ತೆರಿಗೆ ಪದ್ಧತಿಯಲ್ಲಿ ಬಹುದೊಡ್ಡ ಸುಧಾರಣೆ ಎಂದು ಬಣ್ಣಿಸಲಾಗಿರುವ ಜಿಎಸ್​ಟಿ ಜಾರಿಯಾಗಿ ಇಂದಿಗೆ ಮೂರು ವರ್ಷ. ಇದರ ಸಾಧನೆಗಳೇನು, ಆಗಬೇಕಾದ ಸುಧಾರಣೆಗಳೇನು ಎಂಬ ಬಗ್ಗೆ ವಿವರಿಸಿರುವ ತಜ್ಞರು, ಸಾಧಕ-ಬಾಧಕಗಳನ್ನು ತೆರೆದಿಟ್ಟಿದ್ದಾರೆ.
| ಸಿ.ಎಸ್.ಸುಧೀರ್
ಜಿಎಸ್​ಟಿ ಜಾರಿಯಾಗಿ ಇಂದಿಗೆ (ಜುಲೈ 1) ಮೂರು ವರ್ಷ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಅನುಷ್ಠಾನ ಒಂದು ದೊಡ್ಡ ಬದಲಾವಣೆಯ ಆರಂಭ ಎನ್ನುವುದು ಗೊತ್ತಿದ್ದರೂ, ಮೊದಲಿಂದಲೂ ಜಿಎಸ್​ಟಿ ಬಹಳಷ್ಟು ಟೀಕೆಗಳಿಗೆ ಗುರಿಯಾಗಿದೆ. ಮೂಗಿನ ನೇರಕ್ಕೆ ನಡೆದಿರುವ ವಿಶ್ಲೇಷಣೆಗಳು ಜಿಎಸ್​ಟಿ ಜಾರಿಯು ಒಂದು ದೊಡ್ಡ ಸಾಂವಿಧಾನಿಕ ಬದಲಾವಣೆ ಅನ್ನೋ ಅಂಶವನ್ನೇ ಮರೆಮಾಚಿದಂತೆ ಭಾಸವಾಗುತ್ತದೆ. ಜಿಎಸ್​ಟಿ ಅನುಷ್ಠಾನದಲ್ಲಿ ಕೆಲ ದೋಷಗಳಿರುವುದನ್ನು ಒಪ್ಪಿಕೊಂಡ ನಂತರವೂ ತೆರಿಗೆ ಸುಧಾರಣೆಯ ನಿಟ್ಟಿನಲ್ಲಿ ಜಿಎಸ್​ಟಿ ಒಂದು ಮೈಲಿಗಲ್ಲು. ಕಳೆದ ಮೂರು ವರ್ಷಗಳಲ್ಲಿ ಜಿಎಸ್​ಟಿ ವಾಸ್ತವದಲ್ಲಿ ಸಾಧಿಸಿದ್ದೇನು? ಎಂಬ ವಿಶ್ಲೇಷಣೆ ಇಲ್ಲಿದೆ.
ರಾಜಕೀಯ ಬದಿಗಿಟ್ಟು ಬೆಳೆಯುತ್ತಿದೆ ಜಿಎಸ್​ಟಿ:ಜಿಎಸ್​ಟಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ‘ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್’ ಎಂದು ವಿಶ್ಲೇಷಣೆ ಮಾಡಿದರು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಜರಿದರು. ಇಬ್ಬರ ಹೇಳಿಕೆಗಳನ್ನೂ ರಾಜಕೀಯ ಪ್ರೇರಿತ ಎಂದಿಟ್ಟುಕೊಳ್ಳೋಣ. ಇದೆಲ್ಲ ಪಕ್ಕಕ್ಕಿಟ್ಟು ನೋಡಿದರೂ ಜಿಎಸ್​ಟಿ, ತೆರಿಗೆ ವಿಚಾರದಲ್ಲಿ ಬಹಳ ದೊಡ್ಡ ಸುಧಾರಣೆ. ಒಂದೊಂದು ರಾಜ್ಯದಲ್ಲಿ ಒಂದೊಂದು ತೆರಿಗೆ ನೀತಿ, ರಾಜ್ಯದ ಗಡಿಗಳಲ್ಲಿ ಚೆಕ್​ಪೋಸ್ಟ್ ಕ್ಲಿಯರೆನ್ಸ್​ಗಾಗಿ ಗಂಟೆಗಟ್ಟಲೆ ಕಾಯುವುದು, ಅವೈಜ್ಞಾನಿಕ ಮತ್ತು ದುಬಾರಿ ಪ್ರವೇಶ ತೆರಿಗೆಗಳು, 17 ಪರೋಕ್ಷ ತೆರಿಗೆಗಳು, ಅಸಮಂಜಸವಾದ ರಾಜ್ಯದ ನೀತಿ ನಿಯಮಗಳು, ಮೇಲ್ತೆರಿಗೆಗಳು, ಹತ್ತಾರು ಅಧಿಕಾರಿಗಳಿಂದ ಕಿರುಕುಳ, ಹೀಗೆ ಸಾಲು ಸಾಲು ಸಮಸ್ಯೆಗಳು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿದ್ದವು. ಸ್ವಾತಂತ್ರ್ಯ ನಂತರದ 70 ವರ್ಷಗಳ ಕಾಲ ತೆರಿಗೆ ವ್ಯವಸ್ಥೆ ಇದೇ ರೀತಿ ಭಯಾನಕವಾಗಿಯೇ ಇತ್ತು. ಜಿಎಸ್​ಟಿ ಈ ಎಲ್ಲ ಸಮಸ್ಯೆಗಳಿಗೂ ಉತ್ತರ ರೂಪದಲ್ಲಿ ಜಾರಿಯಾಯಿತು. ರಾಜ್ಯಗಳ ಭಿನ್ನರಾಗದ ನಡುವೆಯೂ ದೇಶದ ಎಲ್ಲ ಕಡೆ ಒಂದೇ ರೀತಿಯ ತೆರಿಗೆ ವ್ಯವಸ್ಥೆ ಜಾರಿಗೆ ಬಂತು.
ನೀತಿ ನಿರೂಪಣೆಯಲ್ಲಿ ಹೆಚ್ಚಿದ ವಿಶ್ವಾಸ:ನೀತಿ ನಿರೂಪಣೆ ವಿಚಾರದಲ್ಲಿ ಜಿಎಸ್​ಟಿ ಸಮಿತಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿದೆ. ಮಾತುಕತೆ ಮತ್ತು ಸಹಮತದ ಆಧಾರದಲ್ಲಿ ಚರ್ಚೆ, ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸಿದೆ. ರಾಜ್ಯ ಮತ್ತು ಕೇಂದ್ರದ ನಡುವೆ ಬರುವ ತೆರಿಗೆ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಾದಂತಹ ವಾತಾವರಣ ನಿರ್ವಿುಸಿದೆ. ಪೂರ್ವಗ್ರಹ ಪೀಡಿತರಾಗದೆ, ವೈಯಕ್ತಿಕ ಅಜೆಂಡಾಗಳನ್ನು ಬದಿಗಿಡುವುದು, ನೈಜ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಪರಿಹಾರ ಕಂಡುಕೊಳ್ಳುವುದಕ್ಕೆ ಜಿಎಸ್​ಟಿ ಮಂಡಳಿ ಆದ್ಯತೆ ನೀಡಿರುವುದಕ್ಕೆ ಹಲವು ನಿದರ್ಶನಗಳಿವೆ.
ಮೊದಲನೆಯದಾಗಿ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ಸಂಪನ್ಮೂಲಗಳ ತುರ್ತು ಅಗತ್ಯತೆಯ ಹೊರತಾಗಿಯೂ ಎಲ್ಲ ಸಂಬಂಧಪಟ್ಟ ತೆರಿಗೆ ಇಲಾಖೆಗಳು ಮತ್ತು ಸಮಿತಿ ಮುಖ್ಯಸ್ಥರ ಜತೆ ಮಾತುಕತೆ ನಡೆಸದೆ, ಅಭಿಪ್ರಾಯ ಪಡೆಯದೆ ಕೇರಳ ಸರ್ಕಾರವು ಪ್ರವಾಹ ಸೆಸ್ ಜಾರಿಗೆ ತರಲಿಲ್ಲ. ಇದು ಈ ಹಿಂದಿನ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಇಂತಹ ಸಮನ್ವಯವನ್ನು ಊಹಿಸಲು ಸಾಧ್ಯವಿರಲಿಲ್ಲ. ಪ್ರತಿ ರಾಜ್ಯ ಸರ್ಕಾರವೂ ತನ್ನದೇ ತೆರಿಗೆ ನೀತಿಯನ್ನು ಜಾರಿಗೆ ತಂದುಬಿಡುತ್ತಿತ್ತು.
ಜಿಎಸ್​ಟಿ ಜಾರಿಯಾದ ತಕ್ಷಣ ಸಕ್ಕರೆಗೆ ಸೆಸ್ ತೆಗೆಯಲಾಯಿತು. ಆ ನಂತರದಲ್ಲಿ ಸಕ್ಕರೆಗೆ ಸೆಸ್ ವಿಧಿಸಬೇಕು ಎಂದು ಕಬ್ಬು ಬೆಳೆಗಾರರಿರುವ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದ ಸರ್ಕಾರಗಳಿಂದ ಒತ್ತಡವಿತ್ತು. ಆದರೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಿಂದ ಸಕ್ಕರೆ ಸೆಸ್​ಗೆ ವಿರೋಧವಿತ್ತು. ಈ ಪರ-ವಿರೋಧದ ಒತ್ತಡದ ನಡುವೆ ಜಿಎಸ್​ಟಿ ಮಂಡಳಿ ಸಕ್ಕರೆಗೆ ಸೆಸ್ ವಿಧಿಸಿದರೆ ಜಿಎಸ್​ಟಿ ನಿಯಮಗಳನ್ನು ಮುರಿದಂತೆ ಎನ್ನುವ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿತು. ಇದು ಜಿಎಸ್​ಟಿ ಮಂಡಳಿ ಬಗೆಗಿನ ವಿಶ್ವಾಸ ಇಮ್ಮಡಿಗೊಳಿಸಿತು.
ಮತ್ತೊಂದು ಸಂದರ್ಭದಲ್ಲಿ ಲಾಟರಿಗಳಿಗೆ ತೆರಿಗೆ ವಿಧಿಸುವ ವಿಚಾರದಲ್ಲಿ ಈಶಾನ್ಯ ರಾಜ್ಯಗಳು ಮತ್ತು ಇತರೆ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಮ್ಮುಖದಲ್ಲಿ ಮತದಾನದ ಮೂಲಕ ಜಿಎಸ್​ಟಿ ಮಂಡಳಿ ವಿವಾದ ಇತ್ಯರ್ಥಪಡಿಸಿತು. ಈ ಮೇಲೆ ಹೇಳಿದ ಎಲ್ಲ ಸಾಧನೆಗಳು ಜಿಎಸ್​ಟಿ ಬಗ್ಗೆ ಇರುವ ಅತಿಯಾದ ಟೀಕೆಗಳ ನಡುವೆ ಕಳೆದು ಹೋಗಿವೆ. ಜಿಎಸ್​ಟಿಯಲ್ಲಿ ಖಂಡಿತವಾಗಿಯೂ ಲೋಪದೋಷ ಗಳಿವೆ. 7 ದಶಕಗಳಿಂದ ಇದ್ದ ಪರೋಕ್ಷ ತೆರಿಗೆ ವ್ಯವಸ್ಥೆಗೆ ಉತ್ತರ ರೂಪದಲ್ಲಿ ಜಿಎಸ್​ಟಿ ಬಂದಿದೆ. ಆದ್ದರಿಂದ ಅದು ಮತ್ತಷ್ಟು ಪಕ್ವಗೊಳ್ಳಲು ಸಮಯಬೇಕು.
(ಲೇಖಕರು ಇಂಡಿಯನ್ ಮನಿ ಡಾಟ್ ಕಾಂ ಸಂಸ್ಥಾಪಕ, ಸಿಇಒ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 5 =
Remember me
