ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ ಇರಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ, ಇದೇ ಗ್ಯಾಂಗ್​ನಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಒದಗಿಸಿರುವ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ಈಗ ಹೆಚ್ಚಿಸಿದೆ. ನಟರಾದ ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್ ಅವರಿಗೂ ವರ್ಗೀಕೃತ ಶ್ರೇಣಿಯ ಭದ್ರತೆ ಕಲ್ಲಿಸಲಾಗಿದೆ. ಸಲ್ಮಾನ್ ಭದ್ರತೆಯನ್ನು ಈಗಿರುವ ಎಕ್ಸ್​ನಿಂದ ವೈ ಪ್ಲಸ್ ವರ್ಗದ ಮೇಲ್ದರ್ಜೆಗೆ ಏರಿಸಲಾಗಿದೆ. ಅಕ್ಷಯ ಮತ್ತು ಅನುಪಮ್ ಎಕ್ಸ್ ವರ್ಗದ ಭದ್ರತೆ ಪಡೆಯಲಿದ್ದಾರೆ.
ವರದಿ ಆಧಾರ:ರಾಷ್ಟ್ರ ಮಟ್ಟದಲ್ಲಿ ಇಂಟಲಿಜೆನ್ಸ್ ಬ್ಯುರೊ (ಐಬಿ), ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ) ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯ ಗುಪ್ತಚರ ಇಲಾಖೆ ರೀತಿಯ ಗೂಢಚರ ಸಂಸ್ಥೆಗಳಿಂದ ಪಡೆದ ವರದಿ ಆಧರಿಸಿ ಕೇಂದ್ರದ ಗೃಹ ವ್ಯವಹಾರಗಳ ಸಚಿವಾಲಯ ಅಥವಾ ರಾಜ್ಯ ಸರ್ಕಾರಗಳು ಭದ್ರತೆ ಕುರಿತಂತೆ ನಿರ್ಧಾರ ಕೈಗೊಳ್ಳುತ್ತವೆ. ಈ ಗೂಢಚರ ಸಂಸ್ಥೆಗಳು ಭಯೋತ್ಪಾದಕರು ಅಥವಾ ಇತರ ಯಾವುದೇ ಗುಂಪಿನಿಂದ ವ್ಯಕ್ತಿಗೆ ಜೀವ ಬೆದರಿಕೆ ಇರುವ ಕುರಿತಂತೆ ಮೂಲಗಳಿಂದ ಮಾಹಿತಿಯನ್ನು ಕ್ರೋಡೀಕರಿಸಿ ಮೌಲ್ಯಮಾಪನ ಮಾಡುತ್ತವೆ. ಈ ಮಾಹಿತಿಯು ಫೋನ್ ಸಂಭಾಷಣೆಗಳು, ಮುಕ್ತ ಬೆದರಿಕೆ (ಬಿಷ್ಣೋಯ್ ಗ್ಯಾಂಗ್​ನಿಂದ ಸಲ್ಮಾನ್​ಗೆ ಬಂದಿರುವ ರೀತಿಯದ್ದು) ಮುಂತಾದವುಗಳನ್ನು ವಿಶ್ಲೇಷಿಸುತ್ತವೆ.
ಭದ್ರತೆಯನ್ನು ಸಾಮಾನ್ಯವಾಗಿ ಸರ್ಕಾರದಲ್ಲಿ ಅಥವಾ ನಾಗರಿಕ ಸಮಾಜದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ವಿಐಪಿಗಳಿಗೆ ಭದ್ರತೆ. ಇನ್ನು ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿ ಇರುವವರು ಸ್ಥಾನಮಾನದ ಕಾರಣದಿಂದಲೇ ಸಹಜವಾಗಿ ಭದ್ರತೆ ಪಡೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರವು ಸಾಮಾನ್ಯವಾಗಿ ವ್ಯಕ್ತಿಗಳಿಗೆ ಭದ್ರತೆ ನೀಡಲು ಆಸಕ್ತಿ ತೋರುವುದಿಲ್ಲ. ಹೀಗಾಗಿ, ಜೀವಕ್ಕೆ ಅಪಾಯ ಇದೆ ಎಂದು ಪರಿಗಣಿಸಲಾಗುವ ಪ್ರಮುಖ ವ್ಯಕ್ತಿಗಳಿಗೆ ರಾಜ್ಯ ಸರ್ಕಾರಗಳೇ ಪೊಲೀಸ್ ಭದ್ರತೆ ಒದಗಿಸುತ್ತವೆ.
ಮಾನದಂಡಗಳೇನು?:ಯಾರಿಗೆ ಭದ್ರತೆ ಒದಗಿಸಬೇಕು? ಯಾವ ಪ್ರಮಾಣದ ಭದ್ರತೆ ಒದಗಿಸಬೇಕು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಮಾನದಂಡಗಳು ಇಲ್ಲ. ಗುಪ್ತಚರ ಸಂಸ್ಥೆಗಳ ವರದಿಗಳನ್ನು ಆಧರಿಸಿ ರಾಜ್ಯ ಅಥವಾ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಹೀಗಾಗಿ, ಕೆಲವೊಮ್ಮೆ ರಾಜಕೀಯ ಕಾರಣಗಳಿಗಾಗಿ ಮತ್ತು ಕೆಲವು ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಸರ್ಕಾರಗಳು ಭದ್ರತೆ ಒದಗಿಸುತ್ತವೆ ಎಂಬ ಟೀಕೆಗಳಿವೆ. ಈ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಉತ್ತರ ಪ್ರದೇಶ ಮತ್ತು ಪಂಜಾಬ್​ನ 25 ಬಿಜೆಪಿ ರಾಜಕಾರಣಿಗಳಿಗೆ ಕೇಂದ್ರ ಸರ್ಕಾರ ಭದ್ರತೆ ಒದಗಿಸಿದ್ದರ ಕುರಿತು ಅನೇಕ ಪ್ರಶ್ನೆಗಳು ಕೇಳಿಬಂದವು. ಇನ್ನು ಕಳೆದ ವರ್ಷ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲ 77 ಬಿಜೆಪಿ ಶಾಸಕರಿಗೆ ಕೇಂದ್ರ ಸರ್ಕಾರದ ವತಿಯಿಂದ ಭದ್ರತೆಯನ್ನು ಒದಗಿಸಲಾಗಿದೆ.
ಖರ್ಚು-ವೆಚ್ಚ ಭರಿಸುವವರಾರು?:ಗುಪ್ತಚರ ಸಂಸ್ಥೆಗಳ ವರದಿಯನ್ನಾಧರಿಸಿ ವ್ಯಕ್ತಿಗಳಿಗೆ ಭದ್ರತೆ ನೀಡಲು ಸರ್ಕಾರ ನಿರ್ಧರಿಸಿದರೆ, ಅದಕ್ಕಾಗುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಆದರೂ, ಝುಡ್ ಮತ್ತು ಝುಡ್ ಪ್ಲಸ್ ಭದ್ರತೆಯನ್ನು ಹೊಂದಿರುವವರು ತಮ್ಮ ನಿವಾಸದಲ್ಲಿ ಮತ್ತು ಸಂಚಾರದಲ್ಲಿ ಇರುವಾಗ ಭದ್ರತಾ ಸಿಬ್ಬಂದಿಗೆ ವಸತಿ ಸೌಕರ್ಯ ನೀಡಬೇಕಾಗುತ್ತದೆ. ಅಲ್ಲದೆ, ಉಚಿತವಾಗಿ ಭದ್ರತೆ ಒದಗಿಸುವುದು ಕಡ್ಡಾಯವೇನಲ್ಲ. ಖಾಸಗಿ ವ್ಯಕ್ತಿಯಿಂದ ಶುಲ್ಕವನ್ನು ಸರ್ಕಾರ ಪಡೆಯಬಹುದಾಗಿದೆ. ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆ ಇದೆ ಎಂದು ಐಬಿ ವರದಿ ನೀಡಿದ ನಂತರ 2013 ರಲ್ಲಿ ಝುಢ್ ವರ್ಗದ ಸಿಆರ್​ಪಿಎಫ್ ರಕ್ಷಣೆಯನ್ನು ನೀಡಲಾಯಿತು. ಈ ಭದ್ರತೆಗಾಗಿ ಪ್ರತಿ ತಿಂಗಳಿಗೆ 15 ಲಕ್ಷ ರೂಪಾಯಿಗಳ ಶುಲ್ಕ ವಿಧಿಸುವಂತೆ ಸಿಆರ್​ಪಿಎಫ್​ಗೆ ಸರ್ಕಾರ ಸೂಚಿಸಿದೆ.
ಅಪರಾಧಿಗಳಿಗೂ ಭದ್ರತೆ:ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಗುರ್ವಿುತ್ ರಾಮ್ ರಹೀಮ್ ಸಿಂಗ್ ಈ ವರ್ಷದ ಆರಂಭದಲ್ಲಿ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದಾಗ ಹರಿಯಾಣ ಸರ್ಕಾರವು ಝುಡ್ ಪ್ಲಸ್ ವರ್ಗದ ಭದ್ರತೆಯನ್ನು ಒದಗಿಸಿತು.
ಅನೇಕ ಪಡೆಗಳ ಬಳಕೆ:ಪ್ರಧಾನಮಂತ್ರಿ ಹೊರತು ಪಡಿಸಿ ವಿಐಪಿಗಳಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್​ಎಸ್​ಜಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್) ಬಳಸಿಕೊಂಡು ಭದ್ರತೆ ಒದಗಿಸುತ್ತದೆ. ಇನ್ನು ರಾಜ್ಯಗಳಿಂದ ಭದ್ರತೆ ನೀಡಿದರೆ, ರಾಜ್ಯ ಪೊಲೀಸರು ರಕ್ಷಣೆ ನೀಡುತ್ತಾರೆ.
ವಿವಿಧ ರೀತಿಯ ಭದ್ರತೆಗಳು:ಸರ್ಕಾರಗಳು ಒದಗಿಸುವ ಭದ್ರತೆಯಲ್ಲಿ ಆರು ವಿಭಾಗಗಳಿವೆ. ಎಕ್ಸ್, ವೈ, ವೈ ಪ್ಲಸ್, ಝುಡ್, ಝುಡ್ ಪ್ಲಸ್ ಹಾಗೂ ಎಸ್​ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್- ವಿಶೇಷ ರಕ್ಷಣಾ ದಳ). ಎಸ್​ಪಿಜಿಯು ಪ್ರಧಾನ ಮಂತ್ರಿ ಮತ್ತು ಅವರ ಕುಟುಂಬಕ್ಕೆ ಮಾತ್ರ ಮೀಸಲಾಗಿದೆ. ಇತರ ರೀತಿಯ ಭದ್ರತೆಗಳನ್ನು ಸರ್ಕಾರವು ಬೆದರಿಕೆ ಸಾಧ್ಯತೆ ಇರುವ ಯಾರಿಗಾದರೂ ಒದಗಿಸಬಹುದು.
ಈ ವರ್ಗಗಳಲ್ಲಿಯೇ ನಿವಾಸದ ಭದ್ರತೆ, ಸಂಚಾರ ಭದ್ರತೆ, ಕಚೇರಿ ಭದ್ರತೆ, ಅಂತರ-ರಾಜ್ಯ ಭದ್ರತೆ ಇತ್ಯಾದಿ ಇವೆ.
ತಾರತಮ್ಯದ ಆರೋಪ:ಭದ್ರತೆ ವಿಚಾರದಲ್ಲಿ ರಾಜಕಾರಣ ನುಸುಳುತ್ತಿದೆ ಹಾಗೂ ತಾರತಮ್ಯ ಎಸಗಲಾಗುತ್ತಿದೆ ಎಂಬ ಆರೋಪಗಳಿವೆ. ಸಲ್ಮಾನ್​ಖಾನ್, ಅಕ್ಷಯಕುಮಾರ್, ಅನುಪಮ್ ಖೇರ್ ಅವರಂತಹ ಬಾಲಿವುಡ್ ನಟರಿಗೆ ನಿಜವಾಗಿಯೂ ಬೆದರಿಕೆಯ ಸಾಧ್ಯತೆಗಳಿವೆ. 2020 ರ ಸೆಪ್ಟೆಂಬರ್ ತಿಂಗಳಲ್ಲಿ ನಟಿ ಕಂಗನಾ ರಣಾವತ್ ಹಾಗೂ ಶಿವಸೇನಾ ನಾಯಕ ಸಂಜಯ್ ರಾವತ್ ನಡುವೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ತಮಗೆ ಜೀವ ಬೆದರಿಕೆ ಇದೆ ಎಂದು ಕಂಗನಾ ಆತಂಕ ವ್ಯಕ್ತಪಡಿಸಿದ್ದರಿಂದ ಕೇಂದ್ರ ಗೃಹ ಸಚಿವಾಲಯವು ವೈ ಪ್ಲಸ್ ಹಾಗೂ ಸಿಆರ್​ಪಿಎಫ್ ಭದ್ರತೆ ಯನ್ನು ಅವರಿಗೆ ಒದಗಿಸಿದ್ದು ಹಲವರ ಹುಬ್ಬೇರಿಸುವಂತೆ ಮಾಡಿತ್ತು. ಆದರೆ, ಜೆಎನ್​ಯುು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಹಿನ್ನೆಲೆ ಯಲ್ಲಿ ಬೆದರಿಕೆಗಳನ್ನು ಎದುರಿಸಿದ ನಟಿ ದೀಪಿಕಾ ಪಡುಕೋಣೆಗೆ ಭದ್ರತೆಯನ್ನು ನೀಡಲಿಲ್ಲ ಎಂಬ ಟೀಕೆಗಳು ಕೇಳಿಬಂದವು.
‘ದೊಡ್ಡ’ದಾದ ಜಾತಿ-ಮೀಸಲಾತಿ ವಿವಾದ, ಐತಿಹಾಸಿಕ ದೇವಸ್ಥಾನದ ಟೆಂಡರೇ ರದ್ದು!

ಹುಣಸೆಹಣ್ಣಿಗೆ ಆಸೆಪಟ್ಟು ಪ್ರಾಣ ಕಳೆದುಕೊಂಡ ಮಹಿಳೆ; ಹಣ್ಣು ಕೈಗೆ ಸಿಕ್ತು ಎನ್ನುವಷ್ಟರಲ್ಲೇ ಜೀವವೇ ಹೋಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
