ಕಾಂಗ್ರೆಸ್ ನೇತೃತ್ವದಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಹಿಂದುತ್ವದ ವಿರುದ್ಧ ‘ಕೇಸರಿ ಭಯೋತ್ಪಾದನೆ’ಯ ಆರೋಪ ಹೊರಿಸಲಾಯಿತು, ಬಿಜೆಪಿ ಸರ್ಕಾರ ಬಂದರೆ ಹಿಂದೂಗಳ, ಹಿಂದುತ್ವದ ಹಾಗೂ ಒಟ್ಟಾರೆ ರಾಷ್ಟ್ರೀಯವಾದಿಗಳ ರಕ್ಷಣೆ ಸಾಧ್ಯ ಎಂಬಂಥ ಮಾತುಗಳು ಇದ್ದವು. ರಾಷ್ಟ್ರೀಯವಾದಿಗಳಲ್ಲಿ ಮೂಡಿದ ಈ ಅಭದ್ರತೆಯ ಮನಸ್ಥಿತಿಗೆ ನರೇಂದ್ರ ಮೋದಿ ಎಂಬ ಆಶಾಕಿರಣ ಸಿಕ್ಕಿ 2014ರಲ್ಲಿ ಎಲ್ಲ ರಾಷ್ಟ್ರೀಯವಾದಿಗಳೂ ಒಗ್ಗಟ್ಟಾಗಿ ಅಭೂತಪೂರ್ವವೆಂಬಂತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಆದರೆ, ಹಿಂದುತ್ವ ಪರ ಹೋರಾಡುತ್ತಿರುವವರಿಗೆ, ಸಾಮಾಜಿಕ ಜಾಲತಾಣದಲ್ಲಿ ಸಂಘರ್ಷ ನಡೆಸುತ್ತಿರುವವರಿಗೆ, ವಿವಿಧ ಕ್ಷೇತ್ರದಲ್ಲಿ ಬೆಂಬಲ ನೀಡುತ್ತಿರುವವರಿಗೆ ಬಿಜೆಪಿ ಸರ್ಕಾರದಿಂದಲೂ ರಕ್ಷಣೆ ದೊರಕುತ್ತಿಲ್ಲವೇ ಎಂಬ ಅನುಮಾನ ಹೆಚ್ಚಾಗುತ್ತಿದೆ.
‘ಕಾಂಗ್ರೆಸ್​ವುುಕ್ತ ಭಾರತ ನಿರ್ವಣ’ದ ಪಣ ತೊಟ್ಟಿದ್ದ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆ ಹುಟ್ಟಿದೆ. ಬಿಜೆಪಿ ಪಾಳಯದ ತತ್ತ್ವ, ಸಿದ್ಧಾಂತಗಳನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದವರಿಗೆ ಸಿಗಬೇಕಾದ ಬೆಂಬಲ ಸಿಕ್ಕುತ್ತಿಲ್ಲ. ಅಧಿಕಾರಕ್ಕಾಗಿ ತಮ್ಮನ್ನು ಬಳಕೆ ಮಾಡಿಕೊಂಡ ಹಿಂದುತ್ವ ನಾಯಕರು ಇದೀಗ ತಮ್ಮನ್ನು ಮರೆತು ಹುಸಿ ಜಾತ್ಯತೀತವಾದಕ್ಕೆ ಮಣೆ ಹಾಕುತ್ತಿದ್ದಾರೆ ಎಂಬ ಚರ್ಚೆ ಬಿಜೆಪಿ ಸೇರಿ ಹಿಂದುತ್ವ ಕಾರ್ಯಕರ್ತರಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ. ಬಿಜೆಪಿ ಬಗ್ಗೆ ಜನಮಾನಸದಲ್ಲಿ ಹೀಗೊಂದು ಅಭಿಪ್ರಾಯ ಮೂಡಲು ಕಾರಣಗಳೇನು ಎಂಬ ಚರ್ಚೆಗಳು ನಡೆಯುತ್ತಿವೆ.
ನರೇಂದ್ರ ಮೋದಿ ಪ್ರಧಾನಿಯಾದ ನಂತರದಲ್ಲಿ ದೇಶದಲ್ಲಿ 20ಕ್ಕೂ ಹೆಚ್ಚು ರಾಜ್ಯಗಳು ಬಿಜೆಪಿಯತ್ತ ವಾಲಿದವು. ಕೆಲವು ಸಂಪೂರ್ಣ ಬಿಜೆಪಿಗೆ ಬಹುಮತ ನೀಡಿದರೆ ಮತ್ತೆ ಕೆಲವು ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಆಡಳಿತ ನಡೆಸಿವೆ. ಬಿಜೆಪಿ ಸರ್ಕಾರವಿದ್ದರೂ ರಾಷ್ಟ್ರೀಯವಾದಿಗಳಿಗೆ ರಕ್ಷಣೆ ದೊರಕಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪರ ನಿಲುವುಗಳಿಗೇ ಬೆಂಬಲ ಇರುವುದು ಸಾಮಾಜಿಕ ಜಾಲತಾಣ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಕಾಂಗ್ರೆಸ್ ವ್ಯವಸ್ಥಿತವಾಗಿ ಟ್ವಿಟರ್ ಹಾಗೂ ಫೇಸ್​ಬುಕ್​ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ರಾಷ್ಟ್ರೀಯವಾದಿ ಬಳಕೆದಾರರ ಖಾತೆಗಳ ಕುರಿತು ಸಂಘಟಿತವಾಗಿ ದೂರು ದಾಖಲಿಸುವ ಮೂಲಕ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. ‘ಫೇಸ್​ಬುಕ್​ನಲ್ಲಿ ರಾಷ್ಟ್ರೀಯವಾದಿಗಳಿಗೆ ಮಾತ್ರ ಬೆಂಬಲ ನೀಡಲಾಗುತ್ತಿದೆ’ ಎಂದು ಒಂದು ಗುಂಪು ಆರೋಪಿಸಿತ್ತು. ಈ ಆರೋಪ ತೀವ್ರ ಸ್ವರೂಪ ಪಡೆಯಿತು. ಅಂತಿಮವಾಗಿ ಭಾರತದಲ್ಲಿ ಫೇಸ್​ಬುಕ್​ನ ನೀತಿನಿರೂಪಣಾ ವಿಭಾಗದ ಮುಖ್ಯಸ್ಥೆ ಆಂಖಿ ದಾಸ್ ಅವರ ಕುಟುಂಬ ಆರೆಸ್ಸೆಸ್ ಹಿನ್ನೆಲೆ ಹೊಂದಿದೆ ಎಂದು ಆರೋಪ ಮಾಡಲಾಯಿತು. ಆಂಖಿ ದಾಸ್ ಪರ ರಾಷ್ಟ್ರೀಯವಾದಿಗಳು ಸಾಕಷ್ಟು ಸೆಣೆಸಾಟ ನಡೆಸಿದರು. ಆದರೂ ಅಂತಿಮವಾಗಿ ಇತ್ತೀಚೆಗಷ್ಟೆ ಆಂಖಿ ದಾಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೇಂದ್ರದಲ್ಲಿರುವ ಸರ್ಕಾರವಾಗಲಿ, ಬಿಜೆಪಿ ಪಕ್ಷವಾಗಲಿ ಪರೋಕ್ಷವಾಗಿಯೂ ಈ ನಿಟ್ಟಿನಲ್ಲಿ ತಮ್ಮ ಬೆಂಬಲಕ್ಕೆ ಬರಲಿಲ್ಲ ಎಂಬ ಅಸಮಾಧಾನ ಅವರಲ್ಲಿದೆ.
ಕಂಗನಾ ಪ್ರಕರಣ: ರಾಷ್ಟ್ರೀಯವಾದಿಗಳಿಗೆ ಮತ್ತಷ್ಟು ಅಭದ್ರತೆ ಮೂಡಿಸಿದ ಮತ್ತೊಂದು ಪ್ರಕರಣವೆಂದರೆ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ನಡೆದ ಪಿತೂರಿ. ಚಿತ್ರನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರದಲ್ಲಿ, ಬಾಲಿವುಡ್​ನಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತದ ವಿರುದ್ಧ ಕಂಗನಾ ದನಿಯೆತ್ತಿದರು. ಸಾಮಾನ್ಯರೊಬ್ಬರು ಚಿತ್ರರಂಗದಲ್ಲಿ ಮೇಲೆ ಬರಲಾಗದಂತೆ ತಡೆಯಲಾಗುತ್ತಿರುವುದನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರು. ಅವರ ವಿರುದ್ಧ ಮಹಾರಾಷ್ಟ್ರ ಸರ್ಕಾರದ ಪಾಲುದಾರ ಪಕ್ಷವಾದ ಶಿವಸೇನೆ ಬಹಿರಂಗ ಸವಾಲು ಎಸೆಯಿತು. ‘ಮುಂಬೈಗೆ ಬಂದು ನೋಡಿ’ ಎಂಬ ಬೆದರಿಕೆ ಹಾಕಲಾಯಿತು. ಇದ್ದಕ್ಕಿದ್ದಂತೆ ಮುಂಬೈನಲ್ಲಿರುವ ಕಂಗನಾ ರಣಾವತ್ ಮನೆಯನ್ನು ಬುಲ್ಡೋಜರ್ ಬಳಸಿ ಹಾನಿ ಮಾಡಲಾಯಿತು. ಮೇಲ್ನೋಟಕ್ಕೆ ಸರ್ಕಾರ ಕಂಗನಾ ಅವರಿಗೆ ಭದ್ರತೆ ನೀಡಿದಂತೆ ಕಂಡರೂ, ಒಟ್ಟಾರೆ ಪ್ರಕರಣದಲ್ಲಿ ಬೆಂಬಲ ನೀಡಿದ್ದು ಕಾಣಲೇ ಇಲ್ಲ.
ಕಂಗನಾ ಮಾತನ್ನು ನಿರ್ಭಿಡೆಯಿಂದ ಬಿತ್ತರ ಮಾಡುತ್ತಿದ್ದ ಹಾಗೂ ದೇಶ, ಧರ್ಮ, ಸೈನಿಕರು, ಸಾಧು-ಸಂತರ ಪರ ದನಿಯಾಗಿದ್ದ ಪತ್ರಕರ್ತ ಅರ್ನಬ್ ಗೋಸ್ವಾಮಿಯವರನ್ನು ಮಹಾರಾಷ್ಟ್ರ ಸರ್ಕಾರ ನಡೆಸಿಕೊಳ್ಳುತ್ತಿರುವ ಪರಿಯಂತೂ ರಾಷ್ಟ್ರೀಯವಾದಿಗಳಲ್ಲಿ ಭಯವನ್ನೇ ಮೂಡಿಸಿದೆ. ಶಿವಸೇನಾ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಷ್ಟ್ರೀಯವಾದಿಗಳ ಮೇಲೆ ಹಗೆ ಸಾಧಿಸಲು ಹೊರಟಿದೆ. ರಾಷ್ಟ್ರೀಯವಾದಿಗಳ ಮೇಲೆ ಮೇಲ್ನೋಟಕ್ಕೆ ಆರೋಪಗಳಿಲ್ಲದಿದ್ದರೂ ಬೇಕೆಂದೇ ಹಿಂಸೆ ನೀಡಲಾಗುತ್ತಿದೆ. ಈ ಮೂಲಕ ಬಿಜೆಪಿ ಪಾಳಯಕ್ಕೆ ನೇರಾನೇರ ಎಚ್ಚರಿಕೆ ಸಂದೇಶವನ್ನು ಕಾಂಗ್ರೆಸ್ ಪಾಳಯ ರವಾನಿಸುತ್ತಿದೆ.
ಕಂಗನಾ ಮತ್ತು ಅರ್ನಬ್ ಗೋಸ್ವಾಮಿ ಇಬ್ಬರೂ ರಾಷ್ಟ್ರೀಯವಾದಿ ತತ್ತ್ವ-ಸಿದ್ಧಾಂತ ಬೆಂಬಲಿಸಿಕೊಂಡೇ ಬಂದವರು. ಇವರ ದೇಶಪರ ನಿಲುವುಗಳನ್ನು ಬಿಜೆಪಿ ತನ್ನ ಚುನಾವಣಾ ಲಾಭಕ್ಕೂ ಬಳಕೆ ಮಾಡಿಕೊಂಡಿರಬಹುದು. ಆದರೆ ಇದೀಗ ರಾಷ್ಟ್ರೀಯವಾದಿಗಳು ಅಪಾಯದಲ್ಲಿರುವಾಗ ಅವರ ಪರ ನಿಲ್ಲಬೇಕೆ ಬೇಡವೇ ಎಂಬ ಬಗ್ಗೆ ಬಿಜೆಪಿ ಎರಡನೇ ಯೋಚನೆ ಮಾಡುತ್ತಿರುವಂತೆ ಭಾಸವಾಗುತ್ತಿದೆ.
ಕಾಂಗ್ರೆಸ್​ನಿಂದ ರಾಜಕೀಯ ದ್ವೇಷ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ತನ್ನ ವಿರೋಧಿಗಳನ್ನ ಹತ್ತಿಕ್ಕಲು ನೇರವಾಗಿಯೇ ಕಣಕ್ಕಿಳಿಯುತ್ತದೆ, ರಾಜಕೀಯ ದ್ವೇಷ ಸಾಧಿಸುತ್ತದೆ. ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ ನರೇಂದ್ರ ಮೋದಿ, ಅಮಿತ್ ಷಾ ಮಾತ್ರವಲ್ಲದೆ ರಾಜ್ಯದ ಸಿಎಂ ಯಡಿಯೂರಪ್ಪನವರ ಮೇಲೂ ಹಗೆ ಸಾಧಿಸಲು ಮುಂದಾದ ಉದಾಹರಣೆಗಳಿವೆ. ಯಡಿಯೂರಪ್ಪನವರನ್ನು ರಾಜಕೀಯ ಖೆಡ್ಡಾಗೆ ಬೀಳಿಸಲೆಂದೇ ಹಲವು ಡಿನೊಟಿಫಿಕೇಶನ್ ಪ್ರಕರಣಗಳಲ್ಲಿ ಅವರನ್ನು ಸಿಲುಕಿಸುವ ಪ್ರಯತ್ನ ನಡೆಯಿತು. ಯುಪಿಎ ಹೆಣೆದ ರಾಜಕೀಯ ಬಲೆಯಿಂದ ಯಡಿಯೂರಪ್ಪರನ್ನು ಬಿಡಿಸುವುದರ ಬದಲು ಅವರ ಮೇಲೆ ಮತ್ತಷ್ಟು ಒತ್ತಡವನ್ನು ಹೇರುವಂಥ ಪ್ರಯತ್ನಗಳು ನಡೆದವು. ಪರಿಣಾಮ, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಬಿಎಸ್​ವೈ ಬಿಜೆಪಿಯನ್ನೇ ತೊರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ನಂತರ ನಡೆದಿದ್ದೆಲ್ಲವೂ ಈಗ ಇತಿಹಾಸ.
ಆಂಧ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮನೆ ಮಾತಾಗಿಸಿದ ವೈ.ಎಸ್. ರಾಜಶೇಖರ ರೆಡ್ಡಿ ಸಾವಿನ ನಂತರ ಜಗನ್ ರೆಡ್ಡಿ ವಿರುದ್ಧ ಕಾಂಗ್ರೆಸ್ ಜಿದ್ದು ಸಾಧಿಸಿತು. ಕೊನೆಗೆ ಜಗನ್ ಕಾಂಗ್ರೆಸ್ ಪಕ್ಷವನ್ನೇ ತೊರೆದು ವೈಎಸ್​ಆರ್ ಕಾಂಗ್ರೆಸ್ ಸ್ಥಾಪಿಸಿದ ನಂತರವೇ ಮರಳಿ ಅಧಿಕಾರಕ್ಕೇರಲು ಸಾಧ್ಯವಾಗಿದ್ದು.
ಯುಪಿಎ ಅವಧಿಯಲ್ಲಿ ಸಾಧಿ್ವ ಪ್ರಜ್ಞಾಸಿಂಗ್ ಠಾಕೂರ್ ವಿರುದ್ಧ ಅಮಾನವೀಯ ವರ್ತನೆ ತೋರಲಾಯಿತು. ಮಾಲೆಂಗಾವ್ ಸ್ಪೋಟದ ಸುಳ್ಳು ಆರೋಪ ಹೊರಿಸಿ ಅವರ ಜೀವನವನ್ನೇ ನರಕ ಮಾಡಲಾಯಿತು. 2019ರ ಚುನಾವಣೆಯಲ್ಲೂ ಸಾಧಿ್ವ ಪ್ರಜ್ಞಾ ಜನಪ್ರಿಯತೆಯನ್ನು ಬಳಸಿಕೊಂಡು ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತು. ವಿರೋಧಿಗಳ ಹೆಡೆಮುರಿ ಕಟ್ಟಲೇಬೇಕು ಎನ್ನುವ ಕಾಂಗ್ರೆಸ್​ನ ಕಾರ್ಯಸೂಚಿಯಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲ. ವಿರೋಧಿಗಳನ್ನು ಕಾಂಗ್ರೆಸ್ ರೀತಿ ಹೆಡೆಮುರಿ ಕಟ್ಟಬೇಕು ಎಂದು ಯಾರೂ ಕೇಳುತ್ತಿಲ್ಲ. ಆದರೆ ರಾಷ್ಟ್ರೀಯತೆ ಪರ ನಿಲ್ಲುವವರ ರಕ್ಷಣೆಗೆ ನಿಲ್ಲುವವರನ್ನಾದರೂ ರಕ್ಷಣೆ ಮಾಡುವಷ್ಟು ಬಿಜೆಪಿ ಮನಸ್ಸು ಮಾಡುತ್ತಿಲ್ಲ ಎಂಬ ಮಾತು ಜನಮಾನಸದಲ್ಲಿ ಬಲವಾಗುತ್ತಿದೆ.
ಪಾಲ್ಘರ್​ನಲ್ಲಿ ಸಾಧುಗಳ ಹತ್ಯೆ ನಡೆದಾಗಲೂ ಬಿಜೆಪಿ ಪಾಳಯ ತುಟಿ ಬಿಚ್ಚಲಿಲ್ಲ. ಇದೀಗ ಆಂಖಿ ದಾಸ್, ಕಂಗನಾ ರಣಾವತ್, ಅರ್ನಬ್ ಗೋಸ್ವಾಮಿ ಪ್ರಕರಣಗಳು ರಾಷ್ಟ್ರೀಯವಾದಿಗಳ ಕುರಿತು ಬಿಜೆಪಿ ನಿಲುವು ಬದಲಾಗಿರುವ ಸೂಚನೆ ನೀಡುತ್ತಿದೆ.
ಬಿಜೆಪಿ ರಾಷ್ಟ್ರೀಯವಾದಿಗಳ ಪರ ಇದೆ
ರಾಷ್ಟ್ರೀಯವಾದಿಗಳ ವಿರುದ್ಧ ನಡೆಯುತ್ತಿರುವ ಪಿತೂರಿ ಕುರಿತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
‘ಇದೀಗ ಮಹಾರಾಷ್ಟ್ರದಲ್ಲಿ ನಡೆಯುತ್ತಿರು ವುದು ಕಾಂಗ್ರೆಸ್ ತುಷ್ಟೀಕರಣ ನೀತಿ. ಸೋನಿಯಾ ಗಾಂಧಿ ಅವರನ್ನು ತೃಪ್ತಿಪಡಿಸುವ ಸಲುವಾಗಿ ಹಾಗೂ ಶರದ್ ಪವಾರ್ ಅವರನ್ನು ಸಂತಸಪಡಿಸಲು ಶಿವಸೇನೆ ಪ್ರಯತ್ನ ನಡೆಸುತ್ತಿದೆ. ಇದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉದ್ಧಟತನದ ಪರಮಾವಧಿ. ಸರ್ಕಾರವನ್ನು ಭದ್ರಗೊಳಿಸಿಕೊಳ್ಳಬೇಕೆಂಬ ದುರಾಲೋಚನೆಯಿಂದ ಶಿವಸೇನೆ ಈ ದೇಶವಿರೋಧಿ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿಯಾದ ಈ ಕ್ರಮವನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ, ಪತ್ರಕರ್ತ ಆರ್ನಬ್ ಗೋಸ್ವಾಮಿ ಹಾಗೂ ನಟಿ ಕಂಗನಾ ರಣಾವತ್ ಜತೆಗೆ ನಿಲ್ಲಲಿದೆ. ಇಬ್ಬರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಹೂಡಿರುವ ಪ್ರಕರಣಗಳಲ್ಲಿ ಯಾವುದೇ ಹುರುಳಿಲ್ಲ.
ರಾಷ್ಟ್ರೀಯವಾದದ ಪರ ಬಿಜೆಪಿ ಎಂದೆಂದಿಗೂ ಇದೆ ಎಂಬುದಕ್ಕೆ ಕಾಶ್ಮೀರದಲ್ಲಿ ಪರಿಚ್ಛೇದ 370ನ್ನು ತೆಗೆದಿದ್ದು, ಭಯೋತ್ಪಾದಕರನ್ನು ಮಟ್ಟ ಹಾಕಿದ್ದು, ರಾಮಮಂದಿರ ನಿರ್ವಣವನ್ನು ತ್ವರಿತಗೊಳಿಸಿದ್ದು, ವರವರರಾವ್ ಅವರಂಥ ನಗರ ನಕ್ಸಲರ ವಿರುದ್ಧ ಕ್ರಮ ಕೈಗೊಂಡದ್ದು, ಈಶಾನ್ಯ ರಾಜ್ಯಗಳಲ್ಲಿ ಬಂಡುಕೋರರನ್ನು ಮಟ್ಟ ಹಾಕಿದ್ದು, ವಿದೇಶದಿಂದ ದೇಣಿಗೆ ಪಡೆದು ದೇಶವಿರೋಧಿ ಕೃತ್ಯ ನಡೆಸುತ್ತಿದ್ದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೂ ಸೇರಿ ಅನೇಕ ಉದಾಹರಣೆಗಳಿವೆ. ಒಂದೆರಡು ಉದಾಹರಣೆಗಳನ್ನು ಮುಂದುಮಾಡಿಕೊಂಡು, ರಾಷ್ಟ್ರೀಯವಾದಿಗಳಿಗೆ ಅಭದ್ರತೆ ಎಂಬ ಚರ್ಚೆ ನಡೆಸುವುದು ಬೇಡ. ಬಿಜೆಪಿ ಎಂದೆಂದಿಗೂ ರಾಷ್ಟ್ರೀಯವಾದಿಗಳ ಜತೆಗೆ ನಿಲ್ಲುತ್ತದೆ’ ಎಂದು ರವಿಕುಮಾರ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + ten =
Remember me
