ನವದೆಹಲಿ:ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಹೇಳಲಾಗುತ್ತಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಛತ್ತೀಸ್​ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ನವೆಂಬರ್ 7ರಿಂದ ಆರಂಭಗೊಂಡು 30ರ ತನಕ ಮತದಾನ ನಡೆಯಲಿದೆ. ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಐದೂ ರಾಜ್ಯಗಳ ಫಲಿತಾಂಶ ಕೇಂದ್ರದಲ್ಲಿ ಆಡಳಿತಾರೂಢ ಎನ್​ಡಿಎ ಮತ್ತು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ವಿಪಕ್ಷಗಳ ಇಂಡಿಯಾ ಕೂಟಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಸದ್ಯ ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ ಮತ್ತು ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಆಡಳಿತ ನಡೆಸುತ್ತಿವೆ. ಛತ್ತೀಸ್​ಗಢ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನ. 7ರಂದು ಮಿಜೋರಾಂನ ಎಲ್ಲಾ 40 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಛತ್ತೀಸ್​ಗಢದಲ್ಲಿ 20 ಸೀಟುಗಳಿಗೆ ಮೊದಲ ಹಂತದ ಮತದಾನ ಜರುಗಲಿದೆ. ಛತ್ತೀಸ್​ಗಢದ ಉಳಿದ 70 ಸ್ಥಾನಗಳಿಗೆ ನ.17ರಂದು ಮತದಾನ ನಡೆಯಲಿದೆ. ಅದೇ ದಿನ ಮಧ್ಯಪ್ರದೇಶದ ಎಲ್ಲಾ 230 ಸ್ಥಾನಗಳಿಗೂ ಮತದಾನ ಆಗಲಿದೆ. 200 ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ನ. 23 ಮತ್ತು 119 ಶಾಸಕ ಸ್ಥಾನವುಳ್ಳ ತೆಲಂಗಾಣದಲ್ಲಿ ನ. 30ಕ್ಕೆ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಜಾತಿಗಣತಿ ಮಂತ್ರ:ಬಿಹಾರದಲ್ಲಿ ಜಾತಿಗಣತಿ ವರದಿಯನ್ನು ಸಿಎಂ ನಿತೀಶ್ ಕುಮಾರ್ ಬಿಡುಗಡೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಕೂಡ ಜಾತಿಗಣತಿ ಮಂತ್ರ ಜಪಿಸಲಾರಂಭಿಸಿದೆ. ಸೋಮವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಆಡಳಿತವುಳ್ಳ ಎಲ್ಲಾ ರಾಜ್ಯಗಳಲ್ಲಿ ಜಾತಿಗಣತಿ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಜಾತಿಗಣತಿಗೆ ನಮ್ಮ ಆದ್ಯತೆ ಎಂಬುದಾಗಿ ಘೊಷಿಸಿದ್ದಾರೆ.
16 ಕೋಟಿ ಮತದಾರರು:ಪಂಚರಾಜ್ಯಗಳ ಚುನಾವಣೆಯಲ್ಲಿ ಸುಮಾರು 16 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಈ ಐದು ರಾಜ್ಯಗಳಲ್ಲಿ ಒಟ್ಟು 1.77 ಲಕ್ಷ ಮತಗಟ್ಟೆಗಳಿರಲಿದ್ದು, ಅದರಲ್ಲಿ 1.01 ಲಕ್ಷ ವೆಬ್​ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿರಲಿದೆ. 8 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ. ಈ ಬಾರಿ 60 ಲಕ್ಷಕ್ಕೂ ಹೆಚ್ಚು ಮಂದಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಹೊಸ ವ್ಯವಸ್ಥೆ:ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಹೊಸ ಚುನಾವಣಾ ಸೀಜರ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಉಖMಖ) ಪರಿಚಯಿಸುತ್ತಿದೆ. ಚುನಾವಣೆ ನಡೆಯುತ್ತಿರುವ ಪ್ರದೇಶಗಳಿಂದ ವಶಪಡಿಸಿಕೊಳ್ಳುವ ಅಕ್ರಮ ಹಣ, ಸಾಮಗ್ರಿಗಳನ್ನು ತಕ್ಷಣವೇ ಬೇರೆ ಬೇರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಿಗೆ ಈ ಮೂಲಕ ಒದಗಿಸುತ್ತವೆ. ಉಖMಖ ತನಿಖಾ ಏಜೆನ್ಸಿಗಳ ನಡುವೆ ಸಮನ್ವಯ ಮತ್ತು ಗುಪ್ತಚರ ಮಾಹಿತಿ ಹಂಚಿಕೆಯನ್ನೂ ಖಚಿತಪಡಿಸಲಿದೆ ಎಂದು ಕುಮಾರ್ ಹೇಳಿದ್ದಾರೆ.
ಮುಖ್ಯವಾಗಿ ಇತ್ತೀಚಿನ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರತಿಪಕ್ಷಗಳು ಪುಟಿದೇಳುವಂತೆ ಮಾಡಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿಪಕ್ಷಗಳ ಮೈತ್ರಿಕೂಟವೂ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸಿರುವುದರಿಂದ ಬೇರೆ ರಾಜ್ಯಗಳಲ್ಲೂ ಇದರ ಪುನರಾರ್ತನೆಯಾದರೆ, 2024ರಲ್ಲಿ ಲೋಕಸಭೆ ಹಾದಿ ಸುಗಮಗೊಳ್ಳಲಿದೆ ಎಂದು ಈ ಪಕ್ಷಗಳು ನಂಬಿವೆ.
ಸಂಸತ್ತಿನ ವಿಶೇಷ ಅಧಿವೇಶನ ಕರೆದು ಶೇ.33 ಮಹಿಳಾ ಮೀಸಲು ಮಸೂದೆಗೆ ಅನುಮೋದನೆ ಪಡೆದುಕೊಂಡಿರುವ ಬಿಜೆಪಿ, ಪಂಚರಾಜ್ಯ ಚುನಾವಣೆಯಲ್ಲಿ ಮಹಿಳೆಯರಿಗೆ ಬಿಜೆಪಿ ನೀಡುತ್ತಿರುವ ಪ್ರಾಮುಖ್ಯತೆಯನ್ನೇ ಹೆಚ್ಚಾಗಿ ಬಿಂಬಿಸುವ ಸಾಧ್ಯತೆಯಿದೆ. ಇಂಥದ್ದೊಂದು ಐತಿಹಾಸಿಕ ಕ್ರಮ ಬಿಜೆಪಿಯಿಂದಷ್ಟೇ ಸಾಧ್ಯ ಎಂಬುದನ್ನು ಮನವರಿಕೆ ಮಾಡಿ, ಆ ಮೂಲಕ ಮಹಿಳಾ ಮತದಾರರನ್ನು ಸೆಳೆಯಲು ಕೇಸರಿಪಡೆ ಮುಂದಾಗುವ ತಂತ್ರ ಹೂಡಿದೆ.
ಕರ್ನಾಟಕದಲ್ಲಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೊಷಿಸಿದ ಪಂಚ ಗ್ಯಾರಂಟಿ ಉಚಿತ ಯೋಜನೆಗಳನ್ನು ನೆಚ್ಚಿಕೊಂಡ ಬಹುಪಾಲು ಮತದಾರರು, ಕಾಂಗ್ರೆಸ್​ಗೆ ಮತ ಹಾಕಿದ್ದರು. ಹಾಗಾಗಿ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲೂ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಿದ್ದು, ಕರ್ನಾಟಕ ಮಾದರಿಯಲ್ಲಿ ಉಚಿತ ಕೊಡುಗೆಗಳ ಭರವಸೆ ನೀಡಿದೆ. ಬಿಜೆಪಿಯ ಅಭಿವೃದ್ಧಿ ಮತ್ತು ಹಿಂದುತ್ವ ಮಂತ್ರದ ನಡುವೆ ಉತ್ತರ ಭಾರತದ ಈ ಮೂರು ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜನ ಆಯ್ಕೆ ಮಾಡುತ್ತಾರಾ ಎಂಬ ಪ್ರಶ್ನೆ ರಾಜಕೀಯ ಪಂಡಿತರನ್ನು ಕಾಡಿದೆ.
5 ರಾಜ್ಯಗಳ ಚುನಾವಣೆ ಘೊಷಣೆ ಯಾಗುವುದರೊಂದಿಗೆ ಬಿಜೆಪಿ ಮತ್ತು ಮಿತ್ರಪಕ್ಷಗಳ ವಿದಾಯ ಕೂಡ ಘೊಷಣೆ ಯಾಗಿದೆ. ಸಾರ್ವಜನಿಕ ಕಲ್ಯಾಣ, ಸಾಮಾಜಿಕ ನ್ಯಾಯ ಮತ್ತು ಪ್ರಗತಿಪರ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್ ಪಕ್ಷದ ಭರವಸೆಗಳಾಗಿವೆ.
| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಐದೂ ರಾಜ್ಯಗಳಲ್ಲಿ ಬಹುಮತದಿಂದ ಸರ್ಕಾರ ರಚನೆ ಮಾಡಲಿದ್ದೇವೆ. ಈ ಮೂಲಕ ಮುಂದಿನ 5 ವರ್ಷಗಳ ಅವಧಿಗೆ ಈ ರಾಜ್ಯಗಳಲ್ಲಿ ಜನರ ಆಕಾಂಕ್ಷೆಗಳನ್ನು ಪೂರೈಸಲು ನಾವು ಕಟಿಬದ್ಧರಾಗಿ ಶ್ರಮಿಸಲಿದ್ದೇವೆ.
| ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + fourteen =
Remember me
