ಕೋವಿಡ್-19 ಸಂಕಷ್ಟಕ್ಕೆ ಜಗತ್ತೇ ನಲುಗಿದೆ. ಅನೇಕ ಅರ್ಥವ್ಯವಸ್ಥೆಗಳು ನೆಲಕಚ್ಚಿವೆ. ಎಲ್ಲ ಹೊಡೆತಗಳನ್ನು ಎದುರಿಸಿದ ಬಳಿಕವೂ ಭಾರತದ ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿದೆ ಎಂಬುದು ವಿಶ್ವಾಸ ಮತ್ತು ಆಶಾಭಾವ ಹೆಚ್ಚಿಸುವ ವಿಚಾರ. ಕರೊನಾ ಸಂಕಷ್ಟ ಎದುರಾದ ಸಂದರ್ಭದಲ್ಲಿ ಸೋಂಕು ಹರಡದಂತೆ ತಡೆಯಲು ಸರ್ಕಾರ ತೆಗೆದುಕೊಂಡ ನಿರ್ಬಂಧ, ಲಾಕ್​ಡೌನ್ ಕ್ರಮಗಳ ನೇರ ಪರಿಣಾಮ ಅರ್ಥವ್ಯವಸ್ಥೆಯ ಮೇಲಾಗಿತ್ತು. ಆಗ ಗ್ರಾಹಕ ಮತ್ತು ವ್ಯಾಪಾರ ವಿಶ್ವಾಸಗಳು ಕಮರಿದ್ದವು. ಎರಡನೇ ಅಲೆಯ ಸಂದರ್ಭದಲ್ಲೂ ಚೇತರಿಸಿದ್ದ ಗ್ರಾಹಕ ಮತ್ತು ವ್ಯಾಪಾರ ವಿಶ್ವಾಸಕ್ಕೆ ಹೊಡೆತ ಬಿದ್ದಿದ್ದವು. ಈಗ ಮೂರನೇ ಅಲೆಯ ಸಂದರ್ಭ. ಈ ನಡುವೆ 2021ರ ನವೆಂಬರ್ ಸುತ್ತಿನ ಗ್ರಾಹಕ ವಿಶ್ವಾಸ ಸಮೀಕ್ಷಾ ವರದಿಯನ್ನು ಆರ್​ಬಿಐ ಪ್ರಕಟಿಸಿದೆ. ಈ ಸಮೀಕ್ಷೆ ವೇಳೆ ಆರ್​ಬಿಐ, ಗ್ರಾಹಕರಿಂದ ಸನ್ನಿವೇಶಗಳ ಕುರಿತು ಅವರ ಅನಿಸಿಕೆಗಳನ್ನು ದಾಖಲಿಸಿಕೊಂಡು ನಂತರ ವಿಶ್ಲೇಷಣೆ ಮಾಡಿದೆ. ಇದರ ಆಯ್ದ ಅಂಶಗಳ ಸಂಕ್ಷಿಪ್ತ ವಿವರ ಮತ್ತು ಇತರ ಸೂಚ್ಯಂಕಗಳ ಅವಲೋಕನ ಇಲ್ಲಿದೆ.
ಗ್ರಾಹಕ ವಿಶ್ವಾಸ ಸಮೀಕ್ಷೆ ಹೇಳುವುದೇನು?
ದೇಶದಲ್ಲಿ 2021ರ ನವೆಂಬರ್ ತಿಂಗಳ ಮಟ್ಟಿಗೆ ನಡೆಸಲಾದ ಗ್ರಾಹಕ ವಿಶ್ವಾಸ ಸಮೀಕ್ಷೆಯಲ್ಲಿ ಸಾಮಾನ್ಯ ಆರ್ಥಿಕ ಪರಿಸ್ಥಿತಿ, ಉದ್ಯೋಗ ಪರಿಸ್ಥಿತಿ, ದರ ಮತ್ತು ಸ್ವಂತ ಆದಾಯ ಹಾಗೂ ಖರ್ಚುಗಳ ಕುರಿತು ಗ್ರಾಹಕರ ಗ್ರಹಿಕೆ ಮತ್ತು ಮುಂದಿನ ಒಂದು ವರ್ಷದ ಅವಧಿಯ ನಿರೀಕ್ಷೆಗಳನ್ನು ದಾಖಲಿಸಲಾಗಿದೆ. ದೇಶದ 13 ಪ್ರಮುಖ ನಗರಗಳ 5,310 ಮನೆಯವರಿಂದ ಈ ಮಾಹಿತಿ ಸಂಗ್ರಹಿಸಲಾಗಿದೆ. ಇದರಂತೆ ಲಭ್ಯ ಫಲಿತಾಂಶದಲ್ಲಿ ಪ್ರಸಕ್ತ ಸನ್ನಿವೇಶದ ಸೂಚ್ಯಂಕ (ಕರೇಂಟ್ ಸಿಚುವೇಶನ್ ಇಂಡೆಕ್ಸ್) 57.7ರಿಂದ 62.3 ತಲುಪಿರುವುದು ಗ್ರಾಹಕ ವಿಶ್ವಾಸ ವೃದ್ಧಿಯ ಸಂಕೇತವಾಗಿ ಕಾಣಿಸಿಕೊಂಡಿದೆ.
ಇತರ ಸೂಚ್ಯಂಕಗಳ ಸಂದೇಶವೇನು?
ಇತ್ತೀಚಿನ ಆರ್ಥಿಕ ಸಂಕೇತಗಳು ಒಟ್ಟಾರೆಯಾಗಿ ಆರ್ಥಿಕ ಚಟುವಟಿಕೆಗಳು ಇಳಿಮುಖವಾಗಿರುವುದನ್ನು ಬಿಂಬಿಸಿವೆ. ಆದರೆ ಇವು ಕಳೆದ ಅಲೆಯ ಸಂದರ್ಭದಲ್ಲಿದ್ದಷ್ಟು ತೀವ್ರವಾಗಿಲ್ಲ. ನೋಮುರಾ ಬಿಜಿನೆಸ್ ರಿಸಮ್ಶನ್ ಇಂಡೆಕ್ಸ್ ಡಿಸೆಂಬರ್​ನಲ್ಲಿ 120.3 ಇದ್ದದ್ದು, ಜನವರಿಯಲ್ಲಿ 102.9ಕ್ಕೆ ಕುಸಿದಿದೆ. ಇದೇ ರೀತಿ ಕ್ವಾಂಟ್​ಇಕೊದ ಡಾರ್ಟ್ (ಡೇಲಿ ಆಕ್ಟಿವಿಟಿ ಆಂಡ್ ರಿಕವರಿ ಟ್ರಾ್ಯಕರ್) ಸೂಚ್ಯಂಕ ಜನವರಿ 16ಕ್ಕೆ ಕೊನೆಗೊಂಡ ವಾರವೂ ಮೈನಸ್​ನಲ್ಲಿದೆ. ಈ ಸೂಚ್ಯಂಕ ಕಳೆದ ಮೂರು ವಾರಗಳಿಂದ ಮೈನಸ್​ನಲ್ಲೇ ಇದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕಳೆದ ವಾರ ಸುಧಾರಣೆ ಕಂಡುಬಂದಿದೆ. ಡಾರ್ಟ್ ಸೂಚ್ಯಂಕದ ಸುಧಾರಣೆಗೆ ಸಂಚಾರ ದಟ್ಟಣೆ, ಆಪಲ್, ಗೂಗಲ್ ಮೊಬಲಿಟಿ, ರೈಲ್ವೆ ಪ್ರಯಾಣಿಕ ದಟ್ಟಣೆ, ಆನ್​ಲೈನ್ ರೆಸ್ಟೋರೆಂಟ್ ಸರ್ಚ್, ಇ-ವೇ ಬಿಲ್ಸ್ ರೈಲ್ವೆ ಸರಕು ಸಾಗಣೆ, ವಿದ್ಯುತ್ ಉತ್ಪಾದನೆ ಮುಂತಾದವು ಪ್ರಗತಿಪಥದಲ್ಲಿರುವುದು ಕಾರಣ.
ಬೇರೆ ದೇಶಗಳಲ್ಲಿ ಗ್ರಾಹಕ ವಿಶ್ವಾಸ
ಬಹುತೇಕ ರಾಷ್ಟ್ರಗಳಲ್ಲಿ ಗ್ರಾಹಕ ವಿಶ್ವಾಸ ವೃದ್ಧಿಯಾಗುತ್ತಿದೆ. ಆದರೂ ಇದು ಕರೊನಾ ಪೂರ್ವ ಸನ್ನಿವೇಶದ ಮಟ್ಟಕ್ಕೆ ಇನ್ನೂ ತಲುಪಿಲ್ಲ. ಅಮೆರಿಕದಲ್ಲಿ ಗ್ರಾಹಕ ಭಾವನೆಗಳು ಜನವರಿಯಲ್ಲಿ ಮತ್ತೆ ಕುಸಿತ ಕಂಡು ದಶಕದಲ್ಲೇ ಎರಡನೇ ಕನಿಷ್ಠ ಮಟ್ಟಕ್ಕೆ ತಲುಪಿದೆ. ಬ್ರಿಟನ್​ನಲ್ಲಿ ಡಿಸೆಂಬರ್ ತಿಂಗಳಲ್ಲೇ ಗ್ರಾಹಕ ವಿಶ್ವಾಸ ಕುಸಿತ ಕಂಡಿದೆ. ಆದಾಗ್ಯೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಸಮಾಧಾನಕರವಾಗಿದೆ. ಜಪಾನ್​ನಲ್ಲಿ ಕೂಡ ಗ್ರಾಹಕ ವಿಶ್ವಾಸ ಸೂಚ್ಯಂಕ ಡಿಸೆಂಬರ್​ನಲ್ಲಿ ಕುಸಿತ ಕಂಡಿದೆ.
2022ರಲ್ಲಿ ನಿರೀಕ್ಷೆಗಳೇನು?
ಕರೊನಾ ಸಂಕಷ್ಟದ ಕರಿಛಾಯೆ ಶೀಘ್ರವೇ ಕೊನೆಗೊಂಡು ಗ್ರಾಹಕ ವಿಶ್ವಾಸ ವೃದ್ಧಿಯಾಗಲಿದೆ. ಸಪ್ಲೈಚೇನ್ ಸಂಕಷ್ಟಗಳೂ ಬಗೆಹರಿಯಲಿವೆ ಎಂಬುದು ಆರ್ಥಿಕ ತಜ್ಞರ ಅಭಿಮತ. ಇತ್ತೀಚಿನ ತಿಂಗಳುಗಳ ಅವಧಿಯಲ್ಲಿ ಆರ್ಥಿಕ ಹಿಂಜರಿತ ಗ್ರಾಮೀಣ ಮಟ್ಟದಲ್ಲಿ ತೀವ್ರವಾಗಿತ್ತು. ನಗರ ಮಟ್ಟದಲ್ಲಿ ಇದು ಕಡಿಮೆ ಇತ್ತು. ಹೀಗಾಗಿ ಈ ವರ್ಷದ ಕೇಂದ್ರ ಮುಂಗಡ ಪತ್ರದಲ್ಲಿ ಗ್ರಾಮ ಮಟ್ಟಕ್ಕೆ ಹೆಚ್ಚಿನ ಒತ್ತು ಸಿಗುವ ನಿರೀಕ್ಷೆ ಇದೆ. ಸೇವಾ ವಲಯದ ಉದ್ಯೋಗದಲ್ಲಿ ಹಿಂಜರಿತವೇ ಆರ್ಥಿಕ ಹಿಂಜರಿತಕ್ಕೆ ಕಾರಣ. ಸರ್ಕಾರ ಗ್ರಾಮೀಣ ಭಾಗಕ್ಕೆ ಹೆಚ್ಚಿನ ಅನುದಾನ ಒದಗಿಸುವ ನಿರೀಕ್ಷೆ ಇದೆ. ಹಾಗೆಯೇ, ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಗರಿಷ್ಠ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ವ್ಯಕ್ತವಾಗಿದೆ.
ಭಾರತದ ಕಂಪನಿಗಳ ಮೇಲೆ ಪರಿಣಾಮ
ನೋಮುರಾ ಜನವರಿ 11ರಂದು ಪ್ರಕಟಿಸಿದ ವರದಿ ಪ್ರಕಾರ, ಬಹುತೇಕ ಕಂಪನಿಗಳು ಗ್ರಾಮೀಣ ಆದಾಯ/ವೇತನ ಬೆಳವಣಿಗೆ ಮೀರಿ ಭಾರಿ ದರ ಏರಿಕೆ ಮಾಡಿವೆ. ಇದಕ್ಕೆ ಇನ್​ಪುಟ್ ಕಾಸ್ಟ್ ಅಥವಾ ಉತ್ಪಾದನೆ ಮತ್ತು ಇತರ ಪೂರಕ ವೆಚ್ಚ ಏರಿಕೆ ಕಾರಣ. ಈ ದರ ಏರಿಕೆ ಸಣ್ಣ ಮತ್ತು ಅಸಂಘಟಿತ ವಲಯದ ವ್ಯಾಪಾರೋದ್ಯಮಗಳ ಮೇಲೆ ಪರಿಣಾಮ ಬೀರಿದೆ. ಸಂಘಟಿತ ವ್ಯಾಪಾರೋದ್ಯಮ ವಲಯ ಇದರಿಂದ ಲಾಭ ಗಳಿಸಿವೆ. ವೇತನ ಏರಿಕೆಗೆ ಮೀರಿ ದರ ಏರಿಕೆ ಆಗಿರುವ ಕಾರಣ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗ್ರಾಹಕ ಬೇಡಿಕೆಯ ಮೇಲೆ ನೇರ ಪರಿಣಾಮ ಬೀರಲಿದೆ. ಗ್ರಾಮೀಣ ಭಾಗದಲ್ಲಿ ಬೇಡಿಕೆ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಕುಸಿಯಲಿದೆ.
ಮನೆ ಖರೀದಿ ದಾರರಿಗೆ ತೆರಿಗೆ ವಿನಾಯಿತಿ ಹೆಚ್ಚಳ?
ಕೇಂದ್ರ ಮುಂಗಡಪತ್ರ ಮಂಡನೆಗೆ ದಿನಗಣನೆ ಆರಂಭವಾಗಿದೆ. ಜನರ ನಿರೀಕ್ಷೆಗಳು, ಸರ್ಕಾರದ ಮೂಲಗಳ ಮಾಹಿತಿ ಗಮನ ಸೆಳೆಯ ತೊಡಗಿವೆ. ಇದರಂತೆ, ಮನೆ ಖರೀದಿದಾರರಿಗೆ ಉತ್ತೇಜನ ನೀಡುವುದಕ್ಕಾಗಿ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂಬುದು ಹೊಸ ವಿಚಾರ. ಸದ್ಯ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಪ್ರಕಾರ ಪ್ರಸ್ತುತ 1.5 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಇದ್ದು, ಈ ಮಿತಿಯನ್ನು 2 ಲಕ್ಷ ರೂಪಾಯಿಗೆ ಏರಿಸುವ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು.
ಕಾಂಗ್ರೆಸ್ ಮುಖಂಡನಿಂದ ಪತ್ನಿಯ ಕೊಲೆಗೆ ಸಂಚು?; ಪತಿಗೆ ಅನೈತಿಕ ಸಂಬಂಧ, ಡ್ರಗ್​ ಪೆಡ್ಲರ್​ ಸಂಪರ್ಕವಿದೆ ಎಂದ ಹೆಂಡ್ತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + five =
Remember me
