ನವದೆಹಲಿ:ದೇಶ ಇಂದು ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿದೆ. ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಲ್ಲಿ ಸುರಕ್ಷಾ ವಲಯ ರಚನೆಯಾಗಿದೆ. ಎನ್​ಎಸ್​ಜಿ ಸ್ನಿಪ್ಪರ್​ಗಳು, ಎಲೈಟ್ ಸ್ವಾಟ್ ಕಮಾಂಡೊಗಳು, ಕೈಟ್ ಕ್ಯಾಚರ್ಸ್, ಕ್ಯಾನೈನ್ ಘಟಕಗಳು, ಶಾರ್ಪ್​ಶೂಟರ್​ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಆಯಕಟ್ಟಿನ ಪ್ರದೇಶ, ಕೋಟೆಯಲ್ಲಿ ಭದ್ರತಾ ಸಿಬ್ಬಂದಿ ಪಹರೆ ಇದ್ದಾರೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ಭೌತಿಕ ಅಂತರ ಕಾಯ್ದುಕೊಂಡು ಕೋವಿಡ್ ನಿಯಮ ಪಾಲನೆಗೆ ಸರ್ಕಾರ ನಿರ್ದೇಶನ ನೀಡಿದೆ. ಪೊಲೀಸರ ಪ್ರಕಾರ, ಜಮ್ಮುವಿನ ವಾಯುನೆಲೆ ಮೇಲೆ ಉಗ್ರರು ಡ್ರೋನ್ ದಾಳಿ ನಡೆಸಿ ಬೆದರಿಕೆ ಉಂಟುಮಾಡಿರುವ ಕಾರಣ ಕೆಂಪುಕೋಟೆಯಲ್ಲಿ ಡ್ರೋನ್ ನಿರೋಧಕ ವ್ಯವಸ್ಥೆಯನ್ನು ಇದೇ ಮೊದಲ ಸಲ ಅಳವಡಿಸಲಾಗಿದೆ.
ಇಪ್ಪತ್ತು ಐಟಿಬಿಪಿ ಟ್ರೂಪ್ಸ್​ಗೆ ಗ್ಯಾಲೆಂಟರಿ ಲಡಾಖ್ ಪದಕ:ಭಾರತ-ಚೀನಾ ಎಲ್​ಎಸಿಯಲ್ಲಿ ಗಡಿ ಪಹರೆಯಲ್ಲಿ ತೊಡಗಿರುವ ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ 20 ಯೋಧರಿಗೆ ಗ್ಯಾಲೆಂಟರಿ ಲಡಾಖ್ ಪದಕ ಘೋಷಣೆಯಾಗಿದೆ. ಕಳೆದ ವರ್ಷ ಪೂರ್ವ ಲಡಾಖ್ ಭಾಗದಲ್ಲಿ ಉಭಯ ರಾಷ್ಟ್ರಗಳ ಸೇನೆಗಳ ನಡುವೆ ಸಂಘರ್ಷ ಏರ್ಪಟ್ಟಾಗ ಪ್ರದರ್ಶಿಸಿದ ಶೌರ್ಯವನ್ನು ಪರಿಗಣಿಸಿ ಈ ಪದಕ ಘೋಷಿಸಲಾಗಿದೆ. ಈ ಪೈಕಿ 8 ಯೋಧರಿಗೆ ಅವರ ಅದ್ಭುತ ಯೋಜನೆ ಮತ್ತು ಒಳನೋಟವುಳ್ಳ ತಂತ್ರಗಾರಿಕೆಯ ಮೂಲಕ ಜೂನ್ 15ರಂದು ಗಲ್ವಾನ್​ದಲ್ಲಿ ತಾಯ್ನೆಲವನ್ನು ರಕ್ಷಿಸಿದ್ದಕ್ಕಾಗಿ ಪಿಎಂಜಿ ಘೋಷಣೆಯಾಗಿದೆ.
ಆ.14 ವಿಭಜನೆಯ ಕಹಿನೆನಪಿನ ದಿನ:ದೇಶ ವಿಭಜನೆಯ ನೋವನ್ನು ಎಂದಿಗೂ ಮರೆಯಲಾಗದು. ವಿವೇಚನಾ ರಹಿತ ಹಿಂಸಾಚಾರ ಮತ್ತು ದ್ವೇಷಕ್ಕೆ ನಮ್ಮ ಕೋಟ್ಯಂತರ ಸೋದರ, ಸೋದರಿಯರು ನಿರ್ವಸಿತರಾದುದಲ್ಲದೆ, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ಜನರ ಈ ಹೋರಾಟ, ಪ್ರಾಣತ್ಯಾಗ ಮುಂತಾದವುಗಳ ನೆನಪಿನ ದಿನವಾದ ಆಗಸ್ಟ್ 14ರಂದು ದೇಶವು ವಿಭಜನೆಯ ಕಹಿನೆನಪಿನ ದಿನ ಎಂದು ಆಚರಿಸಲ್ಪಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಟ್ವೀಟ್ ಮಾಡಿದ್ದಾರೆ.
ಸೇನಾ ಪುರಸ್ಕಾರಗಳು:ಒಂದು ಅಶೋಕ ಚಕ್ರ, ಒಂದು ಕೀರ್ತಿ ಚಕ್ರ, 15 ಶೌರ್ಯ ಚಕ್ರ, 116 ಸೇನಾ ಗ್ಯಾಲೆಂಟರಿ ಪದಕ, 5 ನೌಕಾ ಸೇನಾ ಗ್ಯಾಲೆಂಟರಿ ಪದಕ, 2 ವಾಯು ಸೇನಾ ಗ್ಯಾಲೆಂಟರಿ ಪದಕ, 28 ಇತರೆ ಪದಕಗಳು ಸೇರಿ 144 ಗ್ಯಾಲೆಂಟರಿ ಪದಕಗಳನ್ನು ಸಶಸ್ತ್ರ ಪಡೆಗಳು, ಪೊಲೀಸ್ ಮತ್ತು ಅರೆ ಸೇನಾ ಯೋಧರಿಗೆ ಘೋಷಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಶನಿವಾರ ಅಂಕಿತ ಹಾಕಿದ್ದಾರೆ. ಇತರೆ ಪದಕಗಳ ಪಟ್ಟಿಯಲ್ಲಿ ‘ಆಪರೇಶನ್ ರಕ್ಷಕ್’ ಕಾರ್ಯಾಚರಣೆಗಾಗಿ ಮೂರು ಯೋಧರಿಗೆ ಮರಣೋತ್ತರ ಪುರಸ್ಕಾರ ಲಭ್ಯವಾಗಿದೆ.
ಪೊಲೀಸ್ ಪದಕ:ವಿವಿಧ ಕೇಂದ್ರೀಯ ಮತ್ತು ರಾಜ್ಯ ಪೊಲೀಸ್ ಪಡೆಗಳ ಯೋಧರ ಶೌರ್ಯಕ್ಕೆ ಮನ್ನಣೆ ನೀಡುವ 1,380 ಸೇವಾ ಪದಕಗಳ ಸಾಧಕರ ವಿವರವನ್ನು ಕೇಂದ್ರ ಸರ್ಕಾರವು ಸ್ವಾತಂತ್ರ್ಯ ದಿನದ ಮುನ್ನಾದಿನ ಪ್ರಕಟಿಸಿದೆ. ಇದರಲ್ಲಿ ಎರಡು ರಾಷ್ಟ್ರಪತಿಗಳ ಪೊಲೀಸ್ ಗ್ಯಾಲೆಂಟರಿ ಪದಕ (ಪಿಪಿಎಂಜಿ), 628 ಗ್ಯಾಲೆಂಟರಿ ಪೊಲೀಸ್ ಪದಕ(ಪಿಎಂಜಿ), 88 ರಾಷ್ಟ್ರಪತಿಗಳ ಪೊಲೀಸ್ ವಿಶಿಷ್ಟ ಸೇವಾ ಪದಕ, 662 ಗಮನಾರ್ಹ ಸೇವೆಗಾಗಿನ ಪೊಲೀಸ್ ಪದಕಗಳು ಪಟ್ಟಿಯಲ್ಲಿವೆ.
ಕಾಶ್ಮೀರಕ್ಕೆ ಅತ್ಯಧಿಕ ಪದಕ:ಗ್ಯಾಲೆಂಟರಿ ಪದಕಗಳ ಪೈಕಿ ಗರಿಷ್ಠ 257 (1 ಪಿಪಿಎಂಜಿ ಮತ್ತು 256 ಪಿಎಂಜಿ) ಜಮ್ಮು ಕಾಶ್ಮೀರ ಪೊಲೀಸ್ (ಜೆಕೆಪಿ) ಪಾಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಪಡೆಗೆ 151 (1ಪಿಪಿಎಂಜಿ ಮತ್ತು 150 ಪಿಎಂಜಿ) ಪದಕ ಸಿಕ್ಕಿದ್ದು ಎರಡನೇ ಸ್ಥಾನದಲ್ಲಿದೆ. 23 ಗ್ಯಾಲೆಂಟರಿ ಪದಕಗಳು ಐಟಿಬಿಪಿ ಪಾಲಾಗಿವೆ.
ಈತ ಡೇಟಿಂಗ್ ಕಿಂಗ್: ಇದುವರೆಗೆ 335 ಮಹಿಳೆಯರ ಜತೆ ಡೇಟ್ ಮಾಡಿರುವ ಇವನ ಟಾರ್ಗೆಟ್ ಎಷ್ಟು ಗೊತ್ತೇ?

ಪ್ಲಾಸ್ಟಿಕ್​ ಕಪ್​, ಪ್ಲೇಟ್​, ಸ್ಟ್ರಾಗಳ ಉತ್ಪಾದನೆಯೇ ಬಂದ್​; ಸರ್ಕಾರದಿಂದ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
