ನವದೆಹಲಿ:ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವ ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ. ಕೃಷಿ ಕಾನೂನುಗಳ ರದ್ದತಿ ಮಸೂದೆ- 2021 ಜತೆಗೆ 26 ಹೊಸ ಮಸೂದೆಗಳನ್ನು ಕೂಡ ಸಂಪುಟ ಸಭೆ ಒಪ್ಪಿದೆ.
ಕಳೆದ ವಾರ ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ವೇಳೆ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೊಷಿಸಿ, ಪ್ರತಿಭಟನಾನಿರತ ರೈತರನ್ನು ತಮ್ಮ ಮನೆಗಳಿಗೆ ಮರಳುವಂತೆ ಮನವಿ ಮಾಡಿದ್ದರು. ಆದರೆ, ರೈತರು ಮಾತ್ರ ತಮ್ಮ ಎಲ್ಲಾ ಬೇಡಿಕೆಗಳು ಈಡೇರುವ ತನಕ ಪ್ರತಿಭಟನಾ ಸ್ಥಳ ಬಿಟ್ಟು ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪಂಜಾಬ್ ಮತ್ತು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಈ ಕಾನೂನುಗಳನ್ನು ಹಿಂಪಡೆದುಕೊಳ್ಳುತ್ತಿದೆ. ಸುಮಾರು ಒಂದು ವರ್ಷದಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದು ಚುನಾವಣೆ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಸಮೀಕ್ಷೆಗಳು ಕೂಡ ಹೇಳಿದ್ದವು. ಮೂರು ಕೃಷಿ ಕಾಯ್ದೆ ವಾಪಸಾತಿ ಮಸೂದೆ ಸೇರಿ ಎಲ್ಲಾ ಹೊಸ ಮಸೂದೆಗಳನ್ನು ನ.29ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದ ಕಾರ್ಯಸೂಚಿಯಲ್ಲಿ ಸರ್ಕಾರ ಪಟ್ಟಿ ಮಾಡಿದೆ.
ಅನ್ನ ಯೋಜನೆ ವಿಸ್ತರಣೆ:ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಮುಂದಿನ ಮಾರ್ಚ್​ವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ಸಮ್ಮತಿಸಿದೆ. ಕರೊನಾ ಹಿನ್ನೆಲೆಯಲ್ಲಿ ಉಂಟಾದ ಆರ್ಥಿಕ ಅಡೆತಡೆಗಳಿಂದಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ವ್ಯಾಪ್ತಿಗೆ ಬರುವ ಎಲ್ಲಾ ಫಲಾನುಭವಿಗಳಿಗೆ ಈ ಯೋಜನೆ ಮೂಲಕ ನೆರವು ನೀಡಲು ಕೇಂದ್ರ ಮುಂದಾಗಿತ್ತು. ಇದರಿಂದಾಗಿ ಕೇಂದ್ರದ ಬೊಕ್ಕಸಕ್ಕೆ ಹೆಚ್ಚುವರಿ 53,344 ಕೋಟಿ ರೂಪಾಯಿ ವೆಚ್ಚ ಬೀಳಲಿದೆ. ಈ ವಿಸ್ತರಣೆ ಸೇರಿ ಯೋಜನೆಯ ಒಟ್ಟು ವೆಚ್ಚ ಸುಮಾರು 2.6 ಲಕ್ಷ ಕೋಟಿಗೆ ತಲುಪಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಇದಕ್ಕೂ ಮುನ್ನ ಆಹಾರದ ಹಕ್ಕು ಅಭಿಯಾನದ ಕಾರ್ಯಕರ್ತರು ಈ ಯೋಜನೆ ವಿಸ್ತರಣೆಗೆ ಒತ್ತಾಯಿಸಿ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಸಚಿವ ಪಿಯೂಷ್ ಗೋಯಲ್​ಗೆ ಪತ್ರ ಬರೆದು ಒತ್ತಾಯಿಸಿದ್ದರು.
| ಪ್ರಲ್ಹಾದ್ ಜೋಶಿಸಂಸದೀಯ ವ್ಯವಹಾರಗಳ ಸಚಿವ
ಎಲ್ಲ ಬೇಡಿಕೆ ಈಡೇರಿಸಬೇಕು:ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳ ವಾಪಸಾತಿ ಮಾತ್ರವಲ್ಲ ಮುಂದಿನ ವರ್ಷದ ಜನವರಿ 26ರ ಒಳಗಾಗಿ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದರೆ ಪ್ರತಿಭಟನಾ ಸ್ಥಳ ಬಿಟ್ಟು ಮನೆಗಳಿಗೆ ವಾಪಸ್ ಹೋಗುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವುದು ಮತ್ತು ರೈತ ಹೋರಾಟದಲ್ಲಿ ಮೃತಪಟ್ಟ ಸುಮಾರು 700 ರೈತರ ಕುಟುಂಬಗಳಿಗೆ ಪರಿಹಾರ ಘೊಷಿಸಬೇಕು ಎಂದಿದ್ದಾರೆ. ಉತ್ತರ ಪ್ರದೇಶದ ಲಖೀಂಪುರ ಖೇರಿ ರೈತ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ವಜಾ ಮತ್ತು ರೈತರ ಮೇಲಿನ ಕೇಸುಗಳ ರದ್ದತಿ, ಪ್ರತಿಭಟನೆ ವೇಳೆ ಮೃತರಾದ ರೈತರಿಗೆ ಸ್ಮಾರಕ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ಪ್ರತಿಭಟನೆ ಕುರಿತಂತೆ ನ.27ಕ್ಕೆ ನಡೆಯುವ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
