|ರಾಘವ ಶರ್ಮ ನಿಡ್ಲೆಜೋಶಿಮಠ (ಚಮೋಲಿ)
ಉತ್ತರಾಖಂಡದ ಚಮೋಲಿ ಜಿಲ್ಲೆಯ ನಂದಾದೇವಿ ಹಿಮಪರ್ವತದ ರೌದ್ರಾವತಾರದಿಂದಾಗಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋದ 200ಕ್ಕೂ ಹೆಚ್ಚು ಮಂದಿಯ ಕುಟುಂಬಸ್ಥರ ಕಣ್ಣೀರು ಒಂದೆಡೆಯಾದರೆ, ಹಿಮಪ್ರವಾಹದ ಹೊಡೆತಕ್ಕೆ ಸೇತುವೆ ನಾಮಾವಶೇಷಗೊಂಡು ಹೊರಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿರುವ 14 ಹಳ್ಳಿಗರ ಸಂಕಷ್ಟ ಮತ್ತೊಂದೆಡೆ.. ಜೋಶಿಮಠದಿಂದ ಸುಮಾರು 20 ಕಿಮೀ ದೂರದಲ್ಲಿರುವ ತಪೋವನ ಮತ್ತು ರೇಣಿ ಹಳ್ಳಿ ಯಲ್ಲಿ ಕಂಡುಬಂದ ದೃಶ್ಯಗಳು ಹೃದಯ ವಿದ್ರಾವಕ.
ನಂದಾದೇವಿ ಪರ್ವತದ ಹಿಮಗಲ್ಲು ಋಷಿಗಂಗಾ, ಧೌಲಿಗಂಗಾ ನದಿಯಲ್ಲಿ ಸೃಷ್ಟಿಸಿದ ಅವಾಂತರ ಕಲ್ಪನೆಗೂ ಮೀರಿದೆ. ಪ್ರಕೃತಿ ಮುಂದೆ ಮಾನವ ತೃಣಕ್ಕೆ ಸಮ ಎಂಬುದನ್ನು ದೃಶ್ಯಗಳೇ ಸಾರುತ್ತಿವೆ. ತಪೋವನದಲ್ಲಿ ಕೇಂದ್ರ ಸರ್ಕಾರದ ಎನ್​ಟಿಪಿಸಿ ಸಂಸ್ಥೆ ವಿದ್ಯುತ್ ಘಟಕದ ಬಳಕೆಗಾಗಿ ನಿರ್ವಿುಸಿದ್ದ ಸುರಂಗ ಮಾರ್ಗ ಕೆಸರು ಮಯವಾಗಿದೆ. ಕಾರ್ವಿುಕರು ಸೇರಿ ಒಟ್ಟು 39 ಮಂದಿಯನ್ನು ರಕ್ಷಿಸಲಾಗಿದೆ. ಸೋಮವಾರ ಸಂಜೆ ಮೂರ್ನಾಲ್ಕು ಶವ ಪತ್ತೆಯಾಗಿವೆ. ಇನ್ನುಳಿದವರ ಪತ್ತೆಕಾರ್ಯ ಭರದಿಂದ ಸಾಗಿದೆ. ರೇಣಿ ಹಳ್ಳಿಯ ಋಷಿಗಂಗಾ ನದಿ ಕಣಿವೆಯಲ್ಲಿ ನಿರ್ವಣವಾಗಿದ್ದ ಜಲವಿದ್ಯುತ್ ಯೋಜನೆ ಸ್ಥಳ ಸಂಪೂರ್ಣ ಕೊಚ್ಚಿ ಹೋಗಿದ್ದು, ಅಲ್ಲಿದ್ದ 130 ಮಂದಿ ಇನ್ನೂ ಪತ್ತೆಯಾಗಿಲ್ಲ. ಕೆಸರು ಬೆಟ್ಟದಾಕಾರದಲ್ಲಿ ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗುತ್ತಿದೆ.
ರೇಣಿ ಎಂಬುದು ಎರಡು ಬೆಟ್ಟಸಾಲುಗಳ ಮಧ್ಯೆ ಇರುವ ಹಳ್ಳಿ. ಈ ಎರಡೂ ಬೆಟ್ಟಗಳನ್ನು ಸೇತುವೆ ಮೂಲಕ ಸಂರ್ಪಸಲಾಗಿದೆ. ಆದರೆ, ನೀರ್ಗಲ್ಲಿನ ಹೊಡೆತಕ್ಕೆ ಈ ಸೇತುವೆಯೇ ಕೊಚ್ಚಿ ಹೋಗಿರುವುದರಿಂದ ದುರಂತದ ಬಳಿಕ ರೇಣಿಯ ಒಂದು ಬದಿಯಲ್ಲಿ ವಾಸಿಸುತ್ತಿರುವ ಜನರನ್ನು ಸಂರ್ಪಸಲು ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲು ಕನಿಷ್ಠ 20-25 ದಿನ ಬೇಕಾಗಬಹುದು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ್ಗಟಿಬಿಪಿ ಸಿಬ್ಬಂದಿ ವಿಜಯವಾಣಿಗೆ ತಿಳಿಸಿದ್ದಾರೆ. ಬೆಟ್ಟಸಾಲುಗಳಲ್ಲಿ ರಸ್ತೆ ನಿರ್ಮಾಣ ಮಾಡುವ ಬಾರ್ಡರ್ ರೋಡ್ ಆರ್ಗನೈಸೇಷನ್ ಬಳಿ ಅತ್ಯುನ್ನತ ವಾದ ತಂತ್ರಜ್ಞಾನದ ಉಪಕರಣಗಳಿರುವುದರಿಂದ ಶೀಘ್ರದಲ್ಲೇ ತಾತ್ಕಾಲಿಕ ಸೇತುವೆ ಕೂಡ ನಿರ್ವಣವಾಗುವ ಭರವಸೆಯಿದೆ.
‘ಹಿಮಶಿಖರದ ನೀರ್ಗಲ್ಲುಗಳು ಪ್ರಪಾತಕ್ಕೆ ಅಪ್ಪಳಿಸಿದಾಗ ನಾನು ರೇಣಿಯ ಇನ್ನೊಂದು ಬದಿಯ ಬೆಟ್ಟದಲ್ಲಿದ್ದೆ. ನನ್ನ ತಂದೆ ಮೇಲ್ಭಾಗದ ಬೆಟ್ಟದಲ್ಲಿದ್ದಾರೆ. ದೂರವಾಣಿ ಮೂಲಕ ಸಂರ್ಪಸಿದೆ. ಆದರೆ, ಇನ್ನೂ ಹಲವು ದಿನ ನಾನು ಅವರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲವೇನೋ. ಅಪ್ಪ-ಅಮ್ಮ ಇಬ್ಬರೇ ಮನೆಯಲ್ಲಿದ್ದಾರೆ’ ಎಂದು ರೇಣಿಯ ಯುವಕ ಸೋಹನ್ ಸಿಂಗ್ ವಿಜಯವಾಣಿ ಜತೆ ಮಾತನಾಡುತ್ತ ಕಣ್ಣೀರಿಟ್ಟ. ಕುರಿ ಮೇಯಿಸಲು ಹಳ್ಳಿಯ ಕೆಳಭಾಗಕ್ಕೆ ಬಂದಿದ್ದಾಗ ನೀರ್ಗಲ್ಲು ಅಪ್ಪಳಿಸಿದ್ದರಿಂದ ಈತನ ಸೋದರ ಕುರಿಗಳೊಂದಿಗೆ ಕೊಚ್ಚಿ ಹೋಗಿದ್ದಾನೆ. ಸೋಹನ್​ನಂತೆಯೇ ಯುವಕರಾದ ವಿಪಿನ್ ರಾವತ್, ಲಕ್ಷ್ಮಣ್ ಮಥೋಲಿಯಾ, ಲಕ್ಷ್ಮಣ್ ಸಿಂಗ್ ರಾಣಾ ಕೂಡ ತಮ್ಮವರೊಂದಿಗೆ ಸಂಪರ್ಕವಿಲ್ಲದೆ ಬೆಟ್ಟದಲ್ಲಿರುವ ತಮ್ಮ ಮನೆಗಳನ್ನು ನೋಡುತ್ತಾ ಕುಳಿತಿದ್ದಾರೆ. ಇಲ್ಲಿ ಸೇತುವೆ ನಿರ್ವಣವಾಗದೆ ಹಳ್ಳಿಗೆ ಹೋಗಲು ಸಾಧ್ಯವಿಲ್ಲ.
|ರಾಘವ ಶರ್ಮನವದೆಹಲಿ
ಧೌಲಿ ಗಂಗಾ ನದಿಗೆ ಅಡ್ಡಲಾಗಿ ತಪೋವನದಲ್ಲಿ ಕಟ್ಟಲಾಗಿರುವ ಎನ್​ಟಿಪಿಸಿ ಬ್ಯಾರೇಜ್​ನ್ನೇ ಮೀರಿ ಕೆಸರು ನೀರು ಅಬ್ಬರದಿಂದ ಮುನ್ನುಗ್ಗುತ್ತಿದ್ದ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಆದರೆ, ಈ ಬ್ಯಾರೇಜ್, ಮುನ್ನುಗ್ಗುತ್ತಿದ್ದ ನೀರಿನ ವೇಗವನ್ನು ಕಡಿಮೆ ಮಾಡಿತು ಮತ್ತು ದೊಡ್ಡ ದೊಡ್ಡ ಕಲ್ಲುಗಳು ಬ್ಯಾರೇಜ್ ನಿಂದಾಗಿ ಮುಂದಕ್ಕೆ ಹೋಗಲಿಲ್ಲ. ಇಲ್ಲದಿದ್ದಲ್ಲಿ ಪ್ರವಾಹದ ತೀವ್ರತೆ ಹೆಚ್ಚಾಗಿ 160 ಕಿಮೀ ದೂರದಲ್ಲಿರುವ ರುದ್ರಪ್ರಯಾಗ, ಶ್ರೀನಗರದಲ್ಲೂ ಭಾರೀ ಹಾನಿ ಮಾಡುತ್ತಿತ್ತು. ನದಿ ಕಣಿವೆಯಲ್ಲಿದ್ದ ಹಳ್ಳಿಗಳೆಲ್ಲಾ ಕೊಚ್ಚಿ ಹೋಗುತ್ತಿದ್ದವು ಎಂದು ತಪೋವನದಲ್ಲಿ ಸಿಕ್ಕ ಎನ್​ಟಿಪಿಸಿ ಕಂಪನಿಯ ಅಧಿಕಾರಿಯೊಬ್ಬರು ಹೇಳಿದರು. ಬ್ಯಾರೇಜ್​ನಲ್ಲಿ ಸಂಗ್ರಹಗೊಂಡ ನೀರನ್ನು ತಪೋವನ ವಿಷ್ಣುಗಢ ಜಲವಿದ್ಯುತ್ ಯೋಜನೆಗೆ ಸುರಂಗ ಮೂಲಕ ಸರಬರಾಜು ಮಾಡುವ ಕೆಲಸ ಜಾರಿಯಲ್ಲಿತ್ತು. ಆದರೆ, ಬ್ಯಾರೇಜ್ ಮತ್ತು ಸುರಂಗ ಎರಡೂ ವಿಪರೀತವಾಗಿ ಹಾನಿಗೊಂಡಿದೆ. ಪುನರುಜ್ಜೀವನ ಕಾರ್ಯಕ್ಕೆ ಮತ್ತೆಷ್ಟು ತಿಂಗಳು ಬೇಕೆಂಬುದು ಸಿಬ್ಬಂದಿಗೂ ಗೊತ್ತಾಗುತ್ತಿಲ್ಲ.
ಎನ್​ಟಿಪಿಸಿ ಸುರಂಗದಲ್ಲಿ ದೈತ್ಯಾಕಾರದಲ್ಲಿ ಕೆಸರು ಸೇರಿಕೊಂಡಿರುವುದೇ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿ ಕಾಡಿದೆ. ಒಟ್ಟು 39 ಮಂದಿ ಈ ಸುರಂಗದೊಳಗಿದ್ದು, ಬದುಕುಳಿದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಭಾನುವಾರವೂ ಕೆಲಸವಿದ್ದ ಕಾರಣ ಇಲ್ಲಿ ಕಾರ್ವಿುಕರು ಸೇರಿದ್ದರು. ಸುರಂಗದೊಳಗೆ ಮೊಬೈಲ್ ನೆಟ್ವರ್ಕ್ ಸಿಗದು. ಇಂಟರ್ ಕಾಮ್ ಮೂಲಕ ಸಂರ್ಪಸಬಹುದಾಗಿದೆ. ಕಾರ್ವಿುಕರನ್ನು ಸಂರ್ಪಕಿಸಿದ್ದರೂ, ನೀರ್ಗಲ್ಲುಗಳ ಪ್ರವಾಹದಬ್ಬರಕ್ಕೆ ಕಾರ್ವಿುಕರ ಹೊರಬರುವುದು ಅಸಾಧ್ಯವಾಗಿತ್ತು ಎನ್ನುತ್ತಾರೆ ಸ್ಥಳೀಯರು.
ಹೆಲಿಕಾಪ್ಟರ್ ಮೂಲಕ ದಿನಸಿ ಸಂಪರ್ಕ ಕಡಿತಗೊಂಡಿರುವ ಹಳ್ಳಿಗರಿಗೆ ರಕ್ಷಣಾ ಪಡೆಯ ಹೆಲಿಕಾಪ್ಟರ್​ಗಳ ಮೂಲಕ ದಿನಸಿಗಳನ್ನು ಪೂರೈಸುವ ಕೆಲಸ ಆರಂಭ ಗೊಂಡಿದೆ. ತಾತ್ಕಾಲಿಕ ಸೇತುವೆ ನಿರ್ಮಾಣಗೊಳ್ಳುವ ತನಕ ಇದೇ ಪ್ರಕ್ರಿಯೆ ಮೂಲಕ ಆಹಾರ ಉತ್ಪನ್ನಗಳು ಹಳ್ಳಿಗರಿಗೆ ಮಿಲಿಟರಿ ಸಿಬ್ಬಂದಿ ತಲುಪಿಸಲಿದ್ದಾರೆ. ತೀರಾ ಅಗತ್ಯವಿದ್ದಲ್ಲಿ ಹಳ್ಳಿಗರನ್ನು ಹೆಲಿಕಾಪ್ಟರ್ ಮೂಲಕ ಬೇರೆಡೆಗೆ ಶಿಫ್ಟ್ ಮಾಡಲಾಗುವುದು ಎಂದು ಸ್ಥಳದಲ್ಲಿ ಸಿಕ್ಕ ರಕ್ಷಣಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ತಪೋವನ ಸುರಂಗದಲ್ಲಿ ಕೆಲಸ ಮಾಡುತ್ತಿದ್ದಾಗ ದಿಢೀರ್ ನೀರು ಒಳನುಗ್ಗಿದ ಪರಿಣಾಮ ನಾವೆಲ್ಲರೂ ಅಲ್ಲಿ ಸಿಲುಕಿಕೊಂಡೆವು. ಕೊನೆಗೆ ದಾರಿ ಕಾಣದೇ ಇದ್ದಾಗ, ಕಾರ್ವಿುಕರ ಪೈಕಿ ಒಬ್ಬನ ಮೊಬೈಲ್​ನಲ್ಲಿ ನೆಟ್​ವರ್ಕ್ ಇರುವುದು ಕಂಡುಬಂತು. ಕೂಡಲೇ ನಮ್ಮ ಜನರಲ್ ಮ್ಯಾನೇಜರ್​ಗೆ ಫೋನ್ ಮಾಡಿ ಸುರಂಗದೊಳಗೆ ಸಿಲುಕಿರುವುದಾಗಿ ತಿಳಿಸಿದೆವು. ಐಟಿಬಿಪಿಯವರು ನಮ್ಮನ್ನು ರಕ್ಷಿಸಿದರು ಎಂದು ಕಾರ್ವಿುಕ ಲಾಲ್ ಬಹಾದುರ್ ತಿಳಿಸಿದ್ದಾನೆ.
ಭಾರತ-ಚೀನಾ ಗಡಿಗೆ ಲಿಂಕ್:ಋಷಿಗಂಗಾ ಸೇತುವೆ ಮೂಲಕ ರೇಣಿ ಹಳ್ಳಿಯಿಂದ ಸುಮಾರು 50 ಕಿಮೀ ದೂರದಲ್ಲಿ ಭಾರತ-ಚೀನಾ ಗಡಿ ಭಾಗವಿದೆ. ರೇಣಿ ದಾಟಿದ ಬಳಿಕ ಕಾಡು ಹಾದಿಗಳಲ್ಲಿ ಹೋಗಲು ರಸ್ತೆ ಮಾರ್ಗವಿದೆ. ಆದರೆ, ಸೇತುವೆ ಕುಸಿದಿರುವುದರಿಂದ ಸೇನಾ ವಾಹನಗಳ ಸಂಚಾರಕ್ಕೂ ತಾತ್ಕಾಲಿಕ ತಡೆ ಬಿದ್ದಂತಾಗಿದೆ. ಗಡಿಭಾಗವನ್ನು ವಾಹನಗಳ ಮೂಲಕ ಸಂರ್ಪಸುವ ಹೆದ್ದಾರಿ ಮತ್ತು ಸೇತುವೆಯೇ ನಾಶವಾಗಿ ರುವುದರಿಂದ ಹೊಸ ಸೇತುವೆ ನಿರ್ವಣದ ತನಕ ಕಾಯುವುದು ಅನಿವಾರ್ಯವಾಗಿದೆ.
ನೀರ್ಗಲ್ಲು ಕುಸಿಯೋದಕ್ಕೆ ನಿಖರವಾದ ಕಾರಣ ಏನು ಎಂಬುದನ್ನು ಪತ್ತೆ ಹಚ್ಚೋದಕ್ಕೆ ಇಸ್ರೊ, ಡಿಆರ್​ಡಿಒ ನೆರವು ಪಡೆಯಲಾಗುತ್ತಿದೆ. 200ಕ್ಕೂ ಹೆಚ್ಚು ಜನ ಕಣ್ಮರೆಯಾಗಿರುವ ಶಂಕೆ ಇದೆ. ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಹಿಮ ಸ್ಫೋಟ ಆಗಿರೋದಲ್ಲ, ನೀರ್ಗಲ್ಲು ದಿಢೀರ್ ಕುಸಿದ ಕಾರಣ ಅನಾಹುತ ಸಂಭವಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಜೀವಹಾನಿ, ಆರ್ಥಿಕ ನಷ್ಟ ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ನಿರಾಶ್ರಿತರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.
|ತ್ರಿವೇಂದ್ರ ರಾವತ್ಉತ್ತರಾಖಂಡ ಸಿಎಂ
ಸಾಮಾನ್ಯವಾಗಿ ಉತ್ತರಾಖಂಡದಲ್ಲಿ ಅಕ್ಟೋಬರ್ ಅಂತ್ಯಕ್ಕೆ ಮೇಲ್ಭಾಗದ ಹಳ್ಳಿಗರು ಕೆಳ ಭಾಗಕ್ಕೆ ವಲಸೆ ಹೋಗುತ್ತಾರೆ. ಮಾರ್ಚ್, ಏಪ್ರಿಲ್​ನಲ್ಲಿ ವಾಪಸಾಗುತ್ತಾರೆ. ಋಷಿಗಂಗಾ ಸೇತುವೆ ನಾಶದಿಂದಾಗಿ 14 ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ. ಈ 14 ಹಳ್ಳಿಗಳಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ವಾಸಿಸುತ್ತಾರೆ. ಆದರೆ, ಅನೇಕ ಮಂದಿ ಕೆಳಭಾಗಕ್ಕೆ ವಲಸೆ ಹೋಗಿರುವುದರಿಂದ 10-20 ಸಾವಿರ ಮಂದಿ ಈ ಹಳ್ಳಿಗಳಲ್ಲಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಹಾಗೆ ನೋಡಿದರೆ, ಫೆಬ್ರವರಿ ತಿಂಗಳಲ್ಲಿ ದುರಂತ ಸಂಭವಿಸಿದ್ದು ಒಳ್ಳೆಯದೇ ಆಯ್ತು. ಒಂದುವೇಳೆ ವಲಸೆಯಿಂದ ವಾಪಸಾಗಿದ್ದ ವೇಳೆ ದುರ್ಘಟನೆ ಸಂಭವಿಸಿದ್ದರೆ ಪರಿಸ್ಥಿತಿಯೇ ಬೇರೆ ಇರುತ್ತಿತ್ತು.
ರೇಣಿ ಹಳ್ಳಿಯ ಕೆಳಭಾಗದಲ್ಲಿ ಕಾಳಿ ಮಂದಿರ ಮತ್ತು ಶಿವನ ದೇಗುಲಗಳಿದ್ದು, ಅದು ಸ್ಥಳೀಯರ ಧಾರ್ವಿುಕ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಆದರೆ, ನೀರ್ಗಲ್ಲುಗಳ ಹೊಡೆತಕ್ಕೆ ಎರಡೂ ದೇಗುಲಗಳು ಕಣ್ಮರೆಯಾಗಿವೆ. ನೀರಿನಲ್ಲಿ ಎಲ್ಲಿ ಕೊಚ್ಚಿ ಹೋಗಿವೆಯೋ ಗೊತ್ತಿಲ್ಲ. ಪುಣ್ಯವಶಾತ್ ಆ ದೇಗುಲಗಳಲ್ಲಿ ಹಳ್ಳಿಗರು ಯಾರೂ ಇರಲಿಲ್ಲ ಅನಿಸುತ್ತದೆ. ಪ್ರಕೃತಿ ಮಾತೆಯ ರುದ್ರತಾಂಡವದ ಮುಂದೆ ಮಾನವ ನಿರ್ವಿುತ ದೇಗುಲಗಳೂ ಲೆಕ್ಕಕ್ಕಿಲ್ಲ ನೋಡಿ! ಎಂದು ಸ್ಥಳೀಯ ನಿವಾಸಿ ಲಕ್ಷ್ಮಣ್ ರಾಣಾ ಹೇಳುತ್ತಾರೆ.
ದಿಲ್ಲಿಯಿಂದ ಹರಿದ್ವಾರ, ಋಷಿಕೇಶ, ದೇವಪ್ರಯಾಗ, ಶ್ರೀನಗರ, ರುದ್ರಪ್ರಯಾಗ, ನಂದಪ್ರಯಾಗ, ಕರ್ಣಪ್ರಯಾಗ ದಾಟಿ ನಂತರ ಜೋಶಿಮಠ ಸಿಗುತ್ತದೆ. ಜೋಶಿಮಠದಿಂದ ಬದರಿನಾಥ್​ಗೆ 35-40 ಕಿಮೀ ಅಂತರವಿದೆ. ಜೋಶಿಮಠದ ಮತ್ತೊಂದು ಹಾದಿ ಮೂಲಕ 20 ಕಿಮೀ ದೂರ ತೆರಳಿದರೆ ತಪೋವನ ಸಿಗುತ್ತದೆ. ತಪೋವನದಿಂದ 10 ಕಿಮೀ ದೂರದಲ್ಲಿ ರೇಣಿ ಹಳ್ಳಿಯಿದೆ. ಋಷಿಕೇಷದ ಬಳಿಕ ಕಡಿದಾದ ರಸ್ತೆಗಳ ಮೂಲಕ ಈ ಸ್ಥಳಕ್ಕೆ ತಲುಪುವುದು ಅತ್ಯಂತ ಸವಾಲಿನದ್ದು. ಉದ್ದಕ್ಕೂ ರಸ್ತೆ ಕಾಮಗಾರಿಗಳು ನಡೆಯುತ್ತಿರುವುದರಿಂದ ವಾಹನಗಳೂ ನಿಧಾನಗತಿಯಲ್ಲಿ ಸಾಗಬೇಕಿದೆ.
ನಿನ್ನೆ ನಾವು ಮತ್ತೊಂದು ಸುರಂಗದಲ್ಲಿದ್ದ ಎಲ್ಲಾ 12 ಮಂದಿಯನ್ನು ರಕ್ಷಿಸಿದ್ದೇವೆ. ಇಲ್ಲಿರುವ 39 ಮಂದಿಯನ್ನು ಸುರಂಗದಿಂದ ಹೊರ ತೆಗೆಯುವ ಕಾರ್ಯಾಚರಣೆ ನಿನ್ನೆಯಿಂದಲೇ ನಡೆಸುತ್ತಿದ್ದೇವೆ. ಸಾಧ್ಯವಾದಲ್ಲಿ ರಾತ್ರಿಯೂ ಕಾರ್ಯಾಚರಣೆ ಮುಂದುವರಿಯಲಿದೆ. ರೇಣಿ ಹಳ್ಳಿಯ ಋಷಿಗಂಗಾ ನದಿ ಹರಿವ ಸ್ಥಳ ಸಂಪೂರ್ಣ ವಾಷ್ ಔಟ್ ಆಗಿದೆ. ತಪೋವನದಲ್ಲೂ ಸವಾಲಿನ ಪರಿಸ್ಥಿತಿಯಿದೆ. ಒಟ್ಟು 19 ಶವಗಳು ಈವರೆಗೆ ಸಿಕ್ಕಿವೆ.
ಬಹುಶಃ ಇದನ್ನು ಊಹಿಸುವುದು ಕಷ್ಟವಾಗಿತ್ತು. ನಂದಾದೇವಿಯಲ್ಲಿ ಬೃಹತ್ ಗಾತ್ರದ ಹಿಮಶಿಖರವಿದೆ. ಅದರ ಒಂದು ಭಾಗ ತುಂಡಾಗಿದ್ದರಿಂದ ಈ ದುರಂತ ಸಂಭವಿಸಿತು. ಇದರಿಂದಾಗಿ ಋಷಿಗಂಗಾ ಜಲವಿದ್ಯುತ್ ಎನ್​ಟಿಪಿಸಿ ಪ್ರಾಜೆಕ್ಟ್ ಪ್ರದೇಶ, ಹಳ್ಳಿಗಳ ಮೇಲೆ ಭಾರಿ ಹಾನಿಯಾಯ್ತು.
ಅನೇಕ ಹಳ್ಳಿಗಳು ಸಂಪರ್ಕ ಕಡಿದುಕೊಂಡಿವೆ. ಹೆಲಿಕಾಪ್ಟರ್​ನಿಂದ ದಿನಸಿ ಪೂರೈಸಲಾಗುತ್ತಿದೆ. ಶವಗಳು ದುರಂತ ಸಂಭವಿಸಿದ ಸ್ಥಳದಲ್ಲಿ ಸಿಗುತ್ತಿಲ್ಲ. ನೀರು ಹರಿಯುತ್ತಿರುವ ಕೆಳಭಾಗದ ಪ್ರದೇಶಗಳಲ್ಲಿ ಶವಗಳು ಸಿಗಬಹುದು.
ರಾತ್ರಿ ವೇಳೆ ಮುಗಿಸಬೇಕು ಎನ್ನುವುದು ನಮ್ಮ ಉದ್ದೇಶ. ಅದನ್ನೂ ಸ್ಪಷ್ಟವಾಗಿ ಹೇಳಲಾರೆ. ಕೇಂದ್ರ ಸರ್ಕಾರದ ಉನ್ನತಾಧಿಕಾರಿಗಳು, ಸಂಬಂಧಪಟ್ಟ ಸಚಿವರು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ನೇಪಾಳ, ಬಿಹಾರ, ಉತ್ತರಪ್ರದೇಶ, ಉತ್ತರಾಖಂಡ ಹಾಗೂ ದಕ್ಷಿಣ ಭಾರತದವರೂ ಇದ್ದಾರೆ. ನಿನ್ನೆ ರಕ್ಷಿಸಿದ ಅಧಿಕಾರಿಯೊಬ್ಬರು ಆಂಧ್ರಪ್ರದೇಶದ ಶ್ರೀಶೈಲಂ ಮೂಲದವರು.
ಇದು ಮೂರು ಕಿಮೀ ಉದ್ದದ ಸುರಂಗ. 180-200 ಮೀಟರ್ ಅಂತರದಲ್ಲಿ ಕಾರ್ವಿುಕರಿದ್ದರು. ಆದರೆ, 10 ಮೀಟರ್ ಕೆಸರನ್ನು ತೆಗೆಯಲೇ ಸಾಕಷ್ಟು ಸಮಯ ಬೇಕಾಗುತ್ತಿದೆ. ಕಾರ್ವಿುಕರು ಬದುಕಿ ಬರುತ್ತಾರೆ ಎಂಬ ಭರವಸೆ ಇಟ್ಟುಕೊಂಡೇ ಕೆಲಸ ಮಾಡುತ್ತಿದ್ದೇವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
