|ರಾಘವ ಶರ್ಮ ನಿಡ್ಲೆನಂದಿಗ್ರಾಮ (ಪ.ಬಂಗಾಳ)
ಏಪ್ರಿಲ್ 1ರಂದು ಮತದಾನಕ್ಕೆ ಸಾಕ್ಷಿಯಾಗಲಿರುವ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರ ಸಿಎಂ ಮಮತಾ ಬ್ಯಾನರ್ಜಿಗೆ ರಾಜಕೀಯ ಜೀವನದ ಅತ್ಯಂತ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಸುಲಭದಲ್ಲಿ ಗೆಲ್ಲಬಹುದಾಗಿದ್ದ ಕೊಲ್ಕತಾದ ಭವಾನಿಪುರ ಕ್ಷೇತ್ರದ ಬದಲು ನಂದಿಗ್ರಾಮವನ್ನು ಆಯ್ಕೆ ಮಾಡಿಕೊಂಡ ದೀದಿ ಬಿಜೆಪಿಯ ಅಭ್ಯರ್ಥಿ ಸುವೇಂದು ಅಧಿಕಾರಿ ಒಡ್ಡಿರುವ ಸವಾಲನ್ನು ಮೀರಿ ಗೆಲುವು ಸಾಧಿಸುತ್ತಾರೆಯೇ? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.
ಈ ಸಂಶಯಕ್ಕೆ ಕಾರಣವೂ ಇಲ್ಲದಿಲ್ಲ. ಉಳಿದೆಲ್ಲಾ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ಬದಿಗೆ ಸರಿಸಿ, ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮಾ.28-31ರವರೆಗೆ ನಾಲ್ಕು ದಿನವೂ ಕ್ಷೇತ್ರದಲ್ಲೇ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿರುವ ದೀದಿ, ನಂದಿಗ್ರಾಮದಲ್ಲಿ ತಾವು ನಡೆಸಿದ್ದ ಜಮೀನು ರಕ್ಷಣಾ ಆಂದೋಲನದ ದಿನಗಳನ್ನು ನೆನೆಯುತ್ತಾ, ಸುವೇಂದು ‘ವಿಶ್ವಾಸದ್ರೋಹಿ’ ಎಂದು ಆರೋಪಿಸುತ್ತಿದ್ದಾರೆ. ಭಾನುವಾರದ ಹೋಳಿ ಹಬ್ಬದಂದು, ನಂದಿಗ್ರಾಮದ ರೇಪಾರ ಗ್ರಾಮಸ್ಥರೊಂದಿಗೆ ವಸಂತೋತ್ಸವ ಆಚರಿಸಲು ಬಂದಿದ್ದ ಮಮತಾ, ‘ನನಗೆ ತಿಳಿಯದೆಯೇ ಹಾವೊಂದರ (ಸುವೇಂದು) ಮೇಲೆ ಪ್ರೀತಿ ತೋರಿದೆ. ಅದೀಗ ನನ್ನ ಬೆನ್ನಿಗೆ ಚೂರಿ ಹಾಕಿದ್ದು, ಬುದ್ಧಿ ಕಲಿಸುವ ಕಾಲ ಬಂದಿದೆ’ ಎಂದು ಕೆಂಡಾಮಂಡಲರಾಗಿದ್ದರು. ‘ನಾಲ್ಕು ದಿನ ನಿರಂತರ ಪ್ರಚಾರ ಮಾಡಿದರೆ ತಪ್ಪೇನು? ಆ ಕಾರಣಕ್ಕೆ ನಮಗೆ ಸೋಲಿನ ಭೀತಿ ಎಂದರೆ ಒಪ್ಪಲಾರೆ’ ಎನ್ನುತ್ತಾರೆ ಪಕ್ಷದ ಕಾರ್ಯಕರ್ತೆ ವಿದ್ಯಾ ಬಂಡೋಪಾಧ್ಯಾಯ.
‘ನಂದಿಗ್ರಾಮದಲ್ಲಿ ದೀದಿ ಸೋಲು ಖಚಿತ’ ಎಂಬ ಪ್ರಚಾರಾಭಿಯಾನವನ್ನು ವ್ಯವಸ್ಥಿತವಾಗಿ ಮಾಡುತ್ತಿರುವ ಬಿಜೆಪಿ, ‘ನಂದಿಗ್ರಾಮಕ್ಕೆ ಮಣ್ಣಿನ ಮಗನೇ (ಸುವೇಂದು ಅಧಿಕಾರಿ) ಮೊದಲ ಆಯ್ಕೆ’ ಎನ್ನುತ್ತಾ ಜನರನ್ನು ತಲುಪುತ್ತಿದೆ. ಮಮತಾರನ್ನು ನಂದಿಗ್ರಾಮದಲ್ಲಿ ‘ಹೊರಗಿನವರು’ ಎಂದು ಬಿಂಬಿಸಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿಯನ್ನು ‘ಹೊರಗಿನ ಪಾರ್ಟಿ’ ಎಂದು ಬಿಂಬಿಸುತ್ತಿರುವ ದೀದಿ ವಿರುದ್ಧ ನಂದಿಗ್ರಾಮ ದಲ್ಲಿ ಬಿಜೆಪಿ ಅದೇ ತಂತ್ರಗಾರಿಕೆ ಅನುಸರಿಸಿರುವುದು ಯಶಸ್ಸು ತರಲಿದೆ ಎಂಬ ವಿಶ್ವಾಸವಿದೆ.
ವಸಂತೋತ್ಸವ ಸಂಭ್ರಮದ ವೇಳೆ ದೀದಿ ಭಾಷಣ ಕೇಳಿದ ನಂದಿಗ್ರಾಮ ನಿವಾಸಿ ರೋಬಿ ದಾಸ್ಸಿ, ‘2011ರಲ್ಲಿ ನಂದಿಗ್ರಾಮದ ಹೆಸರಲ್ಲಿ ಚುನಾವಣೆ ಗೆದ್ದ ದೀದಿ ನಂತರ ಇಲ್ಲಿಗೆ ಎಷ್ಟು ಬಾರಿ ಬಂದರು? ಯಾವ ಕೃಷಿ ಜಮೀನಿಗಾಗಿ ಹೋರಾಟ ನಡೆಸಿದರೋ ಅಲ್ಲಿ ಏನಾಗುತ್ತಿದೆ ಎಂಬ ಕನಿಷ್ಠ ಮಾಹಿತಿ ಪಡೆಯುವ ಯತ್ನ ಮಾಡಿದರೇ? ಈಗ ಬಂದು 14 ವರ್ಷಗಳ ಹಿಂದಿನ ಹೋರಾಟದ ಕಥೆ ಹೇಳಿದರೆ ಕೇಳಲು ನಾವು ತಯಾರಿಲ್ಲ. ಇಲ್ಲಿನ ವಿದ್ಯಾವಂತ ಯುವಕರು ಕೆಲಸ ಅರಸಿ ಬೇರೆಡೆ ಹೋಗಬೇಕಾಗಿ ಬಂದಿರುವುದೇಕೆ?’ ಎಂದು ಆಕ್ರೋಶ ಹೊರಹಾಕಿದರು. ‘ಸುವೇಂದು ಅಧಿಕಾರಿಗೆ ಸರ್ಕಾರದಲ್ಲಿ ಎಲ್ಲಾ ಹುದ್ದೆಗಳನ್ನು ದೀದಿ ನೀಡಿದರಲ್ಲಾ? ದೀದಿಯಿಂದಾಗಿಯೇ ಇಷ್ಟೆಲ್ಲಾ ಮಾನ್ಯತೆ ಸಿಕ್ಕಿದ್ದಲ್ಲವೇ’ ಎಂಬ ಪ್ರಶ್ನೆಗೆ ಆಕೆ, ‘ನಂದಿಗ್ರಾಮಕ್ಕೆ ದೀದಿಯನ್ನು ಕರೆತಂದಿದ್ದು ಸುವೇಂದು ಅಧಿಕಾರಿ. ಜಮೀನು ರಕ್ಷಣೆ ಹೋರಾಟಕ್ಕೆ ವೇದಿಕೆ ಸೃಷ್ಟಿಸಿದ್ದೇ ಸುವೇಂದು’ಎಂಬ ಪ್ರತ್ಯುತ್ತರ ನೀಡಿದರು. ‘ಸುವೇಂದುರಂತಹ ನಾಯಕರ ಬದಲು ಪಕ್ಷದ ಹೆಚ್ಚಿನ ಜವಾಬ್ದಾರಿಗಳನ್ನು ದೀದಿ ತಮ್ಮ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿಗೆ ನೀಡಬೇಕೆಂದು ಯೋಚಿಸಿದ್ದಾರೆ. ಇದರಿಂದಲೇ ಸುವೇಂದು ಪಕ್ಷ ಬಿಟ್ಟಿದ್ದು’ ಎಂದು ಕಳೆದ ಚುನಾವಣೆಯಲ್ಲಿ ದೀದಿಯನ್ನು ಬೆಂಬಲಿಸಿದ್ದ ಮಹಿಳೆ ಜೋರ್ನಾ ಬಾಗ್ ಹೇಳಿದರು.
ನಂದಿಗ್ರಾಮ ಬಿಜೆಪಿ-ಟಿಎಂಸಿ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವುದರಿಂದ ಹಿಂದು-ಮುಸ್ಲಿಂ ಕೋಮು ಧ್ರುವೀಕರಣ ಎದ್ದು ಕಾಣುತ್ತಿದೆ. ಸುವೇಂದು ಹಿಂದು ಮತಗಳನ್ನು ಸೆಳೆಯುವ ತಂತ್ರಗಾರಿಕೆ ಮನಗಂಡೇ ದೀದಿ, ಸ್ಥಳೀಯ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಭಾನುವಾರದ ವಸಂತೋತ್ಸವ ಸಂಭ್ರಮದಲ್ಲಿ, ‘ಸರ್ವ-ಮಂಗಳ-ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ. ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ’ ಎಂಬ ಶ್ಲೋಕ ಪಠಿಸಿದ ದೀದಿಗೆ, ನೆರೆದಿದ್ದ ಜನವರ್ಗ ಎದ್ದುನಿಂತು ನಮಸ್ಕರಿಸಿತು. ಮತ್ತೊಂದೆಡೆ ಮುಸ್ಲಿಂ ಮತಗಳು ಸಿಪಿಐಎಂ ಮತ್ತು ಟಿಎಂಸಿ ಮಧ್ಯೆ ವಿಭಜನೆಗೊಳ್ಳದಂತೆ ನೋಡಿಕೊಳ್ಳಲಾಗುತ್ತಿದೆ. ಕ್ಷೇತ್ರದಲ್ಲಿ ಶೇ.35ರಷ್ಟು ಮುಸ್ಲಿಂ ಮತಗಳಿರುವುದರಿಂದ, ಮತಗಳು ವಿಭಜನೆಯಾದಲ್ಲಿ ದೀದಿ ಹಾದಿ ಮತ್ತಷ್ಟು ಕಠಿಣಗೊಳ್ಳಬಹುದು. ಬಿಜೆಪಿ ವಿರುದ್ಧ ಗೆಲ್ಲುವ ಅಭ್ಯರ್ಥಿಗೆ ಮುಸ್ಲಿಂ ಮತಗಳು ಬಿದ್ದಲ್ಲಿ, ಅದು ಮಮತಾಗೆ ಅನುಕೂಲಕರ. ‘ನಾನು ಮುಸ್ಲಿಂ ಮತಗಳನ್ನು ನಂಬಿಕೊಂಡಿಲ್ಲ. ಕ್ಷೇತ್ರದ ಹಿಂದುಗಳು ನನ್ನ ಬೆನ್ನಿಗಿದ್ದಾರೆ’ ಎಂದು ಸುವೇಂದು ನೇರ ಸವಾಲು ಹಾಕಿದ್ದಾರೆ. ಯುವ ಮತದಾರರ ಮೇಲೂ ಕಣ್ಣಿಟ್ಟಿರುವ ಬಿಜೆಪಿ, ಮಹಿಳಾ ಮತದಾರರನ್ನೂ ಸೆಳೆಯುತ್ತಿದೆ.
ಜಮೀನು ರಕ್ಷಣೆ ಸಂಘರ್ಷ:ರಾಜ್ಯದಲ್ಲಿ ಕಮ್ಯುನಿಸ್ಟ್ ಸರ್ಕಾರವನ್ನು ಕಿತ್ತೊಗೆಯಲು ನಾಂದಿ ಹಾಡಿದ್ದೇ ನಂದಿಗ್ರಾಮ ಜಮೀನು ರಕ್ಷಣೆ ಸಂಗ್ರಾಮ. ಕಮ್ಯುನಿಸ್ಟ್ ಸರ್ಕಾರದ ಅಂದಿನ ಸಿಎಂ ಬುದ್ಧದೇವ ಭಟ್ಟಾಚಾರ್ಯ ಅವರು ಇಲ್ಲಿನ ಸುಮಾರು 10 ಸಾವಿರ ಎಕರೆ ಭೂಮಿಯನ್ನು ವಿಶೇಷ ಆರ್ಥಿಕ ವಲಯವನ್ನಾಗಿಸುವ ಯೋಜನೆ ಹಾಕಿಕೊಂಡಿದ್ದರು ಮತ್ತು ಈ ಕೆಲಸಕ್ಕಾಗಿ ಇಂಡೋನೇಷ್ಯಾದ ಕಂಪನಿ ಜತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ, ನಂದಿಗ್ರಾಮ ಜನತೆ ಜಮೀನು ಕೊಡೋಲ್ಲ ಎಂದು ತಿರುಗಿಬಿದ್ದಿದ್ದರು. ಸ್ಥಳೀಯ ಜನರನ್ನು ಸರ್ಕಾರದ ವಿರುದ್ಧ ಒಗ್ಗೂಡಿಸುವಲ್ಲಿ ಹಾಲಿ ಶಾಸಕ ಸುವೆಂದು ಅಧಿಕಾರಿ ಮತ್ತು ಅವರ ತಂದೆ ಶಿಶಿರ್ ಅಧಿಕಾರಿ ಬಹುಮುಖ್ಯ ಪಾತ್ರವಹಿಸಿದ್ದರು. ಇವರು ಮಮತಾರನ್ನು ನಂದಿಗ್ರಾಮಕ್ಕೆ ಕರೆಸಿದ್ದರಿಂದ ಹೋರಾಟಕ್ಕೆ ಹೊಸ ಹುರುಪು ತುಂಬಿದ್ದರು. ತೃಣಮೂಲ ಕಾಂಗ್ರೆಸ್ ನಾಯಕರೊಂದಿಗೆ ದೀದಿ ನಂದಿಗ್ರಾಮ ಪ್ರವೇಶಿಸಲು ಮುಂದಾದಾಗ ಪೊಲೀಸ್ ಮತ್ತು ಎಡಪಕ್ಷಗಳ ಕಾರ್ಯಕರ್ತರು ಅವಕಾಶ ನೀಡಲಿಲ್ಲ. ಆಗ ದೀದಿ ನೆರವಿಗೆ ಮೊದಲು ಬಂದಿದ್ದೇ ಬಿಜೆಪಿ ಹಿರಿಯಾಳು ಎಲ್.ಕೆ. ಆಡ್ವಾಣಿ, ಸುಷ್ಮಾ ಸ್ವರಾಜ್. ನಂತರ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮತ್ತು ಕೆಲ ಎಡಪಂಥೀಯ ಬುದ್ಧಿಜೀವಿಗಳು ದೀದಿಗೆ ಬೆಂಬಲ ನೀಡಿದ್ದರು. ನಂದಿಗ್ರಾಮದಲ್ಲಿ ಅಕ್ಷರಶಃ ಮಮತಾರ ಸೈನಿಕರಂತೆ ಹೋರಾಟ ಮಾಡಿದ್ದ ಸುವೆಂದು ಅಧಿಕಾರಿ ಮತ್ತು ಶಿಶಿರ್ ಅಧಿಕಾರಿ ಬ್ಯಾರಿಕೇಡ್​ಗಳನ್ನು ಮುರಿದು ಚಳವಳಿ ನಡೆಸಿದರು. ಪೊಲೀಸರು ಮತ್ತು ಸ್ಥಳೀಯರ ನಡುವಿನ ಸಂಘರ್ಷಕ್ಕೆ 103 ರೈತರು ಬಲಿಯಾದರು. 7 ಪೊಲೀಸರು ಹತ್ಯೆಯಾದರೆ, 46 ಮಂದಿ ಈಗಲೂ ನಾಪತ್ತೆ ಪಟ್ಟಿಯಲ್ಲಿದ್ದಾರೆ. 2007ರ ಹೋರಾಟದ ದೃಶ್ಯಾವಳಿಗಳನ್ನು ನೆನೆಸಿಕೊಂಡರೆ ಸ್ಥಳೀಯರು ಈಗಲೂ ಬೆಚ್ಚಿಬೀಳುತ್ತಾರಾದರೂ, ಬೇರೆ ರಾಜ್ಯಗಳಲ್ಲಿನ ಪಟ್ಟಣಗಳಂತೆ ತಮ್ಮ ಊರೂ ಬದಲಾಗಬೇಕು ಎಂಬ ಆಶಯವನ್ನು ಹೊಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಖಾಲಿ ಬಿದ್ದಿರುವ ಭೂಮಿಗಳಲ್ಲಿ ಕೈಗಾರಿಕಾ ವಲಯ ನಿರ್ಮಾಣ ಮಾಡಿ, ಸ್ಥಳೀಯ ಯುವಕರಿಗೆ ನೌಕರಿ ಕೊಡಿಸುವ ಭರವಸೆ ನೀಡಿದೆ.
ಮಾತನಾಡಲೂ ಭಯ?:ನಂದಿಗ್ರಾಮದಲ್ಲಿ ಸಿಪಿಐ ಮತ್ತು ಟಿಎಂಸಿ ಮುಖಂಡರು ಯಾವ ಮಟ್ಟಿಗೆ ಜನರಲ್ಲಿ ಭಯ ಸೃಷ್ಟಿಸಿದ್ದಾರೆ ಎಂದರೆ – ಚುನಾವಣೆ, ರಾಜಕೀಯದ ಬಗ್ಗೆ ಜನಸಾಮಾನ್ಯರು ಮಾತನಾಡಲೇ ಹೆದರುತ್ತಾರೆ. ‘ನಿಮ್ಮ ಕ್ಷೇತ್ರದಲ್ಲಿ ಏನು ಬದಲಾವಣೆ ಬಯಸುತ್ತೀರಿ, ಟಿಎಂಸಿ ಸರ್ಕಾರ ಕೆಲಸ ಮಾಡಿದೆಯೇ, ಇಲ್ಲವೇ? ಶಾಸಕರು ಬದಲಾಗಬೇಕೆ ಬೇಡವೇ ಎಂಬ ಬಗ್ಗೆ ಮಾತನಾಡುತ್ತೀರಾ’ ಎಂದರೆ ಸಾಮಾನ್ಯರು, ಅಂಗಡಿ ಮಾಲೀಕರು ‘ನಾವು ಮಾತನಾಡಿದರೆ, ಇಲ್ಲಿ ನಮ್ಮನ್ನು ಸುಮ್ಮನೆ ಕೂರಲು ಬಿಡುತ್ತಾರೆಯೇ? ಸಣ್ಣ ವಿರೋಧ ಮಾತನಾಡಿದರೂ ಮನೆ-ಮಂದಿ ಮೇಲೆ ದಾಳಿ ಆಗಬಹುದು’ ಎಂದು ಭಯ ವ್ಯಕ್ತಪಡಿಸುತ್ತಾರೆ. 2007ರ ಸಂಘರ್ಷ ಮತ್ತು 2011ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಟಿಎಂಸಿ ಸಾಧಿಸಿದ ರಾಜಕೀಯ ಪ್ರಾಬಲ್ಯವೂ ಇದಕ್ಕೆ ಕಾರಣ ಎನ್ನುವುದು ಗುಟ್ಟಿನ ವಿಷಯವೇನಲ್ಲ.
ಮೀರ್ ಜಾಫರ್ ‘ಸುವೇಂದು’!:ಬಂಗಾಳದ ಕೊನೆಯ ನವಾಬ ಸಿರಾಜ್-ಉದ್-ದೌಲಾ ಆಡಳಿತದಲ್ಲಿ ಕಮಾಂಡರ್ ಆಗಿದ್ದ ಮೀರ್ ಜಾಫರ್ ತೆರೆಮರೆಯಲ್ಲೇ ಬ್ರಿಟಿಷರಿಗೆ ನೆರವಾಗಿದ್ದರಿಂದ 1757ರ ಪ್ಲಾಸೀ ಕದನದಲ್ಲಿ ಈಸ್ಟ್ ಇಂಡಿಯಾ ಕಂಪನಿ ಗೆಲುವು ಸಾಧಿಸಿ ನವಾಬನ ಆಡಳಿತದಲ್ಲಿದ್ದ ಪ್ರದೇಶವನ್ನು ವಶಪಡಿಸಿಕೊಂಡಿತ್ತು. ಈಗ ಸುವೇಂದು ಅಧಿಕಾರಿ ಸೇರ್ಪಡೆ ಬಿಜೆಪಿ ಬಲವರ್ಧನೆಗೆ ಕಾರಣವಾಗಿದ್ದು, ಟಿಎಂಸಿ ನಾಯಕರು ಸುವೇಂದುರನ್ನು ‘ಮೀರ್ ಜಾಫರ್’ಗೆ ಹೋಲಿಸಿ ಲೇವಡಿ ಮಾಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 12 =
Remember me
