ಮೊಟ್ಟಮೊದಲ ಮಾನವಸಹಿತ ಬಾಹ್ಯಾಕಾಶಯಾನಕ್ಕೆ ಭಾರತ ಸಜ್ಜಾಗಿದ್ದು, ‘ಗಗನಯಾನ’ ಯೋಜನೆಯಲ್ಲಿ ನಭಕ್ಕೆ ಚಿಮ್ಮಲು ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಮಹತ್ವಾಕಾಂಕ್ಷೆಯ ನೌಕೆ 2022ಕ್ಕೆ ಉಡಾವಣೆಗೊಳ್ಳಲಿದ್ದು, ಯೋಜನೆಯ ವಿನ್ಯಾಸ ಪೂರ್ಣಗೊಂಡಿದೆ.
ವಾಯುಸೇನೆಯ 12 ಜನರನ್ನು ಆಯ್ಕೆ ಮಾಡಿ ಅವರಿಗೆ ಭಾರತದಲ್ಲಿ ಮೊದಲಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಗಿತ್ತು. ನಂತರ ರಷ್ಯಾದಲ್ಲಿ ತಪಾಸಣೆ ನಡೆಸಿ ನಾಲ್ವರನ್ನು ಅಂತಿಮಗೊಳಿಸಲಾಗಿದೆ. ಜನವರಿ ಅಂತ್ಯದಲ್ಲಿ ಇವರಿಗೆ ರಷ್ಯಾದಲ್ಲಿ ತರಬೇತಿ ಆರಂಭವಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ. ಶಿವನ್ ಯೋಜನೆ ಕುರಿತು ಮಾಹಿತಿ ನೀಡಿದರು.
ಇಸ್ರೋ ಮುಖ್ಯಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷ 25ಕ್ಕೂ ಹೆಚ್ಚು ಬಾಹ್ಯಾಕಾಶ ಯೋಜನೆ ಕೈಗೊಳ್ಳುವ ಮೂಲಕ ಅಂತರಿಕ್ಷ ಕ್ಷೇತ್ರದಲ್ಲಿ ಭಾರತ ಮಹತ್ವದ ಮೈಲುಗಲ್ಲು ಸಾಧಿಸಲಿದೆ ಎಂದರು.
ವರ್ಷಾಂತ್ಯಕ್ಕೆ ಮಾನವರಹಿತ ಯಾನ:ಬಾಹ್ಯಾಕಾಶಕ್ಕೆ ಇಸ್ರೋ ಮೊದಲಬಾರಿ ಮಾನವರನ್ನು ಕಳಿಸುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಾಯೋಗಿಕ ಯಾನ ನಡೆಸಲಾಗುತ್ತದೆ. 1957ರ ಸೋವಿಯತ್ ರಷ್ಯಾ ಉಡಾವಣೆ ಮಾಡಿದ ಸ್ಪುಟ್ನಿಕ್-2 ನೌಕೆಯಲ್ಲಿ ಲೈಕಾ ಎಂಬ ಹೆಸರಿನ ನಾಯಿಯನ್ನು ಕಳಿಸಲಾಗಿತ್ತು. ಆದರೆ, ಭಾರತ ಪ್ರಾಣಿಯನ್ನು ಕಳಿಸುವ ಬದಲಿಗೆ ಬಹುತೇಕ ಮಾನವರಂತೆಯೇ ಕಾರ್ಯನಿರ್ವಹಿಸುವ ಹ್ಯೂಮನಾಯ್್ಡ (ರೋಬಾಟ್) ಕಳಿಸಲು ತೀರ್ವನಿಸಿದೆ. 2020ರ ಅಂತ್ಯಕ್ಕೆ ಅಥವಾ 2021ರ ಆರಂಭದಲ್ಲಿ ಮಾನವರಹಿತ ಯಾನ
ನಡೆಸಲಾಗುತ್ತದೆ. ನೌಕೆಯಲ್ಲಿ ಮಾನವನ ಪ್ರತಿಕೃತಿ ಇರಿಸಿ ಬಾಹ್ಯಾಕಾಶಕ್ಕೆ ಕಳಿಸಲಾಗುತ್ತದೆ. ಅಲ್ಲಿನ ವಾತಾವರಣ ಬದಲಾವಣೆ, ಅದಕ್ಕೆ ಮಾನವ ಪ್ರತಿಕೃತಿಯ ಪ್ರತಿಕ್ರಿಯೆಗಳನ್ನು ಅವಲೋಕಿಸಿ ಅದಕ್ಕೆ ತಕ್ಕಂತೆ ಮುಖ್ಯಯಾನ ಸಿದ್ಧಪಡಿಸಲಾಗುತ್ತದೆ ಎಂದು ಹೇಳಿದರು.
ಕಳೆದ ವರ್ಷ ಉಡಾವಣೆಯಾಗಿದ್ದ ಚಂದ್ರಯಾನ-2 ಯೋಜನೆಯ ಅಂತಿಮ ಹಂತದ ವೈಫಲ್ಯವನ್ನು ತಜ್ಞರ ಸಮಿತಿ ಅವಲೋಕಿಸಿ ವರದಿ ನೀಡಿದೆ. ಆರ್ಬಿಟರ್​ನಿಂದ ಬೇರ್ಪಟ್ಟ ನಂತರ ಅತಿ ಹೆಚ್ಚಿನ ವೇಗದಲ್ಲಿದ್ದ ಲ್ಯಾಂಡರ್ 4 ಹಂತದಲ್ಲಿ ವೇಗ ತಗ್ಗಿಸಿಕೊಂಡು ಚಂದ್ರನ ಮೇಲೆ ಇಳಿಯಬೇಕಿತ್ತು. ಮೊದಲ ಹಂತ ಸಂಪೂರ್ಣ ಯಶಸ್ವಿಯಾಯಿತು. 2ನೇ ಹಂತದಲ್ಲಿ ನಿರೀಕ್ಷೆ ಮಾಡಿದಷ್ಟು ವೇಗ ಕಡಿಮೆ ಆಗಲಿಲ್ಲ. ಇದರಿಂದಾಗಿ 3ನೇ ಹಂತದಲ್ಲಿ ಉಪಕರಣಗಳನ್ನು ನಿಯಂತ್ರಣಕ್ಕೆ ಪಡೆಯಲಾಗದ ಪರಿಸ್ಥಿತಿ ಉದ್ಭವಿಸಿ ಸಂಪರ್ಕ ಕಡಿತಗೊಂಡಿತು. ನಿರ್ದಿಷ್ಟವಾಗಿ ಯಾವ ಉಪಕರಣ ವಿಫಲವಾಯಿತು ಎಂದು ಹೇಳಲಾಗದು. ಒಟ್ಟಾರೆಯಾಗಿ ಲ್ಯಾಂಡರ್ ಒಳಗಿನ ಉಪಕರಣಗಳ ಒಟ್ಟಾರೆ ಸಮನ್ವಯದಲ್ಲಿ ತೊಂದರೆ ಆಗಿದೆ ಎಂದು ತಿಳಿಸಿದರು. ನೌಕೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ ಎಂದು ಚೆನ್ನೈನ ಇಂಜಿನಿಯರ್ ಪತ್ತೆ ಹಚ್ಚಿದ್ದ ಕುರಿತು ಪ್ರತಿಕ್ರಿಯಿಸಿ, ಅವರಿಗೆ ಅಭಿನಂದನೆ ಹೇಳುತ್ತೇನೆ. ಆದರೆ, ವ್ಯೂಹಾತ್ಮಕ ದೃಷ್ಟಿಯಿಂದ ಹೆಚ್ಚಿನ ವಿವರ ಹಾಗೂ ಈ ಕುರಿತ ಭಾವಚಿತ್ರಗಳನ್ನು ಬಿಡುಗಡೆ ಮಾಡದಿರಲು ಇಸ್ರೋ ನಿರ್ಧರಿಸಿದೆ ಎಂದರು.
2020ರಲ್ಲಿ 25ಕ್ಕೂ ಹೆಚ್ಚು ಯೋಜನೆ ಗಳನ್ನು ಇಸ್ರೋ ಹಮ್ಮಿಕೊಂಡಿದೆ. ಕಳೆದ ವರ್ಷದ ಸಾಧನೆಗಳನ್ನು ಮುಂದುವರಿಸಿ ಮತ್ತಷ್ಟು ವ್ಯಾಪ್ತಿ ವಿಸ್ತರಿಸಿಕೊಳ್ಳುವ ಭರವಸೆಯಿದೆ.
| ಕೆ. ಶಿವನ್ ಇಸ್ರೋ ಅಧ್ಯಕ್ಷ
ರಷ್ಯಾ, ಚೀನಾ ಹಾಗೂ ಅಮೆರಿಕ ಮಾತ್ರ ಬಾಹ್ಯಾಕಾಶಕ್ಕೆ ಯಾತ್ರಿಗಳನ್ನು ಕಳಿಸಿಕೊಟ್ಟಿದ್ದು, ನಾಲ್ಕನೇ ದೇಶವಾಗುವ ಮಹತ್ವಾಕಾಂಕ್ಷಿ ಯೋಜನೆಯನ್ನು 2018ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೊಷಣೆ ಮಾಡಿದ್ದರು. ನಂತರದಲ್ಲಿ ಯೋಜನೆಗೆ ಕೇಂದ್ರ ಸಂಪುಟ 10 ಸಾವಿರ ಕೋಟಿ ರೂ. ಮೀಸಲಿಟ್ಟಿತ್ತು.
ಒಬ್ಬರು ಮಾತ್ರ ಅಂತರಿಕ್ಷಕ್ಕೆ
ಗಗನಯಾನಕ್ಕೆ ನಾಲ್ವರನ್ನು ಆಯ್ಕೆ ಮಾಡಲಾಗಿದೆಯಾದರೂ ಒಬ್ಬರನ್ನಷ್ಟೇ ನೌಕೆಯಲ್ಲಿ ಕಳಿಸುವ ಸಾಧ್ಯತೆಯಿದೆ. ಈ ಕುರಿತ ಪ್ರಶ್ನೆಗೆ ಶಿವನ್ ಉತ್ತರಿಸಿ, ಸಾಮಾನ್ಯವಾಗಿ ಮೊದಲ ಮಾನವಸಹಿತ ಯಾನದಲ್ಲಿ ಒಬ್ಬರನ್ನು ಮಾತ್ರ ಕಳಿಸಲಾಗುತ್ತದೆ. ನಾವೂ ಒಬ್ಬರನ್ನೇ ಕಳಿಸುವ ಅಂದಾಜಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗಲಿದೆ ಎಂದರು.
ಗ್ಯಾಲರಿ ವಿಸ್ತರಣೆ
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸಾರ್ವಜನಿಕರು ಉಡಾವಣೆ ವೀಕ್ಷಿಸುವ ಗ್ಯಾಲರಿಯನ್ನು ಮತ್ತಷ್ಟು ವಿಸ್ತರಣೆ ಮಾಡಲಾಗುತ್ತಿದೆ. ಈವರೆಗೆ 29 ಸಾವಿರ ನಾಗರಿಕರು ಗ್ಯಾಲರಿಯಲ್ಲಿ ವೀಕ್ಷಣೆ ಮಾಡಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಹೇಳಿದರು.
ಆದಿತ್ಯ ಯೋಜನೆ:ಸೂರ್ಯನನ್ನು ಮತ್ತಷ್ಟು ಅಧ್ಯಯನ ಮಾಡುವ ಸಲುವಾಗಿ ಆದಿತ್ಯ ಯೋಜನೆ ಸಿದ್ಧತೆಯೂ ಭರದಿಂದ ಸಾಗಿದೆ. ಈ ಸಂಶೋಧನೆಯಿಂದ ವಾತಾವರಣದ ವೈಪರೀತ್ಯವನ್ನು ಮತ್ತಷ್ಟು ನಿಖರವಾಗಿ ಲೆಕ್ಕ ಮಾಡಲು ಸಾಧ್ಯವಾಗುತ್ತದೆ ಎಂದರು.
2021ಕ್ಕೆ ಚಂದ್ರಯಾನ-3
ಚಂದ್ರಯಾನ-3ಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದ ಶಿವನ್, ಚಂದ್ರಯಾನ-2ರಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಚಂದ್ರನ ದಕ್ಷಿಣ ಧ್ರುವಕ್ಕೆ ಲಗ್ಗೆ ಇಡಲು ಸಿದ್ಧತೆ ನಡೆಸಿದ್ದೇವೆ ಎಂದರು. ಈಗಾಗಲೆ ಚಂದ್ರಯಾನ-3ರ ಕಾರ್ಯ ಆರಂಭವಾಗಿದೆ. ಯೋಜನಾ ನಿರ್ದೇಶಕರಾಗಿ ಚಂದ್ರಯಾನ-2ರ ಸಹಾಯಕ ಯೋಜನಾ ನಿರ್ದೇಶಕರಾ ಗಿದ್ದ ವೀರಮುತ್ತುವೇಲ್ ನೇಮಕವಾಗಿದ್ದಾರೆ. ಚಂದ್ರಯಾನ-2ರಲ್ಲಿ ಉಡಾವಣೆಯಾಗಿದ್ದ ಆರ್ಬಿಟರ್ ಉತ್ತಮ ಸ್ಥಿತಿಯಲ್ಲಿದ್ದು, ಇನ್ನೂ 7 ವರ್ಷ ಕಾರ್ಯನಿರ್ವಹಿಸುತ್ತದೆ. ಚಂದ್ರಯಾನ-3ರಲ್ಲಿ ಕೇವಲ ಲ್ಯಾಂಡರ್ ಹಾಗೂ ರೋವರ್ ಇರಲಿದ್ದು, ಚಂದ್ರಯಾನ-2ರ ಆರ್ಬಿಟರನ್ನೇ ಬಳಕೆ ಮಾಡಿ ಕೊಳ್ಳಲಾಗುತ್ತದೆ. ಲ್ಯಾಂಡರ್ ಹಾಗೂ ರೋವರ್​ಗೆ ಹೆಸರಿಡುವ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಸುಮಾರು 14-16 ತಿಂಗಳಲ್ಲಿ ಚಂದ್ರಯಾನ-3 ಉಡಾವಣೆ ಆಗಲಿದೆ. ಒಟ್ಟಾರೆ ಯೋಜನೆಗೆ 250 ಕೋಟಿ ರೂ. ಹಾಗೂ ಉಡಾಹಕ ಜಿಎಸ್​ಎಲ್​ವಿಗೆ 365 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಿದರು.
ಮಾರ್ಚ್ ವೇಳೆಗೆ ವಿಲೇವಾರಿ
2020ರ ಮಾರ್ಚ್ ವೇಳೆಗೆ ಇಸ್ರೋದ ಬಾಕಿ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತದೆ. ತಮಿಳುನಾಡಿನ ತೂತ್ತುಕುಡಿಯಲ್ಲಿ 2ನೇ ಉಡಾವಣಾ ಕೇಂದ್ರ ಸ್ಥಾಪಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದಕ್ಷಿಣಾಭಿಮುಖ ಉಡಾವಣೆಗೆ ಈ ಸ್ಥಳ ಅನುಕೂಲ ವಾಗಿದೆ. 2,300 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ತಮಿಳುನಾಡು ಸರ್ಕಾರ ನಡೆಸುತ್ತಿದೆ. ಪ್ರಾರಂಭದಲ್ಲಿ ಸಣ್ಣ ಉಪಗ್ರಹ ಉಡಾಹಕಗಳನ್ನು(ಎಸ್​ಎಸ್​ಎಲ್​ವಿ) ಉಡಾವಣೆ ಮಾಡಲಾಗುತ್ತದೆ ಎಂದು ಶಿವನ್ ಹೇಳಿದರು.
ಮೊಬೈಲ್​ನಲ್ಲಿ ಭಾರತೀಯ ಚಿಪ್
ಭಾರತದಲ್ಲಿ ಸದ್ಯ ಎಲ್ಲ ಮೊಬೈಲ್​ಗಳಲ್ಲೂ ಮಾರ್ಗದರ್ಶನಕ್ಕೆ(ನೇವಿಗೇಷನ್) ಅಮೆರಿಕದ ಚಿಪ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೀಗ ಇಸ್ರೋ ‘ನಾವಿಕ್’ ಹೆಸರಿನ ಚಿಪ್ ಅಭಿವೃದ್ಧಿಪಡಿಸಿದ್ದು, ಭಾರತದ ನೇವಿಗೇಷನ್ ಉಪಗ್ರಹಗಳನ್ನು ಬಳಸಿ ಕಾರ್ಯನಿರ್ವಹಿಸುತ್ತವೆ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅನುಮತಿ ಸಿಕ್ಕಿದೆ ಎಂದು ಕೆ. ಶಿವನ್ ತಿಳಿಸಿದರು. ಈ ಚಿಪ್ ಅಳವಡಿಸಿಕೊಳ್ಳಲು ಸದ್ಯ ಮೊಬೈಲ್ ಉತ್ಪಾದನಾ ಕಂಪನಿ ಶಿಯೋಮಿ ಜತೆಗೆ ಅಂತಿಮ ಸುತ್ತಿನ ಮಾತುಕತೆ ನಡೆದಿದ್ದು, ಹೆಚ್ಚಿನ ಭಾರತೀಯರಿಗೆ ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 8 =
Remember me
