1980ರ ಸಂದರ್ಭದಲ್ಲಿ ಉತ್ತುಂಗದಲ್ಲಿದ್ದ ಖಲಿಸ್ತಾನ್ ಚಳವಳಿ ಮತ್ತು ಪ್ರತ್ಯೇಕ ಸಿಖ್ ರಾಜ್ಯದ ಬೇಡಿಕೆಯು ಪಂಜಾಬ್ ಮತ್ತು ವಿದೇಶದಲ್ಲಿರುವ ಸಿಖ್ಖರ ಕೆಲ ಗುಂಪುಗಳ ಮೂಲಕ ಕಳೆದ ಐವತ್ತು ವರ್ಷಗಳಿಂದ ವಿವಿಧ ರೂಪಗಳಲ್ಲಿ ಮುಂದುವರಿದೇ ಇದೆ. ಖಲಿಸ್ತಾನಪರ ಕೂಗು ಈಗ ಮತ್ತೆ ಪಂಜಾಬ್ ರಾಜ್ಯದಲ್ಲಿ ಕೇಳಿಬಂದಿರುವುದು ಭಯೋತ್ಪಾದನೆ ಮರುಕಳಿಸುವ ಭೀತಿಗೂ ಕಾರಣವಾಗಿದೆ.
ಕಳೆದ ಗುರುವಾರ (ಫೆಬ್ರವರಿ 23) ತೀವ್ರಗಾಮಿ ಬೋಧಕ ಮತ್ತು ಖಲಿಸ್ತಾನ್​ಪರ ನಾಯಕ ಅಮೃತಪಾಲ್ ಸಿಂಗ್​ನ ನೂರಾರು ಅನುಯಾಯಿಗಳು ಅಮೃತಸರ ಬಳಿಯ ಅಜ್ನಾಲಾ ಪೊಲೀಸ್ ಠಾಣೆಯ ಹೊರಗೆ ಪೊಲೀಸರೊಂದಿಗೆ ಹಿಂಸಾತ್ಮಕ ಘರ್ಷಣೆ ನಡೆಸಿದರು. ಕತ್ತಿಗಳು ಮತ್ತು ಬಂದೂಕುಗಳನ್ನು ಪ್ರದರ್ಶಿಸಿದರು. ಅಪಹರಣ ಪ್ರಕರಣವೊಂದರಲ್ಲಿ ಭಾಗಿಯಾದ ಆರೋಪದ ಮೇರೆಗೆ ಪೊಲೀಸರು ಬಂಧಿಸಿದ್ದ ಅಮೃತಪಾಲ್ ಸಿಂಗ್ ಸಹಾಯಕ ಲವ್​ಪ್ರೀತ್ ಸಿಂಗ್ ‘ತೂಫಾನ್’ ಎಂಬುವನನ್ನು ಬಿಡುಗಡೆ ಮಾಡಬೇಕೆಂಬ ಆಗ್ರಹ ಅವರದ್ದಾಗಿತ್ತು. ಅಜ್ನಾಲಾ ನ್ಯಾಯಾಲಯವು ಪೊಲೀಸರ ಅರ್ಜಿಯ ಆಧಾರದ ಮೇಲೆ ಅಮೃತಸರ ಸೆಂಟ್ರಲ್ ಜೈಲಿನಿಂದ ಆತನನ್ನು ಬಿಡುಗಡೆ ಮಾಡಲು ಶುಕ್ರವಾರ ಆದೇಶ ಹೊರಡಿಸಿತು.
29 ವರ್ಷದ ಅಮೃತಪಾಲ್ ಸಿಂಗ್ ಸಿಖ್ ಉಗ್ರಗಾಮಿ ಜರ್ನೆಲ್ ಸಿಂಗ್ ಭಿಂದ್ರನ್​ವಾಲೆಯ ಅನುಯಾಯಿ. ಪಂಜಾಬ್​ನಲ್ಲಿ ಅವನನ್ನು ‘ಭಿಂದ್ರನ್​ವಾಲೆ 2.0’ ಎಂದೂ ಕರೆಯಲಾಗುತ್ತದೆ. ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಸ್ಥಾಪಕ ದೀಪ್ ಸಿಧು ನಿಧನದ ನಂತರ ಆ ಸಂಘಟನೆಯ ನೇತೃತ್ವ ವಹಿಸಿಕೊಳ್ಳಲು ಸಿಂಗ್ ಕಳೆದ ವರ್ಷ ದುಬೈನಿಂದ ಹಿಂದಿರುಗಿದ ಎನ್ನಲಾಗಿದೆ. ‘ಖಲಿಸ್ತಾನದ ನಮ್ಮ ಗುರಿ ಒಂದು ಸಿದ್ಧಾಂತ ಮತ್ತು ಸಿದ್ಧಾಂತವು ಎಂದಿಗೂ ಸಾಯುವುದಿಲ್ಲ್ಲ ಎಂದು ಅಮೃತಪಾಲ್ ಸಿಂಗ್ ಪ್ರತಿಪಾದಿಸುತ್ತಿದ್ದಾನೆ. ಗುರುವಾರ ಸಿಂಗ್ ಬೆಂಬಲಿಗರು ನಡೆಸಿದ ಹಿಂಸಾಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು, ಪ್ರತಿಯೊಬ್ಬ ಪಂಜಾಬಿಗ ಭಯಪಡುವಂತಹ ಹಿಂಸಾಚಾರದ ಕರಾಳ ದಿನಗಳು ಮರಳಬಹುದಾದ ಸಾಧ್ಯತೆ ಬಗೆಗೆ ಎಚ್ಚರಿಕೆ ನೀಡಿದೆ.
ಖಲಿಸ್ತಾನ್ ಚಳವಳಿ ಇಂದಿನ ಪಂಜಾಬ್​ನಲ್ಲಿ (ಭಾರತ ಮತ್ತು ಪಾಕಿಸ್ತಾನ ಎರಡೂ) ಪ್ರತ್ಯೇಕ, ಸಾರ್ವಭೌಮ ಸಿಖ್ ರಾಷ್ಟ್ರಕ್ಕಾಗಿ ನಡೆದ ಹೋರಾಟವಾಗಿದೆ. ಇಂದಿಗೂ ಇದು ವಿವಿಧ ರೂಪಗಳಲ್ಲಿ, ವಿವಿಧ ಸ್ಥಳಗಳಲ್ಲಿ ಮತ್ತು ವಿವಿಧ ಜನರ ನಡುವೆ ಉಳಿದುಕೊಂಡುಬಂದಿದೆ. ಆಪರೇಷನ್ ಬ್ಲೂ ಸ್ಟಾರ್ (1984) ಮತ್ತು ಆಪರೇಷನ್ ಬ್ಲಾ್ಯಕ್ ಥಂಡರ್ (1986 ಮತ್ತು 1988) ನಂತರ ಭಾರತದಲ್ಲಿ ಈ ಚಳವಳಿಯನ್ನು ಹತ್ತಿಕ್ಕಲಾಯಿತು. ಆದರೂ ಸಿಖ್ಖರ ಕೆಲ ವರ್ಗಗಳಲ್ಲಿ, ವಿಶೇಷವಾಗಿ ಕೆನಡಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿನ ಸಿಖ್ ವಲಸೆಗಾರರಲ್ಲಿ ಸಹಾನುಭೂತಿ ಮತ್ತು ಬೆಂಬಲ ಪಡೆದುಕೊಂಡಿದೆ.
ಪಂಜಾಬ್​ನಲ್ಲಿ ಅನೇಕರು ಹೆಚ್ಚಿನ ಸ್ವಾಯತ್ತತೆಯ ರಾಜ್ಯದ ಬೇಡಿಕೆಯನ್ನು ಮೀರಿ ಹೋಗಲು ಪ್ರಯತ್ನಿಸಿದರು. ಅಂತಹವರಲ್ಲಿ ಒಬ್ಬ ಜರ್ನೆಲ್ ಸಿಂಗ್ ಭಿಂದ್ರನ್​ವಾಲೆ. ಪಂಜಾಬ್ ಸ್ವಾಯತ್ತತೆ ಬೇಡಿಕೆಯೊಂದಿಗೆ ಹೋರಾಟಕ್ಕಿಳಿದ ಆತ ಪ್ರತ್ಯೇಕ ರಾಷ್ಟ್ರ ಬೇಡಿಕೆಯೊಂದಿಗೆ ಸಿಖ್ ಉಗ್ರರ ಗುಂಪಿನ ನಾಯಕನಾದ. 1982ರಲ್ಲಿ ಭಿಂದ್ರನ್​ವಾಲೆ ಹಾಗೂ ಸಹಚರರು ಅಮೃತಸರದ ಸ್ವರ್ಣ ಮಂದಿರವನ್ನು ತಮ್ಮ ಪ್ರಧಾನ ಕಚೇರಿ ಎಂಬಂತೆ ಬಳಸತೊಡಗಿದರು. 1984ರ ಜೂನ್​ನಲ್ಲಿ ಭಾರತೀಯ ಸೇನೆಯು ಆಪರೇಷನ್ ಬ್ಲೂಸ್ಟಾರ್ ಮೂಲಕ ಸ್ವರ್ಣ ಮಂದಿರದಲ್ಲಿದ್ದ ಭಿಂದ್ರನ್​ವಾಲೆ ಹಾಗೂ ಆತನ ಸಹಚರರನ್ನು ಹತ್ಯೆಗೈಯಿತು.ಇದಕ್ಕೆ ಪ್ರತೀಕಾರ ಎನ್ನುವಂತೆ 1984ರ ಅಕ್ಟೋಬರ್ 31ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸಿಖ್ ಸಮುದಾಯದ ಇಬ್ಬರು ಅಂಗರಕ್ಷಕರ ಗುಂಡಿನಿಂದ ಹತ್ಯೆಗೀಡಾದರು.
ದುಬೈನಿಂದ ಹಿಂದಿರುಗಿದ ಅಮೃತಪಾಲ್, ಭಿಂದ್ರನ್​ವಾಲೆಯಂತೆ ವೇಷ ಧರಿಸಿ ವಾರಿಸ್ ಪಂಜಾಬ್ ದೇ ಮುಖ್ಯಸ್ಥನಾಗಿ 2022ರ ಸೆಪ್ಟೆಂಬರ್​ನಲ್ಲಿ ಅಧಿಕಾರ ವಹಿಸಿಕೊಂಡಿದ್ದಾನೆ. ಭಿಂದ್ರನ್​ವಾಲೆ ಪೂರ್ವಜರ ಸ್ಥಳವಾದ ಮೊಗಾ ಜಿಲ್ಲೆಯ ರೋಡ್​ನಲ್ಲಿ ಆಯೋಜಿಸಲಾದ ‘ದಸ್ತಾರ್ ಬಂದಿ’ ಸಮಾರಂಭದಲ್ಲಿ ಸಾವಿರಾರು ಮಂದಿ ಖಲಿಸ್ತಾನ್​ಪರ ಘೊಷಣೆಗಳನ್ನು ಕೂಗಿದರು. ಆದರೆ, ದೀಪ್ ಸಿಧು ಕುಟುಂಬವು ಅಮೃತಪಾಲ್​ನಿಂದ ಅಂತರ ಕಾಯ್ದುಕೊಂಡಿದ್ದು, ಸಿಧು ಹುಟ್ಟುಹಾಕಿದ ಸಂಸ್ಥೆಯ ಮುಖ್ಯಸ್ಥನನ್ನಾಗಿ ಅವನನ್ನು ನೇಮಿಸಿಲ್ಲ ಎಂದು ಹೇಳಿದೆ.
ಆಂದೋಲನದ ಮೂಲವನ್ನು ಭಾರತದ ಸ್ವಾತಂತ್ರ್ಯ ಮತ್ತು ನಂತರದ ಧರ್ವಧಾರಿತ ದೇಶ ವಿಭಜನೆಯ ಸಂಗತಿಗಳಲ್ಲಿ ಗುರುತಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ವಿಭಜಿಸಲ್ಪಟ್ಟ ಪಂಜಾಬ್ ಪ್ರಾಂತ್ಯವು ಕೋಮು ಹಿಂಸಾಚಾರ ಕಂಡಿತಲ್ಲದೆ, ಲಕ್ಷಾಂತರ ಮಂದಿ ನಿರಾಶ್ರಿತರಾದರು. ಪಶ್ಚಿಮದಲ್ಲಿ (ಪಾಕಿಸ್ತಾನದಲ್ಲಿ) ಸಿಲುಕಿದ ಸಿಖ್ಖರು ಮತ್ತು ಹಿಂದೂಗಳು ಪೂರ್ವಕ್ಕೆ ಧಾವಿಸಿದರು; ಪೂರ್ವದಲ್ಲಿನ ಮುಸ್ಲಿಮರು ಪಶ್ಚಿಮಕ್ಕೆ ಓಡಿಹೋದರು. ಮಹಾರಾಜ ರಣಜಿತ್ ಸಿಂಗ್ ಅವರ ಮಹಾನ್ ಸಿಖ್ ಸಾಮ್ರಾಜ್ಯದ ರಾಜಧಾನಿ ಲಾಹೋರ್, ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ಅವರ ಜನ್ಮಸ್ಥಳವಾದ ನಂಕಾನಾ ಸಾಹಿಬ್ ಸೇರಿದಂತೆ ಅನೇಕ ಪವಿತ್ರ ಸಿಖ್ ಕ್ಷೇತ್ರಗಳು ಪಾಕಿಸ್ತಾನಕ್ಕೆ ಸೇರಿದವು.
ಸ್ವಾತಂತ್ರ್ಯ ದೊರೆತ ಸಂದರ್ಭದಚಲ್ಲಿ ಹೆಚ್ಚಿನ ಸ್ವಾಯತ್ತತೆಗಾಗಿ ರಾಜಕೀಯ ಹೋರಾಟ ಪ್ರಾರಂಭವಾಯಿತು. ಪಂಜಾಬಿ ಮಾತನಾಡುವ ರಾಜ್ಯದ ರಚನೆಗಾಗಿ ಪಂಜಾಬಿ ಸುಬಾ ಚಳವಳಿಯೊಂದಿಗೆ ಇದು ಶುರುವಾಯಿತು. ರಾಜ್ಯಗಳ ಪುನರ್​ವಿಂಗಡಣೆ ಆಯೋಗವು 1955ರ ವರದಿಯಲ್ಲಿ ಈ ಬೇಡಿಕೆಯನ್ನು ತಿರಸ್ಕರಿಸಿತು. ಅನೇಕ ವರ್ಷಗಳ ಪ್ರತಿಭಟನೆಯ ನಂತರ, 1966ರಲ್ಲಿ ಹಳೆಯ ಪಂಜಾಬ್ ರಾಜ್ಯವನ್ನು ಮೂರು ರಾಜ್ಯಗಳಾಗಿ ವಿಭಜಿಸಲಾಯಿತು. ಪಂಜಾಬಿ ಮಾತನಾಡುವ ಬಹುಸಂಖ್ಯೆಯ ಜನರಿರುವ ಪ್ರದೇಶವನ್ನು ಮರುಸಂಘಟಿಸಿ ಪಂಜಾಬ್ ರಾಜ್ಯವನ್ನು ಪುನರ್​ರಚನೆ ಮಾಡಲಾಯಿತು. ಹಿಂದಿನ ಪಂಜಾಬ್ ರಾಜ್ಯದಲ್ಲಿದ್ದ ಹಿಂದಿ ಮಾತನಾಡುವ ಜನರಿರುವ ಪ್ರದೇಶಗಳನ್ನು ಹಿಮಾಚಲ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳಾಗಿ ರೂಪಿಸಲಾಯಿತು.
ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ 2021ರ ಸೆಪ್ಟೆಂಬರ್ 30ರಂದು ವಕೀಲ-ನಟ-ಸಾಮಾಜಿಕ ಕಾರ್ಯಕರ್ತ ಸಂದೀಪ್ ಸಿಂಗ್ ಅಲಿಯಾಸ್ ದೀಪ್ ಸಿಧು ‘ವಾರಿಸ್ ಪಂಜಾಬ್ ದೇ’ ಸಂಘಟನೆ ಆರಂಭಿಸಿದರು. 2020ರಲ್ಲಿ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಸಿಧು ಮೊದಲ ಬಾರಿಗೆ ಸುದ್ದಿಯಾದರು. 2021ರ ಜನವರಿ 26ರಂದು ರೈತರ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ ಆರೋಪ ಸಿಧು ಮೇಲಿತ್ತು. ಚಂಡೀಗಢದಲ್ಲಿ ನಡೆದ ‘ವಾರಿಸ್ ಪಂಜಾಬ್ ದೇ’ ಉದ್ಘಾಟನಾ ಸಮಾರಂಭದಲ್ಲಿ, ಪಂಜಾಬ್​ನ ಹಕ್ಕುಗಳಿಗಾಗಿ ಹೋರಾಡುವ, ಪಂಜಾಬ್​ನ ಸಂಸ್ಕೃತಿ, ಭಾಷೆ, ಮತ್ತು ಹಕ್ಕುಗಳ ಮೇಲೆ ದಾಳಿ ನಡೆದಾಗ ಧ್ವನಿ ಎತ್ತುವ ಸಂಘಟನೆ ಎಂದು ಬಣ್ಣಿಸಿದರು. ಸಿಧು ಅಂತಿಮವಾಗಿ ಖಲಿಸ್ತಾನ್ ಪರವಾದ ತೀವ್ರಗಾಮಿ ಪಕ್ಷವಾದ ಸಿಮ್ರನ್​ಜಿತ್ ಸಿಂಗ್ ಮಾನ್ ಅವರ ಶಿರೋಮಣಿ ಅಕಾಲಿದಳ (ಅಮೃತಸರ)ಕ್ಕೆ ಬೆಂಬಲ ನೀಡಿದರು. ರಾಜ್ಯ ವಿಧಾನಸಭೆ ಚುನಾವಣೆಗೆ ಐದು ದಿನಗಳ ಮೊದಲು 2022ರ ಫೆಬ್ರವರಿ 15 ರಂದು ಸಿಧು ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಸಿಮ್ರನ್​ಜಿತ್ ಸಿಂಗ್ ಮಾನ್ ಅಮರ್​ಗಢ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನಪ್ಪಿದರೂ ಸಂಗ್ರೂರ್ ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದರು.
ಪಂಜಾಬಿ ಸುಬಾ ಆಂದೋಲನವು ಅಕಾಲಿದಳ ಪಕ್ಷವನ್ನು ಬಲಪಡಿಸಿತು. 1967 ಮತ್ತು 1969ರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್​ಗೆ ಕಠಿಣ ಸ್ಪರ್ಧೆ ಒಡ್ಡಿತು. ಆದರೆ, 1971ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ಅದ್ಭುತ ವಿಜಯದ ನಂತರ 1972ರಲ್ಲಿ ಜರುಗಿದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಕಾಲಿದಳದ ಸಾಧನೆಯು ಕುಸಿಯಿತು. ಅಕಾಲಿದಳ ಪಕ್ಷವು 1973ರಲ್ಲಿ ಖಾಲ್ಸಾ ಹೋರಾಟದ ಜನ್ಮಸ್ಥಳವಾದ ಆನಂದಪುರ್ ಸಾಹಿಬ್​ನ ಪವಿತ್ರ ಪಟ್ಟಣದಲ್ಲಿ ಸಭೆ ಸೇರಿತು. ಪಂಜಾಬ್ ರಾಜ್ಯಕ್ಕೆ ಸ್ವಾಯತ್ತತೆ ಕೋರುವ ಬೇಡಿಕೆ ಪ್ರಮುಖವಾಗಿತ್ತು. ಈ ಪ್ರತ್ಯೇಕ ರಾಜ್ಯದ ಭಾಗವಾಗಬಹುದಾದ ಪ್ರದೇಶಗಳನ್ನು ಗುರುತಿಸಿ, ತನ್ನದೇ ಆದ ಆಂತರಿಕ ಸಂವಿಧಾನವನ್ನು ರೂಪಿಸುವ ಹಕ್ಕನ್ನು ನೀಡಬೇಕೆಂಬ ಬೇಡಿಕೆ ಮುಂದಿಟ್ಟಿತು. 1971ರಲ್ಲಿ ದಿ ನ್ಯೂಯಾರ್ಕ್ ಟೈಮ್ಸ್​ನಲ್ಲಿ ಪ್ರತ್ಯೇಕ ಖಲಿಸ್ತಾನ ರಾಷ್ಟ್ರದ ಜನ್ಮವನ್ನು ಘೊಷಿಸುವ ಜಾಹೀರಾತು ಕಾಣಿಸಿಕೊಂಡಾಗ ಅದು ಜಾಗತಿಕವಾಗಿಯೂ ಬೆಳಕಿಗೆ ಬಂದಿತು. ಆದರೆ, ಅಕಾಲಿಗಳು ತಾವು ಭಾರತದಿಂದ ಪ್ರತ್ಯೇಕತೆ ಬಯಸುವುದಿಲ್ಲ ಎಂದು ಪದೇಪದೆ ಸ್ಪಷ್ಟಪಡಿಸಿದರೂ, ಸ್ವಾಯತ್ತ ರಾಜ್ಯದ ಬೇಡಿಕೆಯುಳ್ಳ ಆನಂದಪುರ ಸಾಹಿಬ್ ನಿರ್ಣಯವು ವಿವಾದದ ವಿಷಯವಾಗಿಯೇ ಉಳಿಯುವಂತಾಯಿತು.
ಖಲಿಸ್ತಾನ ಚಳವಳಿಯಲ್ಲದೆ, ಭಾರತದಲ್ಲಿ ಅನೇಕ ಕಡೆಗಳಲ್ಲಿ ಪ್ರತ್ಯೇಕತಾವಾದಿ ಚಳವಳಿಗಳು ನಡೆದಿವೆ. ಪ್ರತ್ಯೇಕ ದೇಶ ಬಯಸುವ ಈ ಚಳವಳಿಗಳ ಕೂಗು ಈಗ ಬಹುತೇಕವಾಗಿ ಸದ್ದಿಲ್ಲದಂತೆ ಅಡಗಿದೆ. ಹುರಿಯತ್ ಕಾನ್ಪರೆನ್ಸ್, ಜಮ್ಮು- ಕಾಶ್ಮೀರ ಲಿಬರೇಶನ್ ಫ್ರಂಟ್ ಮುತಾದ ಸಂಘಟನೆಗಳ ನೇತೃತ್ವದಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ದೀರ್ಘಕಾಲ ನಡೆದ ಈ ಚಳವಳಿ, ಹೋರಾಟಗಳು ಪಾಕಿಸ್ತಾನದ ಪರೋಕ್ಷ ಬೆಂಬಲದೊಂದಿಗೆ ಭಯೋತ್ಪಾದನೆ ರೂಪವನ್ನೂ ಪಡೆದುಕೊಂಡವು.
ಈಗ ಪ್ರತ್ಯೇಕತಾವಾದಿ ಸಂಘಟನೆಗಳ ಸದ್ದು ತಗ್ಗಿದೆ. ಅಸ್ಸಾಂ ಭಾಗದಲ್ಲಿ 1996ರಲ್ಲಿ ಅಸ್ತಿತ್ವಕ್ಕೆ ಬಂದ ಮುಸ್ಲಿಂ ಯುನೈಟೆಡ್ ಲಿಬರೇಶನ್ ಟೈಗರ್ಸ್ ಆಫ್ ಅಸ್ಸಾಂ (ಮುಲ್ತಾ) ಆ ಭಾಗದಲ್ಲಿ ಮುಸ್ಲಿಂ ಸಮುದಾಯದವರಿಗಾಗಿ ಪ್ರತ್ಯೇಕ ರಾಷ್ಟ್ರ ನಿರ್ವಣದ ಪ್ರತಿಪಾದನೆ ಮಾಡಿತ್ತು. ಕರ್ಬಿ ಸಮುದಾಯದಕ್ಕಾಗಿ ಪ್ರತ್ಯೇಕ ರಾಷ್ಟ್ರ ನಿರ್ಮಾಣ ಉದ್ದೇಶದೊಂದಿಗೆ 1999ರಲ್ಲಿ ಯುನೈಟೆಡ್ ಪೀಪಲ್ಸ್ ಡೆಮಾಕ್ರಾಟಿಕ್ ಸಾಲಿಡಾರಿಟಿ ಈ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ನ್ಯಾಷನಲ್ ಡೆಮಾಕ್ರಾಟಿಕ್ ಫ್ರಂಟ್ ಆಫ್ ಬೋಡೊಲ್ಯಾಂಡ್ ಎಂಬ ಸಂಘಟನೆಯು ಪ್ರತ್ಯೇಕ ಬೋಡೊಲ್ಯಾಂಡ್ ರಾಷ್ಟ್ರದ ಬೇಡಿಕೆಯೊಂದಿಗೆ 1986ರಲ್ಲಿ ಅಸ್ಸಾಂ ಪ್ರದೇಶದಲ್ಲಿ ತಲೆಎತ್ತಿತ್ತು. ನಾಗಾ ಲಿಮ್ ಎಂಬ ಪ್ರತ್ಯೇಕ ರಾಷ್ಟ್ರದ ಬೇಡಿಕೆಯೊಂದಿಗೆ 1950ರ ದಶಕದಲ್ಲಿ ನಾಗಾ ನ್ಯಾಷನಲ್ ಕೌನ್ಸಿಲ್ ಹೋರಾಟ ನಡೆಸಿತ್ತು. ನಾಗಾಲ್ಯಾಂಡ್ ರಾಜ್ಯ ನಿರ್ವಣದೊಂದಿಗೆ ಈ ಹೋರಾಟ ತಣ್ಣಗಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
