ವಾಷಿಂಗ್ಟನ್/ನವದೆಹಲಿ:ಅಮೆರಿಕದಲ್ಲಿ ಒಮಿಕ್ರಾನ್​ನ ಮೊದಲ ಕೇಸ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ಪ್ರಕಟಿಸಿದ್ದಾರೆ. ಕ್ಯಾಲಿಫೋರ್ನಿಯಾದ ಒಬ್ಬ ವ್ಯಕ್ತಿಯಲ್ಲಿ ಹೊಸ ತಳಿಯ ಸೋಂಕು ದೃಢಪಟ್ಟಿದೆ. ದಕ್ಷಿಣ ಆಫ್ರಿಕಾಕ್ಕೆ ತೆರಳಿ ನವೆಂಬರ್ 22ರಂದು ಮರಳಿದ್ದ ವ್ಯಕ್ತಿಯಲ್ಲಿ ಒಮಿಕ್ರಾನ್ ವೈರಸ್ ಇರುವುದನ್ನು ಕ್ಯಾಲಿಫೋರ್ನಿಯಾ ಮತ್ತು ಸ್ಯಾನ್​ಫ್ರಾನ್ಸಿಸ್ಕೋ ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಆತ ಮಾಡರ್ನಾ ಲಸಿಕೆಯ ಎರಡೂ ಡೋಸ್ ಪಡೆದಿದ್ದು ಬೂಸ್ಟರ್ ಡೋಸ್ ಪಡೆದಿರಲಿಲ್ಲ. ಸೌಮ್ಯ ಕೋವಿಡ್ ಲಕ್ಷಣವಿದ್ದ ಆತ ಚೇತರಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಹಿತಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಕರೊನಾ ಕೇಸ್ ದುಪ್ಪಟ್ಟು:ಒಮಿಕ್ರಾನ್ ಮೊದಲಿಗೆ ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ ದುಪ್ಪಟ್ಟುಗೊಂಡಿದೆ. ಮಂಗಳವಾರ 4,373 ಜನರಲ್ಲಿ ಸೋಂಕು ದೃಢಪಟ್ಟಿದ್ದು ಬುಧವಾರ 8,561ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಪ್ರಭೇದ ಪತ್ತೆಯಾಗಿರುವುದರಿಂದ ಸೋಂಕಿನ ಉಬ್ಬರವನ್ನು ಎದುರಿಸಲು ತಾವು ಸಜ್ಜುಗೊಂಡಿರುವುದಾಗಿ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ವ್ಯಾಧಿಪೀಡಿತರ ಸಂಖ್ಯೆ ಮೂರು ಪಟ್ಟು ಹೆಚ್ಚಲೂಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ವೈರಾಣುತಜ್ಞ ನಿಕ್ಸಿ ಗುಮೇಡ್-ಮೊಲೆಟ್ಸಿ ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಇನ್ನೂ ನಾಲ್ವರಲ್ಲಿ ಸೋಂಕು:ದೆಹಲಿ ವಿಮಾನ ನಿಲ್ದಾಣಕ್ಕೆ ಗುರುವಾರ ಆಗಮಿಸಿದ ನಾಲ್ಕು ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಅಪಾಯವಿರುವ (ರಿಸ್ಕ್) ದೇಶಗಳಿಂದ ಇವರು ಆಗಮಿಸಿದ್ದರು. ಈ ರೀತಿ ವಿದೇಶದಿಂದ ಬಂದರಲ್ಲಿ ಪಾಸಿಟಿವ್ ಬಂದವರ ಸಂಖ್ಯೆ 10ಕ್ಕೆ ಏರಿದೆ.
125 ಕೋಟಿಗೂ ಹೆಚ್ಚು ಡೋಸ್ ಲಸಿಕೆಗಳನ್ನು ನೀಡಿರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಸಾರ್ವಜನಿಕರ ಸಾಮೂಹಿಕ ಪ್ರಯತ್ನದಿಂದ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ದಲ್ಲಿ ಭಾರತದ ಲಸಿಕಾ ಕಾರ್ಯಕ್ರಮವು ವಿಶ್ವದಲ್ಲೇ ಯಶಸ್ಸು ಪಡೆದಿದೆ.
|ಪಿಯೂಷ್ ಗೋಯಲ್ವಾಣಿಜ್ಯ ಮತ್ತು ಕೈಗಾರಿಕಾ ಸಚಿವ
ಬೂಸ್ಟರ್ ಡೋಸ್ ನೀಡುವ ಬಗ್ಗೆ ವೈಜ್ಞಾನಿಕ ಕಾರಣದ ಕುರಿತು ಪರಿಶೀಲನೆ ನಡೆಯುತ್ತಿದೆ. ಸದ್ಯ ಅರ್ಹರಾದ ಎಲ್ಲರಿಗೂ ಎರಡು ಡೋಸ್ ಲಸಿಕೆ ನೀಡುವುದು ಸರ್ಕಾರದ ಆದ್ಯತೆ ಆಗಿದೆ.
|ಲವ ಅಗರವಾಲ್ಕೇಂದ್ರ ಆರೋಗ್ಯ ಕಾರ್ಯದರ್ಶಿ
ಲಸಿಕೆ ಪಡೆದು ಬಹುಮಾನ ಗೆಲ್ಲಿ:ಜನರು ಲಸಿಕೆ ಪಡೆಯುವುದನ್ನು ಪ್ರೋತ್ಸಾಹಿಸಲು ಮಹಾರಾಷ್ಟ್ರದ ಹಿಂಗೋಲಿ ನಗರ ಸಭೆ ವಿಶಿಷ್ಟ ಯೋಜನೆ ಪ್ರಕಟಿಸಿದೆ. ಲಸಿಕೆ ಹಾಕಿಸಿಕೊಂಡವರ ಹೆಸರುಗಳನ್ನು ಲಕ್ಕಿಡಿಪ್ ಮೂಲಕ ಆರಿಸಿ ಎಲ್​ಇಡಿ ಟಿವಿ, ಫ್ರಿಜ್ ಮತ್ತು ವಾಷಿಗ್ ಮೆಷಿನ್​ನಂಥ ಇಲೆಕ್ಟ್ರಾನಿಕ್ ಸಾಧನಗಳನ್ನು ಬಹುಮಾನವಾಗಿ ನೀಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
9,765 ಹೊಸ ಕೇಸ್:ಭಾರತದಲ್ಲಿ ಗುರುವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ಕರೊನಾ ಸೋಂಕಿನ 9,765 ಹೊಸ ಪ್ರಕರಣಗಳು ದೃಢಪಟ್ಟಿವೆ. 477 ಜನರು ಮೃತಪಟ್ಟಿದ್ದಾರೆ. ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 4,69,724ಕ್ಕೆ ಏರಿದೆ. ಈ ಅವಧಿಯಲ್ಲಿ 8,000ಕ್ಕೂ ಅಧಿಕ ಜನರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಚೇತರಿಸಿಕೊಂಡವರ ಒಟ್ಟು ಪ್ರಮಾಣ 3,40,37,054ಕ್ಕೆ ತಲುಪಿದೆ. 125.65 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ.
7 ರಾಜ್ಯಗಳಲ್ಲಿ ಝೈಕೋವ್ ಡಿ:ಝೈಡುಸ್ ಕ್ಯಾಡಿಲಾದ ಮೂರು ಡೋಸ್​ಗಳ ಝೈಕೋವ್-ಡಿ ಲಸಿಕೆಯನ್ನು ಆರಂಭದಲ್ಲಿ ಏಳು ರಾಜ್ಯಗಳಲ್ಲಿ ಬಳಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಪ್ರಕಟಿಸಿದೆ. ಇದು ದೇಶದಲ್ಲಿ ಲಸಿಕೆ ಅಭಿಯಾನಕ್ಕೆ ಹೆಚ್ಚಿನ ಬಲ ತುಂಬಲಿದೆ. ಕೋವಿಡ್-ತಡೆ ಲಸಿಕೆ ನೀಡಿಕೆ ಅತಿ ಕಡಿಮೆ ಪ್ರಮಾಣದಲ್ಲಿರುವ ಜಿಲ್ಲೆಗಳನ್ನು ಗುರುತಿಸುವಂತೆ ರಾಜ್ಯಗಳ ಅಧಿಕಾರಿಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚಿಸಿದ್ದಾರೆ. ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಉ.ಪ್ರದೇಶ, ಬಂಗಾಳ ಗಳಲ್ಲಿ ಈ ಲಸಿಕೆ ವಿತರಣೆ ಆಗಲಿದೆ ಎಂದಿದ್ದಾರೆ.
ಸಾಂಸ್ಥಿಕ ಕ್ವಾರಂಟೈನ್:ಹೆಚ್ಚು ಅಪಾಯವಿರುವ (ಅಲ್ಟ್ರಾ-ರಿಸ್ಕ್) ದೇಶಗಳಿಂದ ಬರುವ ಪ್ರಯಾಣಿಕರನ್ನು ಏಳು ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲು ನೆರವಾಗುವಂತೆ ಮಹಾರಾಷ್ಟ್ರ ಸರ್ಕಾರ ಸಂಬಂಧಪಟ್ಟ ನಿಯಮಗಳನ್ನು ತಿದ್ದುಪಡಿ ಮಾಡಿದೆ. ದಕ್ಷಿಣ ಆಫ್ರಿಕಾ, ಬೋಟ್ಸ್​ವಾನಾ ಮತ್ತು ಜಿಂಬಾಬ್ವೆಗಳಿಂದ ಬರುವ ಪ್ರಯಾಣಿಕರಿಗೆ ಹೊಸ ನಿಯಮ ಅನ್ವಯವಾಗಲಿದೆ. ಆಗಮನದ 15 ದಿನದೊಳಗೆ ಯಾವುದೇ ಸಂದರ್ಭ ಈ ಮೂರು ದೇಶಗಳಿಗೆ ಭೇಟಿ ನೀಡಿದ್ದ ಪ್ರಯಾಣಿಕರು ಮತ್ತು ಸೋಂಕು ಲಕ್ಷಣವಿರುವ ಯಾವುದೇ ಪ್ರಯಾಣಿಕರು ಕೂಡ ಕ್ವಾರಂಟೈನ್​ಗೆ ಒಳಪಡಬೇಕು ಎಂದು ಬದಲಾದ ನಿಯಮ ತಿಳಿಸಿದೆ.
ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲೇ ಹರಡಿತು ಒಮಿಕ್ರಾನ್!: ಎಲ್ಲವೂ ಗುಟ್ಟುಗುಟ್ಟು.. ಮಾಡಲಾಯಿತೇ ನಿರ್ಲಕ್ಷ್ಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 9 =
Remember me
