ಮಧ್ಯಪ್ರದೇಶದಲ್ಲಿ ಸಂಬಂಧಿಕರನಡುವೆ ಸ್ಪರ್ಧೆ ಏರ್ಪಟ್ಟಿದೆ. ಸಹೋದರರು, ಚಿಕ್ಕಪ್ಪ-ಸೋದರಳಿಯ, ಸೋದರಮಾವ ಮತ್ತು ಅತ್ತಿಗೆ, ಮಾವ ಮತ್ತು ಅತ್ತೆ… ಹೀಗೆ ಪರಸ್ಪರ ಕಣಕ್ಕಿಳಿದು ಚುನಾವಣೆ ಅಖಾಡದ ರಂಗೇರಿಸಿದ್ದಾರೆ. ಛತ್ತೀಸ್​ಗಢದಲ್ಲಿ ಕಾಂಗ್ರೆಸ್ ಪಕ್ಷ ಮತದಾರರ ಮನ ಗೆಲ್ಲಲು ಸಾಲ ಮನ್ನಾ ಸೇರಿ ನಾಲ್ಕು ಪ್ರಮುಖ ಘೊಷಣೆಗಳನ್ನು ಮಾಡಿದೆ. ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಚಟುವಟಿಕೆಗಳು ಬಿರುಸು ಪಡೆಯುತ್ತಿವೆ. ಈ ಸಂದರ್ಭದಲ್ಲಿ ಆಯಾ ರಾಜ್ಯಗಳಲ್ಲಿನ ರಾಜಕೀಯ ಬೆಳವಣಿಗೆ, ಮುಖಂಡರ ಏಟು-ಎದುರೇಟು, ಮತ್ತು ಸ್ಥಿತಿ-ಗತಿ ಬಗ್ಗೆ ನವದೆಹಲಿಯ ವಿಜಯವಾಣಿ ವರದಿಗಾರ ರಾಘವ ಶರ್ಮಾ ನಿಡ್ಲೆ ಬೆಳಕು ಚೆಲ್ಲಿದ್ದಾರೆ.
ಕುಟುಂಬಸ್ಥರ ಮಧ್ಯೆಯೇ ಪೈಪೋಟಿಮಧ್ಯಪ್ರದೇಶದ ಕೆಲ ವಿಧಾನಸಭೆ ಕ್ಷೇತ್ರಗಳು ಒಂದೇ ಕುಟುಂಬದ ಸದಸ್ಯರ ನಡುವೆ ಚುನಾವಣೆ ಗುದ್ದಾಟಕ್ಕೆ ಸಾಕ್ಷಿಯಾಗುತ್ತಿವೆ. ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪಕ್ಷಗಳು ಸಂಬಂಧಿಕರ ಮಧ್ಯೆಯೇ ಅಧಿಕಾರಕ್ಕಾಗಿ ಪರಸ್ಪರ ಪೈಪೋಟಿ ನಡೆಸುವಂತೆ ಮಾಡಿವೆ. ಚುನಾವಣೆಯಲ್ಲಿ ಸಹೋದರರು, ಚಿಕ್ಕಪ್ಪ-ಸೋದರಳಿಯ, ಸೋದರಮಾವ ಮತ್ತು ಅತ್ತಿಗೆ, ಮಾವ ಮತ್ತು ಅತ್ತೆ… ಹೀಗೆ ಪರಸ್ಪರ ಕಣಕ್ಕಿಳಿದು ಚುನಾವಣೆ ಅಖಾಡದ ರಂಗೇರಿಸಿದ್ದಾರೆ.
ಮಾಜಿ ಸ್ಪೀಕರ್ ಮತ್ತು ನರ್ಮದಾಪುರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀತಾಶರಣ್ ಶರ್ವ, ಕಾಂಗ್ರೆಸ್ ಅಭ್ಯರ್ಥಿ, ಸಹೋದರ ಗಿರಿಜಾಶಂಕರ್ ಶರ್ವರನ್ನು ಎದುರಿಸುತ್ತಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಗಿರಿಜಾಶಂಕರ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ‘ಕಮಲ’ಕ್ಕೆ ಗುಡ್​ಬೈ ಹೇಳಿ ತಮ್ಮ ನಿಷ್ಠೆಯನ್ನು ಕಾಂಗ್ರೆಸ್ ಕಡೆ ಬದಲಿಸಿದ್ದಾರೆ.
ಸಾಗರ ವಿಧಾನಸಭಾ ಕ್ಷೇತ್ರದ ಮಹಿಳಾ ಅಭ್ಯರ್ಥಿ ಕಾಂಗ್ರೆಸ್​ನ ನಿಧಿ ಸುನೀಲ್ ಜೈನ್ ಅವರು ಮೈದುನ ಮತ್ತು ಹಾಲಿ ಬಿಜೆಪಿ ಶಾಸಕ ಶೈಲೇಂದ್ರ ಜೈನ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ನಿಧಿ ಅವರು ಶೈಲೇಂದ್ರ ಜೈನ್​ರ ಕಿರಿಯ ಸಹೋದರ ಸುನೀಲ್ ಜೈನ್ ಅವರ ಪತ್ನಿಯಾಗಿದ್ದಾರೆ. ಸುನೀಲ್ ಜೈನ್ ದಿಯೋರಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕರೂ ಹೌದು. ಅದೇ ರೀತಿ ರೇವಾ ಜಿಲ್ಲೆಯ ದೇವತಲಾಬ್​ನಲ್ಲಿ, ಬಿಜೆಪಿ ಶಾಸಕ, ಸ್ಪೀಕರ್ ಗಿರೀಶ್ ಗೌತಮ್ ವಿರುದ್ಧ ಪದ್ಮೇಶ್ ಗೌತಮ್ ಅವರನ್ನು ಕಣಕ್ಕಿಳಿಸಿದೆ. ಪದ್ಮೇಶ್​ಗೆ ಗಿರೀಶ್ ಗೌತಮ್ ಚಿಕ್ಕಪ್ಪ ಆಗಬೇಕು. ಪದ್ಮೇಶ್ ಈ ಹಿಂದೆ ಪಂಚಾಯತ್ ಚುನಾವಣೆಯಲ್ಲಿ ಗಿರೀಶ್ ಗೌತಮ್ ಪುತ್ರ ರಾಹುಲ್ ಗೌತಮ್ನ್ನು ಸೋಲಿಸಿದ್ದರು.
ಕುಟುಂಬದೊಳಗಿನ ಮತ್ತೊಂದು ಚುನಾವಣೆ ಹೋರಾಟದಲ್ಲಿ ಹಾಲಿ ಬಿಜೆಪಿ ಶಾಸಕ ಸಂಜಯ್ ಷಾ ತಮ್ಮ ಸೋದರಳಿಯ, ಕಾಂಗ್ರೆಸ್​ನ ಅಭಿಜಿತ್ ಷಾ ವಿರುದ್ಧ ಹರ್ದಾ ಜಿಲ್ಲೆಯ ತಿಮಾರ್ನಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಗ್ವಾಲಿಯರ್ ಜಿಲ್ಲೆಯ ದಾಬ್ರಾದಲ್ಲಿ ಮಾಜಿ ರಾಜ್ಯ ಸಚಿವೆ, ಬಿಜೆಪಿಯ ಇಮಾರ್ತಿ ದೇವಿ ತಮ್ಮ ಸಂಬಂಧಿ, ಕಾಂಗ್ರೆಸ್ ಹಾಲಿ ಶಾಸಕ ಸುರೇಶ್ ರಾಜೇ ವಿರುದ್ಧ ಕಣಕ್ಕಿಳಿದಿದ್ದಾರೆ, ಇಮಾರ್ತಿ ದೇವಿಯವರ ಸೊಸೆ ಸುರೇಶ್ ರಾಜೇ ಕುಟುಂಬದ ವ್ಯಕ್ತಿಯನ್ನು ವರಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸಹೋದರರು ಮತ್ತು ನಿಕಟ ಸಂಬಂಧಿಗಳ ಮಧ್ಯೆ ಅಧಿಕಾರಕ್ಕಾಗಿ ಹೋರಾಟ ನಡೆಯುತ್ತಿದೆ ಎನ್ನಲಾಗಿದೆ. ಈ ಹಿಂದೆ ಒಂದೇ ಕುಟುಂಬದ ಸದಸ್ಯರು ವಿವಿಧ ಪಕ್ಷಗಳಲ್ಲಿದ್ದರು. ಆದರೆ ವಿಧಾನಸಭೆ ಪ್ರವೇಶಿಸಲು ಕುಟುಂಬಸ್ಥರ ಮಧ್ಯೆ ನೇರ ಹೋರಾಟ ನಡೆದದ್ದು ಬಹಳ ಕಡಿಮೆ ಎಂಬ ಮಾತುಗಳು ಕೇಳಿಬಂದಿವೆ.
* ನರ್ಮದಾಪುರಂ – ಸಹೋದರರ ನಡುವೆ ಸವಾಲ್
* ಸಾಗರ – ಅತ್ತಿಗೆ ಮೈದುನ ನಡುವೆ ಸೆಣಸಾಟ
* ದೇವತಲಾಬ್ – ಅಪ್ಪ (ಚಿಕ್ಕಪ್ಪ) ಮಗನ ನಡುವೆ ಸ್ಪರ್ಧೆ
* ತಿಮಾರ್ನಿ – ಮಾವ ಅಳಿಯನ ನಡುವೆ ಹಣಾಹಣಿ
* ದಾಬ್ರಾ – ಸಂಬಂಧಿಗಳೇ ಹುರಿಯಾಳುಗಳು
ದಿಗ್ವಿಜಯ ನೌಟಂಕಿಗೆ ಚೌಹಾಣ್ ತಿರುಗೇಟು
ಕನ್ಯಾಪೂಜೆಯಲ್ಲಿ ಪಾಲ್ಗೊಂಡಿದ್ದನ್ನು ‘ಇದು ಬೃಹನ್ನಾಟಕ’ ಎಂದು ಗೇಲಿ ಮಾಡಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿರುಗೇಟು ನೀಡಿದ್ದಾರೆ.
‘ಇಡೀ ರಾಷ್ಟ್ರ ಕನ್ಯಾಪೂಜೆ ಮಾಡುವಾಗ, ದಿಗ್ವಿಜಯ ಸಿಂಗ್ ಮಾತ್ರ ಇದನ್ನು ನಾಟಕ ಎಂದು ಟೀಕೆ ಮಾಡಿದ್ದಾರೆ. ಮಹಿಳೆಯರಿಗೆ ನೀಡುವ ಗೌರವವನ್ನು ನಿಮ್ಮಂಥವರು ಎಂದಿಗೂ ಸಹಿಸುವುದಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿಯವರಲ್ಲಿ ನನ್ನದೊಂದು ಪ್ರಶ್ನೆ. ನಮ್ಮ ಹೆಣ್ಣುಮಕ್ಕಳನ್ನು ನೀವು ನೌಟಂಕಿಯ (ನಾಟಕ) ಭಾಗವಾಗಿಯೇ ಪೂಜಿಸುತ್ತೀರಾ? ಈ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಶಿವರಾಜ್ ಸವಾಲು ಹಾಕಿದ್ದಾರೆ. ನವರಾತ್ರಿಯ ಕೊನೆಯ ದಿನ ಚೌಹಾಣ್ ಮತ್ತು ಪತ್ನಿ ಸಾಧನಾ ಸಿಂಗ್ ಅವರು ಭೋಪಾಲ್​ನಲ್ಲಿರುವ ನಿವಾಸದಲ್ಲಿ ನಡೆಸಿದ ಕನ್ಯಾಪೂಜೆಯಲ್ಲಿ 300ಕ್ಕೂ ಹೆಚ್ಚು ಹೆಣ್ಣುಮಕ್ಕಳು ಭಾಗವಹಿಸಿದ್ದರು. ಈ ಕನ್ಯಾಪೂಜೆ ಕುರಿತು ದಿಗ್ವಿಜಯ ಸಿಂಗ್ ವಾಗ್ದಾಳಿ ನಡೆಸಿ, ‘ರಾಜ್ಯದ ಮುಖ್ಯಮಂತ್ರಿ ಬಗ್ಗೆ ಮಾತನಾಡಬೇಡಿ. ನಾನು ಅಂತಹ ಸುಳ್ಳುಗಾರ ಮುಖ್ಯಮಂತ್ರಿಯನ್ನು ನೋಡಿಲ್ಲ. ನಾಟಕದಲ್ಲಿ ತೊಡಗಿರುವ ಅಂಥ ವ್ಯಕ್ತಿ ಬಗ್ಗೆ ಏನು ಹೇಳೋಣ. ಈಗ, ಪ್ರಧಾನಿ ಮೋದಿ ಕೂಡ ಅವರಿಗೆ ಹೆದರುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದರು.
ಪಿಎಂ ಜತೆ ವೇದಿಕೆ ಹಂಚಿಕೊಳ್ಳಲ್ಲ
ಬಿಜೆಪಿ ನೇತೃತ್ವದ ಈಶಾನ್ಯ ಡೆಮಾಕ್ರಟಿಕ್ ಅಲಯನ್ಸ್ (ಎನ್​ಇಡಿಎ) ಜತೆಗಿನ ಸಂಬಂಧ ಹದಗೆಡುತ್ತಿರುವ ಮಧ್ಯೆ ಮಿಜೋರಾಂ ಮುಖ್ಯಮಂತ್ರಿ ಝೆೊರಂತಂಗ ಅವರು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ. ಬಿಜೆಪಿ ಪರ ಪ್ರಚಾರ ಮಾಡಲು ಪ್ರಧಾನಿ ಮೋದಿ ಅಕ್ಟೋಬರ್ 30ರ ಸುಮಾರಿಗೆ ಮಿಜೋರಾಂಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಮಿಜೋರಾಂನ ಜನರೆಲ್ಲರೂ ಕ್ರಿಶ್ಚಿಯನ್ನರು. ಮೈತೆಯಿ ಸಮುದಾಯದ ಮಂದಿ ಮಣಿಪುರದಲ್ಲಿ ನೂರಾರು ಚರ್ಚ್​ಗಳನ್ನು ಸುಟ್ಟುಹಾಕಿದ್ದಾಗ ಮಿಜೋಸ್​ಗಳು ಅಂಥದ್ದನ್ನು ಸಂಪೂರ್ಣವಾಗಿ ವಿರೋಧಿಸಿದ್ದರು. ಹಾಗಾಗಿ, ಈ ಸಮಯದಲ್ಲಿ ಬಿಜೆಪಿಯೊಂದಿಗೆ ಸಂಬಂಧ ಸಾಧಿಸಿಕೊಂಡರೆ ಅದರಿಂದ ನಮಗೆ ಸಮಸ್ಯೆಯಾಗುತ್ತದೆ ಎಂದವರು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಝೊರಂತಂಗಾ ಅವರ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್​ಎಫ್ ) ಕೇಂದ್ರದಲ್ಲಿ ಎನ್​ಡಿಎ ಮಿತ್ರಪಕ್ಷವಾಗಿದ್ದರೂ, ರಾಜ್ಯದಲ್ಲಿ ಮಾತ್ರ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತವೆ.
ಸಾಲಮನ್ನಾ ಗ್ಯಾರಂಟಿ ಮೋಡಿ ಮಾಡುವುದೇ?
ಛತ್ತೀಸ್​ಗಢದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಭೂಪೇಶ್ ಬಗೇಲ್, 2018ರಲ್ಲಿ ಜಾರಿಗೊಳಿಸಿದಂತೆ ಎರಡನೇ ಹಂತದ ಕೃಷಿ ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸುವ ಭರವಸೆ ನೀಡಿದ್ದಾರೆ. ಈ ಮೂಲಕ ಚುನಾವಣೆ ಹೊಸ್ತಿಲಲ್ಲಿ ರೈತ ಕುಟುಂಬದ ಮತಗಳನ್ನು ಸೆಳೆಯಲು ಯತ್ನಿಸಿದ್ದು, ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.
2018ರಲ್ಲಿ ಸರ್ಕಾರ ಜಾರಿ ಮಾಡಿದ್ದ ಸಾಲಮನ್ನಾ ಯೋಜನೆ ರೈತ ಸಮುದಾಯದಲ್ಲಿ ಹರ್ಷ ತಂದಿತ್ತು. ಈಗ ಮತ್ತದೇ ತಂತ್ರಗಾರಿಕೆ ಅನುಸರಿಸಿರುವ ಕಾಂಗ್ರೆಸ್, ರೈತ ವೋಟ್​ಬ್ಯಾಂಕನ್ನು ತನ್ನತ್ತ ಸೆಳೆದುಕೊಳ್ಳಲು ಮುಂದಾಗಿದೆ. 2018ರಲ್ಲಿ ಕಾಂಗ್ರೆಸ್ ಮಾಡಿದ ಸಾಲಮನ್ನಾ ಘೊಷಣೆಯು 15 ವರ್ಷಗಳ ರಮಣ್ ಸಿಂಗ್ ನೇತೃತ್ವದ ಬಿಜೆಪಿ ಆಡಳಿತ ಕೊನೆಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿತು. ಛತ್ತೀಸ್​ಗಢ ಸರ್ಕಾರ ಈ ಹಿಂದೆ 18.82 ಲಕ್ಷ ರೈತರ 9,270 ಕೋಟಿ ರೂಪಾಯಿ ಮೌಲ್ಯದ ಕೃಷಿಸಾಲ ಮನ್ನಾ ಮಾಡಿದೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಬಗೇಲ್ ಈ ಭರವಸೆ ನೀಡಿದ್ದಾರೆ. ರಾಜ್ಯದ 90 ವಿಧಾನಸಭಾ ಸ್ಥಾನಗಳಿಗೆ ನ.7 ಮತ್ತು 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಕಾಂಗ್ರೆಸ್ ಪಕ್ಷ ಈಗಾಗಲೇ ಸಾಲಮನ್ನಾ ಸೇರಿ ನಾಲ್ಕು ಪ್ರಮುಖ ಘೊಷಣೆಗಳನ್ನು ಮಾಡಿದೆ. ಅವುಗಳಲ್ಲಿ ಜಾತಿ ಗಣತಿ, ಪ್ರತಿ ಎಕರೆ ಭತ್ತದ ಸಂಗ್ರಹವನ್ನು 15 ಕ್ವಿಂಟಾಲ್​ಗಳಿಂದ 20 ಕ್ವಿಂಟಾಲ್​ಗಳಿಗೆ ಹೆಚ್ಚಿಸುವುದು ಹಾಗೂ 1.75 ಮಿಲಿಯನ್ ಜನರಿಗೆ ಮನೆಗಳನ್ನು ಒದಗಿಸುವುದು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ಯಾರಂಟಿಗಳನ್ನು ಘೊಷಿಸುವುದಾಗಿ ಬಗೇಲ್ ತಿಳಿಸಿದ್ದಾರೆ.
* ಸಾಲಮನ್ನಾ ಸೇರಿ ಮತ್ತೆ ನಾಲ್ಕು ಭರವಸೆ ನೀಡಿರುವ ಭೂಪೇಶ್ ಬಗೇಲ್
* ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ಯಾರಂಟಿಗಳನ್ನು ಘೊಷಿಸುವ ಭರವಸೆ
ಹುಲಿ ಉಗುರು ಪ್ರಕರಣ: ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ ಏನು ಹೇಳುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ…

2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ; ಈ ಚರ್ಮ ಎಲ್ಲಿಂದ ಬಂತು? ಎಂದು ಸ್ಪಷ್ಟನೆ ನೀಡಿದ ವಿನಯ್ ಗುರೂಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
