|ಸಹನಾ ಹೆಗಡೆ
ಕೊಡಗು ಜಿಲ್ಲೆ ಎಂದಾಕ್ಷಣ ಸಾಮಾನ್ಯವಾಗಿ ನೆನಪಾಗುವುದು ಅಲ್ಲಿನ ಪ್ರಾಕೃತಿಕ ಸೌಂದರ್ಯ. ಜನರ ಜೀವನಾಡಿಯಾಗಿರುವ ತಾಯಿ ಕಾವೇರಿ. ಇಂತಹ ಸುಂದರ ನಿಸರ್ಗದ ಮಡಿಲನಲ್ಲೂ ಹವಾಮಾನದ ವೈಪರೀತ್ಯ ಹೆಚ್ಚಾಗುತ್ತಿದೆ. ಬಿಸಿಲ ಧಗೆ ಹೆಚ್ಚುತ್ತಿದೆ. ಅತಿವೃಷ್ಟಿ- ಅನಾವೃಷ್ಟಿ, ಅಕಾಲಿಕ ಮಳೆ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಗಿಡ-ಮರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ಈ ಪರಿಸ್ಥಿತಿ ಬಗ್ಗೆ ಯೋಚಿಸಿದರೆ ಮಾತ್ರ ಸಾಲದು; ಯಥೇಚ್ಛ ಗಿಡಗಳನ್ನು ನೆಡುವುದರ ಮೂಲಕ ಮಾತೆ ಪ್ರಕೃತಿಯನ್ನು ಪೋಷಿಸಬೇಕೆಂದು ಪಣ ತೊಟ್ಟ ರಾಜಸ್ಥಾನ ಮೂಲದ ಚಿನ್ನದ ವ್ಯಾಪಾರಿ ರಾಜೇಂದ್ರ ಸಿಂಗ್ ಅವರು ಕೊಡಗು ಜಿಲ್ಲೆಯ ವಿರಾಜಪೇಟೆ, ಮಡಿಕೇರಿ, ಸಿದ್ದಾಪುರದ ಸುತ್ತಮುತ್ತ ಒಂದು ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದಾರೆ.
ಬಾಲ್ಯದಿಂದಲೂ ಪರಿಸರದ ಬಗ್ಗೆ ವಿಶೇಷ ಕಾಳಜಿ ಇರುವ ರಾಜೇಂದ್ರ ಸಿಂಗ್ 9ನೇ ತರಗತಿಯ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ‘21ನೇ ಶತಮಾನದ ಪರಿಸರ ಸಂರಕ್ಷಣೆ ಸವಾಲುಗಳು’ ಎಂಬ ವಿಷಯ ಪ್ರಸ್ತುತಪಡಿಸಿದ್ದರು. ಅಲ್ಲಿಂದ ಕೆರಳಿದ ಪರಿಸರ ಆಸಕ್ತಿ ನಿರಂತರವಾಗಿ ಮುಂದುವರಿದಿದೆ. ರಾಜಸ್ತಾನದ ಸ್ವಂತ ಊರಿನಲ್ಲಿಯೂ ಪರಿಸರ ಪೋಷಿಸುವ ಕೆಲಸ ಮಾಡಿದ್ದರು.
‘ತಂದೆ ತಾಯಿ ನನಗೆ ಹೇಳಿಕೊಟ್ಟಿರುವುದೇ ಸಾಧ್ಯವಾದಷ್ಟು ಗಿಡಗಳನ್ನು ನೆಟ್ಟು ಪ್ರಕೃತಿಯನ್ನು ರಕ್ಷಣೆ ಮಾಡಬೇಕು’ ಎನ್ನುವ ಇವರಿಗೆ ಪರಿಸರ ವಿಷಯ ಬಂದರೆ ಆರ್ಥಿಕ ಲಾಭದ ಯಾವುದೇ ಹಂಗಿಲ್ಲ. ಸ್ವಂತ ಖರ್ಚಿನಲ್ಲಿ ಸಸಿಗಳ ವಿತರಣೆಯನ್ನು ಸಹ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಸುತ್ತಮುತ್ತ ಯಾವ ಕಾರ್ಯಕ್ರಮಗಳಾದರೂ ಅಲ್ಲಿ ಉಚಿತವಾಗಿ ಗಿಡಗಳನ್ನು ವಿತರಣೆ ಮಾಡುತ್ತಾರೆ. ಇವರು ಭಾಗವಹಿಸುವ ಪ್ರತಿ ಹುಟ್ಟುಹಬ್ಬ, ಮದುವೆ, ಶುಭ ಸಮಾರಂಭಗಳಲ್ಲಿ ಉಡುಗೊರೆ ಎಂದು ಸಸಿ ಕೊಡುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ. ಜಿಲ್ಲೆಯಲ್ಲಿ ನಡೆಯುವ ಸಾರ್ವಜನಿಕ ಸಮಾರಂಭಗಳಲ್ಲಿ ಹೂಗುಚ್ಛದ ಬದಲಾಗಿ ಸಸಿ ನೀಡಬೇಕೆಂಬ ಅಭಿಯಾನವನ್ನು ಕೂಡ ಇವರು ನಡೆಸುತ್ತಿದ್ದಾರೆ.
ಸರ್ಕಾರಿ ಕಚೇರಿಗಳ ಆವರಣ, ಶಾಲೆಗಳು, ಪೋಸ್ಟ್ ಆಫೀಸ್, ಪೋಲಿಸ್ ಠಾಣೆ… ಹೀಗೆ ಹಲವಾರು ಸಾರ್ವಜನಿಕ ಸ್ಥಳಗಳಲ್ಲಿ ಹೊಂಗೆ, ಅರಳಿ, ಬೇವು, ಆಲ, ನೇರಳೆ ಮೊದಲಾದ ವಿವಿಧ ದೇಸಿ ತಳಿಯ ಮರಗಳನ್ನು ನೆಟ್ಟಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇವರು ನೆಟ್ಟು ಬೆಳೆಸಿದ ಗಿಡಗಳು ಹೂವು ಹಣ್ಣುಗಳಿಂದ ಕಂಗೊಳಿಸುತ್ತಿವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಸಂತಸ ವ್ಯಕ್ತಪಡಿಸುತ್ತಾರೆ. 10,000 ತುಳಸಿ ಗಿಡಗಳನ್ನು ಪ್ರತಿ ಮನೆ ಮನೆಗೂ ಇವರು ಹಂಚಿದ್ದಾರೆ. 15,000 ಕ್ಕೂ ಅಧಿಕ ಉತ್ತಮ ಗುಣಮಟ್ಟದ ಬೀಜಗಳನ್ನು ಸಂಗ್ರಹಿಸಿ ಅರಣ್ಯ ಇಲಾಖೆಗೆ ಕೊಟ್ಟಿದ್ದಾರೆ.
ಪರಿಸರ ಸಂರಕ್ಷಣೆ ಕಾಳಜಿ ಅರಿವು ಮುಂದಿನ ಪೀಳಿಗೆಗೆ ಅತಿ ಅವಶ್ಯ ಎಂದು ಶಾಲೆಗಳಿಗೆ ಹೋಗಿ ಮಕ್ಕಳಲ್ಲಿ ಅರಿವಿನ ಜಾಗೃತಿ ಉಂಟು ಮಾಡುತ್ತಿದ್ದಾರೆ. ಜತೆಜತೆಗೆ ಮರುಬಳಕೆಯ ಪ್ಲಾಸ್ಟಿಕ್ ಕಸಗಳ ನಿರ್ವಹಣೆ, ಜಲ ಸಂರಕ್ಷಣೆ ಬಗ್ಗೆ ತಿಳಿಸಿಕೊಡುತ್ತಿದ್ದಾರೆ.
ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಸ್ವಂತ ಖರ್ಚಿನಲ್ಲಿ 1.5 ಲಕ್ಷ ರೂ. ವೆಚ್ಚದ ಸೋಲಾರ್ ಶುದ್ಧ ನೀರಿನ ಘಟಕ ಸ್ಥಾಪಿಸಿರುವುದಲ್ಲದೆ, ಇದರಲ್ಲಿ ಸೋರುವ ನೀರು ವ್ಯರ್ಥವಾಗದಂತೆ ಅಲ್ಲಿಯೇ ಅರಳಿ, ನಾಗ ಸಂಪಿಗೆ, ಹೂವಿನ ಗಿಡ ಸೇರಿ 6 ಗಿಡಗಳನ್ನು ನೆಟ್ಟು ನೀರುಣಿಸಿದ್ದಾರೆ.
ಇವರು ನಾಟಿ ವೈದ್ಯ ಕೂಡ ಆಗಿದ್ದಾರೆ. ಗಿಡಮೂಲಿಕೆಗಳಿಂದ ಮೂತ್ರಕೋಶ ಸಂಬಂಧದ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ. ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಗಿಡಮರಗಳ ಆರೈಕೆಗೆಂದೇ ಮೀಸಲಿಡುವ ರಾಜೇಂದ್ರ ಸಿಂಗ್, ‘ಪ್ರಕೃತಿ ರಕ್ಷಣೆಗೆ ಕೇವಲ ಒಬ್ಬಿಬ್ಬರು ಕೆಲಸ ಮಾಡಿದರೆ ಸಾಲದು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ಭಾಗವಹಿಸಬೇಕು’ ಎನ್ನುತ್ತಾರೆ.
ನಮ್ಮ ಸನಾತನ ಧರ್ಮ ‘ಮಾತಾ ಭೂಮಿಃ ಪುತ್ರೌ ಅಹಂ ಪೃಥಿವ್ಯಾಃ’ (ಭೂಮಿ ನಮ್ಮ ತಾಯಿ, ನಾನು ಅದರ ಸಂತಾನ) ಎಂದು ಹೇಳಿದೆ. ಭೂತಾಯಿಯ ಮಕ್ಕಳಾಗಿ ನಾವು ಅವಳ ಸಹಜ ಚೆಲುವು ಕುಂದದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ಈ ಪರಿಸರ ಸಂರಕ್ಷಕನ ನಡೆ ಒಂದು ಮಾದರಿಯಾಗಿದೆ.
(ಲೇಖಕಿ ಹವ್ಯಾಸಿ ಪತ್ರಕರ್ತೆ)
ಪ್ಯಾನ್​-ಆಧಾರ್ ಲಿಂಕ್​; ಕಡೇ ದಿನಾಂಕ ಮುಂದೂಡಲಾಗಿದ್ಯಾ?: ನಿಜಕ್ಕೂ ಕೊನೇ ದಿನ ಯಾವುದು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + two =
Remember me
