ಭಾರತದ ಅನೇಕ ಶ್ರೀಮಂತರು ಹೊರದೇಶಗಳಿಗೆ ತೆರಳಲು ಏಕಮುಖ ಟಿಕೆಟ್​ಗಳನ್ನು ಖರೀದಿಸುತ್ತಿದ್ದಾರೆ. ಅಂದರೆ, ಭಾರತವನ್ನು ತ್ಯಜಿಸುತ್ತಿದ್ದಾರೆ ಎಂದು ಸಮೀಕ್ಷೆಗಳು ಮೇಲಿಂದ ಮೇಲೆ ಸೂಚಿಸುತ್ತಿವೆ. ಈ ವರ್ಷ ಅಂದಾಜು 8,000 ಶ್ರೀಮಂತರು ಭಾರತ ತೊರೆಯಲಿದ್ದಾರೆ ಎಂದು ಲಂಡನ್​ನಲ್ಲಿ ಪ್ರಧಾನ ಕಚೇರಿಯುಳ್ಳ ಜಾಗತಿಕ ಪೌರತ್ವ ಮತ್ತು ನಿವಾಸ ಸಲಹಾ ಸಂಸ್ಥೆ ಹೆನ್ಲಿ ಆಂಡ್ ಪಾರ್ಟನರ್ಸ್​ನ (ಎಚ್​ಆಂಡ್​ಪಿ) ವರದಿ ಹೇಳುತ್ತದೆ. ವಾಲ್-ಸ್ಟ್ರೀಟ್​ನ ಹೂಡಿಕೆ ಬ್ಯಾಂಕ್ ಮೋರ್ಗಾನ್ ಸ್ಟ್ಯಾನ್ಲಿ ಅಂಕಿ-ಅಂಶಗಳಿಂದ ಈ ಸಂಗತಿಗಳು ಬಹಿರಂಗಗೊಂಡಿವೆ. 2014ರಿಂದ ಭಾರತವನ್ನು ತೊರೆದಿರುವ ಒಟ್ಟು ಕೋಟ್ಯಧೀಶ ಭಾರತೀಯರ ಸಂಖ್ಯೆ 23,000 ಎಂದು 2018ರ ಬ್ಯಾಂಕ್ ವರದಿ ಪತ್ತೆ ಮಾಡಿದೆ.
2020ರಲ್ಲಿ ಅಂದಾಜು 5,000 ಕೋಟ್ಯಧೀಶರು ದೇಶವನ್ನು ತೊರೆದಿದ್ದಾರೆ. ಅಂದರೆ, ಭಾರತದಲ್ಲಿನ ಅತಿ ಹೆಚ್ಚು ಸಂಪತ್ತುಳ್ಳ ವ್ಯಕ್ತಿಗಳ ಪೈಕಿ ಶೇ. 2ರಷ್ಟು ಜನರು ದೇಶದಿಂದ ಹೊರಹೋಗಿದ್ದಾರೆ ಎಂದು ಜಾಗತಿಕ ಸಂಪತ್ತು ವಲಸೆ ವಿಮರ್ಶೆಯ ವರದಿಯೊಂದು ಬಹಿರಂಗಪಡಿಸಿದೆ.
ಇವರೇಕೆ ದೇಶ ತೊರೆಯುತ್ತಾರೆ?:ತಮ್ಮ ಜೀವನ ಮತ್ತು ಸ್ವತ್ತುಗಳನ್ನು ಜಾಗತೀಕರಣಗೊಳಿಸಲು ಬಯಸುವ ಶ್ರೀಮಂತ ಭಾರತೀಯರಿಗೆ ಕೋವಿಡ್ ಸಾಂಕ್ರಾಮಿಕ ಹರಡಿದ ಸಂದರ್ಭವು ಒಂದು ಅವಕಾಶವಾಗಿ ಪರಿಣಮಿಸಿತು ಎಂದು ಎಚ್​ಆಂಡ್​ಪಿ ವರದಿ ಹೇಳಿದೆ. ಹೀಗಾಗಿಯೇ, ಪೌರತ್ವ ಸಂಬಂಧಿ ಸೇವೆಯ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಈ ಸಂಸ್ಥೆ ಕಳೆದ ವರ್ಷ ಲಾಕ್​ಡೌನ್​ನ ಮಧ್ಯದಲ್ಲಿಯೇ ಭಾರತದಲ್ಲಿ ತನ್ನ ಕಚೇರಿ ಸ್ಥಾಪಿಸಿತು.
ಭಾರತದಿಂದ ವಲಸೆ ಹೋಗುವ ಮೂರನೇ ಅಲೆ ಇದಾಗಿದೆ. ಬಡ ಮತ್ತು ಸಣ್ಣ ಹಿಡುವಳಿ ಇರುವ ರೈತರು ಶತಮಾನದ ಹಿಂದೆಯೇ ಪಂಜಾಬ್​ನಿಂದ ಪಶ್ಚಿಮ ದೇಶಗಳಿಗೆ ಸ್ಥಳಾಂತರಗೊಂಡರು. ತದನಂತರ ವೃತ್ತಿಪರರು ಉತ್ತಮ ಕೆಲಸ ಮತ್ತು ಬದುಕು ಹುಡುಕಿಕೊಂಡು ಭಾರತ ತೊರೆದರು ಎಂದು ಮೇನ್​ಸ್ಟ್ರೀಟ್ ಇಕ್ವಿಟಿ ಕಾರ್ಪ್ ಸಂಸ್ಥೆ ಹೇಳುತ್ತದೆ. ವಲಸೆ ಎಂದಾಕ್ಷಣ, ಜನರು ತಮ್ಮ ಎಲ್ಲ ಹಣವನ್ನು ತಾಯ್ನಾಡಿನಿಂದ ತೆಗೆದುಕೊಂಡು ವ್ಯಾಪಾರ ಸಂಬಂಧಗಳನ್ನು ಕಡಿತಗೊಳಿಸುತ್ತಾರೆ ಎಂದಲ್ಲ. ಬದಲಿಗೆ ಮತ್ತೊಂದು ದೇಶದಲ್ಲಿ ಅಲ್ಪ ಪ್ರಮಾಣದ ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೆ, ಇಂತಹ ಬೆಳವಣಿಗೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಹೆಚ್ಚು ಶ್ರೀಮಂತ ವ್ಯಕ್ತಿಗಳು ಆಗಾಗ್ಗೆ ದೇಶ ತೊರೆಯುವುದು ಶುಭ ಸಂಕೇತವಲ್ಲ ಅದರೂ ಮಧ್ಯಮ ವರ್ಗದ ಪ್ರಜೆಗಳಿಗೆ ಹೋಲಿಸಿದರೆ, ಅವರು ಸೂಕ್ತ ಕಾರಣಕ್ಕಾಗಿಯೇ ದೇಶ ತೊರೆಯುತ್ತಾರೆ ಎಂದೂ ಪರಿಣತರು ಅಭಿಪ್ರಾಯಪಡುತ್ತಾರೆ.
ಯಾವ ದೇಶ ಮೆಚ್ಚು?:ಭಾರತ ತೊರೆಯಬಯಸುವ ಶ್ರೀಮಂತರಿಗೆ ಅಮೆರಿಕ, ಇಂಗ್ಲೆಂಡ್, ಕೆನಡಾ ನೆಚ್ಚಿನ ತಾಣಗಳಾಗಿವೆ. ಐರೋಪ್ಯ ರಾಷ್ಟ್ರಗಳಲ್ಲದೆ, ಸಾಂಪ್ರದಾಯಿಕ ಮೆಚ್ಚಿನ ತಾಣಗಳಾದ ದುಬೈ ಮತ್ತು ಸಿಂಗಾಪುರ ಕೂಡ ಇವರನ್ನು ಸೆಳೆಯುತ್ತಿವೆ. ಸಿಂಗಾಪುರವು ಡಿಜಿಟಲ್ ಉದ್ಯಮಿಗಳಿಗೆ ನೆಚ್ಚಿನ ತಾಣವಾಗಿದೆ. ಏಕೆಂದರೆ, ಸದೃಢವಾದ ಕಾನೂನು ವ್ಯವಸ್ಥೆ ಮತ್ತು ವಿಶ್ವ ದರ್ಜೆಯ ಹಣಕಾಸು ಸಲಹೆಗಾರರ ಲಭ್ಯತೆ ಅಲ್ಲಿದೆ. ಇನ್ನು ದುಬೈನ ಗೋಲ್ಡನ್ ವೀಸಾ ಸುಲಭವಾಗಿ ಲಭಿಸುವುದರಿಂದ ಮತ್ತು ಹಲವಾರು ಆಯ್ಕೆಗಳನ್ನು ಇದು ಒದಗಿಸುವುದರಿಂದ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. 2022ರಲ್ಲಿ ಯುಎಇಯು ಅತಿಹೆಚ್ಚು ಶ್ರೀಮಂತ ಭಾರತೀಯರನ್ನು (ಕನಿಷ್ಠ 4,000) ಸೆಳೆಯಲಿದೆ ಎಂದು ಅಂದಾಜಿಸಲಾಗಿದೆ. ಆಸ್ಟ್ರೇಲಿಯಾ (3500), ಸಿಂಗಾಪುರ (2800) ನಂತರದ ಸ್ಥಾನದಲ್ಲಿ ಇರಲಿವೆ. 2500 ಅಂಕಗಳೊಂದಿಗೆ ಇಸ್ರೇಲ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರಲಿದೆ. 2200 ಅಂಕಗಳೊಂದಿಗೆ ಸ್ವಿಜರ್ಲೆಂಡ್, 1500 ಅಂಕಗಳೊಂದಿಗೆ ಅಮೆರಿಕ ತದನಂತರ ಸ್ಥಾನ ಪಡೆದುಕೊಳ್ಳಲಿವೆ ಎಂದು ಹೆನ್ಲಿ ಪ್ರೖೆವೇಟ್ ವೆಲ್ತ್ ಮೈಗ್ರೇಶನ್ ಡ್ಯಾಶ್​ಬೋರ್ಡ್ ಸಂಸ್ಥೆ ಅಂದಾಜಿಸಿದೆ.
ತೆರಿಗೆ ತಪ್ಪಿಸಲು…:ಕೆಲವು ಉದ್ಯಮಿಗಳಿಗೆ, ಮುಖ್ಯವಾಗಿ ಹೂಡಿಕೆ ಕಂಪನಿಗಳನ್ನು ನಿರ್ವಹಿಸುವವರಿಗೆ ಅಥವಾ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ತೊಡಗಿರುವವರಿಗೆ, ಭಾರತ ತೊರೆಯುವುದೆಂದರೆ ಅದು ಅವರ ತೆರಿಗೆ ಯೋಜನೆಯ ಒಂದು ಭಾಗವಾಗಿರುತ್ತದೆ. ತೆರಿಗೆ ವ್ಯಾಪ್ತಿಗೆ ಬರುವುದನ್ನು ತಪ್ಪಿಸುವುದಕ್ಕಾಗಿಯೇ ಅವರು ಭಾರತದಿಂದ ಹೊರತೆರಳುತ್ತಾರೆ. ಅನೇಕ ಭಾರತೀಯರು ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಮತ್ತು ಸಿಂಗಾಪುರದಂತಹ ದೇಶಗಳ ಪೌರತ್ವವನ್ನು ಪಡೆದುಕೊಳ್ಳುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ ಭಾರತದಲ್ಲಿ ವೈಯಕ್ತಿಕ ತೆರಿಗೆ ದರಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದು. ಭಾರತದಲ್ಲಿ ಶೇ. 30 ತೆರಿಗೆ ದರದ ಮೇಲೆ ಶೇ. 37ರಷ್ಟು ಸರ್​ಚಾರ್ಜ್ ಸೇರಿ ಗರಿಷ್ಠ ತೆರಿಗೆ ದರವು ಶೇ. 42.74 ಆಗುತ್ತದೆ ಎಂದೂ ತಜ್ಞರು ಹೇಳುತ್ತಾರೆ.
ಆರ್ಥಿಕತೆ ಗುರಿಗೆ ಹೊಡೆತ:ಶ್ರೀಮಂತ ಭಾರತೀಯರು ನಿರಂತರ ವಾಗಿ ಮತ್ತೊಂದು ದೇಶಕ್ಕೆ ವಲಸೆ ಹೋಗುವುದು ಅಥವಾ ಇನ್ನೊಂದು ದೇಶದಲ್ಲಿ ಪೌರತ್ವ ತೆಗೆದುಕೊಳ್ಳುವುದು ಭಾರತಕ್ಕೆ ಕಳವಳಕಾರಿ ಸಂಗತಿಯಾಗಿದೆ. ಭಾರತವು 5 ಟ್ರಿಲಿಯನ್ ಆರ್ಥಿಕತೆಯನ್ನು ತಲುಪಲು ಯೋಜಿಸುತ್ತಿರುವಾಗ ಇಂತಹ ವಲಸೆ ಸೂಕ್ತವಲ್ಲ ಎಂದು ತೆರಿಗೆ ತಜ್ಞರು ಅಭಿಪ್ರಾಯಪಡುತ್ತಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 5 ಟ್ರಿಲಿಯನ್ ಡಾಲರ್ ಅಂದರೆ, 5 ಲಕ್ಷ ಕೋಟಿ ಡಾಲರ್ (390 ಲಕ್ಷ ಕೋಟಿ ರೂಪಾಯಿ) ಆರ್ಥಿಕತೆಯ ಗುರಿ ಇಟ್ಟುಕೊಂಡಿದ್ದಾರೆ. 2024-25ನೇ ಸಾಲಿನಲ್ಲಿ ಈ ಗುರಿ ಸಾಧಿತವಾಗ ಬೇಕೆನ್ನುವುದು ಮೋದಿ ಉದ್ದೇಶ. ಸದ್ಯ ಭಾರತದ ಆರ್ಥಿಕತೆ, ಅಂದರೆ, ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ)ನ 2.94 ಟ್ರಿಲಿಯನ್ ಡಾಲರ್ ಇದೆ.
ಟೆಸ್ಟ್​ ಡ್ರೈವ್ ವೇಳೆ ಮೂರನೇ ಮಹಡಿಯಿಂದ ಬಿದ್ದ ಕಾರು; ಇಬ್ಬರು ಸ್ಥಳದಲ್ಲೇ ಸಾವು..

ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
