ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಕಾಲಕಾಲಕ್ಕೆ ಹೊರಡಿಸಲಾದ ರಾಷ್ಟ್ರಪತಿ ಆದೇಶಗಳಲ್ಲಿ ಉಲ್ಲೇಖಿಸಲಾದ ಧರ್ಮಗಳನ್ನು ಹೊರತುಪಡಿಸಿ ಇತರೆ ಧರ್ಮಗಳಿಗೆ ಮತಾಂತರಗೊಂಡಿರುವುದಾಗಿ ಹಾಗೂ ಐತಿಹಾಸಿಕವಾಗಿ ಪರಿಶಿಷ್ಟ ಜಾತಿಗೆ ಸೇರಿರುವುದಾಗಿ ಪ್ರತಿಪಾದಿಸುವ ವ್ಯಕ್ತಿಗಳಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡುವ ಕುರಿತಂತೆ ಪರಿಶೀಲನೆ ಕೈಗೊಳ್ಳಲು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಆಯೋಗಕ್ಕೆ ಕೇಂದ್ರ ಸರ್ಕಾರವು ಸೂಚಿಸಿದೆ.ಈ ಆಯೋಗವು ನಿವೃತ್ತ ಐಎಎಸ್ ಅಧಿಕಾರಿ ಡಾ.ರವೀಂದ್ರ ಕುಮಾರ್ ಜೈನ್ ಮತ್ತು ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಸದಸ್ಯೆ ಪೊ›. ಸುಷ್ಮಾ ಯಾದವ್ ಅವರನ್ನೊಳಗೊಂಡಿದೆ. ಇಂತಹ ಹೊಸ ವ್ಯಕ್ತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸುವುದರಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಪರಿಶಿಷ್ಟ ಜಾತಿಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ಸಮಿತಿ ಪರಿಶೀಲಿಸಲಿದ್ದು, ಎರಡು ವರ್ಷಗಳೊಳಗೆ ವರದಿ ಸಲ್ಲಿಸಲಿದೆ. ಪ್ರಸ್ತುತ ಕಾನೂನುಗಳ ಪ್ರಕಾರ, ಮೀಸಲಾತಿಯ ಪ್ರಯೋಜನಗಳು ದಲಿತ ಹಿಂದೂಗಳು, ಬೌದ್ಧರು ಮತ್ತು ಸಿಖ್ಖರಿಗೆ ಮಾತ್ರ ಲಭ್ಯವಿದೆ. ಕ್ರಿಶ್ಚಿಯನ್ ಅಥವಾ ಇಸ್ಲಾಂಗೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ಸೌಲಭ್ಯಗಳನ್ನು ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಿರುವ ಹಲವಾರು ಅರ್ಜಿಗಳು ವಿಚಾರಣೆಗೆ ಬಾಕಿ ಉಳಿದಿವೆ.
ಮೀಸಲಾತಿಗೆ ಕಾರಣ: ಪರಿಶಿಷ್ಟ ಜಾತಿಗಳ ಜನರು ಹಿಂದೂಗಳಲ್ಲಿ ಆಚರಣೆಯಲ್ಲಿದ್ದ ಅಸ್ಪೃ್ಯತೆಯ ಸಾಮಾಜಿಕ ಅನಿಷ್ಟದಿಂದ ಬಳಲಿದ್ದಾರೆ ಎಂಬ ರ್ತಾಕ ಕಾರಣಕ್ಕಾಗಿ ಈ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಭಾರತದ ರಾಷ್ಟ್ರಪತಿಗಳು ಸೂಚಿಸುವ ಜಾತಿಗಳು, ಜನಾಂಗಗಳು ಅಥವಾ ಬುಡಕಟ್ಟುಗಳನ್ನು ಪೂರ್ತಿಯಾಗಿ ಇಲ್ಲವೇ ಭಾಗಶಃವಾಗಿ ಪರಿಶಿಷ್ಟ ಜಾತಿಗಳು ಎಂದು ಪರಿಗಣಿಸಲಾಗುತ್ತದೆ. ಇದರನುಸಾರವಾಗಿ, ಮೊದಲ ಆದೇಶವನ್ನು 1950ರಲ್ಲಿ ಹೊರಡಿಸಲಾಯಿತು. ಈ ಆದೇಶವು ಹಿಂದೂಗಳನ್ನು ಮಾತ್ರ ಒಳಗೊಂಡಿತ್ತು. ತದನಂತರ ಸಿಖ್ ಸಮುದಾಯದ ಒತ್ತಾಯದ ಹಿನ್ನೆಲೆಯಲ್ಲಿ, 1956ರಲ್ಲಿ ಮತ್ತೊಂದು ಆದೇಶ ಹೊರಡಿಸಿ, ಎಸ್​ಸಿ ಕೋಟಾದ ಫಲಾನುಭವಿಗಳಲ್ಲಿ ದಲಿತ ಮೂಲದ ಸಿಖ್ಖರನ್ನು ಕೂಡ ಸೇರಿಸಲಾಯಿತು. 1990ರಲ್ಲಿ, ದಲಿತ ಮೂಲದ ಬೌದ್ಧರಿಂದ ಇದೇ ರೀತಿಯ ಬೇಡಿಕೆಯನ್ನು ಸರ್ಕಾರವು ಒಪ್ಪಿಕೊಂಡಿತು. ‘ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಕ್ಕಿಂತ ಭಿನ್ನವಾದ ಧರ್ಮವನ್ನು ಪ್ರತಿಪಾದಿಸುವ ಯಾವುದೇ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ’ ಎಂಬ ಪರಿಷ್ಕೃತ ಆದೇಶವನ್ನು ಸರ್ಕಾರ ಹೊರಡಿಸಿತು. ದಲಿತ ಮೂಲದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಎಸ್​ಸಿ ಮೀಸಲಾತಿಗೆ ಸೇರಿಸಲು ಅನೇಕ ಪ್ರಯತ್ನಗಳನ್ನು ಮಾಡಲಾಗಿದೆ. 1990ರ ನಂತರ, ಈ ಉದ್ದೇಶಕ್ಕಾಗಿ ಹಲವಾರು ಖಾಸಗಿ ಮಸೂದೆಗಳನ್ನು ಸಂಸತ್ತಿನಲ್ಲಿ ತರಲಾಯಿತು. 1996ರಲ್ಲಿ, ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶಗಳ (ತಿದ್ದುಪಡಿ) ಮಸೂದೆಯ ಕರಡನ್ನು ರೂಪಿಸಲಾಯಿತು. ಆದರೆ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಲಿಲ್ಲ.
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಎರಡು ಪ್ರಮುಖ ಸಮಿತಿಗಳನ್ನು ರಚಿಸಿತು. 2004ರ ಅಕ್ಟೋಬರ್​ನಲ್ಲಿ ರಂಗನಾಥ್ ಮಿಶ್ರಾ ಆಯೋಗ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಧಾರ್ವಿುಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಮತ್ತು 2005ರ ಮಾರ್ಚ್​ನಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಲು ದೆಹಲಿಯ ಹೈಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ನೇತೃತ್ವದ ಏಳು ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿತು. ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯು ಮತಾಂತರದ ನಂತರ ಸುಧಾರಿಸಲಿಲ್ಲ ಎಂದು ಸಾಚಾರ್ ಆಯೋಗದ ವರದಿ ಅಭಿಪ್ರಾಯಪಟ್ಟಿದೆ. 2007ರ ಮೇ ತಿಂಗಳಲ್ಲಿ ವರದಿ ಸಲ್ಲಿಸಿದ ರಂಗನಾಥ್ ಮಿಶ್ರಾ ಆಯೋಗವು, ಪರಿಶಿಷ್ಟ ಜಾತಿಯ ಸ್ಥಾನಮಾನವನ್ನು ಧರ್ಮಕ್ಕೆ ಜೋಡಿಸುವುದನ್ನು ನಿಲ್ಲಿಸಲು ಹಾಗೂ ಪರಿಶಿಷ್ಟ ಪಂಗಡಗಳ ರೀತಿಯಲ್ಲಿಯೇ ಪರಿಶಿಷ್ಟ ಜಾತಿಗಳನ್ನು ಸಂಪೂರ್ಣವಾಗಿ ಧರ್ಮ-ತಟಸ್ಥವಾಗಿ ಮಾಡಬೇಕೆಂದು ಶಿಫಾರಸು ಮಾಡಿದೆ. 2009ರ ಡಿಸೆಂಬರ್ 18ರಂದು ಸಂಸತ್ತಿನ ಉಭಯ ಸದನಗಳಲ್ಲಿ ಈ ವರದಿ ಮಂಡಿಸಲಾಯಿತು. ಆದರೆ, ಅಸಮರ್ಪಕ ಕ್ಷೇತ್ರ ದತ್ತಾಂಶ ಮತ್ತು ನೈಜ ಪರಿಸ್ಥಿತಿಯೊಂದಿಗೆ ದೃಢೀಕರಣದ ಕೊರತೆಯ ದೃಷ್ಟಿಯಿಂದ ಅದರ ಶಿಫಾರಸನ್ನು ಅಂಗೀಕರಿಸಲಿಲ್ಲ. ಸತೀಶ್ ದೇಶಪಾಂಡೆ ನೇತೃತ್ವದ ಸಮಾಜಶಾಸ್ತ್ರಜ್ಞರ ತಂಡವು ‘ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳಲ್ಲಿ ದಲಿತರು – ಪ್ರಸ್ತುತ ಸಾಮಾಜಿಕ ವೈಜ್ಞಾನಿಕ ಜ್ಞಾನದ ಸ್ಥಿತಿಗತಿ’ ಎಂಬ ವರದಿಯನ್ನು 2008ರ ಜನವರಿಯಲ್ಲಿ ನೀಡಿದ್ದು, ದಲಿತ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಗೆ ಎಸ್​ಸಿ ಸ್ಥಾನಮಾನ ವಿಸ್ತರಿಸುವುದನ್ನು ಬಲವಾಗಿ ಪ್ರತಿಪಾದಿಸಿತು. ಆದರೂ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ನಿಯೋಜಿಸಿದ ಈ ಅಧ್ಯಯನವು ಮಾಹಿತಿ ಕೊರತೆಯ ಕಾರಣದಿಂದಾಗಿ ವಿಶ್ವಾಸಾರ್ಹವೆಂದು ಪರಿಗಣಿತವಾಗಲಿಲ್ಲ.
ರಂಗನಾಥ್ ಮಿಶ್ರಾ ಆಯೋಗದ ಶಿಫಾರಸುಗಳ ಆಧಾರದ ಮೇಲೆ, ದಲಿತ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಗೆ ಮೀಸಲಾತಿ ಪ್ರಯೋಜನಗಳನ್ನು ಕೋರಿ ಸಲ್ಲಿಸಲಾದ ಕೆಲ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್​ನಲ್ಲಿ ಬಾಕಿ ಉಳಿದಿವೆ. ಆಗಸ್ಟ್ 30ರಂದು ನಡೆದ ಕೊನೆಯ ವಿಚಾರಣೆಯಲ್ಲಿ, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ತ್ರಿಸದಸ್ಯ ಪೀಠವು ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ಮಂಡಿಸಲು ಮೂರು ವಾರಗಳ ಕಾಲಾವಕಾಶ ನೀಡಿತ್ತು. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 11 ರಂದು ನಿಗದಿಪಡಿಸಲಾಗಿದ್ದು, ನ್ಯಾಯಮೂರ್ತಿ ಬಾಲಕೃಷ್ಣನ್ ಸಮಿತಿಯ ಅಧಿಸೂಚನೆಯನ್ನು ಸರ್ಕಾರವು ಔಪಚಾರಿಕವಾಗಿ ನ್ಯಾಯಾಲಯಕ್ಕೆ ತಿಳಿಸುವ ಸಾಧ್ಯತೆಯಿದೆ.
1961ರಲ್ಲಿ, ಆರ್​ಎಸ್​ಎಸ್​ನ ಉನ್ನತ ನಿರ್ಣಯ ಕೈಗೊಳ್ಳುವ ಅಖಿಲ ಭಾರತ ಪ್ರತಿನಿಧಿ ಸಭೆ (ಎಬಿಪಿಎಸ್) ಕೂಡ ಈ ವಿಷಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿತ್ತು. ವಿವಿಧ ಪಂಗಡಗಳ ಪ್ರತ್ಯೇಕ ಮೀಸಲಾತಿಯ ಯಾವುದೇ ಯೋಜನೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಕಲ್ಪಿಸಲು ಯತ್ನಿಸಿದರೆ, ಅದು ರಾಷ್ಟ್ರೀಯ ಏಕತೆಗೆ ಹೆಚ್ಚು ಹಾನಿಕಾರಕವೆಂದು ಸಾಬೀತಾಗುತ್ತದೆ. ಹಿಂದೂ ಸಮಾಜದಲ್ಲಿ ಪ್ರಚಲಿತದಲ್ಲಿರುವ ಜಾತಿ ಆಧಾರಿತ ತಾರತಮ್ಯ ಮತ್ತು ಅಸಮಾನತೆ ಹೋಗಳಾಡಿಸಲು ಮಾತ್ರ ಈ ರಿಯಾಯಿತಿ ಕಲ್ಪಿಸಲಾಗಿದೆ ಎಂದು ಹೇಳಿದೆ.
ಮೀಸಲಾತಿ ನೀಡುವಲ್ಲಿ ಈ ಧರ್ಮ ಆಧಾರಿತ ನಿರ್ಬಂಧವು ಮತಾಂತರಗೊಂಡ ಒಬಿಸಿ ಮತ್ತು ಎಸ್​ಟಿಗಳಿಗೂ ಅನ್ವಯಿಸುತ್ತದೆಯೇ ಎಂಬ ಪ್ರಶ್ನೆಗೆ, ಇಲ್ಲ ಎಂದೇ ಹೇಳಬೇಕಾಗುತ್ತದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ವೆಬ್​ಸೈಟ್ ಹೀಗೆ ಹೇಳುತ್ತದೆ. ‘ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯ ಹಕ್ಕುಗಳು ಅವನ/ಅವಳ ಧಾರ್ವಿುಕ ನಂಬಿಕೆಯಿಂದ ಸ್ವತಂತ್ರವಾಗಿರುತ್ತವೆ’. ಹೀಗಾಗಿಯೇ ಮಂಡಲ್ ಆಯೋಗದ ವರದಿಯ ಅನುಷ್ಠಾನದ ನಂತರ, ಹಲವಾರು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಕೇಂದ್ರ ಮತ್ತು ರಾಜ್ಯ ಪಟ್ಟಿಗಳಲ್ಲಿ ಸ್ಥಾನ ಪಡೆದಿವೆ.
ಫೆಬ್ರವರಿಯ 2010ರಲ್ಲಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯು ಮಿಶ್ರಾ ಆಯೋಗವನ್ನು ಟೀಕಿಸುವ ನಿರ್ಣಯವನ್ನು ಅಂಗೀಕರಿಸಿ, ಮೀಸಲಾತಿಯು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿ ವ್ಯವಸ್ಥೆಯನ್ನು ಔಪಚಾರಿಕವಾಗಿ ಪರಿಚಯಿಸುತ್ತದೆ. ಕುರಾನ್ ಮತ್ತು ಬೈಬಲ್​ನ ನಿಬಂಧನೆಗಳಿಗೆ ಇದು ವಿರುದ್ಧವಾಗಿದೆ ಎಂದು ಹೇಳಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − twelve =
Remember me
