ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಚಾಲಕನೊಬ್ಬನನ್ನು ದೆಹಲಿ ಪೊಲೀಸರು ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಚೆಗೆ ಬಂಧಿಸಿದ್ದಾರೆ. ಈತ ಪಾಕಿಸ್ತಾನದಲ್ಲಿರುವ ಯಾರೋ ಒಬ್ಬರಿಗೆ ರಹಸ್ಯ ಮಾಹಿತಿ ರವಾನಿಸುತ್ತಿದ್ದಾನೆ ಎಂದು ಭದ್ರತಾ ಸಂಸ್ಥೆಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಈ ಬಂಧನ ನಡೆದಿದೆ. ಈ ಚಾಲಕ ಹನಿ ಟ್ರ್ಯಾಪ್​ಗೆ ಒಳಗಾಗಿ ಇಂತಹ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಹಾಗಿದ್ದರೆ ಹನಿ ಟ್ರಾ್ಯಪ್ ಎಂದರೆ ಏನು? ಬೇಹುಗಾರಿಕೆ ನಡೆಸಲು, ರಹಸ್ಯ ಮಾಹಿತಿ ಕದಿಯಲು ಇದನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ?
ಹನಿ ಟ್ರ್ಯಾಪ್​ ಎಂಬ ಶಬ್ದದ ಬಳಕೆ 1980 ದಶಕದಲ್ಲಿ ಬಂದರೂ ಮಾನವನ ಲೈಂಗಿಕಾಸಕ್ತಿಯನ್ನು ಬಳಸಿಕೊಂಡು ಉದ್ದೇಶಿತ ಕೆಲಸ ಸಾಧಿಸಿಕೊಳ್ಳುವ ಈ ತಂತ್ರಗಾರಿಕೆ ಪ್ರಾಚೀನ ಕಾಲದಿಂದಲೂ ಇದೆ. ವ್ಯಕ್ತಿಯಿಂದ ಮಾಹಿತಿಯನ್ನು ಪಡೆಯಲು ಪ್ರಣಯ ಅಥವಾ ಲೈಂಗಿಕ ಸಂಬಂಧಗಳ ಬಳಕೆಯನ್ನು ‘ಹನಿ ಟ್ರಾ್ಯಪಿಂಗ್’ ಎಂದು ಕರೆಯಲಾಗುತ್ತದೆ. ಅಂದರೆ, ಮೋಹಜಾಲಕ್ಕೆ ಸಿಲುಕಿಸುವ ಮೂಲಕ ಆ ವ್ಯಕ್ತಿಯನ್ನು ಕೈಗೊಂಬೆಯಾಗಿ ಮಾಡಿಕೊಂಡು ತಮಗೆ ಬೇಕಾದ ಮಾಹಿತಿಯನ್ನು ಆತನಿಂದ ಪಡೆದುಕೊಳ್ಳಲಾಗುತ್ತದೆ. ಈ ರೀತಿ ಪಡೆದುಕೊಳ್ಳುವ ಮಾಹಿತಿಯನ್ನು ಹಣಕಾಸು ಲಾಭಕ್ಕೆ ಅಥವಾ ರಾಜಕೀಯ ಉದ್ದೇಶಗಳನ್ನು ಸಾಧಿಸಲು ಬಳಸಬಹುದಾಗಿದೆ. ಕೆಲವೊಮ್ಮೆ ಸುಲಿಗೆ ಅಥವಾ ಬ್ಲಾ್ಯಕ್​ವೆುೕಲ್​ಗಳಿಗಾಗಿಯೂ ಹನಿಟ್ರ್ಯಾಪ್​ ಮಾಡಲಾಗುತ್ತದೆ. ಆಕ್ಸ್ ಫರ್ಡ್ ಇಂಗ್ಲಿಷ್ ನಿಘಂಟಿನ ಪ್ರಕಾರ, ಈ ಪದವು ಮೊದಲು ಜಾನ್ ಲೆ ಕ್ಯಾರ್ ಅವರ 1974ರ ಪತ್ತೇದಾರಿ ಕಾದಂಬರಿ ‘ಟಿಂಕರ್, ಟೇಲರ್, ಸೋಲ್ಜರ್, ಸ್ಪೈ’ ಮೂಲಕ ಇಂಗ್ಲಿಷ್ ಭಾಷೆಯನ್ನು ಪ್ರವೇಶಿಸಿತು. ‘ನಾನು ಚಿಕ್ಕ ಹುಡುಗನಾಗಿದ್ದಾಗಲೇ ತಪ್ಪು ಮಾಡಿದೆ ಮತ್ತು ಹನಿಟ್ರಾ್ಯಪ್​ಗೆ ಕಾಲಿಟ್ಟಿದ್ದೇನೆ’ ಎಂದು ಕಾದಂಬರಿಯಲ್ಲಿನ ಪಾತ್ರಧಾರಿಯೊಬ್ಬ ತಪ್ಪೊಪ್ಪಿಕೊಳ್ಳುತ್ತಾನೆ. ಈ ಕಾದಂಬರಿಯಲ್ಲಿ ಬಳಸಲಾದ ಇತರ ಪದಗಳು ಕೂಡ ಬೇಹುಗಾರಿಕೆ ಪರಿಭಾಷೆಯನ್ನು ಪ್ರವೇಶಿಸಿವೆ.
ರಾ ಅಧಿಕಾರಿ ಹಗರಣ:ಭಾರತದ ಬೇಹುಗಾರಿಕೆ ಸಂಸ್ಥೆಯಾದ ರಾ (ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ) ಅಧಿಕಾರಿ ಕೆ.ವಿ. ಉನ್ನಿಕೃಷ್ಣನ್ 1980ರ ದಶಕದಲ್ಲಿ ಸಿಐಎ (ಅಮೆರಿಕದ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ) ಏಜೆಂಟ್ ಎಂದು ಶಂಕಿಸಲಾದ ಮಹಿಳೆಯಿಂದ ಹನಿ ಟ್ರಾ್ಯಪ್ ಆಗಿದ್ದರು ಎನ್ನಲಾಗಿತ್ತು. ಈ ಮಹಿಳೆ ಪನಾಮ ವಿಮಾನಯಾನ ಸಂಸ್ಥೆಯಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರೆ, ಉನ್ನಿಕೃಷ್ಣನ್ ರಾ ಚೆನ್ನೈ ವಿಭಾಗದ ಮುಖ್ಯಸ್ಥರಾಗಿದ್ದರು. ಶ್ರೀಲಂಕಾದ ಬಂಡುಕೋರ ಉಗ್ರ ಸಂಘಟನೆ ಎಲ್​ಟಿಟಿಇ (ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ) ಗೆ ಸಂಬಂಧಿಸಿದ ಸಂಗತಿಗಳ ಉಸ್ತುವಾರಿಯಾಗಿದ್ದರು. ಈ ಮಹಿಳೆಯ ಮೂಲಕ ಮಾಹಿತಿ ಸೋರಿಕೆ ಮಾಡಿದ್ದಕ್ಕಾಗಿ 1987ರಲ್ಲಿ ಉನ್ನಿಕೃಷ್ಣನ್​ರನ್ನು ಬಂಧಿಸಲಾಗಿತ್ತು. ಭಾರತ ಮತ್ತು ಶ್ರೀಲಂಕಾ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಈ ಬಂಧನ ನಡೆದಿತ್ತು.
ಕೆಜಿಬಿ ಕರಾಮತ್ತು:ಸೋವಿಯತ್ ಒಕ್ಕೂಟದ ಭದ್ರತಾ ಸಂಸ್ಥೆ ಕೆಜಿಬಿ ಹನಿ ಟ್ರಾ್ಯಪಿಂಗ್ ಅನ್ನು ವ್ಯಾಪಕವಾಗಿ ಬಳಸಿದೆ. ‘ಶೀತಲ ಸಮರದ ಸಮಯದಲ್ಲಿ ಮೊಜ್ನೋ ಹುಡುಗಿಯರು ಅಥವಾ ಸರಳವಾಗಿ ಮೊಜ್ನೋಸ್ ಎಂದು ಕರೆಯಲ್ಪಡುವ ಮಹಿಳಾ ಏಜೆಂಟ್​ಗಳನ್ನು ವಿದೇಶಿ ಅಧಿಕಾರಿಗಳನ್ನು ಆಕರ್ಷಿಸಿ ಕಣ್ಣಿಡಲು ನಿಯೋಜಿಸಲಾಯಿತು’ ಎಂದು ‘ಸ್ಪೈಕ್ಲೊಪಿಡಿಯಾ: ದ ಕಾಂಪ್ರಹೆನ್ಸಿವ್ ಹ್ಯಾಂಡ್​ಬುಕ್ ಆಫ್ ಎಸ್ಪಿಯೊನೇಜ್’ ಎಂಬ ಪುಸ್ತಕದಲ್ಲಿ ಬ್ರಿಟಿಷ್ ಪತ್ರಕರ್ತ ಮತ್ತು ಇತಿಹಾಸಕಾರ ಡೋನಾಲ್ಡ್ ಮೆಕ್​ಕಾರ್ವಿುಕ್ ಬರೆಯುತ್ತಾರೆ. ಮೊಜ್ನೋ ಎಂದರೆ ರಷ್ಯಾ ಭಾಷೆಯಲ್ಲಿ ‘ಅದನ್ನು ಅನುಮತಿಸಲಾಗಿದೆ’ ಎಂಬುದಾಗಿದೆ. ವಿದೇಶಿಯರೊಂದಿಗೆ ರಷ್ಯಾದ ಸಂಪರ್ಕ ನಿರ್ಬಂಧಿಸುವ ನಿಯಮಗಳನ್ನು ಉಲ್ಲಂಘಿಸಲು ಅನುಮತಿಸಿದ ಕಾರಣ ಏಜೆಂಟ್​ಗಳನ್ನು ಹೀಗೆ ಹೆಸರಿಸಲಾಗಿದೆ. ಎಂಐ5 ಎಂಬ ಬ್ರಿಟನ್ನಿನ ಗುಪ್ತಚರ ಮತ್ತು ಭದ್ರತಾ ಸಂಸ್ಥೆಯು 2009ರಲ್ಲಿ ದೇಶದ ವಿವಿಧ ಹಣಕಾಸು ಸಂಸ್ಥೆಗಳು, ಬ್ಯಾಂಕ್​ಗಳು ಮತ್ತು ವ್ಯವಹಾರಗಳಿಗೆ ಸಂಬಂಧಿಸಿದ 14 ಪುಟಗಳ ದಾಖಲೆಯನ್ನು ವಿತರಿಸಿತು. ಇದನ್ನು ‘ಚೀನೀ ಬೇಹುಗಾರಿಕೆಯಿಂದ ಬೆದರಿಕೆ’ ಎಂದು ಕರೆಯಲಾಯಿತು. ದೀರ್ಘಾವಧಿಯ ಸಂಬಂಧಗಳನ್ನು ಬೆಳೆಸುವ ಮೂಲಕ ರಹಸ್ಯ ಮಾಹಿತಿ ಕದಿಯುವ ಚೀನಾದ ಗುಪ್ತಚರ ಸಂಸ್ಥೆಗಳ ಪ್ರಯತ್ನಗಳ ಬಗ್ಗೆ ಈ ದಾಖಲೆಗಳಲ್ಲಿ ಸ್ಪಷ್ಟವಾಗಿ ಎಚ್ಚರಿಸಲಾಗಿತ್ತು. ಚೀನೀಯರು ಲೈಂಗಿಕ ಸಂಬಂಧಗಳಂತಹ ದೌರ್ಬಲ್ಯಗಳನ್ನು ಬಳಸಿಕೊಳ್ಳುತ್ತಾರೆ. ಆ ಮೂಲಕ ವ್ಯಕ್ತಿಗಳೊಂದಿಗೆ ಸಹಕರಿಸುವಂತೆ ಒತ್ತಡ ಹೇರುತ್ತಾರೆ ಎಂದು ಬ್ರಿಟಿಷ್ ಗುಪ್ತಚರ ಸಂಸ್ಥೆಯು ದಾಖಲೆಯಲ್ಲಿ ಹೇಳಿತ್ತು.
ಪತ್ರಕರ್ತನ ಫಜೀತಿ:ಇದು ಹನಿ ಟ್ರ್ಯಾಪ್​ನಲ್ಲಿ ವಿಭಿನ್ನ ಪ್ರಕರಣ. 1960ರ ದಶಕದಲ್ಲಿ ಮಾಸ್ಕೋದಲ್ಲಿ ‘ಡೇಲಿ ಟೆಲಿಗ್ರಾಫ್’ನ ವರದಿಗಾರರಾಗಿದ್ದ ಬ್ರಿಟಿಷ್ ಪತ್ರಕರ್ತ ಜೆರೆಮಿ ವುಲ್ಪೆಂಡೆನ್ ಅವರದ್ದು. ಕೆಜಿಬಿ (ರಷ್ಯದ ಬೇಹುಗಾರಿಕೆ ಸಂಸ್ಥೆ) ಆದೇಶದ ಮೇರೆಗೆ ಅವರನ್ನು ಹನಿಟ್ರಾ್ಯಪ್ ಮಾಡಲಾಗಿತ್ತು. ವಿದೇಶಿ ವ್ಯಾಪಾರ ಸಚಿವಾಲಯದ ಕ್ಷೌರಿಕನಿಂದ ಅವರು ಮೋಹಗೊಂಡಿದ್ದರು ಎಂದು ಆರೋಪಿಸಲಾಗಿತ್ತು. ಈ ಕುರಿತಂತೆ ಅವರ ಫೋಟೋಗಳನ್ನು ಸೆರೆಹಿಡಿಯಲು ಫೋಟೋಗ್ರಾಫರ್​ಗಳನ್ನು ಕೂಡ ಕೆಜಿಬಿ ನಿಯೋಜಿಸಿತ್ತು ಎನ್ನಲಾಗಿದೆ. ನಂತರ ಈ ಫೋಟೋಗಳನ್ನು ಕೆಜಿಬಿ ಅವರನ್ನು ಬ್ಲಾ್ಯಕ್​ವೆುೕಲ್ ಮಾಡಲು ಬಳಸಿಕೊಂಡಿತು. ಮಾಸ್ಕೋದಲ್ಲಿ ಪಾಶ್ಚಿಮಾತ್ಯ ಸಮುದಾಯದ ಮೇಲೆ ನಿಗಾ ವಹಿಸಿ ತನಗೆ ಮಾಹಿತಿ ನೀಡದಿದ್ದರೆ ಈ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಕೆಜಿಬಿ ಬೆದರಿಕೆ ಹಾಕಿತು. ಆದರೆ, ಅವರು ಈ ಘಟನೆಯನ್ನು ಬ್ರಿಟಿಷ್ ರಾಯಭಾರ ಕಚೇರಿಗೆ ವರದಿ ಮಾಡಿದರು. ನಂತರ ಅವರು ಲಂಡನ್ ಭೇಟಿಯಲ್ಲಿ ಗುಪ್ತಚರ ಸೇವೆಗಳ ಅಧಿಕಾರಿಯೊಬ್ಬರನ್ನು ಭೇಟಿಯಾದರು. ಆಗ, ಅವರಿಗೆ ಡಬಲ್ ಏಜೆಂಟ್ ಆಗಿ ಕೆಲಸ ಮಾಡಲು ಆ ಬ್ರಿಟಿಷ್ ಅಧಿಕಾರಿ ಸೂಚಿಸಿದ ಎನ್ನಲಾಗಿದೆ. ಈ ಒತ್ತಡದ ಪರಿಸ್ಥಿತಿ ಅವರನ್ನು ಮದ್ಯವ್ಯಸನಿಯಾಗುವಂತೆ ಮಾಡಿತು. ಅವರು ಬೇಹುಗಾರಿಕೆ ತೊರೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಿದುಳಿನ ರಕ್ತಸ್ರಾವವಾಗಿ ಸ್ನಾನಗೃಹದಲ್ಲಿ ಕುಸಿದು ಬೀಳುವುದರೊಂದಿಗೆ ಅವರು 31ನೇ ವಯಸ್ಸಿನಲ್ಲಿ ನಿಧನರಾದರು. ಎರಡು ಬೇಹುಗಾರಿಕೆ ಸಂಸ್ಥೆಗಳಿಂದಾಗಿ ಅವರ ಜೀವನ ದುರಂತವಾಯಿತು ಎಂದು ಸ್ನೇಹಿತರು ಕಂಬನಿ ಮಿಡಿದರು.
ಮಾತಾ ಹರಿ ಪ್ರಕರಣ:ಮೊದಲನೇ ಮಹಾಯುದ್ಧದ ಮಾತಾ ಹರಿ ಪ್ರಕರಣ ಹನಿ ಟ್ರಾ್ಯಪಿಂಗ್​ನ ಪ್ರಸಿದ್ಧ ಪ್ರಕರಣಗಳಲ್ಲಿ ಒಂದಾಗಿದೆ. ಮಾರ್ಗರೆಥಾ ಗೀರ್ಟ್​ರುಡಾ ಮ್ಯಾಕ್ಲಿಯೋಡ್ ಎಂಬ ಡಚ್ ಮಹಿಳೆ ನೃತ್ಯಗಾರ್ತಿ ಮತ್ತು ವೇಶ್ಯೆಯಾಗಿದ್ದು, ಆಕೆ ಮಾತಾ ಹರಿ ಎಂದು ಜನಪ್ರಿಯಳಾಗಿದ್ದಳು. ಸ್ಪೇನ್​ನಲ್ಲಿರುವ ಜರ್ಮನ್ ಶಾಖೆಯೊಂದರಿಂದ ಅವಳು ಹಣ ಪಡೆಯುತ್ತಿದ್ದಳು ಎಂದು ಸೂಚಿಸುವ ಟೆಲಿಗ್ರಾಂಗಳ ಆಧಾರದ ಮೇಲೆ ಅವಳು ಜರ್ಮನ್ ಗೂಢಚಾರಿಣಿ ಎಂದು ಆಪಾದಿಸಿ ಶಿಕ್ಷೆ ವಿಧಿಸಲಾಯಿತು.1917ರಲ್ಲಿ ಫ್ರಾನ್ಸ್​ನಲ್ಲಿ ಫೈರಿಂಗ್ ಸ್ಕಾ್ವಡ್​ನಿಂದ ಆಕೆಯನ್ನು ಗಲ್ಲಿಗೇರಿಸಲಾಯಿತು. ‘ಮಾತಾ ಹರಿ ನಿರಪರಾಧಿ ಮತ್ತು ಫ್ರೆಂಚ್ ಸೈನ್ಯಕ್ಕೆ ಬಲಿಪಶುವೊಂದರ ಅಗತ್ಯ ಇದ್ದುದರಿಂದ ಆಕೆ ಶಿಕ್ಷೆಗೆ ಗುರಿಯಾದಳು. ಯುದ್ಧದ ನಂತರ, ಫ್ರೆಂಚರು ಆಕೆಯ ವಿರುದ್ಧ ನಿಜವಾದ ಪುರಾವೆಗಳಿಲ್ಲ ಎಂದು ಹೇಳಿದರು’ ಎಂದು ಆಕೆಯ ಜೀವನಚರಿತ್ರೆಕಾರ ಪೊ›ಫೆಸರ್ ಪ್ಯಾಟ್ ಶಿಪ್​ವುನ್ ಅವರು ‘ಫೆಮ್ಮೆ ಫೇಟಾಲ್: ಲವ್, ಲೈಸ್ ಅಂಡ್ ದ ಅನ್​ನೋನ್ ಲೈಫ್ ಆಫ್ ಮಾತಾ ಹರಿ’ ಕೃತಿಯಲ್ಲಿ ಹೇಳಿದ್ದಾರೆ.
ಹಾಲಿನ ದರ ಹೆಚ್ಚಳ ವಿಚಾರ; ಕೊನೆಗಾಯ್ತು ಈ ನಿರ್ಧಾರ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
