ಉದ್ಯಮಿ,ಟಾಟಾ ಸನ್ಸ್ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಹಾಗೂ ಅವರ ಸ್ನೇಹಿತ ಜಹಾಂಗೀರ ಪಂಡೊಲೆ ಅವರು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಕಳೆದ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದರು. ಮರ್ಸಿಡಿಸ್ ಕಾರು ಚಲಾಯಿಸುತ್ತಿದ್ದ ಡಾ.ಅನಹಿತ ಪಂಡೊಲೆ ಹಾಗೂ ಅವರ ಪತಿ ಡರಿಯಸ್ ಪಂಡೊಲೆ ಗಂಭೀರ ಸ್ವರೂಪದಲ್ಲಿ ಗಾಯಗೊಂಡರು. ಹಿಂಬದಿ ಸೀಟಲ್ಲಿದ್ದ ಸೈರಸ್ ಮಿಸ್ತ್ರಿ ಹಾಗೂ ಜಹಾಂಗೀರ್ ಪಂಡೊಲೆ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಒಂದು ವೇಳೆ, ಸೀಟ್ ಬೆಲ್ಟ್ ಧರಿಸಿದ್ದರೆ ಬದುಕುಳಿಯುವ ಸಾಧ್ಯತೆಗಳು ಅಧಿಕವಾಗಿರುತ್ತಿತ್ತು ಎಂಬುದು ತಜ್ಞರ ಅಂಬೋಣ. ಅಪಘಾತದಿಂದಾಗಿ ಮಿಸ್ತ್ರಿ ಅವರ ತಲೆಗೆ ಹಾಗೂ ಹೃದಯಕ್ಕೆ ಪೆಟ್ಟು ಬಿದ್ದಿತ್ತು. ಸೈರಸ್ ಮಿಸ್ತ್ರಿ ಅವರ ಅಂತ್ಯಕ್ರಿಯೆ ಮಂಗಳವಾರ ಮುಂಬೈನ ವರ್ಲಿ ಸ್ಮಶಾನದಲ್ಲಿ ನೆರವೇರಿತು. ಕಾರಿನ ಸವಾರರು ಸೀಟ್ ಬೆಲ್ಟ್ ಧರಿಸುವ ಕುರಿತಂತೆ ನಿರ್ಲಕ್ಷ್ಯ ತೋರುವುದಕ್ಕೆ ಇದೊಂದು ನಿದರ್ಶನ. ಅದರಲ್ಲೂ ಬಹುತೇಕವಾಗಿ ಹಿಂಬದಿ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದಿಲ್ಲ. 2019ರಲ್ಲಿ ‘ಸೇವ್ ಲೈಫ್’ ಫೌಂಡೇಷನ್ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ. 7ರಷ್ಟು ಹಿಂಬದಿ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುತ್ತಾರೆ ಎಂಬುದು ಕಂಡುಬಂದಿದೆ. ಇನ್ನು, ಕಾನೂನು ಜಾರಿಗೊಳಿಸುವವರು ಕೂಡ ಹಿಂಭಾಗಕ್ಕಿಂತ ಮುಂಭಾಗದ ಸೀಟ್ ಬೆಲ್ಟ್​ಗಳ ಬಳಕೆಗೆ ಹೆಚ್ಚು ಒತ್ತು ನೀಡುವುದು ಪತ್ತೆಯಾಗಿದೆ. ಹಿಂಬದಿ ಸೀಟ್ ಬಳಕೆಯ ಬಗೆಗೆ ಮಾಹಿತಿ ಹಾಗೂ ಕಾನೂನು ಪಾಲನೆ – ಈ ಎರಡೂ ಕೊರತೆ ಕಂಡುಬಂದಿದೆ.
ಕಾನೂನಿನ ಪ್ರಕಾರ ಕಡ್ಡಾಯ:ಕಾನೂನಿನ ಪ್ರಕಾರ, ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಕೇವಲ ತಮ್ಮ ಸುರಕ್ಷತೆಗಲ್ಲದೆ, ಸಹಪ್ರಯಾಣಿಕರ ಸುರಕ್ಷೆ ದೃಷ್ಟಿಯಿಂದಲೂ ಅಗತ್ಯ. ವಾಹನದಲ್ಲಿ ಯಾವುದೇ ಒಬ್ಬ ಸವಾರ ಸೀಟ್ ಬೆಲ್ಟ್ ಧರಿಸದಿದ್ದರೂ, ಅಪಘಾತ ಸಂಭವಿಸಿದರೆ ಈತ ಸೀಟ್ ಬೆಲ್ಟ್ ಧರಿಸಿದ ಉಳಿದ ಸವಾರರಿಗೆ ಡಿಕ್ಕಿ ಹೊಡೆದು ಅನಾಹುತಕ್ಕೆ ಕಾರಣವಾಗಬಹುದಾಗಿದೆ. 1989ರ ಕೇಂದ್ರೀಯ ಮೋಟಾರ್ ವಾಹನ ನಿಯಮ 138 (3) ಪ್ರಕಾರ, ಹಿಂಬದಿ ಸವಾರರು ಕೂಡ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ.ಸೀಟ್ ಬೆಲ್ಟ್ ಧರಿಸದಿದ್ದರೆ, 1988ರ ಮೋಟಾರ್ ವಾಹನ ಕಾಯ್ದೆ 194 ಬಿ (1) ಪ್ರಕಾರ 1,000 ರೂಪಾಯಿ ದಂಡ ವಿಧಿಸಬಹುದಾಗಿದೆ.
900 ರೂಪಾಯಿಗೆ ಏರ್​ಬ್ಯಾಗ್:ಸೀಟ್ ಬೆಲ್ಟ್ ಅಲ್ಲದೆ ಕಾರುಗಳಲ್ಲಿ ಅಪಘಾತ ರಕ್ಷಣೆಯ ಇನ್ನೊಂದು ಪ್ರಮುಖ ಸಾಧನ ಏರ್​ಬ್ಯಾಗ್. ಅಪಘಾತಗಳಾದಾಗ ಏರ್​ಬ್ಯಾಗ್​ಗಳು ತೆರೆದುಕೊಂಡು ಹಾನಿಯ ಪ್ರಮಾಣವನ್ನು ಕಡಿಮೆಗೊಳಿಸುತ್ತವೆ. ಈಗ ಕಾರುಗಳಲ್ಲಿ ಕನಿಷ್ಠ ಆರು ಏರ್​ಬ್ಯಾಗ್ ಅಳವಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ನವದೆಹಲಿಯಲ್ಲಿ ಮಂಗಳವಾರ ಸಮಾರಂಭವೊಂದರಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಎಲ್ಲ ಕಾರುಗಳಲ್ಲಿ 6 ಏರ್​ಬ್ಯಾಗ್ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಸಚಿವಾಲಯ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಕಾರು ತಯಾರಕರು ರಫ್ತು ಮಾಡುವಾಗ 6 ಏರ್ ಬ್ಯಾಗ್ ಅಳವಡಿಸುತ್ತಾರೆ. ಆದರೆ, ಅದೇ ಕಾರನ್ನು ಭಾರತದಲ್ಲಿ ಮಾರಾಟ ಮಾಡುವಾಗ 4 ಬ್ಯಾಗ್​ಗೆ ಇಳಿಸುತ್ತಾರೆ. ನಮ್ಮ ಜೀವಕ್ಕೆ ಬೆಲೆ ಇಲ್ಲವೇ? ಒಂದು ಏರ್ ಬ್ಯಾಗ್​ಗೆ 900 ರೂಪಾಯಿ ಬೆಲೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿದಾಗ ಬೆಲೆ ಇನ್ನೂ ಕಡಿಮೆಯಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಸೀಟ್ ಬೆಲ್ಟ್​ಗಳು ಹೇಗೆ ರಕ್ಷಿಸುತ್ತವೆ?:ಇದೊಂದು ಸರಳ ವಿಜ್ಞಾನ. ವಾಹನವೊಂದು 100 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದಾಗ ಅಪಘಾತವಾಗುತ್ತದೆ ಎಂದಿಟ್ಟುಕೊಳ್ಳೋಣ. ಆಗ ಹಿಂದಿನ ಸೀಟಿನಲ್ಲಿರುವ 80 ಕೆ.ಜಿ. ತೂಕದ ಪ್ರಯಾಣಿಕ ಸೀಟ್ ಬೆಲ್ಟ್ ಹಾಕಿರದಿದ್ದರೆ, 30,864 ಜೌಲ್​ಗಳ ಅಗಾಧ ಬಲದಿಂದ ಗಾಯಗೊಳ್ಳುತ್ತಾನೆ. ಸೀಟ್ ಬೆಲ್ಟ್ ಹಾಕಿರದಿದ್ದರೆ ಮೂರು ರೀತಿಯ ಗಾಯಗಳಿಗೆ ಈಡಾಗುವ ಸಾಧ್ಯತೆಗಳಿರುತ್ತವೆ. ಮೊದಲನೆಯದ್ದು, ವೇಗವಾಗಿ ಚಲಿಸುತ್ತಿರುವಾಗ ಅಪಘಾತವಾದಲ್ಲಿ ಕಾರಿನ ಒಳಭಾಗ ಹಾಗೂ ದೇಹದ ನಡುವೆ ಘರ್ಷಣೆಯಾಗಿ ತೀವ್ರ ಪರಿಣಾಮ ಉಂಟು ಮಾಡುತ್ತದೆ. ಎರಡನೆಯದಾಗಿ, ಅಪಘಾತ ವಾದಾಗ ಕಾರಿನ ಒಳಗಿರುವ ಪ್ರಯಾಣಿಕರು ಪರಸ್ಪರ ಡಿಕ್ಕಿ ಹೊಡೆದು ದೈಹಿಕವಾಗಿ ಹೆಚ್ಚು ಹಾನಿಗೆ ಈಡಾಗುತ್ತಾರೆ. ಮೂರನೆಯದಾಗಿ, ಹಿಂಬದಿಯ ಸವಾರರು ಕಿಟಕಿಯಿಂದ ಹೊರಬಿದ್ದು ಗಾಯಗೊಳ್ಳುವ ಇಲ್ಲವೇ ಸಾವನ್ನಪು್ಪವ ಸಾಧ್ಯತೆಗಳಿರುತ್ತವೆ. ಸೀಟ್ ಬೆಲ್ಟ್ ಧರಿಸಿದ್ದರೆ ಇಂತಹ ಹಾನಿಗಳ ಸಂಭವನೀಯತೆ ಕಡಿಮೆಯಾಗುತ್ತದೆ.
ಸೀಟ್ ಬೆಲ್ಟ್ ಧರಿಸದಿದ್ದರೆ ದಂಡ:ಕಾರು ಮತ್ತು ಎಸ್​ಯುುವಿಗಳ ಹಿಂಬದಿ ಸೀಟಿನಲ್ಲಿ ಕುಳಿತಿರುವವರು ಸೀಟ್ ಬೆಲ್ಟ್ ಧರಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಸಂಬಂಧ ಮೂರು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ವಾಸ್ತವವಾಗಿ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಜನರಿಗೆ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆದರೂ ಜನ ಬೆಲ್ಟ್ ಧರಿಸುತ್ತಿಲ್ಲ. ಹಿಂಬದಿ ಸೀಟಿನಲ್ಲಿ ಕುಳಿತಿರುವವರು ಸೀಟ್ ಬೆಲ್ಟ್ ಧರಿಸದಿದ್ದರೆ ಅವರಿಗೆ 1 ಸಾವಿರ ರೂ. ದಂಡ ವಿಧಿಸುವ ಬಗ್ಗೆ ಕಾನೂನು ರೂಪಿಸಲಾಗುತ್ತಿದೆ. ನಮ್ಮ ಉದ್ದೇಶ ಜನರಿಗೆ ದಂಡ ಹಾಕುವುದಲ್ಲ. ಬದಲಿಗೆ ಜೀವ ಉಳಿಸುವುದಾಗಿದೆ ಎಂದು ಹೇಳಿದ್ದಾರೆ.
ಜನಸಾಮಾನ್ಯರನ್ನು ಬಿಟ್ಟುಬಿಡಿ. ನಾನು ನಾಲ್ಕು ಮುಖ್ಯಮಂತ್ರಿಗಳೊಂದಿಗೆ ಅವರ ಕಾರುಗಳಲ್ಲಿ ಪ್ರಯಾಣಿಸಿದ್ದೇನೆ. ಅವರ ಹೆಸರು ಕೇಳಬೇಡಿ. ಅವರು ಕೂಡ ಸೀಟ್ ಬೆಲ್ಟ್ ಹಾಕಿಕೊಂಡಿರಲಿಲ್ಲ. ನಾನು ಈ ಕಾರುಗಳ ಮುಂಭಾಗದ ಸೀಟಿನಲ್ಲಿ ಕುಳಿತಿದ್ದೆ. ಬೆಲ್ಟ್ ಹಾಕಿಕೊಳ್ಳದಿದ್ದರೆ ಕಾರಿನಲ್ಲಿ ಸದ್ದು ಬರುತ್ತದೆ. ಆದರೆ, ಸದ್ದು ಮಾಡದಂತೆ ಈ ಕಾರುಗಳಲ್ಲಿ ಕ್ಲಿಪ್ ಅಳವಡಿಸಲಾಗಿತ್ತು. ನಾನೀಗ ಅಂತಹ ಕ್ಲಿಪ್ ತಯಾರಿಕೆ ನಿಷೇಧಿಸಿದ್ದೇನೆ.
|ನಿತಿನ್ ಗಡ್ಕರಿಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ
ಜರ್ಮನಿಯಲ್ಲಿ ದತ್ತಾಂಶ ವಿಶ್ಲೇಷಣೆ:ಮಿಸ್ತ್ರಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾದಾಗ ಗಂಟೆಗೆ 130-140 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ನಿಖರವಾದ ವೇಗವನ್ನು ತಿಳಿಯುವುದಕ್ಕಾಗಿ ಕಾರಿನಲ್ಲಿರುವ ದತ್ತಾಂಶಗಳನ್ನು ಜರ್ಮನಿಯಲ್ಲಿರುವ ಮರ್ಸಿಡಿಸ್ ಬೆಂಜ್ ಘಟಕದಲ್ಲಿ ಮುಂದಿನ 2-3 ದಿನಗಳಲ್ಲಿ ವಿಶ್ಲೇಷಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪಾಲ್ಘರ್ ಜಿಲ್ಲೆಯ ಹೆದ್ದಾರಿಯಲ್ಲಿ ವಾಹನಗಳ ಗರಿಷ್ಠ ವೇಗವನ್ನು ಗಂಟೆಗೆ 80 ಕಿ.ಮೀ.ಗೆ ನಿಗದಿಪಡಿಸಲಾಗಿದೆ. ಅತಿಯಾದ ವೇಗ ಹಾಗೂ ಚಾಲಕ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
19ನೇ ಶತಮಾನದಲ್ಲೇ ಬಳಕೆಗೆ:ಸೀಟ್ ಬೆಲ್ಟ್​ಗಳು 19ನೇ ಶತಮಾನದ ಕೊನೆಯಲ್ಲಿ ಅಸ್ತಿತ್ವಕ್ಕೆ ಬಂದವು. ಇಂಗ್ಲೆಂಡಿನ ವೈಮಾನಿಕ ಸಂಶೋಧಕ ಜಾರ್ಜ್ ಕೆಲೆ ಅವರು ಸೀಟ್ ಬೆಲ್ಟ್ ಸಂಶೋಧನೆ ಮಾಡಿದರು. ಗೆ ್ಲ ೖಡರ್ ಒಳಗೆ ಇರುವಂತೆ ಪೈಲಟ್​ಗಳನ್ನು ನೋಡಿಕೊಳ್ಳುವ ಉದ್ದೇಶದಿಂದ ಇದನ್ನು ಕಂಡುಹಿಡಿದರು. 1885ರ ಫೆ 10ರಂದು ಹಕ್ಕುಸ್ವಾಮ್ಯ (ಪೇಟೆಂಟ್) ಇರುವ ಸೀಟ್ ಬೆಲ್ಟ್ ಬಳಕೆಗೆ ಬಂದಿತು. ಎಡ್ವರ್ಡ್ ಜೆ. ಕ್ಲಾಘಾರ್ನ್ಸ್ ಇದರ ರೂವಾರಿಯಾಗಿದ್ದು, ನ್ಯೂಯಾರ್ಕ್ ನಗರದ ಟ್ಯಾಕ್ಸಿಗಳಲ್ಲಿ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆದೊಯ್ಯುವ ಉದ್ದೇಶ ಇದರದ್ದಾಗಿತ್ತು. ನಾವೀಗ ಬಳಸುವ ಸೀಟ್ ಬೆಲ್ಟ್ ಅಸ್ತಿತ್ವಕ್ಕೆ ಬಂದಿದ್ದು 1959ರಲ್ಲಿ. ಸ್ವೀಡನ್ನಿನ ಇಂಜಿನಿಯರ್ ನಿಲ್ಸ್ ಬೊಹ್ಲಿನ್ ಅವರು ವೊಲ್ವೊ ಕಂಪನಿಯ ಸೂಚನೆಯ ಮೇರೆಗೆ ವಿ ಟೈಪ್​ನ 3 ಪಾಯಿಂಟ್ ಸೀಟ್ ಬೆಲ್ಟ್ ಸಂಶೋಧಿಸಿದರು. ರಸ್ತೆ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ, ಸೀಟ್ ಬೆಲ್ಟ್​ಗಳು ದೇಹದ ಮೇಲ್ಭಾಗ ಹಾಗೂ ಕೆಳಭಾಗವನ್ನು ಹೆಚ್ಚು ದೃಢವಾಗಿ ಹಿಡಿದುಕೊಳ್ಳುವುದರಿಂದ ಹೆಚ್ಚು ಸುರಕ್ಷತೆ ಒದಗಿಸುತ್ತವೆ. ಜಾಗತಿಕವಾಗಿ ಪ್ರತಿ ವರ್ಷ ಹತ್ತಾರು ಲಕ್ಷ ಜನರ ಜೀವ ಉಳಿಸುವಲ್ಲಿ ನೆರವಾಗುತ್ತಿವೆ.
ಅಪಘಾತದಲ್ಲಿ ಭಾರತವೇ ನಂ. 1:ಭಾರತದಲ್ಲಿ ಒಂದು ವರ್ಷದಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಸಂಖ್ಯೆ ಸರಿಸುಮಾರು 4.5 ಲಕ್ಷ ಹಾಗೂ ಸಾವನ್ನಪು್ಪವವರ ಸಂಖ್ಯೆ ಅಂದಾಜು 1.5 ಲಕ್ಷ. ಒಂದು ತಾಸಿಗೆ ಸಂಭವಿಸುವ ಅಪಘಾತಗಳು 53. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರ ಸಾವು. ಹೀಗಾಗಿ, ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಜಗತ್ತಿನ ಒಟ್ಟಾರೆ ವಾಹನಗಳ ಪೈಕಿ ಭಾರತದಲ್ಲಿ ಇರುವುದು ಶೇ. 1 ಮಾತ್ರ. ಆದರೆ, ಜಗತ್ತಿನಲ್ಲಿ ನಡೆಯುವ ಅಪಘಾತಗಳಲ್ಲಿ ಸಾವನ್ನಪು್ಪವವರಲ್ಲಿ ಶೇ. 11ರಷ್ಟು ಭಾರತೀಯರೇ ಆಗಿರುತ್ತಾರೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳುತ್ತದೆ.
‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್​ಎ..’ ಎಂದಿದ್ದ ಉಮೇಶ್ ಕತ್ತಿ: ವಿಜಯವಾಣಿಗೆ ನೀಡಿದ್ದ ಕೊನೇ ಸಂದರ್ಶನ..

ಕತ್ತಿ ತಂದೆ ಅಧಿವೇಶನ ನಡೆಯುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದರು; ಪುತ್ರನೂ ಹೃದಯಾಘಾತಕ್ಕೆ ಬಲಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + four =
Remember me
