ಪಂಚರಾಜ್ಯಗಳ ಚುನಾವಣೆಯಫಲಿತಾಂಶ ಹಲವು ಸಂದೇಶಗಳನ್ನು ನೀಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಹಲವು ಪ್ರಮುಖ ವಿಷಯಗಳ ಮೇಲೆ ಈ ರಾಜ್ಯಗಳ ಚುನಾವಣೆಯನ್ನು ಎದುರಿಸಿದವು. ಈ ವಿಷಯಗಳು ಲೋಕಸಭೆ ಚುನಾವಣೆಯ ಹೊತ್ತಲ್ಲೂ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇರುವುದರಿಂದ. ಈ ಎರಡೂ ಪಕ್ಷಗಳ ಮುಂದಿನ ತಂತ್ರಗಾರಿಕೆ ಏನಾಗಿರಲಿದೆ ಎಂಬುದು ಕುತೂಹಲಕರ.
ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆ ನಂತರ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ. ಮೂರು ರಾಜ್ಯಗಳನ್ನು ಗೆದ್ದುಕೊಂಡಿರುವ ಖುಷಿಯಲ್ಲಿರುವ ಭಾರತೀಯ ಜನತಾ ಪಾರ್ಟಿ ಅಬ್ಬರದ ಪ್ರಚಾರಕ್ಕೆ ಯೋಜನೆ ರೂಪಿಸುತ್ತಿದೆ. ಪರಾಭವದಿಂದ ಮಂಕಾಗಿರುವ ಕಾಂಗ್ರೆಸ್ಸಿಗೆ ‘ಇಂಡಿಯಾ’ ಒಕ್ಕೂಟದಲ್ಲೂ ಹಿನ್ನಡೆಯಾಗಿದೆ. ಸೋಲಿನಿಂದ ಚೇತರಿಸಿಕೊಂಡು ‘ಲೋಕ ಸಮರ’ಕ್ಕೆ ಅದು ಹೇಗೆ ಸಿದ್ಧವಾಗಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಬಹುದು.
ವೋಟ್​ಬ್ಯಾಂಕನ್ನು ಸೆಳೆಯುವ ಯೋಜನೆಗಳು: ರಾಜಕೀಯವೆಂದರೆ ಹಾಗೇ! ಇಲ್ಲಿ ಪರ ಮತ್ತು ವಿರೋಧ ಯಾವುದೂ ಶಾಶ್ವತವಲ್ಲ. ಕಾಲಕ್ಕೆ ತಕ್ಕಂತೆ ನೀತಿಗಳನ್ನು ಬದಲಿಸಿಕೊಳ್ಳುವ ಪಕ್ಷಗಳು, ಮತಗಳು ಸೆಳೆಯುವುದನ್ನೇ ಪ್ರಮುಖ ಉದ್ದೇಶವಾಗಿರಿಸಿಕೊಂಡಿರುತ್ತವೆ. ಕಾಂಗ್ರೆಸ್ ಉಚಿತ ಕೊಡುಗೆಗಳನ್ನು (ಗ್ಯಾರಂಟಿ) ಘೋಷಿಸಿದಾಗ, ಇಂಥ ನೀತಿಗಳು ಆರ್ಥಿಕತೆಗೆ ಮಾರಕ ಎಂದು ಬಿಜೆಪಿ ಆಕ್ರಮಕವಾಗಿಯೇ ಅದನ್ನು ವಿರೋಧಿಸಿತ್ತು. ಆದರೆ, ಐದು ರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದಂತೆ ತಾನೂ ಇದೇ ತಂತ್ರಕ್ಕೆ ಮೊರೆಹೋಯಿತು.
ಮಹಿಳಾ ಮತದಾರರ ಮನಗೆಲ್ಲಲು ಹಲವು ಘೋಷಣೆಗಳನ್ನು ಮಾಡಿತು. ಮಧ್ಯಪ್ರದೇಶದಲ್ಲಿ ‘ಲಾಡ್ಲಿ ಬಹ್ನಾ’ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಪ್ರತಿ ತಿಂಗಳು 1,250 ರೂಪಾಯಿ ನೆರವು ನೀಡಲಾಗುತ್ತಿದೆ. 1.31 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಛತ್ತೀಸ್​ಗಢದಲ್ಲೂ ಇದೇ ಮಾದರಿಯಲ್ಲಿ ವರ್ಷಕ್ಕೆ 12 ಸಾವಿರ ರೂ. ನೀಡುವ ಆಶ್ವಾಸನೆ ನೀಡಲಾಗಿದೆ. ಅಂದರೆ, ಕಾಂಗ್ರೆಸ್ ಘೋಷಿಸಿದ ನೇರ ನಗದು ವರ್ಗಾವಣೆಗೆ ಪ್ರತಿಯಾಗಿ ಅದೇ ಮಾದರಿಯ ಆದರೆ, ಪ್ರಮುಖ ವೋಟ್​ಬ್ಯಾಂಕನ್ನು ಗಮನದಲ್ಲಿ ಇರಿಸಿಕೊಂಡು ಬಿಜೆಪಿ ಜಾಣಹೆಜ್ಜೆ ಇರಿಸಿತು. ಎಲ್​ಪಿಜಿ ಸಿಲಿಂಡರನ್ನು ರಿಯಾಯಿತಿ ದರದಲ್ಲಿ ಒದಗಿಸುವ ಭರವಸೆಯೂ ಮಹಿಳಾ ಮತದಾರರಲ್ಲಿ ಸಂಚಲನ ಮೂಡಿಸಿತು.
ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡ 33 ಮೀಸಲಾತಿ ಕಲ್ಪಿಸುವ ಐತಿಹಾಸಿಕ ನಿರ್ಧಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಈಗಾಗಲೇ ಘೋಷಿಸಿದ್ದಾರೆ. ಕಾಂಗ್ರೆಸ್ ಕೂಡ ಇದನ್ನು ಬೆಂಬಲಿಸಿದೆ. ಚಿತ್ರಣ ಸ್ಪಷ್ಟವಾಗಿದೆ. ಮುಂಬರುವ ದಿನಗಳಲ್ಲಿ, ಮಹಿಳೆಯರನ್ನು ಕೇಂದ್ರೀಕೃತವಾಗಿಸಿಕೊಂಡು ಇನ್ನಷ್ಟು ಯೋಜನೆಗಳು ಘೋಷಣೆಯಾಗುವ ಸಾಧ್ಯತೆಯಿದೆ. ಅಂದರೆ, 2024ರ ಲೋಕಸಭೆ ಚುನಾವಣೆಯ ವೇಳೆಯಲ್ಲಿ ಆಡಳಿತದ ಕೀಲಿಕೈ ಯಾರಿಗೆ ನೀಡಬೇಕು ಎಂಬುದನ್ನು ಪ್ರಮುಖವಾಗಿ ಮಹಿಳೆಯರೇ ನಿರ್ಧರಿಸಲಿದ್ದಾರೆ.
ಚರ್ಚೆಯಾಗುವ ಇತರ ಪ್ರಮುಖ ವಿಷಯಗಳು
* ಅಭಿವೃದ್ಧಿ ಯೋಜನೆಗಳು, ಮೂಲಸೌಕರ್ಯಗಳ ವಿಸ್ತಾರ
* ಈಶಾನ್ಯ ರಾಜ್ಯಗಳಲ್ಲಿನ ಅಭಿವೃದ್ಧಿ ಕಾರ್ಯ
* ಉದ್ಯೋಗಸೃಷ್ಟಿ, ವಿದೇಶಿ ಬಂಡವಾಳ ಹೂಡಿಕೆ
* ಸಾಮಾಜಿಕ ಕಲ್ಯಾಣ ಯೋಜನೆಗಳು
* ಅಂತಾರಾಷ್ಟ್ರೀಯ ವಲಯದಲ್ಲಿ ಹೆಚ್ಚಿರುವ ಭಾರತದ ವರ್ಚಸ್ಸು
* ಜಾಗತಿಕ ರಾಜಕಾರಣದಲ್ಲಿ ಭಾರತದ ಪಾತ್ರ
* ಗ್ರಾಮೀಣ ಮಟ್ಟದಲ್ಲಿ ಆಗಿರುವ ಸುಧಾರಣೆಗಳು
* ಭ್ರಷ್ಟಾಚಾರರಹಿತ ಆಡಳಿತ
ಚೌಹಾಣ್​ಗೆ ಹೊಸ ಜವಾಬ್ದಾರಿ?ನಾಲ್ಕು ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮತ್ತು ಈ ಬಾರಿಯೂ ಚುನಾವಣೆಯಲ್ಲಿ ಅದ್ಭುತ ಗೆಲುವು ದೊರಕಿಸಿಕೊಟ್ಟ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಈ ಅವಧಿಗೆ ಏಕೆ ಮುಖ್ಯಮಂತ್ರಿ ಮಾಡಲಾಗಲಿಲ್ಲ ಎಂಬ ಪ್ರಶ್ನೆ ದೊಡ್ಡ ದನಿಯಲ್ಲೇ ಕೇಳಿಬಂದಿತ್ತು. ಆದರೆ, ಮಧ್ಯಪ್ರದೇಶದ ಜನರು, ‘ನಮ್ಮ ಮಾಮಾಗೆ (ಚೌಹಾಣ್) ದೊಡ್ಡ ಜವಾಬ್ದಾರಿಯೇ ಸಿಗುತ್ತದೆ’ ಎಂದು ವಿಶ್ವಾಸದಿಂದ ಹೇಳಿದ್ದರು. ಅದರಂತೆ, ವರಿಷ್ಠರ ಸೂಚನೆಯ ಮೇರೆಗೆ ದೆಹಲಿಗೆ ಬಂದಿದ್ದ ಚೌಹಾಣ್, ಮಂಗಳವಾರ ಬಿಜೆಪಿ ಅಧ್ಯಕ್ಷ ಜಗತ್ ಪ್ರತಾಪ್ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಭೇಟಿಯ ಬೆನ್ನಲ್ಲೇ, ಚೌಹಾಣ್ ಅವರಿಗೆ ಹೊಸ ಜವಾಬ್ದಾರಿ ಬಹುತೇಕ ಖಚಿತವಾಗಿದೆ. ಉತ್ತರ ಭಾರತದಲ್ಲಿ ಬಲಿಷ್ಠವಾಗಿರುವ ಬಿಜೆಪಿ, ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬರುವುದಿರಲಿ, ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲೂ ಪರದಾಡುತ್ತಿದೆ. ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದೆ. ದಕ್ಷಿಣ ಭಾರತದ 130 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಹೊಂದಿರುವುದು 29 ಕ್ಷೇತ್ರಗಳು ಮಾತ್ರ. ಈ ಬಾರಿ 60 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಹೊಂದಿದೆ. ಹೀಗಾಗಿ, ‘ಮಿಷನ್ ದಕ್ಷಿಣ’ದ ಮೇಲೆ ಗಮನ ಕೇಂದ್ರೀಕರಿಸಿರುವ ಬಿಜೆಪಿ ವರಿಷ್ಠರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಸಾಧ್ಯವಾಗುವಂತೆ ಪಕ್ಷ ಸಂಘಟನೆಯನ್ನು ಬಲಗೊಳಿಸಲು ಮುಂದಾಗಿದ್ದಾರೆ. ಇದರ ಭಾಗವಾಗಿಯೇ ಚೌಹಾಣ್ ಅವರನ್ನು ಪಕ್ಷ ದಕ್ಷಿಣ ಭಾರತಕ್ಕೆ ಕಳುಹಿಸಲಿದೆ. ‘ವಿಕಸಿತ ಭಾರತ ಯಾತ್ರೆಯ ಭಾಗವಾಗಿ ನಾನು ದಕ್ಷಿಣದ ರಾಜ್ಯಗಳಿಗೆ ತೆರಳುತ್ತಿದ್ದೇನೆ’ ಎಂದು ಖುದ್ದು ಚೌಹಾಣ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಅಲ್ಲದೆ, ನಡ್ಡಾ ಮತ್ತು ಚೌಹಾಣ್ ಹಳೆಯ ಸ್ನೇಹಿತರು. ನಡ್ಡಾ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ, ಚೌಹಾಣ್, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು.
ಜಾತಿಗಣತಿಗೆ ಹಿನ್ನಡೆಪಂಚರಾಜ್ಯಗಳ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ ಜಾತಿಗಣತಿ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಮತದಾರರನ್ನು ಸೆಳೆಯಲು ಯತ್ನಿಸಿತು. ಆದರೆ, ಒಬಿಸಿ (ಇತರ ಹಿಂದುಳಿದ ವರ್ಗ) ಮತಗಳು ಹೆಚ್ಚಾಗಿರುವ ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲೇ ಮತದಾರರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಜಾತಿಗಣತಿಯ ವಿವಾದಕ್ಕೆ ಕೈಹಾಕದಂತೆ ಪಕ್ಷದ ವರಿಷ್ಠರಿಗೆ ಸ್ಥಳೀಯ ನಾಯಕರು ಸಲಹೆ ನೀಡಿದ್ದಾರೆ. ಪರಿಣಾಮ, ಲೋಕಸಭೆ ಚುನಾವಣೆ ಹೊತ್ತಲ್ಲಿ ಜಾತಿಗಣತಿಯ ವಿಷಯ ಗೌಣವಾಗಲಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಸ್ಥಳೀಯ ಗ್ಯಾರಂಟಿ vs ಮೋದಿ ಗ್ಯಾರಂಟಿಬಿಜೆಪಿ ಈಗ ಗೆದ್ದಿರುವ ಮೂರೂ ರಾಜ್ಯಗಳಲ್ಲಿ ಸಿಎಂ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಮೋದಿ ಗ್ಯಾರಂಟಿ ಯನ್ನು ನಂಬಿಕೊಂಡೇ, ಅವರ ವರ್ಚಸ್ಸಿನ ಮೇಲೆ ಗೆಲುವು ಸಾಧಿಸಿದೆ. ಲೋಕಸಭೆ ಚುನಾವಣೆಗೂ ಬಿಜೆಪಿ ಮೋದಿ ವರ್ಚಸ್ಸನ್ನು ಅವಲಂಬಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ, ಸ್ಥಳೀಯ ಗ್ಯಾರಂಟಿಗಳು ಮತ್ತು ಮೋದಿ ಘೋಷಿಸಿದ ಗ್ಯಾರಂಟಿಗಳ (ಉಚಿತ ಕೊಡುಗೆಗಳು) ಮಧ್ಯೆ ಸ್ಪರ್ಧೆ ಏರ್ಪಡಲಿದೆ.
ಹಿಂದುತ್ವದ ಪಥ ವಿಸ್ತಾರಕಾಂಗ್ರೆಸ್ ಹಾಕಿಕೊಟ್ಟ ‘ಉಚಿತ ಕೊಡುಗೆ’ಗಳ ಮಾರ್ಗವನ್ನೇನೋ ಬಿಜೆಪಿ ಅನುಸರಿಸಿತು. ಆದರೆ, ಬಿಜೆಪಿಯ ಪ್ರಮುಖ ಅಸ್ತ್ರವಾದ ಹಿಂದುತ್ವವನ್ನು ಅನುಸರಿಸಲು ಕಾಂಗ್ರೆಸ್ ಮೀನಮೇಷ ಎಣಿಸಿದ್ದರಿಂದ, ಫಲಿತಾಂಶದ ಬಳಿಕ ‘ಕೈ’ ಹಿಸುಕಿಕೊಳ್ಳುತ್ತಿದೆ. ಅಲ್ಪಸಂಖ್ಯಾತರ ಮತಗಳು ತಪ್ಪಿಹೋಗಬಾರದು ಎಂಬ ಆತಂಕದಲ್ಲಿ ಕಾಂಗ್ರೆಸ್ ಅನುಸರಿಸಿದ್ದು ‘ಮೃದು ಹಿಂದುತ್ವ’ವನ್ನು. ಮಧ್ಯಪ್ರದೇಶದಲ್ಲಿ ದಿಗ್ವಿಜಯ್ ಸಿಂಗ್, ಕಮಲನಾಥ್, ಛತ್ತೀಸ್​ಗಢದಲ್ಲಿ ಭೂಪೇಶ್ ಬಘೇಲ್ ಮೃದು ಹಿಂದುತ್ವವನ್ನೇ ನೆಚ್ಚಿಕೊಂಡರು. ಸ್ಥಳೀಯ ಪುರಾತನ ದೇವಾಲಯಗಳನ್ನು ಜೀಣೋದ್ಧಾರಗೊಳಿಸುವ ಬಗ್ಗೆ ಮಾತನಾಡಿದರು. ಆದರೆ, ಬಿಜೆಪಿಯ ‘ರಾಮಮಂತ್ರ’ದ ಎದುರು ಮೃದು ಹಿಂದುತ್ವ ಮತದಾರನಿಗೆ ಹಿಡಿಸಲಿಲ್ಲ.
‘ಸನಾತನ ಧರ್ಮದ ಕುರಿತು ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ವಿರೋಧಿಸದೆ ಇರುವುದು ನಮ್ಮ ದೊಡ್ಡ ತಪು್ಪ’ ಎಂದು ಮಧ್ಯಪ್ರದೇಶ ಕಾಂಗ್ರೆಸ್ಸಿನ ನಾಯಕರೊಬ್ಬರು ಫಲಿತಾಂಶದ ಬಳಿಕ ಹೇಳಿದರು. ಹೀಗಾಗಿ, ಕಾಂಗ್ರೆಸ್ಸಿಗೆ ಜ್ಞಾನೋದಯವಾಗುತ್ತಿದ್ದು, ಲೋಕಸಭೆ ಚುನಾವಣೆಗೆ ಅದೂ ಹಿಂದುತ್ವ ಮಂತ್ರ ಜಪಿಸುವ ಬಗ್ಗೆ ಚಿಂತನೆ ನಡೆಸಿದೆ. ಪಕ್ಷದೊಳಗಿನ ನಾಯಕರೇ ಈ ನಿಟ್ಟಿನಲ್ಲಿ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯಮಂದಿರ ಉದ್ಘಾಟನೆಯಾಗಲಿದೆ. ಈ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಿರುವ ಬಿಜೆಪಿ, ಹಿಂದುತ್ವದ ಪಥವನ್ನು ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ವಿಸ್ತರಿಸಲು ಮುಂದಾಗಿದೆ. ಹೀಗಾಗಿ, ಕಾಂಗ್ರೆಸ್ ಕೂಡ ಮತಗಳಿಕೆ ದೃಷ್ಟಿಯಿಂದಾದರೂ ರಾಮಮಂತ್ರ ಜಪಿಸಬೇಕಾದ ಅನಿವಾರ್ಯತೆ ತಂದುಕೊಂಡಿದೆ. ಒಟ್ಟಿನಲ್ಲಿ, ಲೋಕಸಭೆ ಚುನಾವಣೆಯ ವೇಳೆ ಮತ್ತೆ ಹಿಂದುತ್ವ ಪ್ರಮುಖ ವಿಷಯವಾಗಿ ಮೊಳಗಲಿದೆ. ಉತ್ತರ ಭಾರತವಲ್ಲದೆ, ದಕ್ಷಿಣ ಭಾರತದ ರಾಜ್ಯಗಳಲ್ಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಳೆಯ ಪಿಂಚಣಿ ಯೋಜನೆಕಾಂಗ್ರೆಸ್ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ತರುವ ಆಶ್ವಾಸನೆ ನೀಡುತ್ತಿದೆ. ಸರ್ಕಾರಿ ನೌಕರರ ವರ್ಗ ಕೂಡ ದೊಡ್ಡ ಮತಬ್ಯಾಂಕ್ ಆಗಿದ್ದು, ಇದನ್ನು ಗಮನಿಸಿಯೇ ಬಿಜೆಪಿ ಹಳೆಯ ಪಿಂಚಣಿ ಯೋಜನೆಯನ್ನು ವಿರೋಧಿಸಿಲ್ಲ. ಹಾಗಂತ ಜಾರಿಯ ಬಗ್ಗೆ ಸ್ಪಷ್ಟ ಆಶ್ವಾಸನೆಯನ್ನೂ ನೀಡಿಲ್ಲ. 2024ರ ಚುನಾವಣೆಯ ಹೊತ್ತಿಗೆ, ಅದು ಈ ಬಗ್ಗೆ ಸ್ಪಷ್ಟ ನಿಲುವು ತಳೆಯುವ ಸಾಧ್ಯತೆ ಇದೆ.
ಕಣ್ಣಿಗೊಂದು ಸವಾಲು: ಜೀನಿಯಸ್​ ಮಾತ್ರ ಪಾರಿವಾಳಗಳ ಮಧ್ಯೆ ಇರುವ ಕಾಗೆ ಪತ್ತೆಹಚ್ಚಬಲ್ಲರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + nine =
Remember me
