ನವದೆಹಲಿ:ಇಂಧನ ದರ ಏರಿಕೆ ವಿಚಾರ ಸದ್ಯ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಪಂಚರಾಜ್ಯ ಚುನಾವಣೆ ಬಳಿಕ 16 ದಿನಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರಿಗೆ 10 ರೂಪಾಯಿ ಏರಿದೆ. ಈ ವಿಚಾರವಾಗಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ವಿಪಕ್ಷ ಆಡಳಿತ ರಾಜ್ಯಗಳು ವ್ಯಾಟ್ ಇಳಿಸದೇ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜಾಗತಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಸಹಕಾರ ತತ್ತ್ವದ ಪ್ರೇರಣೆಯೊಂದಿಗೆ ಕೆಲಸ ಮಾಡಬೇಕು. ರಾಜ್ಯ ಸರ್ಕಾರಗಳು ರಾಷ್ಟ್ರಹಿತವನ್ನು ಗಮನದಲ್ಲಿಟ್ಟುಕೊಂಡು ಇಂಧನದ ಮೇಲಿನ ವ್ಯಾಟ್ ( ಮೌಲ್ಯವರ್ಧಿತ ತೆರಿಗೆ) ಇಳಿಸಿ ಅದರ ಪ್ರಯೋಜನವನ್ನು ಸಾಮಾನ್ಯ ಜನರಿಗೆ ತಲುಪಿಸಬೇಕು ಎಂದು ಪ್ರಧಾನಿ ಆಗ್ರಹಿಸಿದರು. ಕಳೆದ ನವೆಂಬರ್​ನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರಿಗೆ ತಲಾ 5 ರೂಪಾಯಿ ಮತ್ತು10 ರೂಪಾಯಿ ಇಳಿಸಿತ್ತು. ವ್ಯಾಟ್ ಇಳಿಸುವಂತೆ ಎಲ್ಲ ರಾಜ್ಯಗಳಿಗೂ ಮನವಿ ಮಾಡಲಾಗಿತ್ತು. ಆದರೆ, ಕೆಲವು ರಾಜ್ಯಗಳು ಬಿಟ್ಟರೆ ಉಳಿದ ರಾಜ್ಯಗಳಲ್ಲಿ ವ್ಯಾಟ್ ಇಳಿಕೆಯಾಗಿಲ್ಲ. ಇದು ನ್ಯಾಯಯುತ ನಡೆಯಲ್ಲ ಎಂದು ಪ್ರಧಾನಿ ಮೋದಿ ಆಕ್ಷೇಪ ವ್ಯಕ್ತಪಡಿಸಿದರು. ಹಣದುಬ್ಬರಕ್ಕೆ ಕಾರಣವಾಗಿರುವ ಇಂಧನ ದರ ಏರಿಕೆ ವಿಚಾರ ಈಗ ಸಾರ್ವಜನಿಕ ಮಾತಿನ ಕೇಂದ್ರ ಬಿಂದು. ಪ್ರಧಾನಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೋವಿಡ್ ಪರಿಸ್ಥಿತಿ ಪರಾಮರ್ಶೆ ಸಭೆಯಲ್ಲಿ ಇಂಧನ ದರ ಏರಿಕೆ ವಿಚಾರ ಪ್ರಸ್ತಾಪವಾಯಿತು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಭೆಯಲ್ಲಿದ್ದರು.
ನಿರ್ಣಯಗಳಿಗೆ ಸಹಕಾರ ಬೇಕು:ಯೂಕ್ರೇನ್ ಮೇಲೆ ರಷ್ಯಾ ಸಮರ ಸಾರಿದ ಕಾರಣ, ಜಾಗತಿಕವಾಗಿ ಅರ್ಥ ವ್ಯವಸ್ಥೆ ತಲ್ಲಣಗೊಂಡಿದೆ. ಹೀಗಾಗಿ, ದೇಶದ ಆರ್ಥಿಕತೆಗೆ ಸಂಬಂಧಿಸಿದ ನಿರ್ಣಯ ತೆಗೆದುಕೊಳ್ಳುವಾಗ ಎಲ್ಲ ರಾಜ್ಯಗಳಿಂದಲೂ ಫೆಡರಲಿಸಮ್ ಚೌಕಟ್ಟಿನಲ್ಲಿ ಅಗತ್ಯವಾದ ನೆರವು ಬೇಕು. ಇಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಮನ್ವಯ ಕೂಡ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂಧನ ದರ ಹೊರೆ ಯಾಕೆ?:ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಬಹುತೇಕ ವಿಪಕ್ಷ ಆಡಳಿತದ ರಾಜ್ಯಗಳಲ್ಲಿ ವ್ಯಾಟ್ ಇಳಿಸಿಲ್ಲ. ಹೀಗಾಗಿ ಅಲ್ಲಿ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಇಂಧನ ದರ ಇದೆ. ಯಾರನ್ನೂ ಟೀಕಿಸುತ್ತಿಲ್ಲ. ಆದರೆ, ತಡವಾಗಿಯಾದರೂ ವ್ಯಾಟ್ ಇಳಿಸಿದರೆ ಅದರ ಪ್ರಯೋಜನ ಜನಸಾಮಾನ್ಯರಿಗೆ ಸಿಗುತ್ತದೆ ಎಂಬುದು ಕಾಳಜಿ ಎಂದು ಪ್ರಧಾನಿ ಮೋದಿ ವಿವರಿಸಿದರು. ಪೆಟ್ರೋಲ್ ದರ ಲೀಟರಿಗೆ ಚೆನ್ನೈನಲ್ಲಿ 111 ರೂ., ಜೈಪುರದಲ್ಲಿ 118 ರೂ., ಹೈದರಬಾದ್​ನಲ್ಲಿ 119 ರೂ., ಕೋಲ್ಕತದಲ್ಲಿ 115 ರೂ., ಮುಂಬೈನಲ್ಲಿ 120 ರೂ. ಇದೆ. ಇದೇ ವೇಳೆ, ವ್ಯಾಟ್ ಇಳಿಸಿರುವ ದಾಮನ್ – ದಿಯುನಲ್ಲಿ 102 ರೂ., ಲಖನೌನಲ್ಲಿ 105 ರೂ., ಜಮ್ಮುವಿನಲ್ಲಿ 106 ರೂ., ಗುವಾಹಟಿಯಲ್ಲಿ 105 ರೂ., ಡೆಹ್ರಾಡೂನ್​ನಲ್ಲಿ 103 ರೂಪಾಯಿ ಇದೆ. ಕೇಂದ್ರ ಸರ್ಕಾರ ಹೇಗಿದ್ದರೂ ಇಂಧನದ ಮೇಲಿನ ತೆರಿಗೆಯಲ್ಲಿ ಶೇಕಡ 42 ಅನ್ನು ರಾಜ್ಯಗಳ ಜತೆಗೆ ಹಂಚಿಕೊಳ್ಳುತ್ತದೆ ಎಂದು ಮೋದಿ ವಿವರಿಸಿದರು.
ಅಬಕಾರಿ ಸುಂಕ ಹೀಗೇಕೆ?:ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಕಾಂಗ್ರೆಸ್ ಆಳ್ವಿಕೆ ಇದ್ದಾಗ ಪೆಟ್ರೋಲ್ ಲೀಟರಿಗೆ ಅಬಕಾರಿ ಸುಂಕ 9.48 ರೂಪಾಯಿ, ಡೀಸೆಲ್​ಗೆ ಅಬಕಾರಿ ಸುಂಕ 3.56 ರೂ. ಇತ್ತು. ಮೋದಿ ಸರ್ಕಾರ ಬಂದ ಬಳಿಕ ಇದು ಪೆಟ್ರೋಲ್​ಗೆ ಲೀಟರ್​ಗೆ 27.90 ರೂ., ಡೀಸೆಲ್​ಗೆ 21.80 ರೂಪಾಯಿ ಆಗಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 18.42 ರೂಪಾಯಿ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ 18.24 ರೂಪಾಯಿ ಹಿಂಪಡೆಯಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಆಗ್ರಹಿಸಿದ್ದಾರೆ.
ಮಲತಾಯಿ ಧೋರಣೆ:ರಾಷ್ಟ್ರಮಟ್ಟದ ನೇರ ತೆರಿಗೆಯಲ್ಲಿ ಶೇಕಡ 38.3, ಜಿಎಸ್​ಟಿಯಲ್ಲಿ ಶೇಕಡ 15 ಪಾಲು ಮಹಾರಾಷ್ಟ್ರದ್ದು. ಆದರೆ, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮಹಾರಾಷ್ಟ್ರಕ್ಕೆ 26,500 ಕೋಟಿ ರೂಪಾಯಿ ಕೊಡುವುದು ಬಾಕಿ ಇರಿಸಿಕೊಂಡಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆರೋಪಿಸಿದರು.
ಬೆಂಗಳೂರು:ಇಂಧನ ಮೇಲಿನ ತೆರಿಗೆ ಇಳಿಸುವಂತೆ ಪ್ರಧಾನಿ ನೀಡಿರುವ ಸಲಹೆಗೆ ಕಾಂಗ್ರೆಸ್ ನಾಯಕರು ವ್ಯಘ್ರಗೊಂಡಿದ್ದು, ಜಂಟಿ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದರು. ರಾಜಸ್ಥಾನ, ಛತ್ತೀಸ್​ಗಢ, ತೆಲಂಗಾಣ, ಪಶ್ಚಿಮ ಬಂಗಾಳ, ತಮಿಳುನಾಡು, ಜಾರ್ಖಂಡ ಕಾಂಗ್ರೆಸ್, ಕಾಂಗ್ರೆಸ್ ಜತೆಗಿನ ಮೈತ್ರಿ ಪಕ್ಷಗಳ ಸರ್ಕಾರಗಳಿಗೆ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುವಂತೆ ಮೋದಿ ಸಲಹೆ ನೀಡಿದ್ದಾರೆ. ಈ ವಿಚಾರದಲ್ಲಿ ನಾವು ಐದು ಸರಳ ಪ್ರಶ್ನೆಗಳನ್ನು ಕೇಳಬಯಸುತ್ತೇವೆ. ಅವರು ನೇರ ಉತ್ತರ ನೀಡಲಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸವಾಲೆಸೆದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9.48 ರೂ. ಇತ್ತು. ಅದನ್ನು ನೀವು 28 ರೂ.ಗೆ ಏರಿಕೆ ಮಾಡಿದ್ದೀರಿ. ಈ ಅಬಕಾರಿ ಸುಂಕವನ್ನು ನೀವು 18 ರೂ.ನಷ್ಟು ಕಡಿಮೆ ಮಾಡಿ ಹಳೆಯ ಪ್ರಮಾಣಕ್ಕೆ ಯಾವಾಗ ಇಳಿಸುತ್ತೀರಿ? ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಡೀಸೆಲ್ ಮೇಲಿನ ಅಬಕಾರಿ ಸುಂಕ 3.56 ರೂ. ಇತ್ತು. ಮೋದಿ ಅವರೇ ಇದನ್ನು ನೀವು 21.80 ರೂ.ಗೆ ಏರಿಕೆ ಮಾಡಿದ್ದೀರಿ. ಇದನ್ನು ನೀವು ಯಾವಾಗ ಹಿಂಪಡೆಯುತ್ತೀರಿ? ಎಂದು ಪ್ರಶ್ನಿಸಿದರು.
ಕಳೆದ 8 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ 27 ಲಕ್ಷ ಕೋಟಿ ಹಣ ಸಂಗ್ರಹಿಸಿದೆ. ಈ ಹಣವನ್ನು ದೇಶದ ಜನ ಸಾಮಾನ್ಯರಿಗೆ ಪರಿಹಾರವಾಗಿ ಯಾವಾಗ ಹಿಂತಿರುಗಿಸುತ್ತೀರಿ? ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ 1000 ರೂ.ಗೆ ಏರಿಸಿದ್ದು, ಇದರ ಬೆಲೆ ಏರಿಕೆಯನ್ನು ನೀವು ಯಾವಾಗ ಹಿಂಪಡೆಯುತ್ತೀರಿ ಎಂದು ಕುಟುಕಿದರು.
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲೆ ಸಾಕಷ್ಟು ಅಬಕಾರಿ ಸುಂಕ ವಿಧಿಸಿದ್ದು, ಕಳೆದ 8 ವರ್ಷಗಳಲ್ಲಿ 27 ಲಕ್ಷ ಕೋಟಿ ಹಣ ಸಂಪಾದಿಸಿದ್ದಾರೆ. ಆ ಹಣದಲ್ಲಿ ಅರ್ಧದಷ್ಟು ಹಣವನ್ನು ಜನರಿಗೆ ಸಬ್ಸಿಡಿ ರೂಪದಲ್ಲಿ ನೀಡಿದರೆ ಜನರಿಗೆ ಹೊರೆ ಇಳಿಯಲಿದೆ ಎಂದರು.
ಮೋದಿಯವರು ನಮಗೆ ಸಲಹೆ ನೀಡುವ ಬದಲು, ಕರ್ನಾಟಕ, ಯುಪಿ, ಬಿಹಾರ ಸೇರಿದಂತೆ ಎಲ್ಲೆಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೋ ಆ ರಾಜ್ಯಗಳಲ್ಲಿ ಅವರು ಇಂಧನ ತೈಲದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿ ತೋರಿಸಲಿ. ನಂತರ ಬೇರೆ ರಾಜ್ಯಗಳಿಗೆ ಹೇಳಲಿ. ಅವರಿಗೆ ಈ ಬುದ್ಧಿ ಏಕೆ ಬರುತ್ತಿಲ್ಲ.
|ಮಲ್ಲಿಕಾರ್ಜುನ ಖರ್ಗೆರಾಜ್ಯಸಭೆ ವಿರೋಧ ಪಕ್ಷದ ನಾಯಕ
ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಬಡವರು, ರೈತರಿಂದ ಯದ್ವಾತದ್ವ ತೆರಿಗೆ ವಸೂಲಿ ಮಾಡುತಿದೆ. ನಮ್ಮ ಸರ್ಕಾರ ಇದ್ದಾಗ ಭಾಗ್ಯಗಳ ಸರ್ಕಾರ ಇತ್ತು, ಇಂದು ದೌರ್ಭಾಗ್ಯಗಳ ಸರ್ಕಾರ ಅಧಿಕಾರದಲ್ಲಿದೆ.
|ಸಿದ್ದರಾಮಯ್ಯಕಾಂಗ್ರೆಸ್ ನಾಯಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 8 =
Remember me
