ನವದೆಹಲಿ:ಮೊದಲ ಹಂತದ ಕರೊನಾ ಆಘಾತದಿಂದ ಹೊರಬರಲು ಇನ್ನೂ ಹೆಣಗಾಡುತ್ತಿರುವ ಭಾರತದಲ್ಲಿ ಮುಂದಿನ ಕೆಲ ದಿನಗಳಲ್ಲಿ ಮತ್ತೊಂದು ಕರೊನಾ ಅಲೆಯ ಆತಂಕ ಎದುರಾಗಿದೆ. ಮುಂದಿರುವ ಸಾಲು ಸಾಲು ಹಬ್ಬ, ಚಳಿಗಾಲ ಹಾಗೂ ಚುನಾವಣೆಗಳು ಈ ಸಾಧ್ಯತೆಗೆ ಕಾರಣ.
ಕರ್ನಾಟಕ, ಪಶ್ಚಿಮ ಬಂಗಾಳ ಸೇರಿ ಅನೇಕ ರಾಜ್ಯಗಳಲ್ಲಿ ಶನಿವಾರ ದಸರಾ ಹಬ್ಬಕ್ಕೆ ಚಾಲನೆ ಸಿಗಲಿದೆ. ಹಬ್ಬದ ಸಂದರ್ಭದಲ್ಲಿ ಸಿಹಿ ತಿನಿಸು, ಬಟ್ಟೆಬರೆ, ಉಡುಗೊರೆ ಖರೀದಿ ಹಾಗೂ ಉತ್ಸವದ ಪೂಜೆ, ಪುನಸ್ಕಾರ ಕಾರಣಕ್ಕೆ ಜನರು ಅಂತರ ಕಾಯ್ದುಕೊಳ್ಳುವುದನ್ನು ಮರೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತ ಒಟ್ಟಾರೆ ಸೋಂಕಿನ ಪ್ರಕರಣಗಳಲ್ಲಿ ನಂ.1 ಸ್ಥಾನದಲ್ಲಿರುವ ಅಮೆರಿಕವನ್ನು ಹಿಂದಿಕ್ಕಿದರೂ ಅಚ್ಚರಿ ಇಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕೇರಳ ನಿದರ್ಶನ:ಕರೊನಾ ನಿಯಂತ್ರಣದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ )ಯಿಂದ ಶಹಬ್ಬಾಸ್​ಗಿರಿ ಪಡೆದಿದ್ದ ಕೇರಳದಲ್ಲಿ ಇತ್ತೀಚೆಗೆ 10 ದಿನಗಳ ಓಣಂ ಆಚರಿಸಲಾಗಿತ್ತು. ಅದಾದ ಬಳಿಕ ಅಲ್ಲಿ ಸೋಂಕು ನಿಯಂತ್ರಣ ತಪ್ಪಿ ವ್ಯಾಪಕವಾಗಲಾರಂಭಿಸಿದೆ. ಮೊದಲ 5 ಸಾವಿರ ಪ್ರಕರಣ ಪತ್ತೆಯಾಗಲು 5 ತಿಂಗಳು ತಗುಲಿದ್ದ ಕೇರಳದಲ್ಲಿ ಕಳೆದ ಮೂರೇ ತಿಂಗಳಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ. ‘ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಹಬ್ಬದ ಸಮಯದಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟ’ ಎಂದು ಕೇರಳದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜನ್ ಖೋಬ್ರಗಡೆ ತಿಳಿಸಿದ್ದಾರೆ.
ಬಂಗಾಳ ಸರ್ಕಾರ ತರ್ಕ:ಪಶ್ಚಿಮ ಬಂಗಾಳದ ಹಳ್ಳಿಗಳ ಜನರು ಹಬ್ಬಗಳ ಸಮಯದಲ್ಲಿ ಪೇಟೆಗೆ ಬಂದು ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವನ ನಡೆಸುತ್ತಾರೆ. ಅದಕ್ಕೆ ನಿರ್ಬಂಧ ಹೇರಿದರೆ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಅದಕ್ಕಾಗಿ ಕೆಲ ನಿಯಮಗಳ ಜತೆ ಹಬ್ಬ ಆಚರಿಸಲು ಅನುಮತಿ ನೀಡಲಾಗಿದೆ. ದಸರಾ ಮುಗಿದು ತಿಂಗಳೊಳಗೆ ದೀಪಾವಳಿ ಹಬ್ಬ ಬರಲಿದೆ. ಅದರಿಂದಲೂ ಸೋಂಕು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಇದೇ ಸಮಯದಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲಿ ಸೋಂಕಿನ ಹೆಚ್ಚಳಕ್ಕೆ ಇದು ಬಹುಮುಖ್ಯ ಕಾರಣವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕವನ್ನು ಹಿಂದಿಕ್ಕುವುದೇ?:ಕರೊನಾ ಸೋಂಕಿಗೆ ಹೆಚ್ಚು ಬಾಧಿತವಾಗಿರುವ ದೇಶಗಳ ಪಟ್ಟಿಯಲ್ಲಿ 82 ಲಕ್ಷ ಪ್ರಕರಣಗಳೊಂದಿಗೆ ಅಮೆರಿಕ ಮೊದಲನೇ ಸ್ಥಾನದಲ್ಲಿದ್ದರೆ, 73 ಲಕ್ಷ ಪ್ರಕರಣಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿನಿತ್ಯ 70 ಸಾವಿರದ ಆಸುಪಾಸಿನಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಅಮೆರಿಕದಲ್ಲಿ ಪ್ರತಿದಿನ ಸರಾಸರಿ 60 ಸಾವಿರ ಪ್ರಕರಣ ಪತ್ತೆಯಾಗುತ್ತಿವೆ. ದೇಶದಲ್ಲಿ ಹಬ್ಬಗಳ ಹಿನ್ನೆಲೆಯಲ್ಲಿ ಏಕದಿನ ಏರಿಕೆ ಸಂಖ್ಯೆ ಇನ್ನಷ್ಟು ಹೆಚ್ಚಾದರೆ ಭಾರತ ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೇರುವ ಅಪಾಯವಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
