ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ನಂತರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರಿಷ್ಠರನ್ನು ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಪಕ್ಷದೊಳಗೆ ಕುತೂಹಲ, ಉತ್ಸಾಹ ಗರಿಗೆದರಿದೆ. ಆಪ್ತ ಮೂಲಗಳ ಪ್ರಕಾರ ವರಿಷ್ಠರ ಆಹ್ವಾನದ ಮೇರೆಗೆ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ಖಾಲಿ ಪ್ರಮುಖ ಹುದ್ದೆಗಳ ಭರ್ತಿ ನೆಲೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸೋಮವಾರ ಬೆಳಗ್ಗೆ ಭೇಟಿಯಾಗಿ ಮಾತುಕತೆ ನಡೆಸಲಿದ್ದು, ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗುವರು.
ಪ್ರಮುಖ ನಿರ್ಣಯ ತೆಗೆದುಕೊಳ್ಳುವ ಮುನ್ನ ಯಾವುದೇ ಸಂದೇಶ ನೀಡುವುದಿಲ್ಲ. ಇದು, ದೆಹಲಿ ನಾಯಕರ ಇತ್ತೀಚಿನ ಮನಸ್ಥಿತಿ ಎನ್ನುವುದು ಹಿರಿಯ ನಾಯಕರೊಬ್ಬರ ವಿಶ್ಲೇಷಣೆಯಾಗಿದೆ. ಗುಂಪುಗಾರಿಕೆ, ಹುದ್ದೆಗೆ ಲಾಬಿ, ಗೊಂದಲಗಳ ಕಾರಣದಿಂದ ದೆಹಲಿ ನಾಯಕರು ಕಾದು ನೋಡುವ ತಂತ್ರ ಅನುಸರಿಸಿದರು. ಇದೀಗ ಬೊಮ್ಮಾಯಿ ದೆಹಲಿ ಪ್ರಯಾಣವು ಪಕ್ಷದ ರಾಜ್ಯ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಹೊಸ ಆಸೆ ಚಿಗುರಿಸಿದೆ.
ವಿಧಾನ ಮಂಡಲ ಪ್ರತಿಪಕ್ಷ ನಾಯಕರು ಹಾಗೂ ಪಕ್ಷದ ರಾಜ್ಯ ಸಮಿತಿ ನೂತನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ವರಿಷ್ಠರ ಸ್ಪಷ್ಟ ನಿರ್ಧಾರಕ್ಕೆ ಬಂದರೆ, ರಾಜ್ಯ ನಾಯಕರು ಸಂದಿಗ್ಧ ಪಾರಾಗಬಹುದು ಎಂದು ಮೂಲಗಳು ತಿಳಿಸಿವೆ.
ಮೂಡದ ಒಮ್ಮತ:ಪ್ರಮುಖ ಹುದ್ದೆಗಳನ್ನು ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯದ ನಾಯಕರಿಗೆ ಹಂಚುವ ಸಂಯೋಜನೆ ವಿಷಯದಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೊದಲ ಮೂರು ವರ್ಷ ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬೊಮ್ಮಾಯಿ ನೇಮಕದತ್ತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಒಲವು ತೋರಿಸಿದ್ದಾರೆ.
ಪ್ರತಿಪಕ್ಷ ಹುದ್ದೆಗೆ ಬಸನಗೌಡ ಪಾಟೀಲ್ ಯತ್ನಾಳ್, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಟಿ.ರವಿ ಅಥವಾ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೆಸರನ್ನು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತಿದೆ. ಪ್ರಮುಖ ಹುದ್ದೆಗಳನ್ನು ಮೊದಲ ಮೂರು ವರ್ಷಗಳಿಗೆ ಭರ್ತಿ ವಿಚಾರದಲ್ಲಿ ಇಬ್ಬರೂ ಸಹಮತ ವ್ಯಕ್ತಪಡಿಸಿದ್ದು, ಆಯ್ಕೆಯೇ ಕಗ್ಗಂಟಾಗಿದೆ ಎಂದು ತಿಳಿದಿದೆ.
ಸಾಧ್ಯತೆಗಳು:ಜಗದೀಶ ಶೆಟ್ಟರ್​ಗೆ ಟಿಕೆಟ್ ಕಡಿತದ ನಂತರ ಸೃಷ್ಟಿಯಾದ ‘ಅನ್ಯಾಯ’ ಅಪಸ್ವರ ನೀಗಿಸಲೆಂದು ಬೊಮ್ಮಾಯಿ ಜತೆಗೆ ಮಹತ್ವದ ಹುದ್ದೆಗಳ ಮಾತುಕತೆ ನಡೆಸಲಿದ್ದಾರೆ. ಪ್ರತಿಪಕ್ಷ ನಾಯಕ ಸ್ಥಾನ ಅಥವಾ ಗೌರವಕ್ಕೆ ತಕ್ಕನಾದ ಹುದ್ದೆಯ ಆಫರ್ ನೀಡಬಹುದು. ಜತೆಗೆ ರಾಜ್ಯ ಸಾರಥಿ ಯಾರಾದರೆ ಸೂಕ್ತವೆಂಬ ಅಭಿಪ್ರಾಯ ಪಡೆಯಲಿದ್ದಾರೆ. ವಿಧಾನ ಮಂಡಲದ ಪ್ರತಿಪಕ್ಷಗಳ ನಾಯಕರು ಮತ್ತು ರಾಜ್ಯದ ಅಧ್ಯಕ್ಷ ಸ್ಥಾನದ ಜಾತಿ, ಪ್ರಾದೇಶಿಕ ಸಮತೋಲನದ ಬಗ್ಗೆ ರ್ಚಚಿಸುವ ಸಾಧ್ಯತೆಗಳಿವೆ.
ರಾಜ್ಯದತ್ತ ಗಮನಹರಿಸುವರೇ?:ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಮಂಗಳವಾರದಿಂದ ಶುರುವಾಗಲಿದೆ. ರಾಷ್ಟ್ರ ರಾಜಕೀಯ ದೃಷ್ಟಿಯಿಂದ ಅತ್ಯಂತ ಮಹತ್ವದ ವಿಷಯವಾಗಿದೆ. ಎನ್​ಡಿಎ ಮೈತ್ರಿಕೂಟದ ದೊಡ್ಡಣ್ಣ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅವಿಶ್ವಾಸ ನಿರ್ಣಯದ ಮೇಲೆ ನಡೆಯುವ ಚರ್ಚೆಗೆ ಪ್ರತ್ಯುತ್ತರ ರೂಪಿಸುವ ಕಾರ್ಯತಂತ್ರ ಹೆಣೆಯಲು ವರಿಷ್ಠರು ಮಗ್ನರಾಗಿದ್ದು, ರಾಜ್ಯದತ್ತ ಗಮನಹರಿಸಲು ಸಮಯ ಇದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಆ ಒಂದು ತಿಂಗಳ ಸಮಯದಲ್ಲಿ ಈ ಊರಲ್ಲಿ ಕಾಗೆಗಳೇ ಕಾಣಿಸುವುದಿಲ್ಲ!; ಕಾರಣವಾದರೂ ಏನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
