|ರಾಘವ ಶರ್ಮನಿಡ್ಲೆಹಾಥರಸ್(ಉತ್ತರ ಪ್ರದೇಶ)
ದಿಲ್ಲಿಯಲ್ಲಿ 2012ರಲ್ಲಿ ನಡೆದ ಗ್ಯಾಂಗ್​ರೇಪ್ ಪ್ರಕರಣವನ್ನು ದೇಶ ಹೇಗೆ ಮರೆಯಲು ಸಾಧ್ಯವಿಲ್ಲವೋ ಹಾಗೇ ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಬೂಲ್​ಗಢಿ ಗ್ರಾಮದಲ್ಲಿ ಒಂದೂವರೆ ವರ್ಷದ ಹಿಂದೆ ನಡೆದ ದಲಿತ ಯುವತಿಯ ಅತ್ಯಾಚಾರ ಘಟನೆಯೂ ಮರೆಯಲಸಾಧ್ಯ. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇತರ ಪಕ್ಷಗಳಿಗೆ ಹಾಥರಸ್ ಘಟನೆ ಬಿಜೆಪಿ ವಿರುದ್ಧದ ಅಸ್ತ್ರಗಳಲ್ಲಿ ಒಂದು. ರಾಜಕೀಯ ಕಿತ್ತಾಟಗಳ ಮಧ್ಯೆ ಬಡ ದಲಿತ (ವಾಲ್ಮೀಕಿ) ಕುಟುಂಬ ಮಾತ್ರ ನ್ಯಾಯಕ್ಕಾಗಿ ಈಗಲೂ ಅಲೆದಾಡುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ.
ಪಶ್ಚಿಮ ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿದ್ದು, ಸಂತ್ರಸ್ತ ಕುಟುಂಬ ಇರುವ ಬೂಲ್ ಗಢಿ ಗ್ರಾಮ ಸಿಕಂದರರೌ ವಿಧಾನಸಭೆ ವ್ಯಾಪ್ತಿಯಲ್ಲಿದೆ. ಹಾಗಿದ್ದರೂ, ಘಟನೆ ಮಾತ್ರ ‘ಹಾಥರಸ್ ಕಾಂಡ್’ ಎಂದೇ ಕುಖ್ಯಾತಿಯಾಗಿದೆ. ರಾಜ್ಯದ ಉನ್ನಾವ್ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂತ್ರಸ್ತ ಯುವತಿಯ ತಾಯಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಆದರೆ, ಪಕ್ಷದ ಆ ಪ್ರಯತ್ನ ಹಾಥರಸ್​ನಲ್ಲಿ ಫಲಿಸಲಿಲ್ಲ. ‘ನಮ್ಮನ್ನು ಯಾವ ರಾಜಕೀಯ ಪಕ್ಷ ಕೂಡ ನೇರವಾಗಿ ಸಂರ್ಪಸಿಲ್ಲ. ಮಾಧ್ಯಮದಲ್ಲಿ ಸುದ್ದಿ ಬಂದಿತ್ತು. ಆದರೆ, ನಮಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ಮೃತ ಸೋದರಿಗೆ ನ್ಯಾಯ ಕೊಡಿಸುವುದೇ ಗುರಿ’ ಎನ್ನುತ್ತಾರೆ ಮೃತ ಯುವತಿಯ ಸೋದರ.
ಹಾಥರಸ್ ಪ್ರಕರಣ ಜಿಲ್ಲೆಯ ವರ್ಗಕಂದಕವನ್ನು ಮತ್ತಷ್ಟು ಹೆಚ್ಚಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬೂಲ್​ಗಢಿ ಗ್ರಾಮದಲ್ಲಂತೂ ಮೇಲ್ವರ್ಗ-ಕೆಳವರ್ಗದ ಮಧ್ಯೆ ಮಾತುಕತೆ ನಡೆಯುವುದೇ ಅಪರೂಪ. ‘ಅತ್ಯಾಚಾರ ಘಟನೆ ಮತ್ತು ನಂತರದಲ್ಲೂ ಸ್ಥಳೀಯ ಮೇಲ್ವರ್ಗದ ಮಂದಿ ನಮ್ಮನ್ನು ಮಾತನಾಡಿಸಲಿಲ್ಲ, ಸಾಂತ್ವನವನ್ನೂ ಹೇಳಲಿಲ್ಲ. ಜಾತಿಭಾವ ಬಲವಾಗಿ ಬೇರೂರಿದೆ’ ಎಂದು ಯುವತಿಯ ಸೋದರ ವಿಜಯವಾಣಿ ಜತೆ ಮಾತನಾಡುತ್ತಾ ಬೇಸರ ವ್ಯಕ್ತಪಡಿಸಿದರು.
ಬೂಲ್​ಗಢಿಯಲ್ಲಿ ಮೇಲ್ವರ್ಗದ ಬ್ರಾಹ್ಮಣ ಮತ್ತು ಠಾಕೂರ್ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ದಲಿತ ಕುಟುಂಬಗಳಿರುವುದು ನಾಲ್ಕೈದು ಮಾತ್ರ. 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಬೀರೇಂದ್ರ ಸಿಂಗ್ ರಾಣಾ ಸಿಕಂದರರೌ ಕ್ಷೇತ್ರದಿಂದ ಗೆದ್ದಿದ್ದರು. ಬೂಲ್​ಗಢಿಯ ಬಹುಪಾಲು ಬ್ರಾಹ್ಮಣ-ಠಾಕೂರ್ ಸಮುದಾಯಗಳು ಬಿಜೆಪಿಗೆ ಮತಹಾಕಿದ್ದವು. ಹಾಗಂತ, ಬೂಲ್​ಗಢಿ ಬದಲಾದಂತೆ ಕಾಣುವುದಿಲ್ಲ. ಮನೆಗಳ ಎದುರೇ ಚರಂಡಿ, ಕೊಚ್ಚೆ ನೀರು ಹರಿಯುತ್ತಿದ್ದು, ಅಸ್ವಚ್ಛ ವಾತಾವರಣ ಎದ್ದುಕಾಣುತ್ತದೆ. ‘ಶಾಸಕರಿಗೆ ನಮ್ಮ ಹಳ್ಳಿಯ ದಾರಿ ಕಾಣಲೇ ಇಲ್ಲ. ಅತ್ಯಾಚಾರ ಘಟನೆ ಬಳಿಕ ನೂರಾರು ಮಂದಿ ಬಂದರೂ, ನಮ್ಮ ಬದುಕು ಬದಲಾಗಿಲ್ಲ. ನಾವು ಎಂಥಾ ಕೊಚ್ಚೆಯಲ್ಲಿದ್ದೇವೆ ನೀವೇ ನೋಡಿ’ ಎಂದು ರೈತ ಶ್ರೀನಿವಾಸ ಪಚೌರಿ ಆಕ್ರೋಶ ಹೊರಹಾಕುತ್ತಾರೆ. ಆದರೂ ಬಿಜೆಪಿಗೇ ಮತ ಹಾಕುತ್ತೇನೆ ಎನ್ನುವ ಪಚೌರಿ, ರಾಜ್ಯದಲ್ಲಿ ಗೂಂಡಾಗಿರಿ, ಕೊಲೆ, ಸುಲಿಗೆ ಕಡಿಮೆಯಾಗಿದೆ. ಮುಂದಿನ 5 ವರ್ಷದೊಳಗಾದರೂ ಹಳ್ಳಿ ಅಭಿವೃದ್ಧಿ ಆಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಶಾಸಕ, ಸಂಸದ, ಜಿಲ್ಲಾಧಿಕಾರಿ ಬರಲೇ ಇಲ್ಲ:ಅತ್ಯಾಚಾರ ಘಟನೆ ಭಾರೀ ಸುದ್ದಿಯಾಗಿದ್ದ ವೇಳೆ ರಾಹುಲ್ ಗಾಂಧಿ, ಪ್ರಿಯಾಂಕಾ, ಅಖಿಲೇಶ್, ಚಂದ್ರಶೇಖರ ಆಜಾದ್ ಸೇರಿ ಬಹುಪಾಲು ವಿಪಕ್ಷ ನಾಯಕರು ಧಾವಿಸಿದ್ದರು. ಈಗ ಅದೇ ಘಟನೆ ಮುಂದಿಟ್ಟುಕೊಂಡು ಮತವನ್ನೂ ಕೇಳುತ್ತಿದ್ದಾರೆ. ಆದರೆ, ಕುಟುಂಬದ ಕಾನೂನು ಹೋರಾಟ ವಿಳಂಬಗೊಳ್ಳುತ್ತಿರುವ ಬಗ್ಗೆ ಇವರ್ಯಾರೂ ತಲೆಕೆಡಿಸಿಕೊಂಡಿಲ್ಲ. ಕಳೆದ ಡಿಸೆಂಬರ್ ಒಳಗಾಗಿ ಕೇಸು ಮುಗಿಸಿ ತೀರ್ಪು ಬರುವಂತೆ ನೋಡಿಕೊಳ್ಳಲಾಗುವುದು ಎಂದು ಸರ್ಕಾರ ಹೇಳಿತ್ತಾದರೂ, ಹಾಥರಸ್ ಎಸ್ಸಿ/ಎಸ್ಟಿ ನ್ಯಾಯಾಲಯದಲ್ಲಿ ಈಗಲೂ ಪಾಟಿ ಸವಾಲು ಮುಂದುವರಿದಿದೆ. ಅಲಹಾಬಾದ್ ಹೈಕೋರ್ಟ್ ಆದೇಶದ ಮೇರೆಗೆ ದಲಿತ ಕುಟುಂಬಕ್ಕೆ ಸಿಆರ್​ಪಿಎಫ್ ಯೋಧರಿಂದ ರಕ್ಷಣೆ ಒದಗಿಸಲಾಗಿದ್ದು, ಸುಮಾರು 20 ಯೋಧರು ಹಳ್ಳಿಯಲ್ಲಿ ಟೆಂಟ್ ಕಟ್ಟಿ ನೆಲೆಸಿದ್ದಾರೆ. ಘಟನೆ ಬಳಿಕ ಸ್ಥಳೀಯ ಬಿಜೆಪಿ ಶಾಸಕ ಬೀರೇಂದ್ರ ಸಿಂಗ್ ರಾಣಾ ಅಥವಾ ಹಾಥರಸ್ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ ರಾಜ್​ವೀರ್ ಸಿಂಗ್ ದಿಲ್ಲರ್ ಕುಟುಂಬಸ್ಥರನ್ನು ಒಮ್ಮೆಯೂ ಭೇಟಿ ಮಾಡಿಲ್ಲ ಅಥವಾ ಸಾಂತ್ವನ ಹೇಳಿಲ್ಲ. ಕುಟುಂಬಸ್ಥರ ಒಪ್ಪಿಗೆ ಮುನ್ನವೇ ಯುವತಿ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಿದ್ದ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ವರ್ಗಾವಣೆಗೊಂಡಿದ್ದರೂ, ನಂತರ ಬಂದ ನೂತನ ಜಿಲ್ಲಾಧಿಕಾರಿ ರಮೇಶ್ ರಂಜನ್ ಈವರೆಗೂ ಹಳ್ಳಿ ಕಡೆ ಕಾಲಿಟ್ಟಿಲ್ಲ ಎಂದು ಯುವತಿಯ ಕುಟುಂಬಸ್ಥರು ದೂರಿದ್ದಾರೆ.
3ರಲ್ಲಿ 2 ಗೆದ್ದಿತ್ತು:2017ರ ಚುನಾವಣೆಯಲ್ಲಿ ಜಿಲ್ಲೆಯ 3 ಸೀಟುಗಳಲ್ಲಿ 2ನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು. ಸದಾಬಾದ್ ಕ್ಷೇತ್ರದಿಂದ ಗೆದ್ದಿದ್ದ ಬಿಎಸ್​ಪಿ ಅಭ್ಯರ್ಥಿ ರಾಮ್ೕರ್ ಉಪಾಧ್ಯಾಯ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಜಾಟ್ ಸಂಖ್ಯೆ ಗಣನೀಯವಾಗಿರುವುದರಿಂದ ಎಸ್​ಪಿ-ಆರ್​ಎಲ್ಡಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರದೀಪ್ ಚೌಧುರಿ ಕಣದಲ್ಲಿದ್ದಾರೆ. ಹಾಥರಸ್ ಕ್ಷೇತ್ರದಿಂದ ಆಗ್ರಾದ ಮಾಜಿ ಮೇಯರ್, ದಲಿತ ಮಹಿಳೆ ಅಂಜುಳ ಮಹೋರ್​ಗೆ ಟಿಕೆಟ್ ನೀಡಿರುವ ಬಿಜೆಪಿ, ಅತ್ಯಾಚಾರ ಘಟನೆಯಿಂದ ಸಿಟ್ಟಾಗಿರುವ ದಲಿತ ಸಮುದಾಯವನ್ನು ಸಮಾಧಾನಪಡಿಸಲು ಈ ತಂತ್ರ ಅನುಸರಿಸಿದೆ. ಆದರೆ, ಹೊರಗಿನಿಂದ ಬಂದ ಅಂಜುಳಗೆ ಟಿಕೆಟ್ ನೀಡಿರುವುದು ಸ್ಥಳೀಯ ಕಾರ್ಯಕರ್ತರ ಅಸಮಾಧಾನ ಹೆಚ್ಚಿಸಿದೆ. ಬಿಎಸ್​ಪಿ, ಎಸ್ಪಿ ಮತ್ತು ಕಾಂಗ್ರೆಸ್ ಮೂರೂ ಪಕ್ಷಗಳು ಜಾಟವ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿರುವುದರಿಂದ ಹಿಂದುಳಿದ ಮತಗಳು ಒಡೆದು ಬಿಜೆಪಿಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವಿದೆ. ಹಾಥರಸ್ ಘಟನೆಯಲ್ಲಿ ಮೇಲ್ವರ್ಗದ ಹುಡುಗರನ್ನು ದುರುದ್ದೇಶದಿಂದ ಸಿಕ್ಕಿ ಹಾಕಿಸಿದ್ದಾರೆ ಎಂದು ಮೇಲ್ವರ್ಗದ ಹಲವು ಮಂದಿ ಸಿಟ್ಟಾಗಿದ್ದಾರೆ. ಹೀಗಾಗಿ, ಚುನಾವಣೆ ಮೇಲ್ವರ್ಗ ವರ್ಸಸ್ ಕೆಳವರ್ಗ ಎಂದು ಧ್ರುವೀಕೃತಗೊಂಡಿದೆ. ಬಿಜೆಪಿಗೆ ಮೇಲ್ವರ್ಗದ ಮತಗಳು ಬಿದ್ದು, ಹಿಂದುಳಿದ ವೋಟುಗಳು ಒಡೆಯುವ ಸಾಧ್ಯತೆ ಇದೆ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರೊಬ್ಬರು ಹೇಳುತ್ತಾರೆ.
ಹಾಥರಸ್ ಸಂತ್ರಸ್ತ ಕುಟುಂಬಕ್ಕೆ ಮನೆ ಮತ್ತು ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ, ಘಟನೆ ಸಂಭವಿಸಿ 16 ತಿಂಗಳು ಕಳೆದರೂ ಮನೆ, ನೌಕರಿ ಸಿಕ್ಕಿಲ್ಲ. ಕುಟುಂಬದ ಬಳಿ 5 ಬಿಗಾ ಜಮೀನಿದೆ. ಇದನ್ನು ಸರ್ಕಾರದ ವಶಕ್ಕೆ ನೀಡಿದಲ್ಲಿ ನೌಕರಿ ಕೊಡಿಸುವುದಾಗಿ ಸರ್ಕಾರದ ಪ್ರತಿನಿಧಿಗಳು ಹೇಳುತ್ತಾರೆ. ‘ನಾವು ಯಾಕೆ ಜಮೀನು ಕೊಡಬೇಕು? ಈಗ ಖಾಸಗಿ ನೌಕರಿ ಕೊಡುತ್ತೇವೆ ಎಂದು ರಾಗ ಬದಲಿಸಿದ್ದಾರೆ’ ಎಂದು ಮೃತ ಯುವತಿಯ ಮತ್ತೋರ್ವ ಸಹೋದರ ದೂರುತ್ತಾರೆ. ಯುವತಿಯ ಒಬ್ಬ ಸೋದರ ಮೊದಲು ನೋಯ್ಡಾದ ಖಾಸಗಿ ಲ್ಯಾಬ್​ನಲ್ಲಿ ಅಟೆಂಡರ್ ಆಗಿದ್ದರೆ, ಮತ್ತೋರ್ವ ಸೋದರ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಘಟನೆ ಬಳಿಕ ಇಬ್ಬರೂ ಬೂಲ್​ಗಢಿ ಮನೆಗೆ ವಾಪಸಾಗಿದ್ದಾರೆ. ಎಸ್ಸಿ-ಎಸ್ಟಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಪರಿಹಾರ ಕುಟುಂಬಕ್ಕೆ ಸಿಕ್ಕಿದೆ. ಮಗಳ ಅತ್ಯಾಚಾರ-ಸಾವು ಘಟನೆಯಿಂದ ಬೇಸತ್ತ ಕುಟುಂಬವು ಗ್ರಾಮ ಬಿಟ್ಟು ದೂರದೂರಲ್ಲಿ ನೆಲೆಸಲು ಬಯಸಿದೆ. ಹೀಗಾಗಿ, ಸರ್ಕಾರ ಮನೆ ಕೊಟ್ಟರೆ ದಿಲ್ಲಿ ಅಥವಾ ನೋಯ್ಡಾದಲ್ಲಿ ನೀಡಲಿ. ಹಾಥರಸ್​ನಲ್ಲಿ ನಮ್ಮದೇ ಜೋಪಡಿ ಇರುವಾಗ, ಇಲ್ಲಿ ಮತ್ತೊಂದು ಮನೆ ಏಕೆ ಎನ್ನುವುದು ಅವರ ಪ್ರಶ್ನೆ.
ಸ್ಥಳೀಯರು ಹಾಥರಸ್ ಹೆಸರನ್ನು ಮಹಾಭಾರತಕ್ಕೆ ಜೋಡಿಸುತ್ತಾರೆ. ಹಳೆಯ ಜಾನಪದ ಕಥೆಗಳು ಮತ್ತು ಪುರಾತತ್ತ್ವ ಶಾಸ್ತ್ರದಲ್ಲೂ ಈ ಬಗ್ಗೆ ದಾಖಲೆಗಳಿವೆ ಎನ್ನುತ್ತಾರೆ. ಚೋಟೂ ಬನ್ಮಾಲಿ ಎಂಬ ಲೇಖಕರ ಗೋಕುಲ ಮಹಾತ್ಮೆ ಕಥೆ ಪ್ರಕಾರ ಭಗವಾನ್ ಕೃಷ್ಣನ ಜನನದ ಸಮಯದಲ್ಲಿ, ಶಿವ-ಪಾರ್ವತಿಯರು ಈಗಿನ ಹಾಥರಸ್ ಮಾರ್ಗವಾಗಿ ಬ್ರಿಜ್ (ಮಥುರಾ ಬ್ರಿಜ್ ವ್ಯಾಪ್ತಿಯಲ್ಲಿದೆ) ತಲುಪುತ್ತಾರೆ. ಅಂದು ಪಾರ್ವತಿ ದೇವಿ ವಾಸ್ತವ್ಯ ಹೂಡಿದ್ದ ಸ್ಥಳವನ್ನು ಹತ್ರಸಿ ದೇವಿ ಎಂದು ಕರೆದಿದ್ದರಿಂದ ಕಾಲಾಂತರದಲ್ಲಿ ಅದು ಹಾಥರಸ್ ಎಂದು ಬದಲಾಯಿತಂತೆ. ಬ್ರಿಟಿಷರ ಕಾಲದಲ್ಲಿ ಕೈಗಾರಿಕಾ ಕೇಂದ್ರವಾಗಿತ್ತು.
ಚಂಡೀಗಢ:ವಿಧಾನಸಭಾ ಚುನಾವಣೆ ನಡೆಯುತ್ತಿರುವ ಪಂಜಾಬ್​ನಲ್ಲಿ ಸಿಎಂ ಅಭ್ಯರ್ಥಿ ಬಗ್ಗೆ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್, ಹಾಲಿ ಸಿಎಂ ಚರಣಜಿತ್ ಸಿಂಗ್ ಚನ್ನಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದೆ. ಈ ಮೂಲಕ ಚನ್ನಿ ಬಣ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಬಣವನ್ನು ಸರಿದೂಗಿಸುವ ಪ್ರಯತ್ನ ಮಾಡಿದೆ. ಲೂಧಿಯಾನದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ‘ಸಿಎಂ ಅಭ್ಯರ್ಥಿ ಯಾರೆಂದು ನಾನು ತೀರ್ವನಿಸುವುದಿಲ್ಲ. ಅದನ್ನು ರಾಜ್ಯದ ಜನತೆಗೆ, ಪಕ್ಷದ ಕಾರ್ಯಕಾರಿ ಸಮಿತಿಗೆ ಬಿಡುವೆ. ಯಾರೇ ಸಿಎಂ ಆದರೂ ಅವರು ಬಡವರ ಕಷ್ಟಗಳನ್ನು ಅರ್ಥಮಾಡಿಕೊಳ್ಳುವಂತಹ, ಅವರ ಕಣ್ಣೀರು ಒರೆಸುವಂತಹವರಾಗಿರಬೇಕು’ ಎಂದಿದ್ದಾರೆ. ಸಿಎಂ ಅಭ್ಯರ್ಥಿ ಘೋಷಣೆ ಸಿಧು ಬೆಂಬಲಿಗರಲ್ಲಿ ತುಸು ಅಸಮಾಧಾನ ಮೂಡಿಸಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 8 =
Remember me
