ಕೃತಕ ಬುದ್ಧಿಮತ್ತೆ (Artificial Intelligence-AI) ಈಚಿನ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಪದ. ಭಾರತದಲ್ಲಿ ಈ ಪರಿಕಲ್ಪನೆಯ ಅಳವಡಿಕೆ ನಿಧಾನಗತಿಯಲ್ಲಿ ಸಾಗುತ್ತಿದ್ದರೂ ದೇಶವು ಕೃತಕ ಬುದ್ಧಿಮತ್ತೆ ಪ್ರತಿಭೆಯ ವಿಶ್ವದ ದೊಡ್ಡ ಆಗರಗಳಲ್ಲಿ ಒಂದಾಗಿ ಹೊರಹೊಮ್ಮಿರುವುದು ವಿಶೇಷ.
ಐಟಿ ದಿಗ್ಗಜ ಮೈಕ್ರೋಸಾಫ್ಟ್, ಸಲಹಾ ಸಂಸ್ಥೆಯಾದ ಬೈನ್ ಆಂಡ್ ಕಂಪನಿ ಹಾಗೂ ಭಾರತೀಯ ಇಂಟರ್​ನೆಟ್ ಮತ್ತು ಮೊಬೈಲ್ ಸಂಘ(ಐಎಎಂಎಐ)ಗಳ ವರದಿ ಪ್ರಕಾರ, ಜಾಗತಿಕ ಎಐ ಮಾರುಕಟ್ಟೆಯಲ್ಲಿ ಕೇವಲ ಶೇ. 1ರಷ್ಟು ಪಾಲನ್ನು ಹೊಂದಿದ್ದರೂ ಭಾರತವು ವಿಶ್ವದ ಒಟ್ಟಾರೆ ಎಐ ಪ್ರತಿಭಾವಂತರಲ್ಲಿ ಶೇ. 16ರಷ್ಟನ್ನು ಹೊಂದಿದೆ. ಅರ್ಥಾತ್, ಎಐ ಪ್ರತಿಭಾವಂತರನ್ನು ಉತ್ಪಾದಿಸುವ ವಿಶ್ವದ ಮೂರನೇ ಅತಿ ದೊಡ್ಡ ದೇಶವಾಗಿದೆ.
ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಎಐ ಅಳವಡಿಕೆ ಸ್ಥಿರವಾದ ವೇಗದಲ್ಲಿ ಬೆಳೆದಿ ದ್ದರೂ, ಇದಿನ್ನೂ ಆರಂಭಿಕ ಹಂತದ ಮಾರು ಕಟ್ಟೆಯಾಗಿಯೇ ಉಳಿದಿದೆ. ಭಾರತೀಯ ಉದ್ಯಮಗಳಲ್ಲಿ ಎಐ ಮತ್ತು ಯಾಂತ್ರೀಕೃತ ಸೇವೆ ಅಳವಡಿಸಿಕೊಂಡಿರುವವರು ಸಹ ಆರಂಭಿಕ ಹಂತದಲ್ಲಿಯೇ ಇದ್ದಾರೆ ಎಂದು ನಾಸ್ಕಾಮ್ ವರದಿ ಹೇಳುತ್ತದೆ. ಅಂದರೆ, ಈ ಭಾರತೀಯ ಉದ್ಯಮಗಳು ತಂತ್ರಜ್ಞಾನ ಕಂಪನಿಗಳಿಂದ ಎಐ ಸೇವೆಗಳನ್ನು ಎರವಲು ಪಡೆದುಕೊಂಡು, ಕಾರ್ಯಾಚರಣೆಯ ದಕ್ಷತೆಗಾಗಿ ಮಾತ್ರ ವಿವಿಧ ವಿಭಾಗಗಳಲ್ಲಿ ನಿಯೋಜಿಸುತ್ತಿದ್ದಾರೆಯೆ ಹೊರತು ತಮ್ಮದೇ ಆದ ಎಐ ಸೇವೆಗಳನ್ನು ರೂಪಿಸಿಕೊಳ್ಳಲು ಮುಂದಾಗಿಲ್ಲ. ಎಐ ಉದ್ಯಮ ವಿಶ್ಲೇಷಣಾ ಸಂಸ್ಥೆಯೊಂದರ ಅಧಿಕಾರಿಯೊಬ್ಬರ ಪ್ರಕಾರ, ಎಐ ವಿಚಾರದಲ್ಲಿ ಭಾರತವು ಪ್ರಬುದ್ಧ ಮಾರುಕಟ್ಟೆಯಾಗಿದೆ, ಹೀಗಾಗಿಯೇ ಎಐ ಪ್ರತಿಭೆಗಳಿಗೆ ಹೆಚ್ಚಿನ ಬೇಡಿಕೆಯು ಹೊರಗಿನ ಮಾರುಕಟ್ಟೆಗಳಿಂದ ಬರುತ್ತಿದೆ. ಅಮೆರಿಕದಂತಹ ಮಾರುಕಟ್ಟೆಯಲ್ಲಿ ಇವರಿಗೆ ಭರ್ಜರಿ ಬೇಡಿಕೆಯಿದ್ದು, ಇದನ್ನು ಭಾರತೀಯರೇ ದೊಡ್ಡ ಪ್ರಮಾಣದಲ್ಲಿ ಪೂರೈಸುತ್ತಾರೆ. ಇದು ಇತರ ಜಾಗತಿಕ ಮಾರುಕಟ್ಟೆಗಳಲ್ಲಿಯೂ ಭಾರತೀಯ ಎಐ ಪ್ರತಿಭೆಗಳ ಬೇಡಿಕೆಯ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿದೆ ಎಂದೂ ಅವರು ವಿವರಿಸುತ್ತಾರೆ.
ಉದ್ಯಮಗಳಲ್ಲಿ ಆರಂಭಿಕ ಹಂತದಲ್ಲಿ ಎಐ ಅಳವಡಿಸಿಕೊಳ್ಳುವವರಿಂದಾಗಿಯೂ ಬೇಡಿಕೆ ಹೆಚ್ಚುತ್ತಿದೆ. ಉದ್ಯಮಗಳು ತಮ್ಮ ಎಐ ಅವಶ್ಯಕತೆಗಳನ್ನು ಪೂರೈಸಲು ಹಾಲಿ ಸಿಬ್ಬಂದಿಗೂ ಕೌಶಲವರ್ಧನೆಯ ತರಬೇತಿ ನೀಡುತ್ತಿವೆ. ಕೆಲವೊಂದು ಕಂಪನಿಗಳು ದತ್ತಾಂಶ ಮಾದರಿಗಳಲ್ಲಿ ಮತ್ತು ಇಂಜಿನಿಯರಿಂಗ್ ವಿಭಾಗಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಿ, ತಮ್ಮ ಸಂಸ್ಥೆಗಳಿಗೆ ಎಐ ಅಪ್ಲಿಕೇಶನ್ ರೂಪಿಸಲು ಮತ್ತು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುತ್ತಿವೆ. ವಿವಿ ಮಟ್ಟದಲ್ಲಿ ಎಐ ಪರಿಚಯಿಸಬೇಕು. ಅಲ್ಲದೆ, ಶಾಲೆಗಳಲ್ಲೂ ಈ ವಿಷಯವನ್ನು ಸೇರ್ಪಡೆ ಮಾಡಿದರೆ, ಭಾರತದಲ್ಲಿ ಈಗಾಗಲೇ ಇರುವ ಎಐ ಪ್ರತಿಭೆಯ ಆಗರವು ಮಹಾಸಾಗರವಾಗಿ ರೂಪುಗೊಳ್ಳಲು ಉತ್ತೇಜನ ದೊರೆಯುವುದು ನಿಶ್ಚಿತ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಎಐ ಎಂದರೇನು?:ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಂಪ್ಯೂಟರ್ ವಿಜ್ಞಾನದ ಶಾಖೆಯಾಗಿದೆ. ಮನುಷ್ಯರಂತೆ ಯೋಚಿಸಿ, ಕೆಲಸ ಮಾಡುವ ಬುದ್ಧಿವಂತ ಯಂತ್ರಗಳ ಅಭಿವೃದ್ಧಿಗೆ ಇದು ಒತ್ತು ನೀಡುತ್ತದೆ. ಚೆಸ್ ಆಡುವ ಕಂಪ್ಯೂಟರ್​ಗಳು, ಸ್ವಯಂಚಾಲಿತ ಕಾರ್​ಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಸಾರಿಗೆ, ಉತ್ಪಾದನೆ, ಹಣಕಾಸು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಸಲಾಗುತ್ತಿದೆ. ಯಾಂತ್ರೀಕರಣ, ಚಾಣಾಕ್ಷತನದ ನಿರ್ಧಾರ, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ, ಪುನರಾವರ್ತಿತ ಕೆಲಸದ ಸುಲಭ ನಿರ್ವಹಣೆ ಮುಂತಾದವುಗಳು ಎಐನ ಪ್ರಯೋಜನಗಳಾಗಿವೆ. ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕ್ ಕಾರ್ತಿ ಅವರನ್ನು ‘ಕೃತಕ ಬುದ್ಧಿಮತ್ತೆಯ ಜನಕ’ ಎಂದು ಗುರುತಿಸುತ್ತಾರೆ.
ಸಣ್ಣ ಉದ್ಯಮಗಳಿಂದ ಬೇಡಿಕೆ:ಭಾರತದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್​ಎಂಇ) ವಲಯದಿಂದ ಎಐ ಪ್ರತಿಭೆಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಇದಲ್ಲದೆ, ಡಿಜಿಟಲ್ ರೂಪಾಂತರಕ್ಕಾಗಿ, ಯಂತ್ರ ಕಲಿಕೆಗಾಗಿ ದೊಡ್ಡ ಸಂಸ್ಥೆಗಳು ಕೂಡ ಎಐ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುತ್ತವೆ.
ಬೇಡಿಕೆ- ಪೂರೈಕೆ ಅಜಗಜಾಂತರ:ದೇಶವು ಜಾಗತಿಕವಾಗಿ ಎಐ ಪ್ರತಿಭೆಗಳ ಪ್ರಮುಖ ಆಗರವಾಗಿದ್ದರೂ, ಎಐ ಶಿಕ್ಷಣ ಪಡೆದ ಉದ್ಯೋಗಿಗಳ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಂತರ ದೊಡ್ಡ ಪ್ರಮಾಣದಲ್ಲೇ ಇದೆ. ಸಾಫ್ಟ್​ವೇರ್ ಮತ್ತು ಸರ್ವೀಸ್ ಕಂಪನಿಗಳ ರಾಷ್ಟ್ರೀಯ ಒಕ್ಕೂಟವು (ನಾಸ್ಕಾಮ್ ಜೂನ್ 23ರಂದು ಪ್ರಕಟಿಸಿದ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. 2018ರಲ್ಲಿ ಭಾರತದಲ್ಲಿ ಎಐ ಪ್ರತಿಭೆಗಳ ಪೂರೈಕೆಯು ಬೇಡಿಕೆಗಿಂತ ಶೇ. 14ರಷ್ಟು ಕಡಿಮೆ ಇತ್ತು. ಆದರೆ, ಕಳೆದ ವರ್ಷ ಈ ಅಂತರವು ಶೇ. 33ಕ್ಕೆ ವಿಸ್ತರಿಸಿದೆ ಎಂದು ವರದಿ ಗುರುತಿಸಿದೆ.
9.7 ಕೋಟಿ ಹೊಸ ಉದ್ಯೋಗ ಸೃಷ್ಟಿ:ಜಾಗತಿಕ ಆರ್ಥಿಕ ವೇದಿಕೆಯ ಇತ್ತೀಚಿನ ವರದಿಯ ಪ್ರಕಾರ, ಕೃತಕ ಬುದ್ಧಿಮತ್ತೆಯು, 2025ರ ವೇಳೆಗೆ ಜಾಗತಿಕವಾಗಿ 8.5 ಕೋಟಿ ಉದ್ಯೋಗಗಳಿಗೆ ಸಂಚಕಾರ ತರಲಿದೆ. ಆದರೂ, ಭವಿಷ್ಯದಲ್ಲಿ 9.7 ಕೋಟಿ ಹೊಸ ಉದ್ಯೋಗಗಳನ್ನು ಸಹ ಇದು ಸೃಷಿಸಲಿದೆ. ಡಾಟಾ ಎಂಟ್ರಿ ಆಪರೇಟರ್, ಅಕೌಂಟಂಟ್, ಆಡಿಟರ್, ಫ್ಯಾಕ್ಟರಿ ವರ್ಕರ್, ಕ್ಲರ್ಕ್, ಮ್ಯಾನೇಜರ್, ಮೆಕ್ಯಾನಿಕ್ ಮತ್ತು ಮಶೀನ್ ರಿಪೇರಿ ಮಾಡುವವರು, ನಿರ್ಮಾಣ ಕಾರ್ವಿುಕರು ಮುಂತಾದ ಉದ್ಯೋಗಗಳ ಸಂಖ್ಯೆಯಲ್ಲಿ ಅಪಾರ ಕಡಿತವಾಗಲಿದೆ. ಡಾಟಾ ಅನಾಲಿಸ್ಟ್- ಸೈಂಟಿಸ್ಟ್, ಮಶಿನ್ ಲರ್ನಿಂಗ್ ಸ್ಪೆಷಲಿಸ್ಟ್, ಡಿಜಿಟಲ್ ಮಾರ್ಕೆಟಿಂಗ್- ಡಾಟಾ ಸ್ಪೆಷಲಿಸ್ಟ್, ಡಿಜಿಟಲ್ ಟ್ರಾನ್ಸ್ ಫಾರ್ವೆಶನ್ ಸ್ಪೆಷಲಿಸ್ಟ್, ಇಂಟರ್​ನೆಟ್ ಥಿಂಗ್ ಸ್ಪೆಷಲಿಸ್ಟ್, ಪ್ರ್ರಾಜೆಕ್ಟ್ ಮ್ಯಾನೇಜರ್, ರೊಬೊಟಿಕ್ಸ್ ಇಂಜಿನಿಯರ್, ಫಿನ್​ಟೆಕ್ ಇಂಜಿನಿಯರ್, ರಿಸ್ಕ್ ಮ್ಯಾನೆಜ್​ವೆುಂಟ್ ಸ್ಪೆಷಲಿಸ್ಟ್ ಮುಂತಾದ ಉದ್ಯೋಗಗಳಲ್ಲಿ ಸಾಕಷ್ಟು ಏರಿಕೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.
ಸಮುದ್ರದೊಳಕ್ಕೇ ಹೊಕ್ಕಿದ್ದ ಕಾರು; ನಾಪತ್ತೆಯಾಗಿದ್ದವನ ಶವ ಇಂದು ಪತ್ತೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + two =
Remember me
