ಆಘಾತಗಳು ಯಾವೆಲ್ಲ ರೂಪದಲ್ಲಿ ಬಂದೆರಗುತ್ತವೆ ಎಂದು ಹೇಳಲಾಗುವುದಿಲ್ಲ. ಆದರೆ, ಅವುಗಳ ಪರಿಣಾಮ ಮಾತ್ರ ತೀವ್ರ. ಡಿಸೆಂಬರ್ 8 ಸೇನೆ ಮತ್ತು ಇಡೀ ದೇಶದ ಪಾಲಿಗೆ ದುಃಖದ ದಿನ. ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಸೇನೆಯ ಅಧಿಕಾರಿಗಳು ಸೇರಿ 13 ಮಂದಿ ತಮಿಳುನಾಡಿನ ಊಟಿ ಬಳಿಯ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮರಣ ಹೊಂದಿರುವುದು ತೀರಾ ದುಃಖದ ಘಟನೆ. ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಪತನಗೊಂಡಿದ್ದು, ಇದರ ಹಿಂದೆ ಪಿತೂರಿ, ಷಡ್ಯಂತ್ರವೇನಾದರೂ ಇದೆಯೇ ಎಂಬುದು ಸ್ಪಷ್ಟಗೊಂಡಿಲ್ಲ. ಕೇಂದ್ರ ಸರ್ಕಾರ ತನಿಖೆಗೆ ಆದೇಶ ನೀಡಿದ್ದು, ನಿಖರ ಕಾರಣ ಗೊತ್ತಾಗಬೇಕಿದೆ. ಅದೇನಿದ್ದರೂ, ಹಿರಿಯ ಅಧಿಕಾರಿಗಳ ಸಾವಿನಿಂದ ಸೃಷ್ಟಿಯಾಗಿರುವ ಶೂನ್ಯತೆಯ ತೀವ್ರತೆ ಅಗಾಧ. ದಕ್ಷ ಸೇನಾಧಿಕಾರಿಗಳನ್ನು ಕಳೆದುಕೊಂಡು ಸೇನೆ ಮಾತ್ರವಲ್ಲ, ದೇಶವೇ ದಿಗ್ಭ್ರಮೆಗೊಂಡಿದೆ. ಈ ಹಿಂದೆ 2015 ಫೆಬ್ರವರಿ 3ರಂದು ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಾಗಾಲ್ಯಾಂಡ್​ನ ದೀಮಾಪುರದಲ್ಲಿ ಅಪಘಾತಕ್ಕೆ ಈಡಾಗಿತ್ತಾದರೂ, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು. ಇದೇ ನವೆಂಬರ್ 19ರಂದು ಅರುಣಾಚಲಪ್ರದೇಶದಲ್ಲಿ ಎಂಐ-17 ಹೆಲಿಕಾಪ್ಟರ್ ಪತನಗೊಂಡು, 12 ಮಂದಿ ದುರ್ಮರಣಕ್ಕೀಡಾಗಿದ್ದರು.
ಬಿಪಿನ್ ರಾವತ್ ದೇಶದ ಮೊದಲ ಸಿಡಿಎಸ್ ಆಗಿದ್ದರು. ಭೂಸೇನೆ, ನೌಕಾಸೇನೆ, ವಾಯುಸೇನೆ- ಈ ಮೂರೂ ವಿಭಾಗಗಳಿಗೆ ಮುಖ್ಯಸ್ಥರ ನೇಮಕವಾಗಬೇಕು ಎಂಬ ಬೇಡಿಕೆ ಹಲವು ದಶಕಗಳಿಂದಲೂ ಇತ್ತು. ಅದರಲ್ಲೂ, 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಮತ್ತು ಆ ಬಳಿಕ ಈ ಬೇಡಿಕೆ ಮತ್ತಷ್ಟು ತೀವ್ರತೆ ಪಡೆದುಕೊಂಡಿತು. ಸೇನಾ ಮುಖ್ಯಸ್ಥರಾಗಿದ್ದ ರಾವತ್ ಅವರ ದಕ್ಷತೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ 2019ರಲ್ಲಿ ಅವರನ್ನು ಸಿಡಿಎಸ್ ಆಗಿ ನೇಮಿಸಿತು. ಸೇನೆಯ ಸಬಲೀಕರಣ, ಸ್ವದೇಶಿ ಶಸ್ತ್ರಾಸ್ತ್ರಗಳ ಖರೀದಿ, ಮೂರೂ ವಿಭಾಗಗಳಲ್ಲಿ ಸಮನ್ವಯ, ಭದ್ರತಾ ಕ್ರಮಗಳ ಸುಧಾರಣೆ ಸೇರಿದಂತೆ ಹಲವು ವಿಷಯಗಳಲ್ಲಿ ಅವರ ಕೊಡುಗೆ ಮಹತ್ವದ್ದು. 2015ರಲ್ಲಿ ಮ್ಯಾನ್ಮಾರ್​ನಲ್ಲಿ ನಡೆದ ಭಯೋತ್ಪಾದಕರ ವಿರುದ್ಧದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ರಾವತ್ ಮಹತ್ವದ ಪಾತ್ರ ವಹಿಸಿದ್ದರು. ಸಿಡಿಎಸ್ ಆಗಿ ಅವರು ಇನ್ನೂ ಹಲವು ಸುಧಾರಣೆಗಳನ್ನು ತರುವ ಆಶಯ ಹೊತ್ತಿದ್ದರು. ಆ ಮುನ್ನವೇ ಅವರು ನಮ್ಮನ್ನು ಅಗಲಿರುವುದು ದುರದೃಷ್ಟಕರ. ಅವರ ನಿಧನದಿಂದ ಸೇನಾ ಸುಧಾರಣೆಯ ಪ್ರಮುಖ ಕೊಂಡಿ ಕಳಚಿದಂತಾಗಿದೆ.
ಈ ಘಟನೆ ಸೇನಾವಲಯಕ್ಕಂತೂ ದೊಡ್ಡ ಪೆಟ್ಟು. ರಣರಂಗದಲ್ಲಿ ಅಗಾಧ ಮನೋಸ್ಥೈರ್ಯದಿಂದ ಸೆಣೆಸುವ ಸೈನಿಕರಿಗೆ ಇಂಥ ಅನಿರೀಕ್ಷಿತ ದುರಂತಗಳು ಮತ್ತಷ್ಟು ಪರೀಕ್ಷೆಗೆ ಒಡ್ಡುತ್ತವೆ. ಈ ಆಘಾತದಿಂದ ಸೈನಿಕರ ಮನೋಬಲ ಕುಸಿಯದಂತೆ ಮತ್ತು ಇಂಥ ಸನ್ನಿವೇಶವನ್ನು ಶತ್ರುರಾಷ್ಟ್ರಗಳು ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಕೆ ವಹಿಸುವ ಅಗತ್ಯವೂ ಇದೆ. ಅಗಲಿದ ಈ ವೀರಪುತ್ರರಿಗೆ ಭಾರದ ಹೃದಯದೊಂದಿಗೆ ಅಂತಿಮ ನಮನಗಳು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine − 7 =
Remember me
