ಗೃಹ ಸಚಿವಾಲಯದ 2021-22ರ ವಾರ್ಷಿಕ ವರದಿಯ ಪ್ರಕಾರ, ಪ್ರತಿ ಸ್ಥಳೀಯ ಮಾತೃಭಾಷೆಯ ಮೂಲ ಸೊಗಡನ್ನು ಸಂರಕ್ಷಿಸಲು ಮತ್ತು ವಿಶ್ಲೇಷಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ (ಎನ್​ಐಸಿ) ವೆಬ್ ಆರ್ಕೆವ್ (ಜಾಲತಾಣ ಸಂಗ್ರಹಾಲಯ) ಸ್ಥಾಪಿಸಲು ಯೋಜಿಸಲಾಗಿದೆ. ವಿವಿಧ ಭಾಷೆ ಹಾಗೂ ವೈವಿಧ್ಯಮಯ ಸಂಸ್ಕೃತಿಯುಳ್ಳ ಭಾರತದ ಸೊಗಡನ್ನು ಕಾಪಾಡುವ ಅಗತ್ಯವಿದ್ದು, ಮಾತೃಭಾಷೆಯ ಅಸ್ಮಿತೆಯನ್ನು ಸಂರಕ್ಷಿಸಲು ಇದನ್ನು ಸ್ಥಾಪಿಸಲು ಯೋಜಿಸಲಾಗಿದೆ. ಈ ಉದ್ದೇಶಕ್ಕಾಗಿ ಆಂತರಿಕ ಭಾಷಾಶಾಸ್ತ್ರಜ್ಞರ ಮೂಲಕ ಭಾಷಾ ದತ್ತಾಂಶವನ್ನು ಜೋಡಿಸುವ ನಿಟ್ಟಿನಲ್ಲಿ ಸಂಪಾದನೆ ಕಾರ್ಯದ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿದೆ. ಎನ್​ಐಸಿ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್​ಎಫ್​ಡಿಸಿ) ಪ್ರಸ್ತುತ ಸಮೀಕ್ಷೆ ಮಾಡಲಾದ ಮಾತೃಭಾಷೆಗಳ ಭಾಷಾ ದತ್ತಾಂಶವನ್ನು ವಿಡಿಯೋ-ಆಡಿಯೋ ಫೈಲ್​ಗಳಲ್ಲಿ ದಾಖಲಿಸುತ್ತಿದೆ ಮತ್ತು ಸಂರಕ್ಷಿಸುತ್ತಿದೆ.
ಭಾರತದಲ್ಲಿ ಮಾತೃಭಾಷೆಗಳೆಷ್ಟು?:2018ರಲ್ಲಿ ಬಿಡುಗಡೆಯಾದ 2011ರ ಭಾಷಾ ಜನಗಣತಿಯ ಮಾಹಿತಿಯ ಪ್ರಕಾರ, ಭಾರತದಲ್ಲಿ ಮಾತೃಭಾಷೆಯಾಗಿ ಮಾತನಾಡುವ 19,500ಕ್ಕೂ ಹೆಚ್ಚು ಭಾಷೆಗಳು ಮತ್ತು ಉಪಭಾಷೆಗಳಿವೆ. ಭಾಷಾಶಾಸ್ತ್ರದ ಪರಿಶೀಲನೆ ಮತ್ತು ತರ್ಕಬದ್ಧತೆಯ ನಂತರ ಈ 19,500 ಭಾಷೆಗಳನ್ನು ಮಾತೃಭಾಷೆಯ 121 ವರ್ಗಗಳಾಗಿ ವರ್ಗೀಕರಿಸಲಾಗಿದೆ.
2011ರ ಭಾಷಾ ಜನಗಣತಿಯ ಮಾಹಿತಿ ಪ್ರಕಾರ, ಹಿಂದಿಯು ದೇಶದ ಅತಿಹೆಚ್ಚು ಜನರು ಮಾತನಾಡುವ ಮಾತೃಭಾಷೆಯಾಗಿದೆ. 52.8 ಕೋಟಿ ಜನರು ಹಿಂದಿ ಮಾತನಾಡುತ್ತಾರೆ. ಈ ಭಾಷಿಕರ ಜನಸಂಖ್ಯೆಯು ದೇಶದ ಒಟ್ಟಾರೆ ಜನಸಂಖ್ಯೆಯ ಶೇಕಡಾ 43.6 ರಷ್ಟಿದೆ. ಇದರ ನಂತರ 9.7 ಕೋಟಿ ಜನರು ಅಂದರೆ ದೇಶದ ಒಟ್ಟಾರೆ ಜನಸಂಖ್ಯೆಯ ಶೇಕಡಾ 8ರಷ್ಟು ಮಂದಿ ಬಂಗಾಳಿ ಭಾಷೆ ಮಾತನಾಡುತ್ತಾರೆ. ಇದು ದೇಶದ ಎರಡನೇ ಅತ್ಯಂತ ಜನಪ್ರಿಯ ಮಾತೃಭಾಷೆಯಾಗಿದೆ. ಜನರು ಸಮೀಕ್ಷೆಯಲ್ಲಿ ನೀಡಿದ ಪ್ರತಿಕ್ರಿಯೆ ಆಧರಿಸಿ ಮಾತೃಭಾಷೆಯನ್ನು ಯಾವುದೆಂಬುದನ್ನು ಪರಿಗಣಿಸಲಾಗಿದೆ.
ಭಾರತದ ಭಾಷಾ ಸಮೀಕ್ಷೆ ಎಂದರೇನು?:ಆರನೇ ಪಂಚವಾರ್ಷಿಕ ಯೋಜನೆ ಯಿಂದ ಭಾರತದಲ್ಲಿ ಭಾಷಾ ಸಮೀಕ್ಷೆಯು (ಎಲ್​ಎಸ್​ಐ) ನಿಯಮಿತ ಸಂಶೋಧನಾ ಚಟುವಟಿಕೆಯಾಗಿ ಪರಿಣಮಿಸಿದೆ ಎಂದು ಗೃಹ ಸಚಿವಾಲಯ ಹೇಳಿದೆ. ನವೀಕರಿಸಿದ ಭಾಷಾಶಾಸ್ತ್ರದ ಸನ್ನಿವೇಶವನ್ನು ಪ್ರಸ್ತುತಪಡಿಸುವುದೇ ಭಾಷಾಶಾಸ್ತ್ರದ ಸಮೀಕ್ಷೆಯ ಪ್ರಾಥಮಿಕ ಉದ್ದೇಶವಾಗಿದೆ ಎಂದು ಎಲ್​ಎಸ್​ಐ ಅಧಿಕೃತ ವೆಬ್​ಸೈಟ್​ನ ಹೇಳುತ್ತದೆ. ಪ್ರತಿಯೊಂದು ರಾಜ್ಯಗಳಲ್ಲಿ ಸಾಮಾಜಿಕ/ಶೈಕ್ಷಣಿಕ ಯೋಜನೆಗಳನ್ನು ರೂಪಿಸುವವರಿಗೆ ಯೋಜಿತ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಯೋಜನೆ ತಯಾರಿಕೆಗೆ ಅಗತ್ಯವಿರುವ ಮಾಹಿತಿಗಳನ್ನು ಒದಗಿಸುವ ಗುರಿಯನ್ನೂ ಈ ಸಮೀಕ್ಷೆ ಹೊಂದಿದೆ. ಎಲ್​ಎಸ್​ಐ ತನ್ನ ಸಮೀಕ್ಷೆಗಳ ಕುರಿತಂತೆ ಪ್ರಕಟಣೆಗಳನ್ನು ಹೊರಡಿಸುತ್ತದೆ. ಈಗಾಗಲೇ ಜಾರ್ಖಂಡ್ ರಾಜ್ಯದ ಸಂಪುಟವನ್ನು ಅಂತಿಮಗೊಳಿಸಲಾಗಿದ್ದು, ಹಿಮಾಚಲ ಪ್ರದೇಶದ ಸಂಪುಟ ಪೂರ್ಣಗೊಳ್ಳುವ ಹಂತದಲ್ಲಿದೆ. ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳ ಸಂಪುಟಕ್ಕಾಗಿ ಕ್ಷೇತ್ರಕಾರ್ಯ ನಡೆಯುತ್ತಿದೆ.
ಮಾತೃಭಾಷೆಯ ಮಹತ್ವ:ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) 2020ರ ಅಡಿಯಲ್ಲಿ, ಮಾತೃಭಾಷೆ ಮತ್ತು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವತ್ತ ಗಮನಹರಿಸಲಾಗಿದೆ ಎಂದು ಕೇಂದ್ರ ಸಚಿವ ಡಾ. ಸುಭಾಸ್ ಸರ್ಕಾರ್ ಹೇಳಿದ್ದಾರೆ. ಈಚೆಗೆ ಮಾತನಾಡಿದ್ದ ರಾಷ್ಟ್ರಪತಿ ದ್ರೌಪದಿ ಮುಮು ಅವರು, ಮಾತೃಭಾಷೆಯಲ್ಲಿ ಕಲಿಸಿದರೆ ವಿಜ್ಞಾನ, ಸಾಹಿತ್ಯ ಮತ್ತು ಸಮಾಜ ವಿಜ್ಞಾನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದ್ದರು. ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಶಾಲಾ ಶಿಕ್ಷಕರ ಕೊಡುಗೆಯಿಂದಾಗಿ, ತಾವು ತಮ್ಮ ಹಳ್ಳಿಯಿಂದ ಕಾಲೇಜಿಗೆ ಹೋದ ಮೊದಲ ಹುಡುಗಿಯಾಗುವಂತಾಯಿತು ಎಂದು ಸ್ಮರಿಸಿದ್ದರು. ಮಾತೃಭಾಷೆಯಲ್ಲಿ ಕಲಿಸಿದರೆ ವಿಜ್ಞಾನ, ಸಾಹಿತ್ಯ ಮತ್ತು ಸಮಾಜ ವಿಜ್ಞಾನದಲ್ಲಿ ಪ್ರತಿಭೆ ಅಭಿವೃದ್ಧಿಪಡಿಸುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಅವರು ಹೇಳಿದ್ದರು.
ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್​ಇಪಿ) ಎರಡು ವರ್ಷಗಳ ಸಂಭ್ರಮಾಚರಣೆಯ ಸಮಾರಂಭದಲ್ಲಿ ಕೆಲ ತಿಂಗಳುಗಳ ಹಿಂದೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ಮಾತೃಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಯಲ್ಲಿ ಶಿಕ್ಷಣವನ್ನು ಮುಂದುವರಿಸುವುದರಿಂದಾಗಿ ಶೇ. 95ರಷ್ಟು ಭಾರತೀಯರು ತಮ್ಮ ನಿಜವಾದ ಸಾಮರ್ಥ್ಯ ತೋರಿಸಲು ತಡೆಯುಂಟಾಗುತ್ತಿದೆ ಎಂದು ಹೇಳಿದ್ದರು. ‘ಮಾತೃಭಾಷೆಯಲ್ಲಿ ಶಿಕ್ಷಣ ಹಾಗೂ ಸಂಶೋಧನೆಗೆ ಪ್ರೋತ್ಸಾಹ ನೀಡುವುದು- ಇವೆರಡರ ನಡುವೆ ಬಲವಾದ ಸಂಬಂಧ ಇದೆ ಎಂದು ನಾನು ಬಲವಾಗಿ ಭಾವಿಸುತ್ತೇನೆ. ನಾವು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಬೇಕಾದರೆ, ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಆದ್ಯತೆ ನೀಡಬೇಕು’ ಎಂದು ಎಂದು ಗೃಹ ಸಚಿವರು ಹೇಳಿದ್ದರು. ಉನ್ನತ ಶಿಕ್ಷಣದಲ್ಲಿ, ವಿಶೇಷವಾಗಿ ಇಂಜಿನಿಯರಿಂಗ್​ನಲ್ಲಿ ಭಾರತೀಯ ಭಾಷೆಗಳ ಬಳಕೆಗೆ ಸರ್ಕಾರ ಒತ್ತು ನೀಡುತ್ತಿರುವ ಸಂದರ್ಭದಲ್ಲಿಯೇ ಗಣ್ಯರಿಂದ ಇಂತಹ ಅಭಿಪ್ರಾಯಗಳು ವ್ಯಕ್ತವಾಗಿರುವುದು ವಿಶೇಷವಾಗಿದೆ.
ದೇಶದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತದೆ. ಆದರೆ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2021ರ ಜನಗಣತಿ ಕಾರ್ಯ ನಡೆದಿಲ್ಲ. ಮುಂಬರುವ ಜನಗಣತಿಯ ಬೃಹತ್ ಕಾರ್ಯವನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಸುಧಾರಿತ ಜಿಯೋಸ್ಪೇಷಿಯಲ್ ತಂತ್ರಜ್ಞಾನದ ಬಳಕೆಯೂ ಈ ಕ್ರಮಗಳಲ್ಲಿ ಸೇರಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ದೇಶದ ಸಂಪೂರ್ಣ ಭೌಗೋಳಿಕ ಪ್ರದೇಶದ ಸರಿಯಾದ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಜಿಲ್ಲೆಗಳು, ಗ್ರಾಮಗಳು, ಪಟ್ಟಣಗಳು ಮತ್ತು ಪಟ್ಟಣಗಳೊಳಗಿನ ವಾರ್ಡ್​ಗಳ ಆಡಳಿತ ಘಟಕಗಳನ್ನು ತೋರಿಸುವ ನಕ್ಷೆಗಳ ತಯಾರಿಕೆ ಮತ್ತು ನವೀಕರಣವನ್ನು ಜನಗಣತಿ ಪೂರ್ವದ ಮ್ಯಾಪಿಂಗ್ ಚಟುವಟಿಕೆಗಳು ಒಳಗೊಂಡಿವೆ. ಇದಲ್ಲದೆ, ವೆಬ್-ಆಧಾರಿತ ಸಂವಾದಾತ್ಮಕ ನಕ್ಷೆಗಳ ಮೂಲಕ ಜನಗಣತಿ ಫಲಿತಾಂಶಗಳ ಪ್ರಸಾರಕ್ಕಾಗಿ ತಯಾರಿ ಮಾಡಲಾಗುತ್ತಿದೆ. ಈ ದಿಕ್ಕಿನಲ್ಲಿ ಪೂರ್ವಸಿದ್ಧತಾ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಜನಗಣತಿ ಮ್ಯಾಪಿಂಗ್ ಚಟುವಟಿಕೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಉತ್ತಮ ಸಾಫ್ಟ್ ವೇರ್ ಖರೀದಿ ಮತ್ತು ಆಧುನಿಕ ಸಾಫ್ಟ್​ವೇರ್ ಬಳಸುವ ಬಗ್ಗೆ ತರಬೇತಿ ಪಡೆದ ಮಾನವಶಕ್ತಿ ಹೊಂದಾಣಿಕೆಯು ಈ ಉಪಕ್ರಮಗಳಲ್ಲಿ ಸೇರಿವೆ ಎಂದು ವರದಿ ಹೇಳಿದೆ. 2011ರ ಜನಗಣತಿಯ ನಂತರ 2019ರ ಡಿಸೆಂಬರ್ 31ರವರೆಗೆ ದೇಶದಲ್ಲಿ ಸಂಭವಿಸಿದ ಭೂವ್ಯಾಪ್ತಿಯ ಬದಲಾವಣೆಗಳನ್ನು ಜಿಯೋ-ಉಲ್ಲೇಖಿತ ಡೇಟಾಬೇಸ್​ನಲ್ಲಿ ನವೀಕರಿಸಲಾಗಿದೆ. 6 ಲಕ್ಷಕ್ಕೂ ಹೆಚ್ಚು ನಕ್ಷೆಗಳನ್ನು (ಜಿಲ್ಲೆ, ಉಪ-ಜಿಲ್ಲೆ, ಗ್ರಾಮ ಮಟ್ಟ) ಸಿದ್ಧಪಡಿಸಲಾಗಿದೆ ಮತ್ತು ಜನಗಣತಿ ಕಾರ್ಯಗಳಲ್ಲಿ ತೊಡಗಿರುವವರಿಗಾಗಿ ಆಂತರಿಕ ಪೋರ್ಟಲ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಇದೇ ಮೊದಲ ಬಾರಿಗೆ, ದೇಶದಲ್ಲಿ ಮುಂಬರುವ ಜನಗಣತಿಯ ಭೂಪ್ರದೇಶ ಉಲ್ಲೇಖಕ್ಕಾಗಿ ಹೌಸ್ ಲಿಸ್ಟಿಂಗ್ ಬ್ಲಾಕ್ (ಮನೆ ಪಟ್ಟಿ ಘಟಕ) ಮೊಬೈಲ್ ಮ್ಯಾಪಿಂಗ್ ಅಪ್ಲಿಕೇಶನ್ ಪರಿಚಯಿಸಲಾಗಿದೆ. ಅಲ್ಲದೆ, ಈ ಕುರಿತು ರಾಷ್ಟ್ರೀಯ ಮತ್ತು ಮಾಸ್ಟರ್ ತರಬೇತುದಾರರಿಗೆ ಅಗತ್ಯ ತರಬೇತಿ ನೀಡಲಾಗಿದೆ. ಮ್ಯಾಪಿಂಗ್ ಅಪ್ಲಿಕೇಶನ್​ನ ಬಳಕೆಗೆ ಸೂಚನೆಗಳ ಕೈಪಿಡಿಯನ್ನು ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಸಿದ್ಧಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 6 =
Remember me
