|ರಾಘವ ಶರ್ಮ ನಿಡ್ಲೆಗೋಧ್ರಾ (ಗುಜರಾತ್)
ಸುಟ್ಟು ಕರಕಲಾಗಿರುವ ಬಾಗಿಲು, ಕಿಟಕಿ, ಫ್ಯಾನು, ಕಬ್ಬಿಣದ ರಾಡುಗಳು. ರೈಲು ಕೋಚಿನ ಸುತ್ತಮುತ್ತ ಪೊದೆ. ಒಳಗೆ ಜೇಡರ ಬಲೆ. ತುಕ್ಕಿನಿಂದಾಗಿ ಯಾವುದೇ ಭಾಗ ಮುಟ್ಟಿದರೂ ಕೈಗೆ ಕಪ್ಪುಬಣ್ಣ ಮೆತ್ತಿಕೊಳ್ಳುತ್ತದೆ. 20 ವರ್ಷದ ಹಿಂದಿನ ಕೆಂಪುಬಣ್ಣವೀಗ ಕಪ್ಪಿಗೆ ತಿರುಗಿದೆ… ಇದು 2002ರಲ್ಲಿ ಗೋಧ್ರಾಕ್ಕೆ ಬರುತ್ತಿದ್ದ ಸಾಬರಮತಿ ಎಕ್ಸ್​ಪ್ರೆಸ್ ಟ್ರೇನ್​ನಲ್ಲಿ 59 ಕರಸೇವಕರು ಸುಟ್ಟುಹೋಗಿದ್ದ ರೈಲಿನ ಎಸ್-6, ಎಸ್- 5 ಕೋಚುಗಳ ಸದ್ಯದ ಸ್ಥಿತಿ. 2 ದಶಕಗಳಿಂದ ಗೋಧ್ರಾ ನಿಲ್ದಾಣದ ಮೂಲೆಯೊಂದರಲ್ಲಿ ಸಾರ್ವಜನಿಕ ಪರಿಸರದಿಂದ ದೂರವಿರುವ ಈ 2 ಕೋಚುಗಳು, ಅಂದಿನ ದುರಂತ ಕಥೆಯನ್ನು ಹೇಳುತ್ತವೆ. ಗೋಧ್ರಾ ನರಮೇಧ ಹಾಗೂ ಗೋಧ್ರೋತ್ತರ ಗಲಭೆಗಳು ಗುಜರಾತ್ ಇತಿಹಾಸದ ಕರಾಳ ಅಧ್ಯಾಯಗಳು. ನರಮೇಧದ ಸಂತ್ರಸ್ತ ಕುಟುಂಬಗಳಿಗೆ (ಎರಡೂ ಧರ್ಮದ) ಈಗಲೂ ಈ ಭೀಕರ ಘಟನೆಯಿಂದ ಹೊರಬರಲು ಸಾಧ್ಯವಾಗಿಲ್ಲ.
ಗೋಧ್ರಾದಲ್ಲಿರುವ ಈ ನತದೃಷ್ಟ ರೈಲನ್ನು ನೋಡಲೆಂದು ತೆರಳಿದ್ದಾಗ ಒಂದು ಬಾಗಿಲಿನಲ್ಲಿ ಯಾರೋ ಗುಲಾಬಿಯ ಎಸಳುಗಳನ್ನು ಹಾಕಿದ್ದು ಕಂಡುಬಂತು. ಪ್ರಾಣಕಳೆದುಕೊಂಡವರ ಸ್ಮರಣೆಗಾಗಿ ಹಿಂದು ಸಂಘಟನೆಗಳ ಕಾರ್ಯಕರ್ತರು ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಶ್ರದ್ಧಾಂಜಲಿ ಅರ್ಪಿಸಲು ಕೆಲ ದಿನಗಳ ಹಿಂದೆ ಹೂವು ಹಾಕಿದ್ದರೆಂದು ರೈಲಿನ ಪಕ್ಕದ ನಲ್ಲಿಯಲ್ಲಿ ಸ್ನಾನ ಮಾಡುತ್ತಿದ್ದ ಯುವಕ ತಿಳಿಸಿದ. ಈಚೆಗೆ ಗೋಧ್ರಾ ವಿಧಾನಸಭೆ ಪ್ರಚಾರಕ್ಕೆ ಬಂದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ‘ತ್ಯಾಗಮಯಿ ರಾಮಭಕ್ತರ ಕನಸು ಈಡೇರುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣವಾಗುತ್ತಿದೆ. ಅಂದು ರೈಲಿನಲ್ಲಿ ಪ್ರಾಣತ್ಯಾಗ ಮಾಡಿದವರನ್ನು ನಾವ್ಯಾರೂ ಮರೆಯುವುದಿಲ್ಲ’ ಎಂದಿದ್ದರು. ಗಲಭೆಗೆ 20 ವರ್ಷ ತುಂಬಿದ್ದರೂ, ಪ್ರತಿ ಚುನಾವಣೆಯಲ್ಲೂ ಈ ವಿಚಾರ ಚರ್ಚೆಯ ಮುನ್ನೆಲೆಗೆ ಬರುತ್ತದೆ. ಅಯೋಧ್ಯೆ ರಾಮಜನ್ಮಸ್ಥಾನ ವೀಕ್ಷಿಸಿ ಗುಜರಾತ್​ಗೆ ವಾಪಸಾಗುತ್ತಿದ್ದ ಕರಸೇವಕರಿದ್ದ ಕೋಚ್​ಗಳ ಬಾಗಿಲುಗಳನ್ನು ಮುಚ್ಚಿ ಪೆಟ್ರೋಲ್ ಸುರಿದು ದಹಿಸಲಾಗಿತ್ತು. ಇದೇ ಕಾರಣಕ್ಕೆ ಯೋಗಿ, ರಾಮಭಕ್ತರ ಕನಸು ಈಡೇರುತ್ತಿದೆ ಎಂದು ಮಾರ್ವಿುಕವಾಗಿ ನುಡಿದಿದ್ದರು.
ಬಿಲ್ಕಿಸ್ ಕೇಸು ಮತ್ತು ರಾವುಲ್​ಜೀ:2002ರ ಗಲಭೆ ದೇಶ ಮತ್ತು ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಿಸಿಬಿಟ್ಟದ್ದು ಇತಿಹಾಸ. ಈಗ ಬಿಲ್ಕಿಸ್ ಬಾನೋ ಅತ್ಯಾಚಾರ ಮಾಡಿದ ಅಪರಾಧಿಗಳನ್ನು ಅವಧಿಗೆ ಮುನ್ನ ಗೋಧ್ರಾ ಜೈಲಿನಿಂದ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡದ್ದು ಈ ಭಾಗದ ಸಂತ್ರಸ್ತ ಮುಸ್ಲಿಮರ ಹತಾಶೆ ಹೆಚ್ಚಿಸಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಗೋಧ್ರಾದಲ್ಲಿ, ನರಮೇಧದ ಘಟನೆ ನೆನಪಿಸುತ್ತಾ ಹಿಂದು ಮತಗಳ ಕ್ರೋಡೀಕರಣ ಮಾಡುವುದು ಬಿಜೆಪಿ ತಂತ್ರಗಾರಿಕೆ. ಮುಸ್ಲಿಂ ಮತಬ್ಯಾಂಕ್ ಬಹುಪಾಲು ಕಾಂಗ್ರೆಸ್ ಬೆಂಬಲಕ್ಕಿರುವುದರಿಂದ, ಈ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದ, ಶಾಸಕ ಸಿ.ಕೆ. ರಾವುಲ್ ಜೀ ಅವರನ್ನು 2017ರಲ್ಲಿ ತನ್ನ ತೆಕ್ಕೆಗೆ ಹಾಕಿಕೊಂಡು ಟಿಕೆಟ್ ನೀಡಿದ್ದ ಬಿಜೆಪಿ, 258 ಮತಗಳ ಅಂತರದಲ್ಲಿ ಚುನಾವಣೆ ಗೆದ್ದು, ಗೋಧ್ರಾವನ್ನು ತನ್ನದಾಗಿಸಿಕೊಂಡಿತ್ತು. 2007 ಮತ್ತು 2012ರಲ್ಲಿ ರಾವುಲ್ ಜೀ ಕಾಂಗ್ರೆಸ್ ಟಿಕೆಟ್​ನಿಂದ ಸ್ಪರ್ಧಿಸಿ ಗೆದ್ದಿದ್ದರು. ಒಟ್ಟು 6 ಬಾರಿ ಶಾಸಕರಾಗಿರುವ ರಾವುಲ್ ಜೀಯವರನ್ನು 7ನೇ ಬಾರಿಗೆ ವಿಧಾನಸಭೆಗೆ ಕಳುಹಿಸಲು ಬಿಜೆಪಿ ಭರ್ಜರಿ ಪ್ರಚಾರ ಮಾಡಿದೆ. ಮೂಲತಃ ಹಿಂದುತ್ವದ ಹೋರಾಟದ ಮೂಲಕವೇ ಗುರುತಿಸಿಕೊಂಡಿದ್ದ ರಾವುಲ್ ಜೀ, 90 ದಶಕದಲ್ಲಿ ಪಂಚಮಹಲ್ ಜಿಲ್ಲೆಯಲ್ಲಿ ಅಯೋಧ್ಯೆ ಕರಸೇವೆ ಚಳವಳಿಯ ಮುಂಚೂಣಿ ವಹಿಸಿದ್ದರು. ಮಾಜಿ ಸಿಎಂ ಶಂಕರ್​ಸಿಂಗ್ ವಘೕಲಾ ಒಡನಾಡಿಯಾಗಿದ್ದ ಅವರು, ವಘೕಲಾ ಕ್ಯಾಬಿನೆಟ್​ನಲ್ಲಿ ಮಂತ್ರಿಯಾಗಿದ್ದರು. ಗೋಧ್ರೋತ್ತರ ಗಲಭೆ ವೇಳೆ 3 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೋ ಅತ್ಯಾಚಾರ ಮತ್ತು ಆಕೆಯ 14 ಮಂದಿ ಕುಟುಂಬಸ್ಥರ ಹತ್ಯೆ ಪ್ರಕರಣದಲ್ಲಿ 14 ವರ್ಷ ಜೈಲು ಶಿಕ್ಷೆ ಅನುಭವಿಸಿದ ಅಪರಾಧಿಗಳನ್ನು ಉತ್ತಮ ನಡವಳಿಕೆ ಆಧಾರದಲ್ಲಿ ಬಿಡುಗಡೆ ಮಾಡಬಹುದು ಎಂದು ಶಿಫಾರಸು ಮಾಡಿದ್ದ ಸರ್ಕಾರದ ಸಮಿತಿಯಲ್ಲಿ ಗೋಧ್ರಾ ಶಾಸಕ ಸಿ.ಕೆ. ರಾವುಲ್ ಜೀ ಕೂಡ ಸದಸ್ಯರು. ಆದರೆ, ಅಪರಾಧಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಹಾನಿ ಮಾಡುವಂತೆ ಕಾಣುತ್ತಿಲ್ಲ. ಅಪರಾಧಿಗಳಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದ ಹಿನ್ನೆಲೆಯಲ್ಲಿ ಬಿಲ್ಕಿಸ್ ಬಾನೋ ಪ್ರಕರಣ ನಡೆದ ರಣದೀಕ್​ಪುರ ಹಳ್ಳಿಯಿಂದ ಕೆಲವೊಂದಿಷ್ಟು ಮುಸ್ಲಿಂ ಕುಟುಂಬಗಳು ಹಳ್ಳಿಬಿಡಲು ನಿರ್ಧರಿಸಿವೆ.
ಕೈನಿಂದ ಮಹಿಳಾ ಅಭ್ಯರ್ಥಿ:ಕಳೆದ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ರಾಜೇಂದ್ರ ಸಿ. ಪಟೇಲ್ ಈ ಬಾರಿ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಪಕ್ಕದ ಸೆರಾ ವಿಧಾನಸಭೆ ವ್ಯಾಪ್ತಿಯ ಮಹಿಳಾ ಅಭ್ಯರ್ಥಿ ರಶ್ಮಿತಾ ಚೌಹಾಣ್​ಗೆ ಟಿಕೆಟ್ ನೀಡಿರುವ ಕಾಂಗ್ರೆಸ್ ತೀರ್ಮಾನ ಅನೇಕರನ್ನು ಗೊಂದಲಕ್ಕೀಡುಮಾಡಿದೆ. ‘ಹೊರಗಿನವರಿಗೆ ಟಿಕೆಟ್ ನೀಡಿರುವುದರಿಂದ ಕಾಂಗ್ರೆಸ್ ಮತ್ತಷ್ಟು ಮತ ಕಳೆದುಕೊಳ್ಳಲಿದೆ. ನಾವು 25000 ಮತಗಳಲ್ಲಿ ಗೆಲ್ಲಲಿದ್ದೇವೆ’ ಎನ್ನುತ್ತಾರೆ ಗೋಧ್ರಾ ವಿಭಾಗದ ಬಿಜೆಪಿ ಅಧ್ಯಕ್ಷ ದಿಲೀಪ್ ದಸಾಡಿಯಾ. ಕಳೆದ ಬಾರಿ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂದು ಡಾ. ಜಸ್ವಂತ್ ವರ್ಮ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇದರಿಂದ ಬಿಜೆಪಿ ಸುಮಾರು 15-17 ಸಾವಿರ ಮತ ಕಳೆದುಕೊಂಡಿತ್ತು. ಈ ಬಾರಿ ಜಸ್ವಂತ್​ರನ್ನು ಬಿಜೆಪಿಗೆ ವಾಪಸ್ ಕರೆಸಿಕೊಂಡಿರುವ ಸ್ಥಳೀಯ ಮುಖಂಡರು, ಅವರ ಬೆಂಬಲಿಗ ಮತಗಳೂ ಬಿಜೆಪಿ ತೆಕ್ಕೆಗೆ ಬೀಳುವ ವಿಶ್ವಾಸದಲ್ಲಿದ್ದಾರೆ. ಆಮ್ ಆದ್ಮಿ ಪಾರ್ಟಿ, ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಹಾಗೂ ಐವರು ಮುಸ್ಲಿಂ ಮಹಿಳಾ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ‘ಬಿಜೆಪಿಗೆ ನೆರವಾಗುವ ಓವೈಸಿ ಆಟ ಇಲ್ಲಿ ನಡೆಯಲ್ಲ. ಮುಸ್ಲಿಮರು ಜಾಗೃತಗೊಂಡಿದ್ದಾರೆ’ ಎಂದು ಗೋಧ್ರಾದ ರಾಣಿ ಮಸ್ಜೀದ್ ಬಳಿ ಸಿಕ್ಕ ಮುಷ್ತಾಕ್ ಅಲಿ ಕಿಡಿಕಾರಿದರು.
ಗೋಧ್ರಾದ ಬಸ್ಸು ನಿಲ್ದಾಣ, ರೈಲ್ವೆ ಸ್ಟೇಷನ್ ಹೊರಭಾಗಗಳನ್ನು ನೋಡಿದರೆ, ಸ್ವಚ್ಛಭಾರತದ ಪರಿಕಲ್ಪನೆ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಅಂಗಡಿಮುಂಗಟ್ಟುಗಳ ಎದುರುಭಾಗದಲ್ಲಿ ಕಸ-ಕಡ್ಡಿ, ಚರಂಡಿ ನೀರು ಹರಿದು ಗಬ್ಬು ನಾರುತ್ತಿದೆ. ಅಹ್ಮದಾಬಾದ್, ಬರೋಡದಂತೆ ನಿಮ್ಮ ಊರು ಕೂಡ ಅಭಿವೃದ್ಧಿಯಾಗಬೇಕು ಎಂದು ಅನಿಸಿಲ್ಲವೇ ಎಂದು ಕೇಳಿದ್ದಕ್ಕೆ ಶಾಕೀರ್ ಎಂಬುವವರು, ‘ಹಿಂದುಗಳಿರುವ ಜಾಗ ಅಭಿವೃದ್ಧಿಯಾಗಿದೆ. ಈ ಪ್ರದೇಶಗಳನ್ನು ಬೇಕೆಂದೇ ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ದೂರಿದರು.
ಮುಸ್ಲಿಂ-ಹಿಂದು ವ್ಯಾಪಾರ ಸಂಬಂಧ:ಗುಜರಾತಿನ ಹಲವೆಡೆ ಕಾಣುವಂತೆ ಗೋಧ್ರಾದಲ್ಲೂ ಹಿಂದು-ಮುಸ್ಲಿಮರು ಜಂಟಿಯಾಗಿ ಉದ್ಯಮ, ವ್ಯಾಪಾರ-ವಹಿವಾಟು ನಡೆಸುತ್ತಾರೆ. ಹಿಂದು ವ್ಯಾಪಾರಿಗಳು ತಮ್ಮ ಎಷ್ಟೋ ಉತ್ಪನ್ನಗಳನ್ನು ನಮಗೆ ಸೇಲ್ ಮಾಡುತ್ತಾರೆ. ಹಿಂದು-ಮುಸ್ಲಿಂ ಬಾಂಧವ್ಯ ಚೆನ್ನಾಗಿಯೇ ಇದೆ. ಪರಸ್ಪರ ಅವಲಂಬನೆಯಿಲ್ಲದೆ ಇಲ್ಲಿ ಉದ್ಯಮ ನಡೆಸಲು ಸಾಧ್ಯವಿಲ್ಲ. ಆದರೆ, ರಾಜಕೀಯ ಲಾಭ ಪಡೆಯುವವರು ಭಯ-ಭೀತಿ ಹುಟ್ಟಿಸುತ್ತಲೇ ಇರುತ್ತಾರೆ. ನಮ್ಮ ಧರ್ಮದ ಅಸಾದುದ್ದೀನ್ ಓವೈಸಿ ಕೂಡ ಅದನ್ನೇ ಮಾಡುವುದು ಎಂದರು ಗೋಧ್ರಾದ ಯುವಕ ಸಯ್ಯದ್ ಭಾಯ್ ಜಮಾಲ್. ಇದಕ್ಕೆ ಪೂರಕ ಅಭಿಪ್ರಾಯ ನೀಡಿದ ಬಿಜೆಪಿ ಬೆಂಬಲಿಗ ರಣದೀಪ್ ಪಟೇಲ್, ‘ಕೋವಿಡ್ ಸಂದರ್ಭದಲ್ಲಿ ಹಿಂದು-ಮುಸ್ಲಿಂ-ಕ್ರಿಶ್ಚಿಯನ್ ಎನ್ನದೆ ನಾವು ಜನರಿಗೆ ನೆರವಾಗಿದ್ದೆವು. ಆರ್​ಎಸ್​ಎಸ್ ಮೂಲಕ ಕಷ್ಟಗಳಿಗೆ ಸ್ಪಂದಿಸಿದ್ದೇವೆ. ಅನ್ಯಧರ್ವಿುಯರ ಅಂತ್ಯಸಂಸ್ಕಾರವನ್ನೂ ಮಾಡಿದ್ದೆವು. ಹೀಗಿರುವಾಗ ಧರ್ಮ ವಿಭಜನೆ ಮಾತಿಲ್ಲ. ಕೆಲವರು ಕಂದಕ ಸೃಷ್ಟಿಸಲು ಪ್ರಯತ್ನಿಸುತ್ತಿರುತ್ತಾರೆ. ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳಬಾರದು’ ಎಂದರು.
ಬಿಲ್ಕಿಸ್ ಬಾನೋ ಅತ್ಯಾಚಾರ, ಕುಟುಂಬಸ್ಥರ ಕೊಲೆ ಪ್ರಕರಣದ ಅಪರಾಧಿಗಳು ಜೈಲಿನಲ್ಲಿ ಉತ್ತಮ ಸಂಸ್ಕಾರ ತೋರಿದ್ದಾರೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಶಾಸಕ, ಅಭ್ಯರ್ಥಿ ರಾವುಲ್​ಜೀ ನಿಜಬಣ್ಣ ಬಯಲಾಗಿದೆ.
|ದುಶ್ಯಂತಸಿಂಗ್ ಚೌಹಾಣ್ಗೋಧ್ರಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ
ಐಸಿಯುನಲ್ಲಿ ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಆಗ್ತಿತ್ತು ಅಂತ ಆಫ್ ಮಾಡಿದ ವೃದ್ಧೆ; ಸಾವಿಗೀಡಾದ ರೋಗಿ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + 3 =
Remember me
