ಏಕಾಂಗಿಯಾಗಿ ಸರಳ ಬಹುಮತ ಪಡೆಯುವಲ್ಲೂ ಎಡವಿ ಆಘಾತ ಅನುಭವಿಸಿದ ಬಿಜೆಪಿಗೆ ಈಗ ಹೊಸ ಸರ್ಕಾರ ರಚನೆಯ ಸವಾಲು ಎದುರಾಗಿದೆ. ಮಿತ್ರಪಕ್ಷಗಳ ಬೆಂಬಲ ಪಡೆದು ಮೈತ್ರಿ ಸರ್ಕಾರವನ್ನು ರಚಿಸಿ, ಮುನ್ನಡೆಸಬೇಕಿದೆ. ಬಿಹಾರದ ನಿತೀಶ್ ಕುಮಾರ್ ಮತ್ತು ಆಂಧ್ರದ ಚಂದ್ರಬಾಬು ನಾಯ್ಡು ಈಗಾಗಲೇ ಹಲವು ಬಾರಿ ಮೈತ್ರಿಕೂಟ ಬಿಟ್ಟು ಹೊರನಡೆದ ಉದಾಹರಣೆ ಇದೆ. ಆದರೆ, ಇವರನ್ನೇ ನಂಬಿಕೊಂಡು ಸರ್ಕಾರ ರಚಿಸುವ ಅನಿವಾರ್ಯತೆಗೆ ಬಿಜೆಪಿ ಸಿಲುಕಿದೆ.
| ರಾಘವ ಶರ್ಮ ನಿಡ್ಲೆ, ನವದೆಹಲಿ
ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬಂದಿದ್ದರೂ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆಯೇ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಸದ್ಯದ ಮಟ್ಟಿಗೆ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ ಮತ್ತು ಬಿಹಾರದ ಜೆಡಿಯು ಪಕ್ಷಗಳು ಎನ್​ಡಿಎ ಜತೆಗಿದ್ದರೂ, ಎದುರಾಳಿ ಇಂಡಿಯಾ ಮೈತ್ರಿಕೂಟದ ವಿವಿಧ ನಾಯಕರು ಈಗಾಗಲೇ ಎನ್​ಡಿಎ ಮಿತ್ರಪಕ್ಷಗಳನ್ನು ಸೆಳೆಯುವ ಯತ್ನ ಮಾಡಿದ್ದಾರೆ. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರೇ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುಗೆ ಕರೆ ಮಾಡಿದ್ದು, ಎನ್​ಡಿಎ ಮೈತ್ರಿಕೂಟದಲ್ಲಿ ಉಳಿದುಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.
ಫಲಿತಾಂಶದ ಹಿಂದಿನ ದಿನವಷ್ಟೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್, ಫಲಿತಾಂಶದ ನಂತರ ಯಾವ ಧೋರಣೆ ಹೊಂದಿದ್ದಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಜೆಡಿಯು ಹಿರಿಯ ಮುಖಂಡ ನಾವು ಎನ್​ಡಿಎ ಜತೆ ಮುಂದುವರಿಯುತ್ತೇವೆ ಎಂದು ಕೆ.ಸಿ. ತ್ಯಾಗಿ ಹೇಳಿದ್ದರೂ, ಈ ವಿಷಯದಲ್ಲಿ ನಿತೀಶ್ ಕುಮಾರ್ ಅಧಿಕೃತ ಹೇಳಿಕೆ ನೀಡಿದರಷ್ಟೇ ಖಚಿತತೆ ಸಿಗಬಲ್ಲದು.

ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಟ್ಟಲೇಬೇಕು ಎಂದು ಪಣತೊಟ್ಟಿದ್ದ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಪಕ್ಷಗಳು, ಚಂದ್ರಬಾಬು ನಾಯ್ಡು ಮತ್ತು ನಿತೀಶ್​ಗೆ ಉಪ ಪ್ರಧಾನಿ ಹುದ್ದೆಗಳ ಆಫರ್ ನೀಡಿರುವ ಜತೆಗೆ ಬಿಹಾರ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನೂ ನೀಡಲಾಗುವುದು ಎಂದು ಭರವಸೆ ನೀಡಿವೆ. ಆಂಧ್ರ ಮತ್ತು ಬಿಹಾರ ಎರಡೂ ರಾಜ್ಯಗಳು ಅನೇಕ ವರ್ಷಗಳಿಂದ ಕೇಂದ್ರದ ವಿಶೇಷ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿವೆ. ಹೀಗಾಗಿ, ಅಕ್ಷರಶಃ ನಿತೀಶ್ ಮತ್ತು ಚಂದ್ರಬಾಬು ಕೈಯಲ್ಲಿ ಮುಂದಿನ ಸರ್ಕಾರ ಕೀಲಿಕೈ ಇದೆ ಎನ್ನುವುದು ಸ್ಪಷ್ಟ. ಆರಂಭದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿದ್ದ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್ ಅವರು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಪ್ರಸ್ತಾವನೆ ಮುಂದಿಟ್ಟ ಬಳಿಕ ಮೈತ್ರಿಕೂಟದಿಂದ ಹೊರ ನಡೆದಿದ್ದರು. ಬಳಿಕ, ಎನ್​ಡಿಎ ಮರು ಸೇರ್ಪಡೆಯಾದ ನಿತೀಶ್, ಪ್ರಧಾನಿ ಜತೆಗಿನ ಕಾರ್ಯಕ್ರಮವೊಂದರಲ್ಲಿ, ಮುಂದೆಂದೂ ನಾವು ಅಲ್ಲೊಮ್ಮೆ-ಇಲ್ಲೊಮ್ಮೆ ಎಂದು ನಿಲುವು ಬದಲಿಸುವುದಿಲ್ಲ. ಸದಾ ನಿಮ್ಮೊಂದಿಗಿರುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ನಿತೀಶ್ ವಿಶ್ವಾಸಾರ್ಹ ವ್ಯಕ್ತಿಯಲ್ಲ ಎನ್ನುವುದು ಬಿಜೆಪಿಗೂ ಗೊತ್ತಿದೆ. ಇಂಡಿಯಾ ಮೈತ್ರಿಕೂಟದಿಂದ ಉಪ ಪ್ರಧಾನಿ ಹುದ್ದೆ ಮತ್ತು ರಾಜ್ಯಕ್ಕೆ ವಿಶೇಷ ಸ್ಥಾನಮಾನದ ಭರವಸೆ ಸಿಕ್ಕಲ್ಲಿ ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯುಗೆ ಅದು ಸಾಕಷ್ಟು ಲಾಭ ತಂದುಕೊಡುವ ಸಾಧ್ಯತೆ ಇದೆ. ಹೀಗಾಗಿ, ನಿತೀಶ್ ಅಂತಿಮ ತೀರ್ಮಾನ ಎನ್​ಡಿಎ ಭವಿಷ್ಯ ನಿರ್ಧರಿಸಬಹುದು.
ಪವನ್ ಕಲ್ಯಾಣ್ ಮಹತ್ವ:ಜನಸೇನಾ ಪಾರ್ಟಿ ಮುಖ್ಯಸ್ಥ ಪವನ್ ಕಲ್ಯಾಣ್ ಕಾರಣದಿಂದಾಗಿ ಆಂಧ್ರಪ್ರದೇಶದಲ್ಲಿ ಬಿಜೆಪಿ-ಟಿಡಿಪಿ ಮರು ಮೈತ್ರಿ ಸಾಧ್ಯವಾಯಿತು. ಮೇಲಾಗಿ, ಕಾಪು (ಪವನ್)-ಕಮ್ಮ (ಚಂದ್ರಬಾಬು) ಸಮುದಾಯಗಳು ಒಂದಾಗಿ ಎದುರಿಸಿದ ಮೊದಲ ಚುನಾವಣೆ ಇದು. ಇಂಥದ್ದೊಂದು ದೊಡ್ಡ ಜನಾದೇಶ ಬರಲು ಈ ಜಾತಿ ಸಮೀಕರಣ, ತಂತ್ರಗಾರಿಕೆಯೂ ಕಾರಣ. ಮೇಲಾಗಿ, ಮೋದಿ-ಪವನ್ ಕಲ್ಯಾಣ್ ಆಪ್ತ ಒಡನಾಟವಿದ್ದು, ಪವನ್ ಕಲ್ಯಾಣ್ ಯಾವುದೇ ಕಾರಣಕ್ಕೂ ಟಿಡಿಪಿ ಪಕ್ಷ ಇಂಡಿಯಾ ಮೈತ್ರಿಕೂಟ ಸೇರುವುದನ್ನು ಒಪ್ಪಲಾರರು ಎಂದು ಮೂಲಗಳು ಹೇಳಿವೆ.

ಎನ್​ಡಿಎ ಕಾಪಾಡಿದ ಆಂಧ್ರ, ಒಡಿಶಾ:ಕಳೆದೆರಡು ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್​ಡಿಎ ಮೈತ್ರಿಕೂಟಕ್ಕೆ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳು ‘ರಾಜಕೀಯ ಜೀವರಕ್ಷಕ’ಗಳಾಗಿದ್ದವು. ಈ ಚುನಾವಣೆಯಲ್ಲಿ ಉತ್ತರ ಪ್ರದೇಶ, ರಾಜಸ್ಥಾನದ ಮತದಾರರು ಬಿಜೆಪಿ ಹೊರತಾದ ಲೆಕ್ಕಾಚಾರ ಹಾಕಿದ್ದಾರೆ. ಆದರೆ, ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳು ಎನ್​ಡಿಎಯನ್ನು ಅಪಾಯದಿಂದ ಪಾರು ಮಾಡಿದ್ದು, ಮೂರನೇ ಬಾರಿಗೆ ಕೇಂದ್ರದಲ್ಲಿ ಗದ್ದುಗೆ ಏರಲು ನೆರವಾಗುತ್ತಿರುವ ಹೊಸ ಜೀವ ರಕ್ಷಕಗಳಾಗಿ ಮಾರ್ಪಟ್ಟಿವೆ. ಒಡಿಶಾದ 21 ಲೋಕಸಭೆ ಸೀಟುಗಳಲ್ಲಿ 19ನ್ನು ಬಿಜೆಪಿ ಗೆದ್ದುಕೊಂಡಿದೆ. 2014ರಲ್ಲಿ 1, 2019ರಲ್ಲಿ 8 ಸೀಟುಗಳನ್ನು ಬಿಜೆಪಿ ಒಡಿಶಾದಲ್ಲಿ ಗೆದ್ದಿತ್ತು.
ನಾಯಕತ್ವ ಯಾರಿಗೆ?:ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ನಾಯಕತ್ವದ ವಿಷಯದಲ್ಲಿ ನರೇಂದ್ರ ಮೋದಿಯವರಿಗೆ ಬೇರೆ ಯಾವ ನಾಯಕರೂ ಸಾಟಿ ಇಲ್ಲ. ಆದರೆ, ಪಕ್ಷ, ಸರ್ಕಾರ ಮತ್ತು ಆಡಳಿತ ಶೈಲಿಯಲ್ಲಿ ಒಂದಿಷ್ಟು ಬದಲಾವಣೆಯಾಗಬೇಕು ಎಂಬ ಎಚ್ಚರಿಕೆ ನೀಡುವ ಸಂದೇಶವನ್ನು ಮತದಾರರು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಿದ್ದರೂ, ಕೇಂದ್ರದಲ್ಲಿ ಮೋದಿ ಪ್ರಧಾನಿಯಾಗಿರುತ್ತಾರೋ ಅಥವಾ ಚಂದ್ರಬಾಬು ಮತ್ತು ನಿತೀಶ್ ಸೂಚಿಸುವ ವ್ಯಕ್ತಿ ಪ್ರಧಾನಿಯಾಗುತ್ತಾರಾ ಎಂಬ ಚರ್ಚೆಗಳೂ ನಡೆಯುತ್ತಿವೆ.
ಇಂದು ಸಭೆ :ಎನ್​ಡಿಎ ಮಿತ್ರಪಕ್ಷಗಳ ಎಲ್ಲಾ ನಾಯಕರಿಗೆ ಖುದ್ದಾಗಿ ಕರೆ ಮಾಡಿರುವ ಗೃಹ ಸಚಿವ ಅಮಿತ್ ಶಾ, ಬುಧವಾರ ದೆಹಲಿಯಲ್ಲಿ ಸಭೆ ಆಯೋಜಿಸಿದ್ದಾರೆ. ಪ್ರಧಾನಿ ಮೋದಿ ಸೇರಿ ಬಿಜೆಪಿಯ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದು, ಸರ್ಕಾರ ರಚನೆಗೆ ಕೈಜೋಡಿಸುವಂತೆ ಮನವಿ ಮಾಡಲಿದ್ದಾರೆ.
ರಾಮಮಂದಿರ ನಿರ್ಮಾಣ ಪರಿಣಾಮ?:ಉತ್ತರ ಪ್ರದೇಶದಲ್ಲಿ ಮಂದಿರ ನಿರ್ವಣವೇ ಪರಮೋಚ್ಛ ವಿಚಾರವಾಗಿದ್ದರೆ ಬಿಜೆಪಿ ಸೀಟು ಗಳ ಸಂಖ್ಯೆ 60 ದಾಟಬೇಕಿತ್ತು. ಆದರೆ, ಬಿಜೆಪಿ ಸೀಟುಗಳ ಸಂಖ್ಯೆ ಇಂಡಿಯಾ ಮೈತ್ರಿಕೂಟ ಕ್ಕಿಂತಲೂ ಕಡಿಮೆಯಿದ್ದು, ಜನ ನಿರುದ್ಯೋಗ, ಹಣದುಬ್ಬರ ಹಾಗೂ ಸಮಾಜವಾದಿ ಪಕ್ಷ ನೀಡಿರುವ ಭರವಸೆಗಳ ಮೇಲೆ ನಂಬಿಕೆ ವ್ಯಕ್ತಪಡಿಸಿದಂತಿದೆ. ಮಂದಿರ ನಿರ್ಮಾಣ ಖುಷಿ ಕೊಟ್ಟಿದ್ದರೂ, ನಮ್ಮ ಬದುಕಲ್ಲಿ ಏನು ಬದಲಾವಣೆ ಆಯ್ತು ಎಂದು ಪ್ರಶ್ನಿಸಿದ ಮಂದಿ ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಿದಂತಿದೆ.

ಸತತ ಮೂರನೇ ಬಾರಿಗೆ ಎನ್​​ಡಿಎ ಸರ್ಕಾರ ರಚಿಸಲಿದೆ: ಗೆಲುವು ಕೊಟ್ಟ ದೇಶವಾಸಿಗಳಿಗೆ ಮೋದಿ ಧನ್ಯವಾದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 7 =
Remember me
