|ರಾಘವ ಶರ್ಮ ನಿಡ್ಲೆನವದೆಹಲಿ
ಪಂಜಾಬಿನ ಬದೌರ್​ನಲ್ಲಿ ಕಾಂಗ್ರೆಸ್ ಸಿಎಂ ಚರಣ್​ಜಿತ್ ಚನ್ನಿಯವರನ್ನು ಸೋಲಿಸಿದ್ದು ಕೂಲಿ ಕಾರ್ವಿುಕನ ಮಗ, ಆಮ್ ಆದ್ಮಿ ಪಕ್ಷದ ಲಾಭ್ ಸಿಂಗ್ ಉಗೋಕ್. ಇವರ ತಂದೆ ಕೃಷಿ ಜಮೀನಲ್ಲಿ ಕೂಲಿ ಮಾಡುತ್ತಾರೆ. ತಾಯಿಗೆ ಉಗೋಕ್ ಗ್ರಾಮದ ಶಾಲೆಯೊಂದರಲ್ಲಿ ಕಸ ಗುಡಿಸುವ ಕೆಲಸ. ಆಮ್ ಆದ್ಮಿಯಂತೆಯೇ ಇರುವ ಲಾಭ್ ಸಿಂಗ್, ಮೊಬೈಲ್ ರಿಪೇರ್ ಅಂಗಡಿ ಇಟ್ಟುಕೊಂಡಿದ್ದರು. ಅವರ ಮನೆ ಅಕ್ಷರಶಃ ಜೋಪಡಿಯಂತಿದೆ. ಸಿಂಗ್ 2013ರಿಂದಲೂ ಆಮ್ ಆದ್ಮಿ ಪಕ್ಷದ ಸಕ್ರಿಯ ಕಾರ್ಯಕರ್ತ. ಕ್ಷೇತ್ರದ ಶಾಸಕರಾಗಿದ್ದ ಪಿರ್ಮಲ್ ಸಿಂಗ್ ಆಪ್ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಲಾಭ್ ಸಿಂಗ್​ಗೆ ಟಿಕೆಟ್ ಸಿಕ್ಕಿತ್ತು. ಚನ್ನಿ ಮತ್ತು ಲಾಭ್ ಸಿಂಗ್ ಇಬ್ಬರೂ ದಲಿತ ಸಿಖ್ಖರು. ಆದರೆ, ಜಾತಿ ಲೆಕ್ಕಾಚಾರ ಮೀರಿ ಲಾಭ್ ಸಿಂಗ್​ಗೆ ಮತದಾರರು ವೋಟ್ ಹಾಕಿದರು.
ಚಮ್ೌರ್ ಸಾಹಿಬ್ ಕ್ಷೇತ್ರದ ಜತೆಗೆ ಬದೌರ್​ನಿಂದಲೂ ಸ್ಪರ್ಧಿಸಿದ್ದ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಚರಣ್​ಜಿತ್ ಚನ್ನಿ, ಸುತ್ತಮುತ್ತಲ ದಲಿತ ಮತಗಳು ಕಾಂಗ್ರೆಸ್ ಮತಗಳ ಮೇಲೆ ಪ್ರಭಾವ ಬೀರುವ ಉದ್ದೇಶ ಹೊಂದಿದ್ದರು. ಆದರೆ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದಾರೆ. ಬದೌರ್​ನಲ್ಲಿ ಚನ್ನಿ ಪ್ರಚಾರ ವಾಹನದ ಚಾಲಕ ಆಗಿದ್ದ ರಾಜೀಂದರ್ ಪಾಲ್ ಕೂಡ ಚನ್ನಿಗೆ ಮತ ಹಾಕಿಲ್ಲ. ಟೆಂಪೋ ಪ್ರಚಾರ ವಾಹನದಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಕಾಂಗ್ರೆಸ್​ಗೆ ಮತ ನೀಡಿ ಎಂದು ಪ್ರಚಾರ ಮಾಡುತ್ತಿದ್ದ ರಾಜೀಂದರ್ ಪಾಲ್ ಹತ್ತಾರು ಗ್ರಾಮಗಳಲ್ಲಿ ತಿರುಗಿ, ಸಾವಿರಾರು ಮಂದಿಯನ್ನು ಭೇಟಿ ಮಾಡಿದ್ದರು. ಕ್ಷೇತ್ರದ ಮೂಡ್ ಆಮ್ ಆದ್ಮಿ ಪರವಿತ್ತು. ಅವರ ಮನಸ್ಸಿನ ಆಶಯ ಕೂಡ ಅದೇ ಆಗಿತ್ತು. ಒಟ್ಟಿನಲ್ಲಿ, ಪ್ರಚಾರ ಮಾಡಿದ್ದು ಕಾಂಗ್ರೆಸ್ ಪರ, ವೋಟ್ ಹಾಕಿದ್ದು ಆಪ್​ಗೆ!
ಪಂಜಾಬ್ ಡ್ರಗ್ಸ್ ನಶೆಯ ಕಥೆಗಳು ಹೇಳಿದಷ್ಟು ಮುಗಿಯದು. ಬರ್ನಾಲಾ ಜಿಲ್ಲೆಯಲ್ಲಿ ವಿಜಯವಾಣಿಗೆ ಸಿಕ್ಕ 65 ವರ್ಷದ ಬಸ್ ಚಾಲಕ ರೂರ್ ಸಿಂಗ್ ಕೂಡ ಡ್ರಗ್ ನಶೆಯೇರಿಸಿ, ಹಾಸಿಗೆ ಹಿಡಿದವರು. ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ನಶೆಯಿಂದ ಮುಕ್ತರಾದರಂತೆ. ‘ಒಂದೂವರೆ ವರ್ಷ ಹಾಸಿಗೆಯಲ್ಲಿದ್ದೆ, ಕುಟುಂಬದವರು ನನ್ನಿಂದ ಸಾಕಷ್ಟು ತೊಂದರೆ ಅನುಭವಿಸಿದರು. ಪ್ರಬಲ ಸರ್ಕಾರದಿಂದ ಮಾತ್ರ ರಾಜ್ಯವನ್ನು ನಶೆಮುಕ್ತ ಮಾಡಲು ಸಾಧ್ಯ. ಆ ಇಚ್ಛಾಶಕ್ತಿ ಆಮ್ ಆದ್ಮಿ ಪಕ್ಷಕ್ಕಿದೆ. ಹಾಗಾಗಿ ಅವರ ಪರ ಪ್ರಚಾರ ಮಾಡುತ್ತಾ, ಕಾಂಗ್ರೆಸ್ ಸೋಲಿಸಲು ಹೋರಾಡುತ್ತಿದ್ದೇನೆ’ ಎಂದರು.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ತಾನು ಸೋತಿದ್ದಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೂ ಕಾರಣಕರ್ತರು. ಅಮೃತಸರ ಪೂರ್ವ ಕ್ಷೇತ್ರದಲ್ಲಿ ಸಿಧು ಮತ್ತು ಅಕಾಲಿದಳದ ವಿಕ್ರಂಸಿಂಗ್ ಮಜೀತಿಯಾರಂತಹ ಮದಗಜಗಳನ್ನು ಸೋಲಿಸಿದ್ದು ಆಮ್ ಆದ್ಮಿ ಪಕ್ಷದ ‘ಪ್ಯಾಡ್​ವುಮನ್’ ಎಂದೇ ಖ್ಯಾತಿಯಾದ ಜೀವನ್​ಜೋತ್ ಕೌರ್ ಸರ್ಕಾರೇತರ ಸಂಸ್ಥೆ ಮೂಲಕ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮರುಬಳಕೆ ಮಾಡಬಹುದಾದ ಸ್ಯಾನಿಟರಿ ನ್ಯಾಪ್ಕಿನ್​ಗಳ ಬಳಕೆ ಉತ್ತೇಜಿಸಲು ಅವರು ಶ್ರಮಿಸಿದ್ದಾರೆ. 2014ರಿಂದಲೂ ಆಮ್ ಆದ್ಮಿ ಪಕ್ಷದೊಂದಿಗಿದ್ದಾರೆ.
ಹಿಂದು ಯುವ ವಾಹಿನಿ ಮಾಜಿ ಅಧ್ಯಕ್ಷ ಸುನೀ ಲ್ ಸಿಂಗ್ ಯೋಗಿ ಆದಿತ್ಯನಾಥರ ಬಲಗೈ ಬಂಟ. ಯೋಗಿ ಸಿಎಂ ಆದ ನಂತರ ಗೋರಖ್​ಪುರ ಮಂದಿರ ವಿಸ್ತರಣೆಗೆಂದು ವಿಧವೆಯೊಬ್ಬರ ಜಾಗ ಪಡೆದುಕೊಂಡಿದ್ದ. ಇದು ಯೋಗಿಗೆ ತಿಳಿದಿರಲಿಲ್ಲ. ಆದರೆ, ಮಹಿಳೆಗೆ ಸುನೀಲ್ ಸಿಂಗ್ ಸೂಕ್ತ ಪರಿಹಾರ ಕೊಡಿಸಿರಲಿಲ್ಲ. ಮಹಿಳೆ ಹಲವು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿರಲಿಲ್ಲ. ಆಕೆ ಯೋಗಿಯವರ ಜನತಾ ದರ್ಬಾರ್​ನಲ್ಲಿ ದೂರು ನೀಡುತ್ತಾಳೆ. ಪರಿಶೀಲನೆ ಬಳಿಕ ಆಕೆ ಮಾತು ನಿಜವೆಂದು ಗೊತ್ತಾಗಿ, ಆಕೆಯ ಭೂಮಿ ನೀಡುವಂತೆ ಸುನೀಲ್ ಸಿಂಗ್​ಗೆ ಯೋಗಿ ಸೂಚಿಸಿದ್ದರು. ಆದರೆ, ಆತ ಕೇಳಲಿಲ್ಲ. ಮಹಿಳೆಗೆ ಅನ್ಯಾಯ ಎಸಗಿದರೆ ಸಹಿಸಲಾರೆ ಎಂದ ಯೋಗಿ, ಸುನೀಲ್ ತನ್ನ ಆಪ್ತ ಎನ್ನುವುದನ್ನೂ ಯೋಚಿಸದೆ ಕೇಸು ಜಡಿದು ಜೈಲಿಗೆ ಹಾಕಿಸಿದರು. ಯೋಗಿ ಮಧ್ಯಪ್ರವೇಶದಿಂದಾಗಿ ಕೊನೆಗೂ ಮಹಿಳೆಗೆ ನ್ಯಾಯ ಸಿಕ್ಕಿದೆ. ಇದು ‘ಬುಲ್ಡೋಜರ್ ಬಾಬಾ’ ಕಾರ್ಯಶೈಲಿ. ಇಂಥಾ ಸಣ್ಣಸಣ್ಣ ಶಿಸ್ತಿನ ಕ್ರಮಗಳಿಂದಲೇ ಮಹಿಳೆಯರು ಯೋಗಿಯೇ ಮತ್ತೊಮ್ಮೆ ಬೇಕೆಂದು ಮತ ಹಾಕಿದ್ದಾರೆ. ಅಂದಹಾಗೆ ಸುನೀಲ್ ಈಗ ಸಮಾಜವಾದಿ ಪಕ್ಷದಲ್ಲಿದ್ದಾರೆ!
2014ರಲ್ಲಿ ವಾರಾಣಸಿಯ ಮಂಡ್ವಾಡಿಯಾ ನಿಕೃಷ್ಟ ರೈಲ್ವೆ ನಿಲ್ದಾಣಕ್ಕೊಂದು ಮಾದರಿ ಎಂಬಂತಿತ್ತು. ಈಗ ನೋಡಿದರೆ ಹುಬ್ಬೇರುವುದು ಗ್ಯಾರಂಟಿ. ಸ್ಟೇಷನ್ ಹೆಸರನ್ನು ‘ಬನಾರಸ್’ ಎಂದು ನಾಮಕರಣ ಮಾಡಲಾಗಿದೆ. ಜಮ್ಮು-ಕಾಶ್ಮೀರದ ಲೆ.ಗವರ್ನರ್ ಮನೋಜ್ ಸಿನ್ಹಾ ರೈಲ್ವೆ ಸಚಿವರಾಗಿದ್ದಾಗ ಪ್ರಧಾನಿ ಮೋದಿ ನಿರ್ದೇಶನದಂತೆ ಇಡೀ ನಿಲ್ದಾಣದ ಚಹರೆ ಬದಲಿಸಲು ಮುಂದಾದರು. ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ವಿಮಾನ ನಿಲ್ದಾಣಕ್ಕೆ ಬಂದಿದ್ದೇನಾ ಎಂದನ್ನಿಸದಿರದು. ಮೂರು ಪ್ಲಾಟ್​ಫಾಮರ್್​ಗಳಿದ್ದ ನಿಲ್ದಾಣದಲ್ಲೀಗ 7 ಪ್ಲಾಟ್​ಫಾಮರ್್​ಗಳಿವೆ. ಚೂರೂ ಕಸ ಕಾಣುವುದಿಲ್ಲ.
ಪಿಎಂ ಮೋದಿ ಸಂಸದ ಕ್ಷೇತ್ರ ವಾರಾಣಸಿ ಕಳೆದ 7 ವರ್ಷಗಳಲ್ಲಿ ವ್ಯಾಪಕ ಅಭಿವೃದ್ಧಿಗೆ ತೆರೆದುಕೊಂಡಿದೆ. ಕಾಶಿಯ ಲೋಹ್ತಾ ಎಂಬಲ್ಲಿನ ನಿವಾಸಿ, ರಿಕ್ಷಾ ಚಾಲಕ ಇಫ್ತಿಕಾರ್ ಖಾನ್ ವಿಜಯವಾಣಿ ಜತೆ ಮಾತನಾಡಿದ್ದಾಗ, ‘ಕಾಶಿ ಅಭಿವೃದ್ಧಿ ಮಾಡಿದವರಿಗೆ ಮತ ಹಾಕದೆ ಇನ್ಯಾರಿಗೆ ವೋಟ್ ಹಾಕಲಿ. ನನ್ನೂರು ಇಷ್ಟು ಬದಲಾಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ನಮಗೆ ಮೋದಿಯೇ ಬೆಸ್ಟ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಸ್ಲಿಂ ಮಹಿಳೆಯರಲ್ಲಿ ಅನೇಕರೂ ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆನ್ನಲಾಗಿದೆ. 2013ರ ಕೋಮುದಂಗೆಯ ಮೂಲ ತಾಣವಾದ ಮುಜಫರನಗರದ ಕವಾಲ್ ಹಳ್ಳಿಯ ಹಸನ್ ಅಲಿ, ದಿಲ್​ಶಾದ್, ಯಾಸಿನ್ ಎಂಬ ಮೂವರು ಹಿರಿ ವಯಸ್ಸಿನ ಮುಸಲ್ಮಾನರೂ ಆರ್​ಎಲ್​ಡಿ ಬೆಂಬಲಿಸುತ್ತೇವೆ ಎಂದರೂ, ‘ಯೋಗಿ-ಮೋದಿ ಕೆಲಸ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಸರಿಯಾಗಿ, ನಾವು ನೆಮ್ಮದಿಯಾಗಿದ್ದೇವೆ’ ಎಂದು ಒಪ್ಪಿಕೊಂಡಿದ್ದರು.
ಗೋರಖ್​ಪುರ ಮಠದಲ್ಲಿ ರಾತ್ರಿ ಮಲಗುವುದು ಎಷ್ಟೇ ತಡವಾದರೂ, ಮುಂಜಾನೆ 3 ಗಂಟೆಗೆ ಏಳುವುದು ಸಿಎಂ ಯೋಗಿ ಆದಿತ್ಯನಾಥರಿಗೆ ರೂಢಿ. ಪೂಜಾ ಕೈಂಕರ್ಯಗಳನ್ನು ಮುಗಿಸಿ, ಗೋರಖ್​ಪುರ ಮಂದಿರಕ್ಕೆ ಭೇಟಿ ನೀಡುವ ಮುನ್ನ ಗೋಶಾಲೆಯಲ್ಲಿ ಗೋವುಗಳೊಂದಿಗೆ 30 ನಿಮಿಷ ಕಳೆಯುತ್ತಾರೆ. ಆದಿತ್ಯನಾಥರಿಗೆ ಪ್ರತಿ ಗೋವಿನ ಹೆಸರೂ ತಿಳಿದಿದೆಯಂತೆ. ನಿರ್ದಿಷ್ಟ ಗೋವಿನ ಹೆಸರನ್ನು ಕೂಗುತ್ತಿದ್ದಂತೆಯೇ ಅದು ಮಹಾರಾಜ್ ಕಡೆ ಓಡೋಡಿ ಬರುತ್ತದೆ ಎಂದು ಅಲ್ಲಿನ ಗೋಪಾಲಕರು ಹೇಳುತ್ತಾರೆ.
ಉತ್ತರ ಪ್ರದೇಶದಲ್ಲಿ ಎಲ್ಲಿದ್ದ ಮಾಯಾವತಿ ಎಲ್ಲಿಗೆ ತಲುಪಿದ್ದಾರೆ ನೋಡಿ! 1993ರಲ್ಲಿ ಬಹುಜನ ಸಮಾಜ ಪಕ್ಷ ಸ್ಪರ್ಧಿಸಿದ್ದ ಮೊದಲ ಚುನಾವಣೆಯಲ್ಲಿ ಶೇ. 11.2 ಮತಗಳಿಸಿ 67 ಸೀಟುಗಳನ್ನು ಗೆದ್ದಿತ್ತು. ನಂತರದ ಚುನಾವಣೆಗಳಲ್ಲಿ ಉತ್ತಮ ನಿರ್ವಹಣೆ ತೋರುತ್ತಾ 2014ರ ಬಳಿಕ ಕುಸಿತ ಕಂಡ ಬಿಎಸ್ಪಿ ಈ ಬಾರಿ ಎಲ್ಲಾ 403 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಕನಿಷ್ಠ ಶೇ. 12.8ಕ್ಕೆ ಕುಸಿದು, ಬರೀ 1 ಕ್ಷೇತ್ರ ಗೆದ್ದಿದೆ. 93ರ ಬಳಿಕ ಕಡಿಮೆ ಮತಪ್ರಮಾಣ (ಶೇ.19) ದಾಖಲಾಗಿದ್ದು 2017ರ ಚುನಾವಣೆಯಲ್ಲಿ. ಆಗ 19 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಚುನಾವಣೆ ವೇಳೆ 19 ಶಾಸಕರಲ್ಲಿ ಮೂವರು ಮಾತ್ರ ಪಕ್ಷದಲ್ಲಿ ಉಳಿದುಕೊಂಡಿದ್ದರು. ಉತ್ತರ ಪ್ರದೇಶದಲ್ಲಿ ಮಾಯಾವತಿ ಪ್ರತಿನಿಧಿಸುವ ಜಾಟವ ಸಮುದಾಯದ ಮತಗಳೇ ಶೇ.13ರಷ್ಟಿದೆ. ಅವರೂ ಮಾಯಾವತಿಯಿಂದ ದೂರವಾದಂತಿದೆ.
ಅಯೋಧ್ಯೆ ಜಿಲ್ಲೆಯ ಮಿಲ್ಕೀಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಬಾ ಗೋರಖ್​ನಾಥರನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ ಈ ಬಾರಿ ಮನೆಗೆ ಕಳುಹಿಸಿದ್ದಾರೆ. ಜನರ ಕೈಗೆ ಸಿಗದ ಶಾಸಕ ನಮಗೆ ಬೇಡ ಎಂದು ಮತದಾರರು ತೀರ್ವನಿಸಿದ್ದಾರೆ. ಬಾಬಾ ಗೋರಖ್​ನಾಥ್ ಗೋರಖ್​ಪುರದ ಗೋರಖನಾಥ ಪೀಠದ ಹೆಸರನ್ನಿಟ್ಟುಕೊಂಡ ಹಿಂದೆ ಸ್ವಾರಸ್ಯಕರ ಕಥೆಯಿದೆ. ಪೀಠದ ಭಕ್ತರಾಗಿದ್ದ ಅವರ ಹೆತ್ತವರು, ತಮಗೆ ಗಂಡು ಮಗು ಹುಟ್ಟಿದಲ್ಲಿ ಪೀಠಕ್ಕೆ ನೀಡುವುದಾಗಿ ಹೇಳಿಕೊಂಡಿದ್ದರು. ಅಂತೆಯೇ ಗಂಡುಮಗು ಹುಟ್ಟಿತು. ಆಗ ಪೀಠದ ಸ್ವಾಮೀಜಿ ಈ ರೀತಿ ಸಣ್ಣ ಮಗುವನ್ನು ಸ್ವೀಕರಿಸುವ ಪರಂಪರೆ ನಮ್ಮಲ್ಲಿಲ್ಲ. ದೊಡ್ಡವನಾದ ಬಳಿಕ ದೀಕ್ಷೆ ನೀಡಬಹುದು ಎಂದಿದ್ದರು. ಪೀಠದ ಮೇಲಿನ ಭಕ್ತಿಯಿಂದ ಬಾಬಾ ಗೋರಖನಾಥ್ ಎಂದು ಹೆಸರಿಡಲಾಯಿತು. ನಂತರದಲ್ಲಿ ಅವರು ದೀಕ್ಷೆ ತೆಗೆದುಕೊಳ್ಳುವ ಬದಲು ರಾಜಕಾರಣಿಯಾಗಿ ಚುನಾವಣೆ ಟಿಕೆಟ್ ಪಡೆದರು. ಕಳೆದ ಬಾರಿ ಬಿಜೆಪಿಯಿಂದ ಗೆದ್ದರೂ, ಈ ಬಾರಿ ಮನೆ ಸೇರಿದ್ದಾರೆ.
ಇದ್ದಕ್ಕಿದ್ದಂತೆ ಹೆಚ್ಚಾಯ್ತು ಕೋವಿಡ್​ ಕೇಸ್​; ಚೀನಾದಲ್ಲಿಂದು 2 ವರ್ಷದಲ್ಲೇ ಅತ್ಯಧಿಕ ದೈನಂದಿನ ಪ್ರಕರಣ!

ಗಂಡ-ಹೆಂಡಿರ ಜಗಳ ಕೊಚ್ಚಿ ಚುಚ್ಚಿಕೊಳ್ಳುವ ತನಕ; ಪತ್ನಿಯ ಸಾವು, ಪತಿ ಪರಿಸ್ಥಿತಿ ಗಂಭೀರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − eight =
Remember me
