ಕೆಲ ದಿನಗಳಿಂದ ಫ್ರಾನ್ಸ್ ವ್ಯಾಪಕ ಗಲಭೆ-ಘರ್ಷಣೆಗಳಿಗೆ ಸಾಕ್ಷಿಯಾಗಿದೆ. ಪ್ರತಿಭಟನಾಕಾರರು ಕಾರುಗಳು ಮತ್ತು ಸಾರ್ವಜನಿಕ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ. ಫ್ರೆಂಚ್ ಅಧಿಕಾರಿಗಳು ದಬ್ಬಾಳಿಕೆ ನಡೆಸಿದ್ದಾರೆ ಎಂದು ಪ್ರತಿಭಟಿಸಿ ರ‍್ಯಾಲಿ ಮಾಡಲು ಬೀದಿಗಿಳಿದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದಿವೆ. ಫ್ರಾನ್ಸ್​ನಲ್ಲಿ ದೀರ್ಘಕಾಲದಿಂದ ಅಸ್ತಿತ್ವದಲ್ಲಿರುವ ವರ್ಣಭೇದ ನೀತಿ, ಜನಾಂಗೀಯ ದ್ವೇಷ ಮತ್ತು ಪೊಲೀಸ್ ಬಲದ ಅಸಮಾನ ಬಳಕೆ ವಿರೋಧಿಸಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಫ್ರೆಂಚ್ ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಜೂನ್ 30ರ ರಾತ್ರಿ 994 ಗಲಭೆಕೋರರನ್ನು ಬಂಧಿಸಲಾಗಿದೆ. 79 ಪೊಲೀಸರು ಗಾಯಗೊಂಡಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ 2,560 ಕಡೆಗಳಲ್ಲಿ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆಗಳು ಭುಗಿಲೆಳುತ್ತಿದ್ದಂತೆಯೇ 45,000 ಪೊಲೀಸ್ ಸಿಬ್ಬಂದಿಯನ್ನು ಬೀದಿಗಳಲ್ಲಿ ನಿಯೋಜಿಸುವುದರೊಂದಿಗೆ ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ರಾಜಧಾನಿ ಪ್ಯಾರಿಸ್ ನಂತರ ಫ್ರಾನ್ಸ್​ನ ಎರಡನೇ ಅತಿದೊಡ್ಡ ನಗರವಾದ ಮಾರ್ಸೆಲ್ಲೆಸ್​ನಲ್ಲಿ ಶಾಂತಿಯನ್ನು ಪುನರ್​ಸ್ಥಾಪಿಸುವ ಪ್ರಯತ್ನದಲ್ಲಿ ಜೂನ್ 30ರಿಂದ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಮಾರ್ಸೆಲ್ಲೆಯಲ್ಲಿ ಶುಕ್ರವಾರ ರಾತ್ರಿ ಗಲಭೆಕೋರರು ಬಂದೂಕು ಅಂಗಡಿಯನ್ನು ಕೂಡ ಲೂಟಿ ಮಾಡಿದ್ದು, ಬೇಟೆಯಾಡುವ ಕೆಲವು ರೈಫಲ್​ಗಳನ್ನು ಕದ್ದಿದ್ದಾರೆ. ಆದರೆ ಯಾವುದೇ ಮದ್ದುಗುಂಡುಗಳನ್ನು ಕದ್ದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಟ್ರಾಸ್​ಬರ್ಗ್​ನ ಆಪಲ್ ಸ್ಟೋರ್ ಹಾಗೂ ಅಂಗಡಿಗಳನ್ನು ಲೂಟಿಕೋರರು ಧ್ವಂಸಗೊಳಿಸಿದ್ದಾರೆ. ಹಲವಾರು ಕ್ಯಾಸಿನೊ ಸೂಪರ್ ಮಾರ್ಕೆಟ್​ಗಳನ್ನು ಲೂಟಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಇದು ಸಹಜ ಕೋಪದ ಸ್ಪೋಟವಾಗಿದೆ. ಪೊಲೀಸರ ದಬ್ಬಾಳಿಕೆಗೆ ಮಾತ್ರವಲ್ಲದೆ ಆರ್ಥಿಕ ಮತ್ತು ಜನಾಂಗೀಯ ಅಸಮಾನತೆಗಳ ಕುರಿತ ಆಕ್ರೋಶವೂ ಇದಾಗಿದೆ’ ಎನ್ನುತ್ತಾರೆ ಲೇಖಕ ಮ್ಯಾಥ್ಯೂ ರಿಗೌಸ್ಟ್. ಅಂತಾರಾಷ್ಟ್ರೀಯ ಟೀಕೆಗಳು ಮತ್ತು ಸ್ಥಳೀಯ ಹೋರಾಟಗಳ ಹೊರತಾಗಿಯೂ ಫ್ರೆಂಚ್ ಸರ್ಕಾರವು ತನ್ನ ಪೋಲೀಸ್, ಜೈಲುಗಳು ಮತ್ತು ಗಡಿಗಳನ್ನು ನಿರಂತರವಾಗಿ ಬಲಪಡಿಸಿದೆ ಎಂದೂ ಅವರು ಹೇಳುತ್ತಾರೆ.
ಜೂನ್ 27ರಂದು 17 ವರ್ಷದ ನಹೆಲ್​ನ ಸಾವಿನಿಂದ ಪ್ರತಿಭಟನೆಗಳು ಶುರುವಾದವು. ನಹೆಲನು ಪ್ಯಾರಿಸ್​ನ ಪಶ್ಚಿಮದಲ್ಲಿರುವ ಉಪನಗರವಾದ ನಾಂಟೆರ್ರೆ ನಿವಾಸಿಯಾಗಿದ್ದ. ಪರವಾನಿಗೆ ಇಲ್ಲದೇ ಕಾರು ಚಲಾಯಿಸಿಕೊಂಡು ನಗರದಲ್ಲಿ ಸಂಚರಿಸುತ್ತಿದ್ದ ವೇಳೆ ಇಬ್ಬರು ಪೊಲೀಸರು ಆತನನ್ನು ತಡೆದಿದ್ದಾರೆ ಎನ್ನಲಾಗಿದೆ. ನಹೆಲನು ಹಳದಿ ಮರ್ಸಿಡಿಸ್ ಕಾರು ಚಲಾಯಿಸುತ್ತಿದ್ದ. ಇಬ್ಬರು ಪ್ರಯಾಣಿಕರು ಕೂಡ ಈ ಕಾರಿನಲ್ಲಿದ್ದರು. ಟ್ರಾಫಿಕ್ ಲೈಟ್ ಬಳಿ ವಾಹನ ನಿಲ್ಲಿಸಲು ಪೊಲೀಸರಿಗೆ ಆತನಿಗೆ ಹೇಳಿದ್ದಾರೆ. ಆದರೆ, ಸಿಗ್ನಲ್​ನಲ್ಲಿ ಕೆಂಪು ದೀಪ ಇದ್ದರೂ ಆತ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ನಹೆಲ್ ಸಾವಿನ ನಂತರ ವ್ಯಾಪಕವಾಗಿ ಹರಡುತ್ತಿರುವ ವಿಡಿಯೋದ ಪ್ರಕಾರ, ಒಬ್ಬ ಪೊಲೀಸ್ ಕಾರಿಗೆ ಗುರಿಯಿಟ್ಟು ಬಂದೂಕು ಹಿಡಿದಿದ್ದನು. ಪೊಲೀಸರ ಸೂಚನೆ ಉಲ್ಲಂಘಿಸಿ ಕಾರು ಓಡಿಸಿದಾಗ ನಹೆಲನ ಮೇಲೆ ಗುಂಡು ಹಾರಿಸಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಕಾರು ನಂತರ ರಸ್ತೆಬದಿಯ ಪಾದಚಾರಿ ಮಾರ್ಗದ ಬಳಿ ಹೋಗಿದ್ದು, ಇತರ ಇಬ್ಬರು ಪ್ರಯಾಣಿಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಫ್ರೆಂಚ್-ಅಲ್ಜೀರಿಯನ್ ಕುಟುಂಬಕ್ಕೆ ಸೇರಿದ ನಹೆಲ್ ಒಂಟಿ ತಾಯಿಯ (ಸಿಂಗಲ್ ಮದರ್) ಏಕೈಕ ಮಗನಾಗಿದ್ದ. ಹಿಂದುಳಿದ ಪ್ರದೇಶಗಳ ಯುವಜನರಿಗೆ ನೀಡಲಾಗುವ ಕೌಶಲ ಮತ್ತು ನೆರವು ಒದಗಿಸುವ ಬೃಹತ್ ಯೋಜನೆಯಲ್ಲಿ ಎಲೆಕ್ಟ್ರಿಷಿಯನ್ ಆಗಲು ಕೋರ್ಸ್​ಗೆ ಆತ ನೋಂದಾಯಿಸಿಕೊಂಡಿದ್ದ. ಕಾಲೇಜಿನಲ್ಲಿ ಆತನ ಹಾಜರಾತಿ ಕಳಪೆಯಾಗಿತ್ತು. ಆತ ರಗ್ಬಿ ಆಟಗಾರನಾಗಿದ್ದ.
ಉಪನಗರಗಳಲ್ಲಿ ಅನೇಕ ಬಡ ಯುವಕರ ಪೋಷಕರು (ಆಫ್ರಿಕಾ, ಕೆರಿಬಿಯನ್ ಮತ್ತು ಏಷ್ಯಾದಿಂದ) ಪ್ಯಾರಿಸ್​ಗೆ ವಲಸೆ ಬಂದವರಾಗಿದ್ದಾರೆ. ತಾವು ಪೊಲೀಸ್ ದೌರ್ಜನ್ಯದ ಮೊದಲ ಗುರಿ ಎಂದು ಅವರು ತಿಳಿದಿದ್ದಾರೆ.
| ರೋಖಾಯಾ ಡಿಯಲ್ಲೊ, ಪತ್ರಕರ್ತ
ಧರ್ಮ ಅಥವಾ ಚರ್ಮದ ಬಣ್ಣವನ್ನು ಆಧರಿಸಿ ಜನರನ್ನು ನಿರ್ಣಯಿಸದಿರುವ ಸಮಾನತೆಯ ಸಮಾಜ ನಮ್ಮದು. ಆದರೆ, ಇದೇ ಸಮಯದಲ್ಲಿ ನಮ್ಮ ಆದರ್ಶಗಳು ಮತ್ತು ವಾಸ್ತವದ ನಡುವೆ ದೊಡ್ಡ ಅಂತರವಿದೆ.
| ಎಡ-ಫ್ರಾನ್ಸ್ ಅನ್ಬೋಡ್ ಪಕ್ಷದ ಫ್ರೆಂಚ್ ಸಂಸದ ಡೇನಿಯಲ್ ಒಬೊನೊ
ನಹೆಲ್ ತಾಯಿ ಕೂಡ ಪೊಲೀಸರ ಕ್ರಮವನ್ನು ಪ್ರತಿಭಟಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ‘ಪೊಲೀಸರು ಅರಬ್ ಮುಖ ಹಾಗೂ ಚಿಕ್ಕ ಮಗುವನ್ನು ನೋಡಿದರು. ಅವನ ಪ್ರಾಣ ತೆಗೆಯಲು ಮುಂದಾದರು’ ಎಂದು ಆಕೆ ಆರೋಪಿಸಿದ್ದಾರೆ. ‘ಈ ಹಿಂದಿನ ಫ್ರೆಂಚ್ ವಸಾಹತುಗಳಿಂದ ಬಂದ ಅಲ್ಪಸಂಖ್ಯಾತ ಜನಾಂಗೀಯ ಸಮುದಾಯಗಳ ವಿರುದ್ಧ ಪೊಲೀಸ್ ಅನ್ಯಾಯದ ಕಾರಣದಿಂದಾಗಿ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ. ನಾವು ಸಹ ಫ್ರೆಂಚ್ ನಾಗರಿಕರಾಗಿದ್ದೇವೆ. ನಾವು ಹಿಂಸೆಯ ವಿರುದ್ಧವಾಗಿದ್ದೇವೆ. ನಾವು ಕೊಳಕು ಅಲ್ಲ’ ಎಂದು ನಹೆಲ್ ಕುಟುಂಬದ ಆಪ್ತ ಮೊಹಮದ್ ಜಕೌಬಿ ಹೇಳುತ್ತಾರೆ.
ನಹೆಲ್​ನನ್ನು ಒಂದೇ ಗುಂಡಿನಲ್ಲಿ ಕೊಲ್ಲಲಾಗಿದೆ ಎಂದು ಶವಪರೀಕ್ಷೆ ವರದಿ ಹೇಳಿದೆ. ಸ್ವಯಂಪ್ರೇರಿತ ನರಹತ್ಯೆಯ ಆರೋಪದಡಿಯಲ್ಲಿ, ಗುಂಡು ಹಾರಿಸಿದ ಅಧಿಕಾರಿಯ ತನಿಖೆ ಪ್ರಾರಂಭಿಸಲಾಗಿದೆ. ಆ ಅಧಿಕಾರಿ ಶಸ್ತ್ರಾಸ್ತ್ರದ ಬಳಕೆಗೆ ಕಾನೂನು ಷರತ್ತುಗಳನ್ನು ಪೂರೈಸಿಲ್ಲ ಎಂದು ಪ್ರಾಸಿಕ್ಯೂಷನ್ ಪರಿಗಣಿಸುತ್ತದೆ ಎಂದು ನಾಂಟೆರ್ರೆ ನಗರದ ಪಬ್ಲಿಕ್ ಪ್ರಾಸಿಕ್ಯೂಟರ್ ಪಾಸ್ಕಲ್ ಪ್ರಾಚೆ ತಿಳಿಸಿದ್ದಾರೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ. ನಹೆಲ್ ಸಾವು ಕ್ಷಮಿಸಲಾಗದ್ದು. ಆದರೆ ಗಣರಾಜ್ಯ, ಪೊಲೀಸ್ ಠಾಣೆಗಳು, ಶಾಲೆಗಳು, ಟೌನ್ ಹಾಲ್​ಗಳ ವಿರುದ್ಧದ ಹಿಂಸಾಚಾರ ಅಸಮರ್ಥನೀಯ ಎಂದು ಅವರು ಹೇಳಿದ್ದಾರೆ. ಪ್ರಚೋದನಕಾರಿ ಸಂದೇಶಗಳು, ಗಲಭೆಯ ಸೂಕ್ಷ್ಮ ದೃಶ್ಯಗಳನ್ನು ತೆಗೆದುಹಾಕಲು ಮತ್ತು ಅಂತಹ ಸಂದೇಶಗಳನ್ನು ಹರಡುವವರನ್ನು ಗುರುತಿಸುವಂತೆ ಅವರು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸೂಚಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಮೃತಪಟ್ಟ ಬಿಜೆಪಿ ಮುಖಂಡ!

ಎದೆನೋವು ಎಂದು ಮನೆಗೆ ಹೋದ 29 ವರ್ಷದ ಪೊಲೀಸ್ ಕಾನ್​ಸ್ಟೆಬಲ್ ಹೃದಯಾಘಾತದಿಂದ ಸಾವು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 + 1 =
Remember me
