ನವದೆಹಲಿ:‘ಕೃಷಿಗೆ ಸಂಬಂಧಿಸಿ ನಾನು ಏನೆಲ್ಲ ಮಾಡಿದ್ದೇನೋ ಅದು ದೇಶದ ರೈತರಿಗಾಗಿ. ಆದರೆ, ಈಗ ನಾನು ಏನು ಮಾಡುತ್ತಿದ್ದೇನೋ, ಅದೂ ದೇಶಕ್ಕಾಗಿ…’ಕೃಷಿ ಕ್ಷೇತ್ರದ ಆಮೂಲಾಗ್ರ ಸುಧಾರಣೆಗಾಗಿ ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಸುಧಾರಣಾ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಘೋಷಿಸಿದಾಗ ಬೇಸರ ಅವರ ಮುಖದಲ್ಲಿ ಮಡುಗಟ್ಟಿತ್ತು. 3 ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಮನಸ್ಸಿಲ್ಲದಿದ್ದರೂ, ದಿಲ್ಲಿ ಗಡಿಯಲ್ಲಿ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆ ಹಾಗೂ ಎದುರಾಳಿ ರಾಜಕೀಯ ಪಕ್ಷಗಳು ಇದನ್ನೇ ಚುನಾವಣೆಗೆ ಅಸ್ತ್ರವನ್ನಾಗಿ ಬಳಸುತ್ತಿರುವುದರಿಂದ ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆದುಕೊಳ್ಳಲು ತೀರ್ವನಿಸಿದೆ ಎಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮೋದಿ ತಿಳಿಸಿದ್ದಾರೆ.
ಅಧಿವೇಶನದಲ್ಲೇ ವಾಪಸ್:ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ಮೂರು ಕಾಯ್ದೆಗಳನ್ನು ಹಿಂಪಡೆಯ ಲಾಗುವುದು. ದಿಲ್ಲಿ ಗಡಿಗಳಲ್ಲಿ ಪ್ರತಿಭಟನಾನಿರತ ರೈತರು ತಮ್ಮ ಹೋರಾಟ ಕೊನೆಗೊಳಿಸಿ ತಮ್ಮ ಮೂಲ ರಾಜ್ಯಗಳಿಗೆ ವಾಪಸ್ ಹೋಗಬೇಕೆಂದು ಮನವಿ ಮಾಡುತ್ತೇನೆ.
ಗುರುಪರಬ್​ನ ಈ ಶುಭದಿನದಂದು ಪ್ರತಿಭಟನೆ ನಿಲ್ಲಿಸಿ ಹೊಸ ದಿನ ಶುರು ಮಾಡುವಂತೆ ರೈತ ಮಿತ್ರರಲ್ಲಿ ಮನವಿ ಮಾಡುತ್ತೇನೆ ಎಂದು ಮೋದಿ ಕೋರಿದರು. ಕೃಷಿ ಬಜೆಟ್ ಅನ್ನು ಐದು ಪಟ್ಟು ಹೆಚ್ಚಳ ಮಾಡಿ ರೂ. 1.25 ಲಕ್ಷ ಕೋಟಿಗೆ ಏರಿಸಿದ ಕ್ರಮ ಸೇರಿ, ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರ ಕಳೆದ 7 ವರ್ಷಗಳಿಂದ ರೈತರ ಪರ ಕೈಗೊಂಡ ನಿರ್ಧಾರಗಳನ್ನು ಪ್ರಧಾನಿ ವಿವರಿಸಿದರು. ಎಂದಿಗೂ ಈ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿಲ್ಲ ಎಂದು ಸಮರ್ಥಿಸಿಕೊಂಡರು.
ರಾಜಕೀಯ ವ್ಯಾಖ್ಯಾನ:ಮೋದಿ ಸರ್ಕಾರದ ತೀರ್ವನವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದ್ದು, ವಿಪಕ್ಷಗಳು ಇದು ರಾಜಕೀಯ ಲಾಭಕ್ಕಾಗಿ ಮಾಡಿದ ನಿರ್ಧಾರ ಎಂದು ವ್ಯಂಗ್ಯವಾಡಿವೆ. ರೈತ ಹೋರಾಟದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡರು. ಅವರ ಸಾವಿಗೆ ಹೊಣೆ ಯಾರು ಎಂದು ಕಾಂಗ್ರೆಸ್ಸಿಗರು ಪ್ರಶ್ನಿಸುತ್ತಿದ್ದಾರೆ.
ಹೋರಾಟದ ಹಿನ್ನೆಲೆ:ಕೇಂದ್ರದ ಕೃಷಿ ಕಾನೂನುಗಳನ್ನು ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದ ರೈತರು ಹೆಚ್ಚಾಗಿ ವಿರೋಧಿಸಿದ್ದರು. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಮಾರುಕಟ್ಟೆ ನಿರ್ವಣಕ್ಕೆ ನಾವು ಅವಕಾಶ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರ ವಿವರಿಸಿದ್ದರೂ, ಈ ಭಾಗದ ರೈತರಿಗೆ ಸ್ವೀಕಾರಾರ್ಹವೆನಿಸಿರಲಿಲ್ಲ. ಮೇಲಾಗಿ, ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಆರ್​ಎಲ್​ಡಿ, ಸಮಾಜವಾದಿ ಪಾರ್ಟಿ ಸೇರಿದಂತೆ ವಿಪಕ್ಷಗಳು ರೈತ ಹೋರಾಟಕ್ಕೆ ರಾಜಕೀಯ ಬೆಂಬಲ ನೀಡಿ ಮೋದಿ ಸರ್ಕಾರವನ್ನು ಗುರಿ ಮಾಡಿದ್ದವು. ದೆಹಲಿಗೆ ಅಂಟಿಕೊಂಡಿರುವ ಟಿಕ್ರಿ, ಸಿಂಘು ಮತ್ತು ಘಾಜಿಪುರ್ ಗಡಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸಿದ್ದಲ್ಲದೆ, ಕಾನೂನು ಹಿಂಪಡೆಯುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ರೈತ ಮುಖಂಡರೊಂದಿಗೆ ಕೇಂದ್ರ ಸರ್ಕಾರ 12ಕ್ಕಿಂತಲೂ ಹೆಚ್ಚು ಸುತ್ತಿನ ಮಾತುಕತೆ ನಡೆಸಿದರೂ ಫಲಪ್ರದವಾಗಲಿಲ್ಲ. ಕಾನೂನು ಹಿಂಪಡೆಯಲೇಬೇಕು ಎಂದು ರೈತರು ಹಠಕ್ಕೆ ಬಿದ್ದರೆ, ಕೇಂದ್ರ ಸರ್ಕಾರ ತಿದ್ದುಪಡಿ ಮಾಡುವುದಾಗಿ ಹೇಳಿತ್ತು. ಹೀಗಾಗಿ, ಈ ಮಾತುಕತೆಗಳು ಅಪೂರ್ಣಗೊಂಡಿದ್ದವು. ಏತನ್ಮಧ್ಯೆ, ಕಾನೂನುಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಯ್ತು ಮತ್ತು ನಿವೃತ್ತ ಸಿಜೆಐ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಮುಂದಿನ ಆದೇಶದವರೆಗೆ ಕೃಷಿ ಕಾನೂನುಗಳನ್ನು ಅಮಾನತ್ತಿನಲ್ಲಿಡಬೇಕು ಎಂದು ಆದೇಶ ನೀಡಿತ್ತು ಮತ್ತು ಈ ಕಾನೂನುಗಳ ಪರಾಮರ್ಶೆಗೆ ಸಮಿತಿಯನ್ನೂ ರಚನೆ ಮಾಡಿತ್ತು. ಆದರೆ, ಅಂತಿಮವಾಗಿ ಕೇಂದ್ರ ಸರ್ಕಾರ ಈ ಕಾನೂನುಗಳನ್ನು ಹಿಂಪಡೆಯಲು ನಿರ್ಧರಿಸುವುದರೊಂದಿಗೆ ಕೋರ್ಟ್​ನಲ್ಲಿರುವ ಕೇಸುಗಳು ಬಹುತೇಕ ಅಲ್ಲಿಗೆ ಇತ್ಯರ್ಥಗೊಂಡಂತಾಗಲಿವೆ.
ಲಾಭವಿಲ್ಲ, ನಷ್ಟವೇ:ಕಾನೂನು ಹಿಂಪಡೆಯುವುದರಿಂದ ರೈತರಿಗೆ ಯಾವುದೇ ಲಾಭವಿಲ್ಲ. ಭವಿಷ್ಯದಲ್ಲಿ ರೈತರಿಗೆ ಮತ್ತಷ್ಟು ಹಾನಿಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಗುರುತಿಸಿಕೊಂಡಿರುವ ಭಾರತೀಯ ಕಿಸಾನ್ ಸಂಘ ಅತೃಪ್ತಿ ವ್ಯಕ್ತಪಡಿಸಿದೆ. ರೈತರೊಂದಿಗೆ ಸಂಘರ್ಷ ತಪ್ಪಿಸಲು ಕಾನೂನು ಹಿಂಪಡೆದದ್ದೇನೋ ಸರಿ. ಆದರೆ, ದೀರ್ಘಾವಧಿಯಲ್ಲಿ ಇದು ರೈತರಿಗೆ ಒಳ್ಳೆಯದನ್ನು ಮಾಡದು. ಕೆಲ ಸ್ವಯಂಘೋಷಿತ ರೈತರ ಹಠಮಾರಿ ಧೋರಣೆಯಿಂದ ಇಡೀ ರೈತ ವರ್ಗಕ್ಕೆ ನಷ್ಟವಾಗಲಿದೆ ಎಂದು ಬಿಕೆಎಸ್ ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಅಪಪ್ರಚಾರ:ಮೋದಿ ಸರ್ಕಾರ ರೈತ ವಿರೋಧಿ ಮತ್ತು ಉದ್ಯಮಿಗಳ ಪರ ಎಂದು ವಿಪಕ್ಷಗಳು ರಾಜಕೀಯ ನಿರೂಪಣೆ ಮಾಡುತ್ತಿರುವುದರಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರೊಂದಿಗೂ ರ್ಚಚಿಸಿ ಕೇಂದ್ರ ಸರ್ಕಾರ ಇಂಥದ್ದೊಂದು ತೀರ್ವನಕ್ಕೆ ಬಂತು ಎಂಬ ಮಾತುಗಳು ಕೇಳಿಬಂದಿವೆ.
ಮೂರೂ ಕೃಷಿ ಕಾಯ್ದೆಗಳ ಉದ್ದೇಶ ರೈತರನ್ನು ಸಬಲೀಕರಣಗೊಳಿಸುವುದೇ ಆಗಿತ್ತು. ಅದರಲ್ಲೂ ಸಣ್ಣ ಕೃಷಿಕರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಅವಿರತ ಪ್ರಯತ್ನದ ಹೊರತಾಗಿಯೂ ಒಂದು ವರ್ಗದ ರೈತರ ಮನವೊಲಿಕೆ ಸಾಧ್ಯವಾಗಲಿಲ್ಲ.
|ನರೇಂದ್ರ ಮೋದಿಪ್ರಧಾನಿ
ಕ್ಷಮೆಕೋರಿದ ಮೋದಿ:ರೈತರ ಹೋರಾಟದಲ್ಲಿ ಪಂಜಾಬಿನ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣಕ್ಕೆ ಸಿಖ್ಖರ ಪವಿತ್ರ ಗುರುನಾನಕ್ ಜಯಂತಿ ದಿನದಂದೇ ಈ ಘೋಷಣೆ ಮಾಡಿದ ಮೋದಿ, ನಾನು ನೈಜ ಮತ್ತು ಶುದ್ಧ ಹೃದಯದಿಂದ ದೇಶದ ಜನರಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಕೃಷಿ ಸುಧಾರಣೆಗೆ ಕಾಯ್ದೆ ತಂದು, ಆ ಬಗ್ಗೆ ವಿವರಣೆ ನೀಡುವಲ್ಲಿ ನಮ್ಮ ಅವಿರತ ಶ್ರಮದ ಹೊರತಾಗಿಯೂ ರೈತರ ಒಂದು ವರ್ಗದ ಮನವೊಲಿಸಲಾಗಲಿಲ್ಲ. ಬಹುಶಃ ನಮ್ಮ ಪ್ರಯತ್ನದಲ್ಲೇ ನ್ಯೂನತೆ ಇದ್ದಿರಬಹುದು. ಹೀಗಾಗಿ, ನಿಮ್ಮಲ್ಲಿ ಕ್ಷಮೆ ಕೋರುತ್ತಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.
ರಾಜ್ಯದಲ್ಲಿ ಏನಾಗುತ್ತದೆ?:ಕೇಂದ್ರದ ನಿರ್ಧಾರದ ಕುರಿತು ವಿವರ ಸಂಗ್ರಹಿಸಿದ ನಂತರ ರಾಜ್ಯದಲ್ಲೂ ಈ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 5 =
Remember me
