|ಗ.ನಾ.ಭಟ್ಟ
ನಮ್ಮ ದೇಶ ಇದುವರೆಗೆ 15 ಪ್ರಧಾನಮಂತ್ರಿಗಳನ್ನು ಕಂಡಿದೆ. ಪ್ರಸ್ತುತ 16ನೇ ಪ್ರಧಾನಮಂತ್ರಿ ನರೇಂದ್ರ ಮೋದಿ. ಇವರಲ್ಲಿ ಅತಿಹೆಚ್ಚು ಕಾಲ ಆಳಿದವರು, ಕಡಿಮೆ ಕಾಲ ಆಳಿದವರು, ಕೆಲವು ದಿನಗಳ ಕಾಲ ಆಳಿದವರು ಎಂದು ಮೂರ್ನಾಲ್ಕು ವಿಧವಾಗಿ ವಿಂಗಡಿಸಬಹುದು. ನೆಹರೂ ಅವರು 16 ವರ್ಷ 286 ದಿನ, ಲಾಲ್ ಬಹಾದ್ದೂರ ಶಾಸ್ತ್ರಿ 1 ವರ್ಷ 7 ತಿಂಗಳು, ಇಂದಿರಾ ಗಾಂಧಿ 11 ವರ್ಷ 59 ದಿನ, ಮೊರಾರ್ಜಿ ದೇಸಾಯಿ 2 ವರ್ಷ 3 ತಿಂಗಳು, ಅಟಲ್ ಬಿಹಾರಿ ವಾಜಪೇಯಿ 6 ವರ್ಷ 78 ದಿನ, ರಾಜೀವ್ ಗಾಂಧಿ ಸುಮಾರು 5 ವರ್ಷ, ವಿ.ಪಿ ಸಿಂಗ್ 1 ವರ್ಷ, ಪಿ.ವಿ.ನರಸಿಂಹರಾವ್ 5 ವರ್ಷ, ಮನಮೋಹನ್ ಸಿಂಗ್ 10 ವರ್ಷ ಈ ದೇಶವನ್ನು ಆಳಿದ್ದಾರೆ.
ಇನ್ನು ಕಡಿಮೆ ಅವಧಿಯವರು ಅಂದರೆ ಒಂದು ವರ್ಷವನ್ನೂ ಪೂರೈಸದವರು ದೇವೇಗೌಡ- 11 ತಿಂಗಳು, ಚಂದ್ರಶೇಖರ್- 7 ತಿಂಗಳು, ಐ. ಕೆ. ಗುಜ್ರಾಲ್ -7 ತಿಂಗಳು. ಇನ್ನು ದಿನಗಳ ಲೆಕ್ಕದಲ್ಲಿ ಚರಣ್ ಸಿಂಗ್ 23 ದಿನ ಆ ಸ್ಥಾನದಲ್ಲಿದ್ದು ಸಂಸತ್ತನ್ನೂ ಎದುರಿಸದೆ ಹುದ್ದೆ ತೊರೆದರು. ಇವರೆಲ್ಲರೂ ರಾಜಕೀಯ ಪಿತೂರಿಗೆ ಒಳಪಟ್ಟು ಉರುಳಿದವರು. ಆದರೆ, ರಾಜಕೀಯದ ಯಾವ ಕುತಂತ್ರ, ಆಮಿಷ, ಕುರ್ಚಿ ಮೋಹಕ್ಕೂ ಒಳಪಡದೆ ಗೌರವದಿಂದ, ಘನತೆಯಿಂದ ಒಂದು ಸಲ 15 ದಿನ, (1964), ಮತ್ತೊಂದು ಸಲ 13 ದಿನ (1966 ) ಹಂಗಾಮಿ ಪ್ರಧಾನಮಂತ್ರಿಯಾಗಿ ಆಳಿದವರು ಭಾರತ ರತ್ನ ಗುಲ್ಜಾರಿ ಲಾಲ್ ನಂದಾ. 1964ರಲ್ಲಿ ನೆಹರೂ ನಿಧನದಿಂದಾಗಿ 15 ದಿನ ಮತ್ತು 1966ರಲ್ಲಿ ಶಾಸ್ತ್ರಿಯವರ ನಿಧನದಿಂದಾಗಿ 13 ದಿನ ನಂದಾ ಅವರು ಈ ದೇಶದ ಉಸ್ತುವಾರಿ ವಹಿಸಿಕೊಂಡಿದ್ದರು. ಅವರು ಎರಡು ಸಲ ಪ್ರಧಾನಮಂತ್ರಿಯಾಗಿದ್ದರೂ ಹಂಗಾಮಿ ಪ್ರಧಾನಮಂತ್ರಿ ಎಂದೇ ಪ್ರಸಿದ್ಧರು. ಅತ್ಯಲ್ಪ ಅವಧಿಗೆ ಪ್ರಧಾನಮಂತ್ರಿಯಾಗಿದ್ದರು ಎಂಬ ಕಾರಣಕ್ಕೆ ಅವರನ್ನು ಕಡಿಮೆಯಾಗಿ ಅಳೆಯಲಾಗದು.
ಗುಲ್ಜಾರಿಲಾಲ್ ನಂದಾ ಅವರು 1898 ಜುಲೈ 4ರಂದು ಪಂಜಾಬ್​ನ ಸಿಯಾಲ್ ಕೋಟ್​ನಲ್ಲಿ ಜನಿಸಿದರು. ಅದೀಗ ಪಾಕಿಸ್ತಾನದಲ್ಲಿದೆ. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಅದೇ ವಿಶ್ವವಿದ್ಯಾಲಯದಲ್ಲಿ ಕಾರ್ವಿುಕ ಸಮಸ್ಯೆ ಕುರಿತು ಸಂಶೋಧನೆ ಮಾಡಿದರು. ಸ್ವಲ್ಪ ಕಾಲ ಅವರು ಮುಂಬೈನ ನ್ಯಾಷನಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪೊ›ಫೆಸರ್ ಆಗಿದ್ದರು. ಹಾಗೆ ಕೆಲಸ ಮಾಡುತ್ತಿರುವಾಗಲೇ ಅವರು ಗಾಂಧೀಜಿಯವರ ಅಸಹಕಾರ ಚಳವಳಿಯಿಂದ ಪ್ರಭಾವಿತರಾಗಿ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜೈಲಿಗೂ ಹೋದರು. ಕ್ವಿಟ್ ಇಂಡಿಯಾ ಚಳವಳಿಯಲ್ಲೂ ಭಾಗವಹಿಸಿದ್ದರು.
1964ರಲ್ಲಿ ನೆಹರೂ ಮೃತರಾದಾಗ ಮತ್ತು 1966ರಲ್ಲಿ ಲಾಲ್ ಬಹಾದ್ದೂರ ಶಾಸ್ತ್ರಿ ಮೃತರಾದಾಗ ಈ ಎರಡೂ ಅವಧಿ ಸೇರಿಸಿ ಅವರು ಒಟ್ಟು 28 ದಿವಸ ಪ್ರಧಾನಮಂತ್ರಿಯಾಗಿದ್ದರು. ಇಂತಹ ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಅವರು ದೇಶ ಅರಾಜಕವಾಗದಂತೆ ನೋಡಿಕೊಂಡರು. ನೆಹರು, ಶಾಸ್ತ್ರಿ ಮತ್ತು ಇಂದಿರಾ ಸಚಿವ ಸಂಪುಟದಲ್ಲಿ ಸಚಿವರಾಗಿಯೂ ಅವರು ಕೆಲಸ ಮಾಡಿದರು. ಯೋಜನೆ, ಕಾರ್ವಿುಕ, ನೀರಾವರಿ ಮತ್ತು ವಿದ್ಯುಚ್ಛಕ್ತಿ ಖಾತೆಗಳನ್ನು ನಿರ್ವಹಿಸಿದ್ದಲ್ಲದೆ, ಗೃಹ, ರೈಲ್ವೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ನೆಹರೂಗೆ ಅತ್ಯಂತ ಪ್ರಿಯವಾಗಿದ್ದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ನಂದಾ ಅವರಿಗೆ ಸಾಧು-ಸಂತರು-ಜ್ಯೋತಿಷಿಗಳೆಂದರೆ ಅತೀವ ಗೌರವವಿತ್ತು. ‘ನೀವು ಪ್ರಧಾನಮಂತ್ರಿಯಾಗುತ್ತೀರಿ’ ಎಂದು ಅವರಿಗೆ ಜ್ಯೋತಿಷಿಗಳು ಹೇಳಿದ್ದರಂತೆ. ಅವರು ಎರಡು ಸಲ ಪ್ರಧಾನಮಂತ್ರಿಯಾದರು. ನೆನಪಿದ್ದವರು ಹೇಳುತ್ತಾರೆ- ಅಂದಿನ ದಿನಗಳಲ್ಲಿ ಅವರು ದೇಶದ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲಿ ವಿರಾಜಿಸುತ್ತಿದ್ದರಂತೆ. ಸಣಕಲು, ಉದ್ದ ದೇಹದ, ನಿರ್ಭಾವುಕ ಮುಖದ ನಂದಾ ಅವರು ವ್ಯಂಗ್ಯಚಿತ್ರಕಾರರಿಗೆ ಅಚ್ಚುಮೆಚ್ಚಿನ ವಸ್ತುವಾಗಿದ್ದರಂತೆ.
ನಂದಾ ಮೃದುಸ್ವಭಾವದವರಾಗಿದ್ದರು. ಅವರು ವ್ಯಾಸಂಗ ಮಾಡಿದ ಮತ್ತು ಸಂಶೋಧನೆ ಮಾಡಿದ ಕಾರ್ವಿುಕ ಸಮಸ್ಯೆ ಮುಷ್ಕರ ರೂಪ ತಳೆದು ಕಾಲಬುಡಕ್ಕೇ ಬಂದಾಗ ಅವರು ಅದನ್ನು ಒಡೆಯಬೇಕಾಯಿತು. ಆಗ ಅವರು ತಮ್ಮ ಸಿಬ್ಬಂದಿ ಬಳಿ ಕಾರ್ವಿುಕರ ಮುಷ್ಕರವನ್ನು ತಾವೇ ಒಡೆಯಬೇಕಾದ ಸಂದರ್ಭ ಬರುತ್ತದೆಯೆಂದು ನಿರೀಕ್ಷಿಸಿರಲಿಲ್ಲ ಎಂದು ಕಣ್ಣೀರಿಟ್ಟಿದ್ದರಂತೆ. ನಂದಾ ಸದಾ ದೇಶದ ಒಳಿತಿಗೇ ಚಿಂತಿಸುತ್ತಿದ್ದರು; ಶ್ರಮಿಸುತ್ತಿದ್ದರು. ಅದರ ಫಲವಾಗಿಯೇ ಅವರು ಅನೇಕ ಸಾರ್ವಜನಿಕ ಸಂಸ್ಥೆಗಳನ್ನು ಕಟ್ಟಿದರು. ಹಲವು ಆಂದೋಲನಗಳನ್ನು ಹುಟ್ಟುಹಾಕಿದರು. ಹದಗೆಟ್ಟ ರಾಷ್ಟ್ರೀಯ ಜೀವನದ ಪುನರುತ್ಥಾನಕ್ಕಾಗಿ ಅವರು ಸದಾಚಾರ ಸಮಿತಿ, ಭಾರತ್ ಸೇವಕ್ ಸಮಾಜ, ಮಾನವ ಧರ್ಮ ಮಿಷನ್ ಹಾಗೂ ಕೇಂದ್ರೀಯ ನಾಗರಿಕ ಪರಿಷತ್ತು ಮುಂತಾದವನ್ನು ಸ್ಥಾಪಿಸಿದರು. ಗುಲ್ಜಾರಿಲಾಲ್ ನಂದಾ ಅವರು ದೇಶದ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದರು. ಭ್ರಷ್ಟಾಚಾರ, ಮೋಸಗಾರಿಕೆ, ಕಪ್ಪುಹಣದ ಬಗ್ಗೆ ಅವರೆಷ್ಟು ನೊಂದಿದ್ದರು ಅನ್ನವುದಕ್ಕೆ 1960ರಲ್ಲಿ ನೆಹರೂಗೆ ಬರೆದ ಪತ್ರದಲ್ಲಿ ದಾಖಲಾಗಿದೆ. ‘ಈ ವರ್ಷಗಳಲ್ಲಿ ಭಾರತ ಎಲ್ಲ ರಂಗಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಆದರೆ, ದಿನಗಳು ಉರುಳಿದಂತೆ ಕೆಲವು ಸಮಸ್ಯೆಗಳು ನಮ್ಮ ಆರ್ಥಿಕ ರಂಗದಲ್ಲಿ ದೊಡ್ಡದಾಗುತ್ತಾ ಹೋಗುತ್ತಿವೆ. ತೆರಿಗೆ ಕಳ್ಳರು, ಮೋಸಗಾರರು, ಕಪ್ಪು ಹಣವುಳ್ಳವರು ನಮ್ಮ ಹಣಕಾಸು ವ್ಯವಸ್ಥೆಯ ದೋಷಗಳ ಲಾಭ ಪಡೆದ ಫಲಾನುಭವಿಗಳಾಗುತ್ತಿರುವುದು ಕಳವಳಕಾರಿ ಅಂಶ. ಇದನ್ನು ತಡೆಗಟ್ಟಲು ಯಾವ ಕ್ರಮವನ್ನೂ ಕೈಗೊಳ್ಳಲಾಗುತ್ತಿಲ್ಲ. ಖಾಸಗಿ ಹಣಕಾಸು ಶಕ್ತಿಯ ಅಟ್ಟಹಾಸದಿಂದ ಭ್ರಷ್ಟಾಚಾರ ವ್ಯಾಪಿಸುತ್ತಿದೆ. ಇಂಥ ಶಕ್ತಿಗಳಿಗೆ ಅವಕಾಶ ಮಾಡಿಕೊಡಬಾರದು’ ಎಂದು ಬರೆದಿದ್ದರು.
ಸರಳಜೀವಿ, ಶತಾಯುಷಿ:ಶತಾಯುಷಿಯಾಗಿ ಬಾಳಿದ ನಂದಾ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವ ಪಿಂಚಣಿ ಮತ್ತು ಸಂಸತ್ ಸದಸ್ಯರಿಗೆ ನೀಡುವ ನಿವೃತ್ತಿ ವೇತನ ಸೇರಿದಂತೆ ಒಟ್ಟು 1900 ರೂಪಾಯಿಯಲ್ಲಿ ಜೀವನ ನಡೆಸಿದರು. ಅವರದು ಅತ್ಯಂತ ಸರಳಜೀವನವಾಗಿತ್ತು. ಮಗಳು ವೈದ್ಯೆಯಾಗಿದ್ದು ವೃದ್ಧಾಪ್ಯದಲ್ಲಿ ಅವರಿಂದ ಆಕೆಯಿಂದ ಆರೈಕೆ ಸಿಗುತ್ತಿತ್ತು. ಮಗ ಅನುಕೂಲಕರ ವೃತ್ತಿಯಲ್ಲಿದ್ದರೂ ಅವರು ಮಗನನ್ನು ಆಶ್ರಯಿಸಲಿಲ್ಲ. ತಾನು ಪ್ರಧಾನಮಂತ್ರಿಯಾದವನು, ಅದಕ್ಕಾಗಿ ಸರ್ಕಾರ ತನ್ನನ್ನು ನೋಡಿಕೊಳ್ಳಬೇಕು ಎಂದು ಅವರು ಎಂದೂ ಬಯಸಲಿಲ್ಲ. ತಮ್ಮ ಪಾಡಿಗೆ ತಾವು ಸರಳವಾಗಿ, ಸಂತೋಷದಿಂದ ಬದುಕಿದರು.
(ಲೇಖಕರು ನಿವೃತ್ತ ಅಧ್ಯಾಪಕರು)
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:4 + thirteen =
Remember me
