ಶಿಮ್ಲಾ:ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ 6 ಶಾಸಕರು ಬಿಜೆಪಿ ಅಭ್ಯರ್ಥಿಗೆ ಅಡ್ಡಮತದಾನ ಮಾಡಿದ್ದರಿಂದ ಕಾಂಗ್ರೆಸ್​ನಲ್ಲಿ ಉಂಟಾಗಿದ್ದ ಬಿಕ್ಕಟ್ಟು, ಎಐಸಿಸಿ ವೀಕ್ಷಕರ ಸಂಧಾನದಿಂದ ತಾತ್ಕಾಲಿಕವಾಗಿ ಶಮನಗೊಂಡಿದೆ. ಎಐಸಿಸಿ ವೀಕ್ಷಕರಾಗಿ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಪಕ್ಷದ ಇನ್ನೊಬ್ಬ ನಾಯಕ ಭೂಪಿಂದರ್ ಹೂಡಾ ಅವರು ಇಡೀ ದಿನ ಕಾಂಗ್ರೆಸ್​ನ ಎರಡೂ ಬಣಗಳ ನಾಯಕರ ಜತೆ ಸುದೀರ್ಘ ಮಾತುಕತೆ ನಡೆಸಿದರು. ಸಿಎಂ ಸುಖವಿಂದರ್​ಸಿಂಗ್ ಜತೆ ಮತ್ತು ಭಿನ್ನಮತೀಯ ಬಣದ ಪ್ರತಿಭಾ ಸಿಂಗ್ ಮತ್ತಿತರರು ಈ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಶಾಸಕರ ಜತೆಯೂ ವೈಯಕ್ತಿಕವಾಗಿ ಮಾತನಾಡಿದರು.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯಸಭೆ ಚುನಾವಣೆಯಲ್ಲಿ ಸರ್ಕಾರದ ಕಡೆಯಿಂದ ಮತ್ತು ಶಾಸಕರ ಕಡೆಯಿಂದ ಸ್ವಲ್ಪಮಟ್ಟಿನ ವೈಫಲ್ಯ ಆಗಿದ್ದನ್ನು ಸಿಎಂ ಸುಖ್​ವಿಂದರ್​ಸಿಂಗ್ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಲು ಸಮ್ಮತಿಸಿದ್ದಾರೆಂದು ತಿಳಿಸಿದರು. ಸುಖವಿಂದರ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ ನೀಡುವುದರೊಂದಿಗೆ ಕಾಂಗ್ರೆಸ್​ನಲ್ಲಿ ಭಿನ್ನಮತ ಭುಗಿಲೆದ್ದಿತ್ತು. ಮೊನ್ನೆಯ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನ 6 ಭಿನ್ನಮತೀಯ ಶಾಸಕರು ಪಕ್ಷದ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿದ್ದರಿಂದ ಬಿಕ್ಕಟ್ಟು ಉಲ್ಬಣಿಸಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ಒತ್ತಡ ಹೆಚ್ಚಿದ್ದರಿಂದ ಎಐಸಿಸಿ ತನ್ನ ವೀಕ್ಷಕರನ್ನು ಶಿಮ್ಲಾಕ್ಕೆ ಕಳಿಸಿತ್ತು.
ಸುಖು ಸಿಎಂ ಸ್ಥಾನ ಸದ್ಯಕ್ಕೆ ಸುರಕ್ಷಿತ:ಡಿಕೆಶಿ ಮತ್ತು ಭೂಪಿಂದರ್ ಹೂಡಾ, ಇಲ್ಲಿನ ಕಾಂಗ್ರೆಸ್ ನಾಯಕರಾದ ವಿಕ್ರಮಾದಿತ್ಯ ಸಿಂಗ್, ಪ್ರತಿಭಾ ಸಿಂಗ್ ಜತೆ ಸಭೆ ನಡೆಸಿದರು. ಸಿಎಂ ಸುಖವಿಂದರ್​ಸಿಂಗ್ ವಿರುದ್ಧದ ಅಸಮಾಧಾನದ ಕುರಿತು ರ್ಚಚಿಸಿದರು. ಲೋಕಸಭಾ ಚುನಾವಣೆ ಮುಗಿಯುವ ವರೆಗೆ ಸುಖವಿಂದರ್ ಅವರನ್ನೇ ಸಿಎಂ ಹುದ್ದೆಯಲ್ಲಿ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎನ್ನಲಾಗಿದೆ. ಡಿಕೆಶಿ ಮತ್ತು ಹೂಡಾ ಸದ್ಯದಲ್ಲೇ ವರದಿ ಎಐಸಿಸಿಗೆ ಸಲ್ಲಿಸಲಿದ್ದಾರೆ.
6 ಶಾಸಕರ ಅನರ್ಹಗೊಳಿಸಿದ ಸ್ಪೀಕರ್:ರಾಜ್ಯಸಭಾ ಚುನಾವಣೆಯಲ್ಲಿ ಇತ್ತೀಚೆಗೆ ಅಡ್ಡಮತದಾನ ಮಾಡಿದ ಕಾಂಗ್ರೆಸ್​ನ ಆರು ಶಾಸಕರನ್ನು ಹಿಮಾಚಲಪ್ರದೇಶ ವಿಧಾನಸಭೆ ಸದಸ್ಯತ್ವದಿಂದ ಸ್ಪೀಕರ್ ಕುಲದೀಪ್​ಸಿಂಗ್ ಪಠಾನಿಯಾ ಅನರ್ಹಗೊಳಿಸಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲೆ ಚರ್ಚೆ ನಡೆದು ಹಣಕಾಸು ವಿಧೇಯಕ ಅಂಗೀಕಾರಕ್ಕೆ ಮತದಾನ ನಡೆಯುವಾಗ ಪಕ್ಷದ ಪರ ಮತ ಚಲಾಯಿಸುವಂತೆ ಕಾಂಗ್ರೆಸ್ ವ್ಹಿಪ್ ಹೊರಡಿಸಿದ್ದರೂ ಈ 6 ಸದಸ್ಯರು ದೂರ ಉಳಿದಿದ್ದರು. ಇದರ ಆಧಾರದ ಮೇಲೆ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಕೋರಿ ಆಡಳಿತಾರೂಢ ಕಾಂಗ್ರೆಸ್ ಮಂಗಳವಾರ ಸಂಜೆ ಸ್ಪೀಕರ್​ಗೆ ಮನವಿ ಸಲ್ಲಿಸಿತ್ತು. ಬುಧವಾರ ವಿಚಾರಣೆಗೆ ಹಾಜರಾಗುವಂತೆ ಈ ಶಾಸಕರಿಗೆ ಸ್ಪೀಕರ್ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್​ಗೆ ಸ್ಪಂದಿಸಿದ್ದ ಶಾಸಕರು ವಿಚಾರಣೆಗೆ ಹಾಜರಾಗಿ, ಈ ವಿಷಯದಲ್ಲಿ ಉತ್ತರಿಸಲು ಕನಿಷ್ಠ 7 ದಿನಗಳ ಸಮಯ ನೀಡಬೇಕಿತ್ತು ಎಂದು ವಾದಿಸಿದ್ದರು. ವ್ಹಿಪ್ ಉಲ್ಲಂಘಿಸುವ ಸದಸ್ಯರನ್ನು ತಕ್ಷಣದಿಂದಲೇ ಅನರ್ಹಗೊಳಿಸಲು ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಅವಕಾಶವಿದೆ ಎಂದು ಕಾಂಗ್ರೆಸ್ ವಾದಿಸಿತ್ತು. ಎರಡೂ ಕಡೆಯ ವಾದ ಆಲಿಸಿದ ಸ್ಪೀಕರ್ ತೀರ್ಪು ಕಾಯ್ದಿರಿಸಿದ್ದರು. ಗುರುವಾರ, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್​ನ ಈ ಹಿಂದಿನ ಆದೇಶಗಳನ್ನು ಉಲ್ಲೇಖಿಸಿ ತಮ್ಮ 30 ಪುಟಗಳ ತೀರ್ಪನ್ನು ಪ್ರಕಟಿಸಿದ್ದಾರೆ.
ರಾಜಿಂದರ್ ರಾಣಾ, ಸುಧೀರ್ ಶರ್ವ, ಇಂದರ್ ದತ್ತ ಲಖನ್​ಪಾಲ್, ದೇವಿಂದರ್ ಕುಮಾರ್ ಭುಟೂ, ರವಿ ಠಾಕೂರ್ ಮತ್ತು ಚೈತನ್ಯ ಶರ್ಮಾ ಅನರ್ಹಗೊಂಡವರು. ಇದರಿಂದ ಸದನದ ಒಟ್ಟು ಶಾಸಕರ ಸಂಖ್ಯೆ 68ರಿಂದ 62ಕ್ಕೆ ಇಳಿದಿದೆ. ಕಾಂಗ್ರೆಸ್ ಶಾಸಕರ ಸಂಖ್ಯೆ 40ರಿಂದ 34ಕ್ಕೆ ಇಳಿದಿದೆ.
ಪಕ್ಷಾಂತರ ನಿಷೇಧ ಕಾನೂನಿನ ಅನ್ವಯ ಶಾಸಕರನ್ನು ಅನರ್ಹಗೊಳಿಸಿರುವುದು ಹಿಮಾಚಲಪ್ರದೇಶದ ಇತಿಹಾಸದಲ್ಲಿಯೇ ಇದು ಮೊದಲ ಬಾರಿ. ಈ ಕ್ರಮ ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಸ್ಪೀಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನ ಈ 6 ಸದಸ್ಯರು ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಅವರಿಗೆ ಮತ ಹಾಕಿ ಅವರ ಗೆಲುವಿಗೆ ಕಾರಣರಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘಿ ಸೋಲುಂಡಿದ್ದರು. ಆಡಳಿತ ಪಕ್ಷದ ನಾಯಕರೇ ಸೋತಿದ್ದು ಇಡೀ ದೇಶದಲ್ಲಿ ಕಾಂಗ್ರೆಸ್​ಗೆ ಮುಜುಗರ ಉಂಟು ಮಾಡಿತ್ತಲ್ಲದೇ, ಸಿಎಂ ಸುಖ್ವಿಂದರ್​ಸಿಂಗ್ ಸುಖು ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೂ ದಾರಿ ಮಾಡಿಕೊಟ್ಟಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 8 =
Remember me
