*ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂಘರ್ಷ*ನಾಗರಾಜ್-ಡಾ. ವಿಶ್ವನಾಥ್ ಕಚ್ಚಾಟದಿಂದ ಗುಂಪುಗಾರಿಕೆ
*ರಾಘವ ಶರ್ಮ ನಿಡ್ಲೆ ನವದೆಹಲಿ
ರಾಜಧಾನಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ. ನಾಗರಾಜ್ ಮತ್ತು ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ.ವಿಶ್ವನಾಥ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇದರಿಂದ ಇಬ್ಬರನ್ನು ಪರಸ್ಪರ ಬೆಂಬಲಿಸುವ ಗುಂಪುಗಳು ಸೃಷ್ಟಿಯಾಗಿ, ದಿಲ್ಲಿ ಕನ್ನಡಿಗರ ನಡುವೆಯೇ ಕಚ್ಚಾಟ ಶುರುವಾಗಿದೆ.
ಆ.15ರಂದು ದಿಲ್ಲಿ ಕರ್ನಾಟಕ ಸಂಘ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಸ್ಥೆ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜಿಸಲಾಗಿತ್ತು. ಈ ವೇಳೆ ನಾಗರಾಜ್ ಅವಾಚ್ಯ ಪದಗಳಲ್ಲಿ ನಿಂದಿಸಿದ್ದಾರೆಂದು ಪ್ರತಿಭಟನೆ ನಡೆಸಿದ ಡಾ.ವಿಶ್ವನಾಥ್, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಏತನ್ಮಧ್ಯೆ ನಾಗರಾಜ್ ಕೂಡ ವಿಶ್ವನಾಥ್ ವಿರುದ್ಧ ಅದೇ ಠಾಣೆಯಲ್ಲಿ ದೂರು ನೀಡಿ, ವಿಶ್ವನಾಥ್‌ರಿಂದ ಸಂಘದ ಘನತೆಗೆ ಹಾನಿಯಾಗಿರುವುದಲ್ಲದೆ ಸ್ನೇಹಿತರ ಜತೆಗೂಡಿ ತಮ್ಮನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿದ್ದಾರೆ. ಕನ್ನಡಪರ ಚಟುವಟಿಕೆಗಳನ್ನು ನಡೆಸಬೇಕಾದ 2 ಸಂಸ್ಥೆಗಳ ಮುಖ್ಯಸ್ಥರು ಈ ರೀತಿ ಠಾಣೆ ಮೆಟ್ಟಿಲೇರಿರುವುದು ದಿಲ್ಲಿ ಕನ್ನಡಿಗರ ಮನಸ್ಸುಗಳನ್ನೂ ಒಡೆದಿದೆ.
ಸದಸ್ಯತ್ವದಿಂದ ಅಮಾನತುಸಂಘದ ಪದಾಧಿಕಾರಿಗಳೊಂದಿಗೆ ಬುಧವಾರ ತುರ್ತು ಸಭೆ ನಡೆಸಿದ ನಾಗರಾಜ್, ವಿಶ್ವನಾಥ್‌ರನ್ನು ಸಂಘದ ಸದಸ್ಯತ್ವದಿಂದಲೇ ಅಮಾನತುಗೊಳಿಸಲು ತೀರ್ಮಾನಿಸಿದ್ದಾರೆ. ವಿರೋಧಿ ಗುಂಪು ನನ್ನ ಹೆಸರು ಕೆಡಿಸಲು ಇಂಥದ್ದೊಂದು ಷಡ್ಯಂತ್ರ ಮಾಡಿದೆ. ಇದಕ್ಕೆಲ್ಲ ಹೆದರುವುದಿಲ್ಲ. ವಿಶ್ವನಾಥ್ ವಿರುದ್ಧ ವಿಡಿಯೋ ಸಾಕ್ಷ್ಯವಿದೆ. ಅದನ್ನು ಪೊಲೀಸ್ ಠಾಣೆಗೆ ನೀಡಿದ್ದೇನೆ ಎಂದು ವಿಜಯವಾಣಿಗೆ ತಿಳಿಸಿದ್ದಾರೆ. ಆದರೆ, ಅಮಾನತು ಕ್ರಮವನ್ನು ಸಂಘದ ಕೆಲ ಪದಾಧಿಕಾರಿಗಳೇ ವಿರೋಧಿಸಿದ್ದಾರೆ. ಅಂತಿಮವಾಗಿ ಸಂಖ್ಯಾಬಲದ ಮೇಲೆ ವಿಶ್ವನಾಥ್‌ರನ್ನು ಸಂಘದಿಂದ ದೂರವಿಡಲು ನಿರ್ಧರಿಸಲಾಗಿದೆ.
ರಾಜ್ಯ ಗಡಿನಾಡು ಪ್ರಾಧಿಕಾರ 2021ರಲ್ಲಿ ಜೆಎನ್‌ಯು ಕನ್ನಡ ಪೀಠಕ್ಕೆ ನೀಡಿದ್ದ 5 ಲಕ್ಷ ರೂ. ಅನುದಾನವನ್ನು ಕರ್ನಾಟಕ ಸಂಘಕ್ಕೆ ವರ್ಗಾಯಿಸಬೇಕು ಎಂದು ಪ್ರಾಧಿಕಾರ ಆದೇಶ ನೀಡಿದ್ದರೂ ಪಾಲಿಸಲಾಗಿಲ್ಲ. ಇದನ್ನು ಡಾ.ವಿಶ್ವನಾಥ್ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಪ್ರೀತಿಪೂರ್ವಕವಾಗಿ ಕೇಳಿದ್ದಕ್ಕೆ ಸಂಘದ ಅಧ್ಯಕ್ಷರ ಮೇಲೆ ತಿರುಗಿಬಿದ್ದು ಗಲಾಟೆ ಎಬ್ಬಿಸಿದರು ಎಂದು ಕರ್ನಾಟಕ ಸಂಘ ಅಮಾನತು ಕ್ರಮ ಸಮರ್ಥಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಹಣ ವರ್ಗಾವಣೆ ನನ್ನ ಕೆಲಸವಲ್ಲ, ಅದನ್ನು ಜೆಎನ್‌ಯು ಹಣಕಾಸು ಅಧಿಕಾರಿಯಲ್ಲಿ ಕೇಳಬೇಕು ಎಂಬುದು ಡಾ. ವಿಶ್ವನಾಥ್ ವಾದ.
ನಾಳೆ ಪ್ರತಿಭಟನೆಡಾ.ವಿಶ್ವನಾಥ್ ಹಿರಿಯ ಲೇಖಕ, ಸಾಹಿತಿ ಮತ್ತು ಗೌರವಯುತ ಹುದ್ದೆಯಲ್ಲಿರುವ ಸಜ್ಜನ ವ್ಯಕ್ತಿ. ಕುಡಿದು ಗಲಾಟೆ ಮಾಡಿದ್ದಾರೆನ್ನೆವುದು ಶುದ್ಧ ಸುಳ್ಳು. ಸಂಘದ ಅಧ್ಯಕ್ಷರ ವರ್ತನೆಯನ್ನು ಸಂಘದ ಕಾವಲು ಸಮಿತಿ ಗಮನಕ್ಕೆ ತಂದು, ಅವರ ವಿರುದ್ಧ ಪ್ರತಿಭಟಿಸಲಿದ್ದೇವೆ. ಸಂಘದ ಅಧ್ಯಕ್ಷರೀಗ ಆಪಾದಿತ ಸ್ಥಾನದಲ್ಲಿದ್ದಾರೆ. ಹಾಗಾಗಿ ಸಂಘದ ಕಾರ್ಯಕಾರಿ ಸಮಿತಿ ನಡೆಸಿದ ತುರ್ತು ಸಭೆಯಲ್ಲಿ ಅಧ್ಯಕ್ಷರಾಗಿ ಕುಳಿತು ಡಾ. ವಿಶ್ವನಾಥ್‌ರನ್ನು ಅಮಾನತುಗೊಳಿಸುವ ಅಧಿಕಾರ ಅವರಿಗಿರುವುದಿಲ್ಲ ಎಂದು ಜೆಎನ್‌ಯು ಅಂತಾರಾಷ್ಟ್ರೀಯ ಕಾನೂನು ವಿಭಾಗದ ಪ್ರಾಧ್ಯಾಪಕ, ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಡಾ. ವೆಂಕಟಾಚಲ ಹೆಗಡೆ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕ ಸಂಘದಲ್ಲಿ ಶನಿವಾರ ಅಹೋರಾತ್ರಿ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ನೂರಾರು ಕನ್ನಡಿಗರು ಬರುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲೇ ಶಾಂತಿಯುತ ಪ್ರತಿಭಟನೆ ನಡೆಸಿ, ಕನ್ನಡಿಗರಿಗೆ ವಾಸ್ತವ ಮನವರಿಕೆ ಮಾಡಲು ನಿರ್ಧರಿಸಿದ್ದೇವೆ ಎಂದು ಡಾ.ವಿಶ್ವನಾಥ್ ಬೆಂಬಲಿಗರು ತಿಳಿಸಿದ್ದಾರೆ.
ಉಪಕುಲಪತಿಗೆ ದೂರುಡಾ. ವಿಶ್ವನಾಥ್ ಗಲಾಟೆ ಎಬ್ಬಿಸಿದ್ದಾರೆ ಎಂದು ಜೆಎನ್‌ಯು ಉಪಕುಲಪತಿಗೆ ಸಂಘದ ಅಧ್ಯಕ್ಷರು ದೂರು ನೀಡಿದ್ದು, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರ ಮುಖೇನ ಒತ್ತಾಯಿಸಿದ್ದಾರೆ. ಕರ್ನಾಟಕ ಸಂಘಕ್ಕೆ ಬಂದು ಡಾ. ವಿಶ್ವನಾಥ್ ಜಾತಿವಾದವನ್ನೂ ಹಬ್ಬಿಸುತ್ತಿದ್ದಾರೆ ಎಂದು ಪತ್ರದಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಅಧ್ಯಕ್ಷರ ವಿರುದ್ಧ ಕಾರ್ಯದರ್ಶಿ ದೂರುಕರ್ನಾಟಕ ಸಂಘದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಈಗಲೂ ಮುಂದುವರಿದಿದೆ. ಅಮೃತ ಮಹೋತ್ಸವ ಸಂಭ್ರಮಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಬಂದಿದ್ದರು. ಆದರೆ, ಈ ಎಲ್ಲ ಕಾರ್ಯಕ್ರಮಗಳ ಖರ್ಚು-ವೆಚ್ಚಗಳಲ್ಲಿನ ಗೊಂದಲಗಳ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ರೇಣುಕುಮಾರ್ ಅವರು ಅಧ್ಯಕ್ಷ ಸಿಎಂ ನಾಗರಾಜ್ ನಡೆ ಪ್ರಶ್ನಿಸಿದ್ದು, ಹಣಕಾಸು ವಿಷಯದಲ್ಲಿ ಸಾಕಷ್ಟು ಗೊಂದಲಗಳಿವೆ ಎಂದು ಸಂಘದ ಕಾವಲು ಸಮಿತಿಗೆ ಪತ್ರ ಬರೆದಿದ್ದಾರೆ. ದಿಲ್ಲಿ ಕನ್ನಡಿಗರ ನಡುವೆ ಗುಂಪುಗಾರಿಕೆ, ಜಾತಿವಾದ, ಅಧಿಕಾರದ ಲಾಲಸೆಯಿಂದಾಗಿ ಈಗ ಸಂಘರ್ಷಗಳು ಹೆಚ್ಚಾಗಿವೆ. ಕರ್ನಾಟಕದಿಂದ ಬಂದು ದಿಲ್ಲಿಯಲ್ಲಿ ಒಗ್ಗಟ್ಟಿನಿಂದಿರುವ ಬದಲು ನಾವೇ ಕಚ್ಚಾಡಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಸಂಘದ ಹಿರಿಯ ಸದಸ್ಯೆಯೊಬ್ಬರು ಬೇಸರ ಹಂಚಿಕೊಂಡರು.
ಡಾ. ವಿಶ್ವನಾಥ್ ಗೌರವಯುತ ಹುದ್ದೆಯಲ್ಲಿದ್ದಾರೆ. ಅವರನ್ನು ಸಂಘದಿಂದ ಅಮಾನತು ಮಾಡುವ ಕ್ರಮ ನಮಗೆ ಶ್ರೇಯಸ್ಕರವಲ್ಲ. ಇದರ ದುಷ್ಪರಿಣಾಮಗಳನ್ನು ನಾವು ಎದುರಿಸಬೇಕಾದೀತು. ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಬೇಕು ಎಂದು ತುರ್ತು ಸಭೆಯಲ್ಲಿ ಹೇಳಿದ್ದೇನೆ.ಪೂಜಾ ಪ್ರದೀಪ್, ದಿಲ್ಲಿ ಕರ್ನಾಟಕ ಸಂಘದ ಉಪಾಧ್ಯಕ್ಷೆ
ದೆಹಲಿಯಿಂದ ಪುಣೆಗೆ ಹೊರಟಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ; ಮುಂದುವರಿದ ಶೋಧ ಕಾರ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × five =
Remember me
