ಅನೇಕ ರಾಜಕೀಯ ಪಕ್ಷಗಳು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಗೊಳಿಸಲು ಮುಂದಾಗಿವೆ. ಸಂಬಳ, ತುಟ್ಟಿಭತ್ಯೆ, ಜೀವಿತಾವಧಿ ಹೆಚ್ಚುತ್ತಿರುವ ಕಾರಣಗಳಿಂದಾಗಿ ಒಪಿಎಸ್ ಜಾರಿ ಸರ್ಕಾರಗಳಿಗೆ ಆರ್ಥಿಕವಾಗಿ ಬೃಹತ್ ಹೊರೆಯಾಗಲಿದೆ. ಇನ್ನೊಂದೆಡೆ, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ನೌಕರರ ಸಂಘಟನೆಗಳು ಒಪಿಎಸ್ ಮರುಜಾರಿಗೆ ಆಗ್ರಹಿಸುತ್ತಿವೆ.
ಜಗದೀಶ ಬುರ್ಲಬಡ್ಡಿ
ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್​ಪಿಎಸ್) ರದ್ದುಗೊಳಿಸಲು ಮತ್ತು ಹಳೆಯ ಪಿಂಚಣಿ ಯೋಜನೆಗೆ (ಒಪಿಎಸ್) ವಾಪಸಾಗಲು ಕೆಲ ರಾಜ್ಯಗಳು ಚಿಂತನೆ ನಡೆಸಿವೆ. ಈಚೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದು, ಚುನಾವಣೆ ಪ್ರಣಾಳಿಕೆಯಲ್ಲಿ ಒಪಿಎಸ್ ಮರುಜಾರಿ ಭರವಸೆಯು ಈ ಗೆಲುವಿಗೆ ಮಹತ್ತರ ಕೊಡುಗೆ ನೀಡಿದೆ ಎಂದೇ ವಿಶ್ಲೇಷಿಸಲಾಗಿದೆ.
2003ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಎನ್​ಪಿಎಸ್ ಪರಿಚಯಿಸಿತು. ತದನಂತರ ಅಧಿಕಾರ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿತು. ಆದರೆ, ಒಪಿಎಸ್ ಮರುಜಾರಿ ಭರವಸೆಯನ್ನು ಈಗ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಸುಧಾರಣೆಯ ಆಚೆಈಚೆ: 2003ರಲ್ಲಿ ರಚಿಸಲಾದ ತಜ್ಞರ ಸಮಿತಿಯು ಆಗ ಅಸ್ತಿತ್ವದಲ್ಲಿದ್ದ ಪಿಂಚಣಿ ವ್ಯವಸ್ಥೆ ಮುಂದುವರಿಸುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿತ್ತು. 1980-81 ರಲ್ಲಿ ರಾಜ್ಯಗಳ ಪಿಂಚಣಿ ಪಾವತಿ ಅವುಗಳ ಒಟ್ಟು ಆದಾಯದ ಶೇ. 2.1 ಇತ್ತು. 2001-02 ರ ವೇಳೆಗೆ ಇದು ಶೇ. 11 ಕ್ಕೆ ಏರಿತು. 2020-21ರ ವೇಳೆಗೆ ಶೇ. 20 ತಲುಪುವ ನಿರೀಕ್ಷೆಯಿದೆ ಎಂದು ಸಮಿತಿಯು ಗಮನಸೆಳೆದಿತ್ತು.
ಭಾರತವು ಪಿಂಚಣಿ ಸುಧಾರಣೆ ಪ್ರಾರಂಭಿಸಲು ಇದು ಸೂಕ್ತ ಸಮಯ ಎಂದು 2005ರಲ್ಲಿ ಆಗಿನ ಯುಪಿಎ ಸರ್ಕಾರವು ಹೇಳಿತ್ತು. ಅಂದು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರು ಸರ್ಕಾರಿ ಹಣಕಾಸಿನ ಮೇಲೆ ಪಿಂಚಣಿ ಯೋಜನೆಯ ಪರಿಣಾಮಗಳ ಕುರಿತು ರಾಜ್ಯಗಳಿಗೆ ಮನವರಿಕೆ ಮಾಡಿಕೊಟ್ಟು, ಎನ್​ಪಿಎಸ್​ಗೆ ಸಹಿ ಮಾಡಲು ಉತ್ತೇಜಿಸಿದ್ದರು. ಹೀಗಾಗಿ, 2007ರ ವೇಳೆಗೆ ಕೆಲವು ಹೊರತುಪಡಿಸಿ ಎಲ್ಲಾ ರಾಜ್ಯಗಳು ಎನ್​ಪಿಎಸ್​ಗೆ ಸೇರ್ಪಡೆಯಾಗಿದ್ದವು.
ಹಳೆಯ ವ್ಯವಸ್ಥೆಯತ್ತ ರಾಜ್ಯಗಳ ಚಿತ್ತ: ಆದರೆ, ಕಳೆದ ಕೆಲವು ತಿಂಗಳುಗಳಲ್ಲಿ ಕಾಂಗ್ರೆಸ್ ಅಧಿಕಾರ ಇರುವ ರಾಜಸ್ಥಾನ, ಛತ್ತೀಸ್​ಗಢ ಮತ್ತು ಆಮ್ ಆದಿ ಪಾರ್ಟಿ ಆಡಳಿತವಿರುವ ಪಂಜಾಬ್ ರಾಜ್ಯಗಳು ಒಪಿಎಸ್​ಗೆ ಮರಳಿವೆ. ಜಾರ್ಖಂಡ್ ಕೂಡ ಇದೇ ನಿಟ್ಟಿನಲ್ಲಿ ಹೆಜ್ಜೆ ಹಾಕಲು ಮುಂದಾಗಿದೆ. ರಾಜಸ್ಥಾನವು ಎನ್​ಪಿಎಸ್ ಅಳವಡಿಸಿಕೊಂಡ ಮೊದಲ ಕೆಲವು ರಾಜ್ಯಗಳಲ್ಲಿ ಒಂದಾಗಿತ್ತು. ಆದರೀಗ, ಒಪಿಎಸ್​ಗೆ ಹಿಂತಿರುಗಿದ ಮೊದಲ ರಾಜ್ಯವಾಗಿದೆ.
ಹಣಕಾಸು ಹೊರೆ:ಒಪಿಎಸ್​ಗೆ ವಾಪಸಾಗುವುದು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಕೆಟ್ಟ ನಡೆ ಎಂದೇ ಬಹುತೇಕ ಆರ್ಥಿಕ ತಜ್ಞರ ಅಭಿಮತವಾಗಿದೆ. ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಕೂಡ ಒಪಿಎಸ್ ಕಡೆಗಿನ ನಡೆಯನ್ನು ಟೀಕಿಸಿದ್ದಾರೆ.
ಒಪಿಎಸ್​ನ ಪ್ರಮುಖ ಸಮಸ್ಯೆಯೆಂದರೆ ಪಿಂಚಣಿ ಹೊಣೆಗಾರಿಕೆ ಹೆಚ್ಚುತ್ತಲೇ ಇರುತ್ತದೆ; ಪಾವತಿಸಬೇಕಾದ ಮೊತ್ತ ಗಗನಮುಖಿಯಾಗುತ್ತ ಸಾಗುತ್ತದೆ. ಏಕೆಂದರೆ, ಸಂಬಳ, ತುಟ್ಟಿಭತ್ಯೆ ನಿರಂತರವಾಗಿ ಹೆಚ್ಚುತ್ತಿರುತ್ತವೆ. ಹಿಮಾಚಲ ಪ್ರದೇಶದಲ್ಲಿ ಪಿಂಚಣಿಗೆ ಪಾವತಿಸುವ ಒಟ್ಟಾರೆ ಮೊತ್ತವು ಅದರ ಸ್ವಂತ ತೆರಿಗೆ ಆದಾಯದ 79.93 ಪ್ರತಿಶತಕ್ಕಿಂತಲೂ ಅಧಿಕವಾಗಿದೆ. ಬಿಹಾರಕ್ಕೆ ಇದು ಶೇ. 58.9, ಪಂಜಾಬ್​ಗೆ ಶೇ. 34.24, ರಾಜಸ್ಥಾನಕ್ಕೆ ಶೇ. 30.38 ಮತ್ತು ಛತ್ತೀಸ್​ಗಢಕ್ಕೆ ಶೇ. 24.1 ಇದೆ. ಸಾರ್ವಜನಿಕರ ತೆರಿಗೆ ಹಣದ ಬಹುಪಾಲು ಪಿಂಚಣಿಗಾಗಿಯೇ ವ್ಯಯವಾಗುತ್ತದೆ.
1990-91ರಲ್ಲಿ ಕೇಂದ್ರದ ಪಿಂಚಣಿ ಬಿಲ್ 3,272 ಕೋಟಿ ರೂ. ಆಗಿತ್ತು. ಆಗಿನ ಎಲ್ಲಾ ರಾಜ್ಯಗಳ ಒಟ್ಟು ಪಿಂಚಣಿ ಪಾವತಿ ಮೊತ್ತವು 3,131 ಕೋಟಿ ರೂ. ಇತ್ತು. 2020-21ರ ಹೊತ್ತಿಗೆ ಕೇಂದ್ರದ ಪಿಂಚಣಿ ಬಿಲ್ 58 ಪಟ್ಟು ಹೆಚ್ಚಾಗಿ 1,90,886 ಕೋಟಿ ರೂ.ಗೆ ತಲುಪಿತು. ಇನ್ನು ರಾಜ್ಯಗಳಲ್ಲಿ ಈ ಮೊತ್ತವು 125 ಪಟ್ಟು ಅಧಿಕವಾಗಿ 3,86,001 ರೂ. ಕೋಟಿ ದಾಟಿತು.
ಪಿಂಚಣಿ ಹೊಣೆಗಾರಿಕೆಗೆ ಸಂಬಳ ಮತ್ತು ಬಡ್ಡಿ ಪಾವತಿ ಮುಂತಾದ ಬದ್ಧವೆಚ್ಚಗಳು ಸೇರಿಕೊಂಡರೆ, ರಾಜ್ಯ ಸರ್ಕಾರಗಳಿಗೆ ತಮ್ಮದೇ ಆದ ತೆರಿಗೆ ಹಣದಲ್ಲಿ ಸ್ವಲ್ಪವೇ ಉಳಿಯುತ್ತದೆ. ಇದು ಬಡತನ ನಿಮೂಲನೆ, ಮೂಲಸೌಕರ್ಯ ಹಾಗೂ ಆರೋಗ್ಯ ರಕ್ಷಣೆಯಂತಹ ಇತರ ಪ್ರಮುಖ ವೆಚ್ಚಗಳಲ್ಲಿ ಅಪಾರ ಕಡಿತವನ್ನುಂಟು ಮಾಡುತ್ತದೆ. ಹಳೆಯ ಪಿಂಚಣಿ ಯೋಜನೆಗೆ ಮರಳಿದರೆ ರಾಜ್ಯಗಳಿಗೆ ಹಣಕಾಸಿನ ಕೊರತೆ ತಲೆದೋರಲಿದೆ ಎಂಬುದು ತಜ್ಞರ ಅಭಿಮತವಾಗಿದೆ.
ಸಂಬಳಕ್ಕಿಂತ ಪಿಂಚಣಿಗೆ ಹೆಚ್ಚು ಖರ್ಚು
ಪ್ರಸ್ತುತ ಕೇಂದ್ರ ಸರ್ಕಾರದ ನೌಕರರ ಸಂಖ್ಯೆ 34.7 ಲಕ್ಷ ಇದ್ದರೆ, ಕೇಂದ್ರದಿಂದ ಪಿಂಚಣಿ ಪಡೆಯುವವರ ಸಂಖ್ಯೆ 48 ಲಕ್ಷ ಇದೆ. 2022-23ನೇ ಹಣಕಾಸು ವರ್ಷದಲ್ಲಿ ನೌಕರರಿಗೆ ನೀಡುವ ಸಂಬಳದ ಮೊತ್ತವು 2.68 ಲಕ್ಷ ಕೋಟಿ ರೂ. ಹಾಗೂ ಪಿಂಚಣಿದಾರರಿಗೆ ನೀಡುವ ಹಣವು 2.07 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದರೆ, ಐದು ವರ್ಷಗಳ ನಂತರ ಇದು ತಿರುವುಮುರುವಾಗಲಿದ್ದು, ಸಂಬಳಕ್ಕಿಂತ ಹೆಚ್ಚಿನ ಮೊತ್ತವನ್ನು ಪಿಂಚಣಿ ನೀಡಲು ಪಾವತಿಸಬೇಕಾದ ಪರಿಸ್ಥಿತಿ ತಲೆದೋರಲಿದೆ. ಇನ್ನು ರಕ್ಷಣಾ ಪಡೆಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ಒಟ್ಟು ರಕ್ಷಣಾ ಬಜೆಟ್​ನ ಶೇ. 22ರಷ್ಟು ಹಣವು ಪಿಂಚಣಿ ನೀಡಲು ವ್ಯಯವಾಗುತ್ತದೆ. ನಿವೃತ್ತ ಯೋಧರ ಸಂಖ್ಯೆ ಪ್ರಸ್ತುತ 5.25 ಲಕ್ಷ ಇದ್ದು, ಈ ಸಂಖ್ಯೆ ಪ್ರತಿವರ್ಷ 55 ಸಾವಿರ ಏರಿಕೆಯಾಗುತ್ತದೆ.
ಎನ್​ಪಿಎಸ್ ನಿರ್ವಹಣೆ ಹೇಗೆ?
ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು 2004ರ ಏಪ್ರಿಲ್ 1 ರಿಂದ ಜಾರಿಗೆ ತರಲಾಯಿತು. ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುವವರನ್ನು ಹೊರತುಪಡಿಸಿ ಸಾರ್ವಜನಿಕ, ಖಾಸಗಿ ಮತ್ತು ಅಸಂಘಟಿತ ವಲಯದ ಎಲ್ಲಾ ಉದ್ಯೋಗಿಗಳಿಗೆ ಈ ಯೋಜನೆ ಮುಕ್ತವಾಗಿದೆ. ಎನ್​ಪಿಎಸ್ ಯೋಜನೆಯಲ್ಲಿ, ಚಂದಾದಾರರು ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 6,000 ರೂಪಾಯಿ ಪಾವತಿಸಬೇಕಾಗುತ್ತದೆ. ಚಂದಾದಾರರ ವಂತಿಗೆ ಹಣವನ್ನು ಸಾಲ ಮತ್ತು ಷೇರು ಮಾರುಕಟ್ಟೆಯ ಸಂಯೋಜಿತ ಸಾಧನಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್​ಆರ್​ಡಿಎ) ಈ ಹಣವನ್ನು ನಿಯಂತ್ರಿಸುತ್ತದೆ. ಎನ್​ಪಿಎಸ್​ನ ಪ್ರಸ್ತುತ ಬಡ್ಡಿ ದರವು ವಂತಿಗೆಯ ಮೇಲೆ ಶೇ. 9 ರಿಂದ ಶೇ. 12ರಷ್ಟು ಇದೆ. 18ರಿಂದ 60 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಎನ್​ಪಿಎಸ್ ಖಾತೆ ತೆರೆಯಬಹುದು. ಈ ಯೋಜನೆಯು 60 ವರ್ಷ ವಯಸ್ಸಿನಲ್ಲಿ ಪಕ್ವವಾಗುತ್ತದೆ ಮತ್ತು 70 ವರ್ಷಗಳವರೆಗೆ ವಿಸ್ತರಿಸಬಹುದು. ಎನ್​ಪಿಎಸ್ ಚಂದಾದಾರರಿಗೆ ಮನೆ ಖರೀದಿಸಲು, ಮಗುವಿನ ಶಿಕ್ಷಣಕ್ಕಾಗಿ ಅಥವಾ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ, ಖಾತೆ ತೆರೆದ 3 ವರ್ಷಗಳ ನಂತರ ಸಂಪೂರ್ಣ ವಂತಿಗೆಯ ಶೇ. 25ರ ವರೆಗೆ ಹಣ ಹಿಂಪಡೆಯಲು ಅವಕಾಶವಿರುತ್ತದೆ. ನಿವೃತ್ತಿಯ ನಂತರ ಸಂಗ್ರಹವಾದ ಸಂಪೂರ್ಣ ಹಣವನ್ನು ಖಾತೆಯಿಂದ ಹಿಂಪಡೆಯಲು ಅವಕಾಶ ಇರುವುದಿಲ್ಲ. ಈ ಯೋಜನೆಯಲ್ಲಿ, ಪಿಎಫ್​ಆರ್​ಡಿಎ ನೋಂದಾಯಿತ ವಿಮಾ ಸಂಸ್ಥೆಯಿಂದ ನಿಯಮಿತ ವರ್ಷಾಶನವನ್ನು (ವಾರ್ಷಿಕ ಪಿಂಚಣಿ) ಪಡೆಯಲು ಒಟ್ಟು ಸಂಗ್ರಹಗೊಂಡ ನಿಧಿಯ ಕನಿಷ್ಠ ಶೇ. 40ರಷ್ಟನ್ನು ಖಾತೆಯಲ್ಲಿಯೇ ಮುಂದುವರಿಸುವುದು ಕಡ್ಡಾಯ. ಗರಿಷ್ಠ ಶೇ. 60 ಹಣವನ್ನು ಚಂದಾದಾರರು ಹಿಂತೆಗೆದುಕೊಳ್ಳಲು ಅವಕಾಶವಿದ್ದು, ಇದು ತೆರಿಗೆ ಮುಕ್ತವಾಗಿರುತ್ತದೆ. ಎನ್​ಪಿಎಸ್​ನಲ್ಲಿ ನಿಶ್ಚಿತ ಬಡ್ಡಿ ದರ ಇರುವುದಿಲ್ಲ. ಆದರೆ, ಮಾರುಕಟ್ಟೆ ಸಂಯೋಜಿತ ಷೇರು ಹಾಗೂ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಿರುವುದರಿಂದ ಆದಾಯವು ಫಂಡ್​ಗಳ ಮಾರುಕಟ್ಟೆ ಕಾರ್ಯಕ್ಷಮತೆಯನ್ನು ಆಧರಿಸಿರುತ್ತದೆ.
ರಾಜ್ಯದಲ್ಲಿ 19 ರಿಂದ ಅನಿರ್ದಿಷ್ಟಾವಧಿ ಮುಷ್ಕರ
ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ಒತ್ತಾಯಿಸಿ ಎನ್​ಪಿಎಸ್ ನೌಕರರು ಡಿ. 19 ರಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಸಿದ್ದರಾಗಿದ್ದಾರೆ. ತಾಲೂಕು ಮಟ್ಟದಲ್ಲಿ ಪ್ರತಿಭಟನೆ, ಪಾದಯಾತ್ರೆ ನಡೆಸಿದ್ದ ನೌಕರರು ಅಂತಿಮವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ. ರಾಜ್ಯ ಸರ್ಕಾರದಲ್ಲಿ ಒಟ್ಟಾರೆ 2,54,311 ಎನ್​ಪಿಎಸ್ ನೌಕರರಿದ್ದಾರೆ. ಇವರಲ್ಲಿ 1149 ನೌಕರರು ಮೃತರಾಗಿದ್ದಾರೆ. ಎನ್​ಪಿಎಸ್ ನೌಕರರ ಸಂಘದ ಹೋರಾಟದ ಫಲವಾಗಿ ಕೆಲವೊಂದು ಸೌಲಭ್ಯಗಳನ್ನು ಸರ್ಕಾರ ನೀಡಿದೆ. ಆದರೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಕೊಡುವ ತನಕ ಹೋರಾಟ ನಡೆಸುವುದಾಗಿ ಸಂಘದ ಅಧ್ಯಕ್ಷ ಶಾಂತರಾಮ ಹೇಳುತ್ತಾರೆ. ಎನ್​ಪಿಎಸ್ ರದ್ದತಿ ಭರವಸೆ ನೀಡುವ ಪಕ್ಷಕ್ಕೆ ನೌಕರರು ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಅನೇಕ ನೌಕರರು ಹೇಳುತ್ತಾರೆ. ಅದಕ್ಕೆ ಅವರು ಹಿಮಾಚಲಪ್ರದೇಶದ ಉದಾಹರಣೆ ನೀಡುತ್ತಾರೆ.
ಏಪ್ರಿಲ್ ನಂತರ ಒಪಿಎಸ್ ಹೋರಾಟ
ಮುಂದಿನ ಏಪ್ರಿಲ್ ನಂತರ ಒಪಿಎಸ್ ಹೋರಾಟವನ್ನು ತೀವ್ರಗೊಳಿಸುವು ದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ. ಗುರುವಾರ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ನಗರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರವು ಮುಂದಿನ ಮಾರ್ಚ್​ನೊಳಗೆ ವೇತನ ಆಯೋಗ ವರದಿ ಅನುಷ್ಠಾನ ಮಾಡುವ ಸಾಧ್ಯತೆ ಇದೆ. ಬಳಿಕ ಹೊಸ ಪಿಂಚಣಿ ಯೋಜನೆ ಬದಲು ಹಳೆ ಹಿಂಚಣಿ ಯೋಜನೆಗೆ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು. ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ 3 ಕೋಟಿ ರೂ, ಅನುದಾನ ನೀಡಿದೆ. ಜಿಲ್ಲಾ ಹಂತ ಮತ್ತು ರಾಜ್ಯಮಟ್ಟದಲ್ಲಿ ಗೆಲವು ಸಾಧಿಸುವ ಕ್ರೀಡಾಪಟುಗಳಿಗೆ ಜ.17ರಂದು ‘ಸಂಕ್ರಾಂತಿ ಸಂಭ್ರಮ’ ಕಾರ್ಯಕ್ರಮ ನಡೆಸಿ ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.
ಮುಂದಿನ ಸರ್ಕಾರಗಳಿಗೆ ಚಿಂತೆ
ಒಪಿಎಸ್​ಗೆ ವಾಪಸಾಗುವ ನಿರ್ಧಾರವನ್ನು ಪ್ರಸ್ತುತ ಸರ್ಕಾರಗಳು ಕೈಗೊಂಡರೂ ಬೃಹತ್ ಮೊತ್ತದ ಪಿಂಚಣಿ ಪಾವತಿಸುವ ಹೊರೆ ಮುಂದಿನ ಸರ್ಕಾರಗಳ ಮೇಲೆ ಬೀಳುತ್ತದೆ. ಆರ್ಥಿಕ ತಜ್ಞ ಅರವಿಂದ ಪನಗಾರಿಯಾ ಹೇಳುವಂತೆ, ‘ಒಪಿಎಸ್​ಗೆ ಮರಳಿದರೆ ಅದರ ಮೊದಲ ಹೊಣೆಗಾರಿಕೆ 2034ರಲ್ಲಿ ಬರುತ್ತದೆ. ಆದ್ದರಿಂದ ಪ್ರಸ್ತುತ ಸರ್ಕಾರ ಪಿಂಚಣಿ ಹೊರೆಯಿಂದ ಸುರಕ್ಷಿತವಾಗಿರುತ್ತದೆ. 2034ರಲ್ಲಿ ಅಧಿಕಾರದಲ್ಲಿರುವ ಮತ್ತು ನಂತರ ಬರುವ ಸರ್ಕಾರಗಳ ಮೇಲೆ ಹೊರೆಯನ್ನು ಈಗಲೇ ಹಾಕಿದಂತಾಗುತ್ತದೆ’. ರಾಜ್ಯದ ಸಂಪನ್ಮೂಲಗಳ ವಿತರಣೆಯಲ್ಲಿ ಅಸಮಾನತೆ ಮತ್ತು ಅನ್ಯಾಯಕ್ಕೆ ಒಪಿಎಸ್ ಕಾರಣವಾಗಲಿದೆ. ಏಕೆಂದರೆ ಒಪಿಎಸ್ ಮರುಜಾರಿಯಾದರೆ, ರಾಜ್ಯದ ಆದಾಯದಲ್ಲಿ ಹೆಚ್ಚಿನ ಪಾಲು ಅದಕ್ಕೆ ಹೋಗುತ್ತದೆ ಎಂಬ ಆಕ್ಷೇಪಗಳಿವೆ.
ನೌಕರರಿಗೆ ಒಪಿಎಸ್ ಅನುಕೂಲ
ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ (ಒಪಿಎಸ್), ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಸರ್ಕಾರಿ ನೌಕರರು ಪಿಂಚಣಿಗೆ ಅರ್ಹರಾಗಿರುತ್ತಾರೆ. ಇದಕ್ಕಾಗಿ ನೌಕರರು ವಂತಿಗೆ ನೀಡಬೇಕಾಗಿಲ್ಲ. ನೌಕರರು ನಿವೃತ್ತಿಯ ಕೊನೆಯಲ್ಲಿ ಪಡೆದ ಸಂಬಳದ ಶೇ. 50ರಷ್ಟನ್ನು ಮಾಸಿಕ ಪಿಂಚಣಿಯಾಗಿ ಪಡೆಯುತ್ತಾರೆ. ನಿವೃತ್ತ ನೌಕರರು ಮೃತಪಟ್ಟರೂ ಅವರ ಅವಲಂಬಿತರಿಗೆ ಪಿಂಚಣಿ ಸೌಲಭ್ಯ ಮುಂದುವರಿಯುತ್ತದೆ. ಅಲ್ಲದೆ, ಸಂಬಳದ ರೀತಿ ಪಿಂಚಣಿಯೂ ಏರಿಕೆಯಾಗುತ್ತಲೇ ಹೋಗುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆಯು (ಎನ್​ಪಿಎಸ್) ವಂತಿಗೆ ಯೋಜನೆಯಾಗಿದ್ದು, ಸರ್ಕಾರಿ ನೌಕರರು ಸಂಬಳದ ಶೇ. 10 ವಂತಿಗೆ ನೀಡಬೇಕಾಗುತ್ತದೆ ಮತ್ತು ಸರ್ಕಾರವು ನೌಕರರ ಎನ್​ಪಿಎಸ್ ಖಾತೆಗಳಿಗೆ ಶೇ. 14ರಷ್ಟು ವಂತಿಗೆ ನೀಡುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
