿಧಿಸುವ ಬಗ್ಗೆಯೂ ನಾವು ಆಲೋಚಿಸಲಿದ್ದೇವೆ ಎಂದು ತೋಮರ್ ಹೇಳಿದ್ದಾರೆ.
ಕೇಸ್ ವಾಪಸ್ ಪಡೆಯಿರಿ:ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹರಿಯಾಣ ರೈತರ ವಿರುದ್ಧ ದಾಖಲಾಗಿರುವ ಕೇಸುಗಳನ್ನು ವಾಪಸ್ ಪಡೆದುಕೊಳ್ಳಿ ಎಂದು ಮೈತ್ರಿಪಕ್ಷ ಜೆಜೆಪಿ ಒತ್ತಾಯಿಸಿದೆ. ರೈತರಲ್ಲಿ ಸರ್ಕಾರದ ಬಗ್ಗೆ ಅಪನಂಬಿಕೆ ಉಂಟಾಗಬಾರದು. ಹೀಗಾಗಿ ತಕ್ಷಣವೇ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಜೆಜೆಪಿ ನಾಯಕ ದಿಗ್ವಿಜಯ ಸಿಂಗ್ ಚೌಟಾಲಾ ಹೇಳಿದ್ದಾರೆ.
ಹೊಸ ಕೃಷಿ ಕಾನೂನುಗಳ ಮೂಲಕ ಕೇಂದ್ರ ಸರ್ಕಾರ ರೈತರ ಬೆನ್ನೆಲುಬನ್ನೇ ಮುರಿದಿದೆ ಎಂದು ಆಕ್ರೋಶ ಹೊರಹಾಕಿರುವ ಪಂಜಾಬ್ ಮಾಜಿ ಸಿಎಂ, ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್, ಪದ್ಮವಿಭೂಷಣ ಪುರಸ್ಕಾರವನ್ನು ರಾಷ್ಟ್ರಪತಿಯವರಿಗೆ ವಾಪಸ್ ನೀಡಿದ್ದಾರೆ. ಕಳೆದ ಅಧಿವೇಶನದ ವೇಳೆ ಕೇಂದ್ರ ಸರ್ಕಾರ ಕೃಷಿ ಕಾನೂನುಗಳಿಗೆ ಸಂಸತ್ತಿನ ಅನುಮೋದನೆ ಪಡೆದ ಬೆನ್ನಲ್ಲೇ ಎನ್​ಡಿಎ ಮೈತ್ರಿಕೂಟದಿಂದ ಅಕಾಲಿದಳ ಹೊರನಡೆದಿತ್ತು. ಪಂಜಾಬ್ ಕೃಷಿಕರ ವಿರೋಧ ಕಟ್ಟಿಕೊಂಡು ರಾಜ್ಯದಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದೇ ಅಕಾಲಿದಳ ಮೈತ್ರಿಕೂಟ ತೊರೆದಿತ್ತು.
ದೆಹಲಿಯ ವಿಜ್ಞಾನ ಭವನದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ರೈತ ಮುಖಂಡರು ಮತ್ತು ಕೇಂದ್ರದ ಪ್ರತಿನಿಧಿಗಳ ಮಧ್ಯೆ ಸಭೆ ಆರಂಭಗೊಂಡಿತ್ತು. ಊಟದ ವಿರಾಮದ ವೇಳೆ ರೈತರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತಾದರೂ, ಸರ್ಕಾರದ ಊಟ ನಮಗೆ ಬೇಕಿಲ್ಲ ಎಂದು ತಿರಸ್ಕರಿಸಿದ ರೈತರು, ತಮ್ಮ ಬೆಂಬಲಿಗರಿಂದಲೇ ವಿಜ್ಞಾನ ಭವನಕ್ಕೆ ಊಟ ತರಿಸಿಕೊಂಡು ಪರಸ್ಪರ ಹಂಚಿಕೊಂಡು ತಿಂದರು. ಸಂಜೆ ವೇಳೆಯ ಚಹಾವನ್ನೂ ರೈತ ಬಾಂಧವರಿಂದಲೇ ತರಿಸಿಕೊಂಡಿದ್ದರು.
ಕೃಷಿ ಕಾಯ್ದೆಯಲ್ಲಿರುವ ಲೋಪಗಳನ್ನು ಕೇಂದ್ರ ಸರ್ಕಾರದ ಎದುರು ಇಟ್ಟಿದ್ದೇವೆ. ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ತರುವುದಾಗಿ ಅವರು ಭರವಸೆ ನೀಡಿದ್ದಾರೆ. ತಿದ್ದುಪಡಿ ಬೇಡ, ಕಾಯ್ದೆ ಹಿಂಪಡೆಯಬೇಕು ಎಂಬುದು ನಮ್ಮ ಆಗ್ರಹ. ಬೆಂಬಲ ಬೆಲೆ ಸರಿಯಾಗಿ ಜಾರಿಗೆ ಬರಲು ಪ್ರತ್ಯೇಕ ಕಾಯ್ದೆ ಜಾರಿಗೆ ತರುವಂತೆಯೂ ಒತ್ತಾಯಿಸಿದ್ದೇವೆ.
|ಬಲದೇವ್ ಸಿಂಗ್ ಸಿರ್ಸಾರೈತ ಮುಖಂಡ
ಈ ಕಾನೂನನ್ನು ನಾವು ಒಪ್ಪಲ್ಲ. ಕೇಂದ್ರದ ಮೇಲೆ ಮತ್ತೆ ಒತ್ತಡ ಹಾಕಲಿದ್ದೇವೆ. ಕಾನೂನು ವಾಪಸ್ ಪಡೆಯುವುದಾಗಿ ಕೇಂದ್ರ ಹೇಳಬೇಕು. ಮುಂದಿನ ಸಭೆಯಲ್ಲಿ ಈ ಬಗ್ಗೆ ತೀರ್ವನವಾಗುವ ಸಾಧ್ಯತೆಯಿದೆ.
|ಹರ್ಜಿಂದರ್ ಸಿಂಗ್ ಟಂಡಾಆಜಾದ್ ಕಿಸಾನ್ ಸಂಘರ್ಷ ಸಮಿತಿ ಮುಖಂಡ
ಕನಿಷ್ಠ ಬೆಂಬಲ ಬೆಲೆ ಬಗ್ಗೆ ಕೇಂದ್ರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. 2ನೇ ಸುತ್ತಿನ ಮಾತುಕತೆ ಪರಿಸ್ಥಿತಿ ಸುಧಾರಿಸುವ ಸುಳಿವು ನೀಡಿದೆ.
|ರಾಕೇಶ್ ಟಿಕಾಯತ್ಭಾರತೀಯ ಕಿಸಾನ್ ಯೂನಿಯನ್ ವಕ್ತಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 12 =
Remember me
