ಶ್ರೀನಗರ:ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಅಲ್ಲಿನ ವಸ್ತುಸ್ಥಿತಿ ಅಧ್ಯಯನಕ್ಕೆ ವಿವಿಧ ದೇಶಗಳ ರಾಜತಾಂತ್ರಿಕ ಅಧಿಕಾರಿಗಳನ್ನು ಒಳಗೊಂಡ 16 ಸದಸ್ಯರ ತಂಡ ಗುರುವಾರ ಶ್ರೀನಗರಕ್ಕೆ ಭೇಟಿ ನೀಡಿದೆ. ಜನರನ್ನು ಭೇಟಿ ಮಾಡಿದ ತಂಡದ ಸದಸ್ಯರು ರಾಜ್ಯದಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡರು.
ಕಾಶ್ಮೀರದಲ್ಲಿ ಗಲಭೆಗೆ ಪಾಕ್ ಹಸ್ತಕ್ಷೇಪ ಕಾರಣ. ಪಾಕ್ ಸುಮ್ಮನಿದ್ದರೆ ಕಾಶ್ಮೀರವೂ ಶಾಂತವಾಗಿರುತ್ತದೆ. ರಾಜತಾಂತ್ರಿಕರ ತಂಡ ಪಾಕ್ ಮೇಲೆ ಒತ್ತಡ ತರಬೇಕು ಎಂದು ಕೆಲ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ. ಭಾರತದಲ್ಲಿ ಅಮೆರಿಕದ ರಾಯಭಾರಿ ಕೆನ್ನೆತ್ ಐ ಜಸ್ಟರ್ ನೇತೃತ್ವದಲ್ಲಿ 15 ಜನರ ತಂಡ ಶ್ರೀನಗರಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿತು. ಜಮ್ಮು- ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಗಣ್ಯರನ್ನು ಸ್ವಾಗತಿಸಿ, ಸೇನಾ ಕಚೇರಿಗೆ ಕರೆದೊಯ್ದರು.
ನಂತರ ಲೆಫ್ಟಿನೆಂಟ್ ಗವರ್ನರ್ ಜಿ.ಸಿ. ಮುಮು ಮತ್ತು ವಿವಿಧ ಸೊಸೈಟಿಗಳ ಸದಸ್ಯರು, ಬೆರಳೆಣಿಕೆಯಷ್ಟು ರಾಜಕಾರಣಿಗಳನ್ನು, ಸ್ಥಳೀಯ ಪತ್ರಕರ್ತರನ್ನು ಭೇಟಿ ಮಾಡಿದೆ. ಬಳಿಕ ಶ್ರೀನಗರ ಮತ್ತು ಸಮೀಪದ ಕೆಲವು ಸ್ಥಳಗಳಿಗೆ ಭೇಟಿ ನೀಡಿದ ತಂಡ, ನಂತರ ಜಮ್ಮುವಿಗೆ ಹೊರಟಿತು. ರಾತ್ರಿ ಅಲ್ಲೇ ವಾಸ್ತವ್ಯ ಹೂಡುವ ತಂಡ, ಶುಕ್ರವಾರ ಜಮ್ಮು ಭಾಗದ ವಿವಿಧೆಡೆ ಭೇಟಿ ನೀಡಲಿದೆ.
ಭೇಟಿಯ ಉದ್ದೇಶವೇನು?
ಜಮ್ಮು- ಕಾಶ್ಮೀರಕ್ಕೆ 370ನೇ ವಿಧಿ ಅನ್ವಯ ಇದ್ದ ವಿಶೇಷ ಸ್ಥಾನಮಾನವನ್ನು ಕಳೆದ ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸಂಪರ್ಕ, ಸಂವಹನ ಕಡಿತ ಮತ್ತು ರಾಜಕೀಯ ನಾಯಕರ ಬಂಧನದ ಬಗ್ಗೆ ವಿಶ್ವಸಮುದಾಯದಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜತಾಂತ್ರಿಕರ ತಂಡವನ್ನು ಇದೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಕಳುಹಿಸಿದೆ. ಕಳೆದ ಅಕ್ಟೋಬರ್​ನಲ್ಲಿ ಐರೋಪ್ಯ ಸಂಸತ್ತಿನ 23 ಸದಸ್ಯರನ್ನು ಸ್ವಯಂಸೇವಾ ಸಂಸ್ಥೆಯೊಂದು ಕಾಶ್ಮೀರಕ್ಕೆ ಕರೆದೊಯ್ದಿತ್ತು. ಇದನ್ನು ಖಾಸಗಿ ಪ್ರವಾಸ ಎಂದು ಕೇಂದ್ರ ಸರ್ಕಾರ ಹೇಳಿತ್ತು. ವಿಶೇಷ ಸ್ಥಾನಮಾನ ರದ್ದತಿ ನಂತರ ಜಮ್ಮು- ಕಾಶ್ಮಿರ ಕೇಂದ್ರಾಡಳಿತ ಪ್ರದೇಶ (ಶಾಸನಸಭೆ ಸಹಿತ) ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶ (ಶಾಸನಸಭೆ ರಹಿತ) ಎಂದು ಪುನರ್ ರಚಿಸಲಾಗಿದೆ.
ತಂಡದಲ್ಲಿರುವ ಪ್ರತಿನಿಧಿಗಳು
ಅಮೆರಿಕ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ವಿಯೆಟ್ನಾಂ, ನಾರ್ವೆ, ಮಾಲ್ದೀವ್ಸ್, ದಕ್ಷಿಣ ಕೊರಿಯಾ, ಮೊರಾಕೊ, ನೈಜೀರಿಯಾ, ನೈಗರ್, ಗಯಾನಾ, ಅರ್ಜೆಂಟೀನಾ, ಫಿಲಿಪ್ಪೀನ್ಸ್, ಟೋಗೊ, ಫಿಜಿ, ಪೆರು, ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ಪ್ರತಿನಿಧಿಗಳು. ಮೊದಲು 18 ಸದಸ್ಯರ ತಂಡ ಕಾಶ್ಮೀರಕ್ಕೆ ಭೇಟಿ ನೀಡಲಿದೆ ಎಂದು ಸರ್ಕಾರ ಹೇಳಿತ್ತು. ಆದರೆ, ಐರೋಪ್ಯ ಒಕ್ಕೂಟದ ಇಬ್ಬರು ಸದಸ್ಯರು ಹಿಂದೆಸರಿದ ಕಾರಣ 16 ಮಂದಿ ಮಾತ್ರ ಭೇಟಿ ನೀಡಿದ್ದಾರೆ.
ಎಂಟು ಮಂದಿ ಉಚ್ಚಾಟನೆ
ರಾಜತಾಂತ್ರಿಕರ ತಂಡವನ್ನು ಭೇಟಿಯಾದ ಎಂಟು ಮುಖಂಡರನ್ನು ಪಿಡಿಪಿಯಿಂದ ಉಚ್ಚಾಟಿಸಲಾಗಿದೆ. ಉಚ್ಚಾಟಿತರಲ್ಲಿ ಮಾಜಿ ಶಾಸಕರಾದ ದಿಲಾವರ್ ಮಿರ್, ಅಹ್ಮದ್ ಮಿರ್, ಜಾಫರ್ ಇಕ್ಬಾಲ್, ಅಬ್ದುಲ್ ಮಜೀದ್ ಪಡ್ರೂ, ರಜಾ ಮನ್ಜೂರ್ ಖಾನ್, ಜಾವೈದ್ ಹಸನ್ ಬೇಗ್, ಖಮರ್ ಹುಸೈನಿ, ಅಬ್ದುಲ್ ರಹೀಂ ಸೇರಿದ್ದಾರೆ. ಕಾಶ್ಮೀರಿಗಳ ಆಶಯಕ್ಕೆ ವಿರುದ್ಧವಾಗಿ ವರ್ತಿಸಿದವರ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಪಕ್ಷದ ಶಿಸ್ತುಕ್ರಮ ಸಮಿತಿ ಹೇಳಿದೆ.
ಇಬ್ಬಗೆ ನೀತಿ, ಕಾಂಗ್ರೆಸ್ ಟೀಕೆ
ಜಮ್ಮು- ಕಾಶ್ಮೀರಕ್ಕೆ ದೇಶದ ರಾಜಕಾರಣಿಗಳಿಗೆ ಹೋಗಲು ಬಿಡದ ಕೇಂದ್ರ ಸರ್ಕಾರ, ವಿದೇಶಿಯರ ನಿಯೋಗದ ಭೇಟಿಗೆ ಅವಕಾಶ ನೀಡಿದೆ. ಇದು ಇಬ್ಬಗೆಯ ನೀತಿ ಎಂದು ಕಾಂಗ್ರೆಸ್ ಟೀಕಿಸಿದೆ. ವಿದೇಶಿ ರಾಜತಾಂತ್ರಿಕರ ತಂಡಕ್ಕೂ ಮುಕ್ತವಾಗಿ ಸಂಚರಿಸಲು ಅವಕಾಶ ನೀಡಿಲ್ಲ. ಅಧಿಕಾರಿಗಳು ಕರೆದೊಯ್ದಲ್ಲಿಗೆ ಅವರು ಹೋಗಬೇಕು.
ಅವರು ಸೇರಿಸುವ ಜನರಿಂದ ಮಾಹಿತಿ ಸಂಗ್ರಹಿಸಬೇಕು. ಇದ್ಯಾವ ರೀತಿ ಪಾರದರ್ಶಕತೆ ಎಂದು ಪ್ರಶ್ನಿಸಿದೆ. ಜಮ್ಮು -ಕಾಶ್ಮೀರಕ್ಕೆ ಹೋಗಲು ಭಾರತದ ರಾಜಕಾರಣಿಗಳಿಗೂ ಅವಕಾಶ ನೀಡಬೇಕು ಮತ್ತು ಸಂಚಾರಕ್ಕೆ ಯಾವುದೇ ನಿಯಂತ್ರಣ ಹಾಕಬಾರದು ಎಂದು ಕಾಂಗ್ರೆಸ್​ನ ಹಿರಿಯ ಮುಖಂಡ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ. ಕಾಶ್ಮೀರ ಕಣಿವೆಗೆ ಎರಡನೇ ಹಂತದಲ್ಲಿ ವಿದೇಶಿ ರಾಜತಾಂತ್ರಿಕರನ್ನು ಕಳುಹಿಸುವ ಮೂಲಕ ಕಾಶ್ಮೀರದಲ್ಲಿ ಸಹಜ ವಾತಾವರಣ ಸೃಷ್ಟಿಸಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಪಿಡಿಪಿ ಮತ್ತು ಎನ್​ಸಿಪಿಗಳು ಟೀಕಿಸಿವೆ.
ಐರೋಪ್ಯ ರಾಷ್ಟ್ರಗಳ ಪ್ರತಿನಿಧಿಗಳಿಲ್ಲ
ಮುಕ್ತ ಸಂಚಾರಕ್ಕೆ ಅವಕಾಶ ಇಲ್ಲವೆಂದು ಐರೋಪ್ಯ ಒಕ್ಕೂಟದ ಇಬ್ಬರು ಪ್ರತಿನಿಧಿಗಳು ಈ ತಂಡದಲ್ಲಿ ಭಾಗವಹಿಸಿಲ್ಲ. ಐರೋಪ್ಯ ಪ್ರತಿನಿಧಿಗಳು ಬೇರೊಂದು ದಿನ ಕಾಶ್ಮೀರಕ್ಕೆ ಭೇಟಿ ನೀಡಲು ಬಯಸಿದ್ದು, ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿಯನ್ನು ಭೇಟಿಯಾಬೇಕು ಎಂದು ಹೇಳಿವೆ.
ರಾಜತಾಂತ್ರಿಕರ ತಂಡದ ಜತೆ ಮುಕ್ತವಾಗಿ ರ್ಚಚಿಸಲಾಯಿತು. ಸ್ಥಳೀಯ ಸ್ಥಿತಿಗತಿಯನ್ನು ಯಾವುದೇ ಮುಚ್ಚುಮರೆ ಇಲ್ಲದೆ ವಿವರಿಸಲಾಯಿತು.
| ಅಲ್ತಾಫ್ ಬುಖಾರಿ ಮಾಜಿ ಸಚಿವ, ಪಿಡಿಪಿ ಮುಖಂಡ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × 4 =
Remember me
