ರಾಷ್ಟ್ರ ರಾಜಧಾನಿ ದೆಹಲಿಯ ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಚುನಾವಣೆ ಮುಂದೂಡುವುದರಿಂದ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತದೆ ಎಂದಿದ್ದಾರೆ. ದೆಹಲಿಯ ಮೂರೂ ಪಾಲಿಕೆಗಳನ್ನು ಒಗ್ಗೂಡಿಸುವ ಬಗ್ಗೆ ಕೇಂದ್ರ ಸರ್ಕಾರ ಈ ಬಜೆಟ್ ಮುಂದುವರಿದ ಅಧಿವೇಶನದಲ್ಲೇ ಮಸೂದೆ ಮಂಡಿಸಲು ಚಿಂತನೆ ಮಾಡಿದೆ. ಹೀಗಾಗಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮನವಿ ಮೇರೆಗೆ ಚುನಾವಣೆ ಮುಂದೂಡುವ ಕುರಿತು ದೆಹಲಿ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಚುನಾವಣೆಯನ್ನು ನಿಗದಿಯಂತೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ದಕ್ಷಿಣ, ಉತ್ತರ ಮತ್ತು ಪೂರ್ವ ದೆಹಲಿ ಮಹಾನಗರ ಪಾಲಿಕೆಗಳ ಹಾಲಿ ಅವಧಿ ಮೇ 18ಕ್ಕೆ ಮುಗಿಯುತ್ತದೆ. ಪ್ರಸ್ತುತ ಈ ಮೂರೂ ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.
16ಕ್ಕೆ ಭಗವಂತ್ ಮಾನ್ ಪ್ರಮಾಣ:ಪಂಜಾಬ್​ನ ಆಮಿ ಆದ್ಮಿ ಪಕ್ಷದ ಸಿಎಂ ಆಭ್ಯರ್ಥಿಯಾಗಿರುವ ಭಗವಂತ ಮಾನ್ ಮಾರ್ಚ್ 16ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭಗತ್ ಸಿಂಗ್​ರ ಪೂರ್ವಜರ ಸ್ಥಳವಾದ ಖಟ್ಕರ್ ಕಲಾನ್​ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಾರ್ಚ್ 13ರಂದು ಅಮೃತಸರದಲ್ಲಿ ಬೃಹತ್ ರೋಡ್ ಷೋ ನಡೆಯಲಿದ್ದು, ಪ್ರಮಾಣ ವಚನ ಮತ್ತು ರೋಡ್ ಷೋ ಕಾರ್ಯಕ್ರಮಗಳಲ್ಲಿ ಪಕ್ಷದ ರಾಷ್ಟ್ರೀಯ ಸಂಚಾಲಯ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭಾಗಿಯಾಗಲಿದ್ದಾರೆ.
2024ರ ಚುನಾವಣೆಗೆ ದಿಕ್ಸೂಚಿ ಅಲ್ಲ:ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕರಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ನಾಲ್ಕು ರಾಜ್ಯಗಳ ಫಲಿತಾಂಶ ಇಡೀ ದೇಶದ ದಿಕ್ಸೂಚಿಯಾಗಲಾರದು. ದೇಶದ ಭವಿಷ್ಯವು 2024ರ ಚುನಾವಣೆಯಲ್ಲಿ ನಿರ್ಧಾರ ಆಗುತ್ತದೆ ಎಂದಿದ್ದಾರೆ. ‘ಯಾವುದೇ ರಾಜ್ಯದ ಚುನಾವಣೆಯು ದೇಶದ ಭವಿಷ್ಯ ನಿರ್ಧರಿಸುವುದಿಲ್ಲ ಎಂಬುದು ಸಾಹೇಬ್​ಗೆ (ಪ್ರಧಾನಿ ಮೋದಿ) ಚೆನ್ನಾಗಿ ಗೊತ್ತು. ಆದರೂ ಜನರ ಮನಸ್ಸಿನಲ್ಲಿ ಭ್ರಮೆಯನ್ನು ಪ್ರತಿಷ್ಠಾಷಿಸುವ ಬುದ್ಧಿವಂತ ಆಟ ಆಡುತ್ತಿದ್ದಾರೆ. ಜನರು ಇಂಥ ಮಾಯಾಜಾಲಕ್ಕೆ ಬೀಳಬಾರದು ಅಥವಾ ಅದರ ಭಾಗವಾಗಬಾರದು’ ಎಂದು ಕಿಶೋರ್ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿ ಆಯ್ಕೆಗೆ ಬಿಜೆಪಿ ಬಲವರ್ಧಿಸಿದ ಚುನಾವಣೆ:ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿರುವುದರಿಂದ ಮುಂದಿನ ಜುಲೈ 31ಕ್ಕೆ ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಕೇಸರಿ ಪಡೆಗೆ ಹೆಚ್ಚು ಬಲ ಬಂದಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸದಸ್ಯರು ಹೆಚ್ಚಿರುವುದರಿಂದ ರಾಜ್ಯಸಭೆಯಲ್ಲಿ ಅದರ ಸ್ಥಾನ ವೃದ್ಧಿಸುತ್ತದೆ. ಜತೆಗೆ ಶಾಸಕರೂ ರಾಷ್ಟ್ರಪತಿ ಚುನಾವಣೆಯ ಮತದಾರರಾಗಿರುವ ಕಾರಣ ಬಿಜೆಪಿ ಬಲ ಅಧಿಕಗೊಳ್ಳುತ್ತದೆ. ರಾಷ್ಟ್ರಪತಿ ಚುನಾವಣೆಯಲ್ಲಿ 776 ಸಂಸದರು ಮತ್ತು 4,120 ಶಾಸಕರು ಮತದಾರರಾಗಿದ್ದಾರೆ. ದೇಶದ ಅನೇಕ ಹೆಚ್ಚು ರಾಜ್ಯದಲ್ಲಿ ಬಿಜೆಪಿ ಅಥವಾ ಎನ್​ಡಿಎ ಸರ್ಕಾರ ಇರುವ ಕಾರಣ ಒಟ್ಟು ಮತದಾರರಲ್ಲಿ ಸುಮಾರು ಅರ್ಧದಷ್ಟು ಬಿಜೆಪಿ ಮತ್ತು ಅದರ ಮಿತ್ರಪಕ್ಷದವರು ಇದ್ದಾರೆ. ಪ್ರತಿ ಸಂಸದನ ಮತದ ಮೌಲ್ಯ 708 ಮತ್ತು ಶಾಸಕರ ಮತದ ಮೌಲ್ಯ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗುತ್ತದೆ. ಉತ್ತರ ಪ್ರದೇಶದಲ್ಲಿ ಇದು 208 ಇದೆ.
ಡಿಸಿಎಂ ಸೇರಿ 11 ಸಚಿವರು ಪರಾಭವ:ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮತ್ತು ಇತರ 10 ಸಚಿವರು ಸೋಲುಂಡಿದ್ದಾರೆ. ಸಿರಥುವಿನಲ್ಲಿ ಡಾ. ಪಲ್ಲವಿ ಪಟೇಲ್ ಎದುರು 7,337 ಮತಗಳ ಅಂತರದಿಂದ ಮೌರ್ಯ ಸೋಲುಂಡಿದ್ದಾರೆ. ಸಚಿವರಾದ ಸುರೇಶ್ ರಾಣಾ, ಛತ್ರಪಾಲ್ ಸಿಂಗ್ ಗಂಗ್ವಾರ್, ಆನಂದ್ ಸ್ವರೂಪ್ ಶುಕ್ಲಾ, ಉಪೇಂದ್ರ ತಿವಾರಿ, ರಣವೇಂದ್ರ ಸಿಂಗ್ ಧುನ್ನಿ, ಲಖನ್ ಸಿಂಗ್ ರಜಪೂತ್, ಸತೀಶ್ ಚಂದ್ರ ದ್ವಿವೇದಿ, ಸಂಗೀತಾ ಬಲ್ವಂತ್ ಪರಾಭವಗೊಂಡ ಪ್ರಮುಖರು.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸ್ಥಾನಕ್ಕೆ ಕುತ್ತು?:ಪಂಚ ರಾಜ್ಯ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್​ಗೆ ಇನ್ನೊಂದು ಆಘಾತ ಎದುರಾಗುವ ಸಂಭವ ಇದೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಬಲ ಕುಗ್ಗಿರುವುದರಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಅದರ ಪ್ರಾತಿನಿಧ್ಯವೂ ತಗ್ಗಲಿದೆ. ಇದರಿಂದ ವಿರೋಧ ಪಕ್ಷದ ಅಧಿಕೃತ ಸ್ಥಾನಮಾನವನ್ನು ಕಾಂಗ್ರೆಸ್ ಕಳೆದುಕೊಳ್ಳಲಿದೆ. ಈಗಾಗಲೇ ಲೋಕಸಭೆಯಲ್ಲಿ ಕಾಂಗ್ರೆಸ್​ಗೆ ಅಧಿಕೃತವಾಗಿ ವಿರೋಧ ಪಕ್ಷದ ಸ್ಥಾನಮಾನ ಇಲ್ಲ. ಈಗ ಮೇಲ್ಮನೆಯಲ್ಲೂ ಅದು ಹೋಗುವ ಭೀತಿ ಎದುರಾಗಿದೆ. ಪ್ರಸ್ತುತ ಕಾಂಗ್ರೆಸ್​ನ 34 ಸದಸ್ಯರು ಮೇಲ್ಮನೆಯಲ್ಲಿ ಇದ್ದಾರೆ. ಈ ವರ್ಷ 7 ಸ್ಥಾನ ಕಡಿಮೆ ಆಗಲಿದೆ. ಮುಂದಿನ ವರ್ಷ ಕರ್ನಾಟಕ ಗುಜರಾತ್​ಗಳಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲೂ ಸೋಲಾದರೆ ಕಾಂಗ್ರೆಸ್ ಸ್ಥಾನ ಇನ್ನಷ್ಟು ಇಳಿಯುತ್ತದೆ. 25ಕ್ಕಿಂತ ಕಡಿಮೆಯಾದರೆ (ಒಟ್ಟು ಸದಸ್ಯಬಲದಲ್ಲಿ ಶೇ. 10ಕ್ಕಿಂತ ಕಡಿಮೆ) ಅಧಿಕೃತ ವಿರೋಧ ಪಕ್ಷ ಸ್ಥಾನಮಾನ ಇರುವುದಿಲ್ಲ. ರಾಜ್ಯಸಭೆಯಲ್ಲಿ ಕರ್ನಾಟಕದವರಾದ ಎಂ.ಮಲ್ಲಿಕಾರ್ಜುನ ಖರ್ಗೆ ವಿರೋಧ ಪಕ್ಷದ ನಾಯಕರು.
ರಾಜ್ಯಸಭೆಯಲ್ಲೂ ಆಪ್ ಬಲ ವೃದ್ಧಿ:ಪಂಜಾಬ್​ನಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದ ಅಧಿಕಾರ ಹಿಡಿದಿರುವ ಆಮ್ ಆದ್ಮಿ ಪಕ್ಷ (ಆಪ್), ರಾಜ್ಯಸಭೆಯಲ್ಲೂ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲಿದೆ. ಹಾಲಿ ಮೂವರು ಸದಸ್ಯರನ್ನು ಆಪ್ ಹೊಂದಿದ್ದು, ಪಂಜಾಬ್​ನಿಂದ 5 ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಹೀಗಾಗಿ ಅದರ ಸಂಖ್ಯೆ 8ಕ್ಕೆ ಏರುತ್ತದೆ. ಈ ತಿಂಗಳ ಅಂತ್ಯಕ್ಕೆ ತೆರವಾಗುವ ಸ್ಥಾನಗಳ ಪೈಕಿ ಪಂಜಾಬ್​ನ ಐದು ಸ್ಥಾನಗಳೂ ಇವೆ. ಮೇಲ್ಮನೆಯಲ್ಲಿ ಬಿಜೆಪಿ (97), ಕಾಂಗ್ರೆಸ್ (34), ಟಿಎಂಸಿ (13), ಡಿಎಂಕೆ (10) ನಂತರ ಐದನೇ ದೊಡ್ಡ ಪಕ್ಷ ಆಗಲಿದೆ.

ವಿದ್ಯಾನ್ಮಾನ ಮತಯಂತ್ರಗಳನ್ನು ತಿರುಚಿ ಈ ಗೆಲುವು ಪಡೆಯಲಾಗಿದೆ. 2024ರಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಕಾಂಗ್ರೆಸ್ ಮತ್ತು ಬಿಜೆಪಿ ಹೊರತಾದ ಪಕ್ಷಗಳು ಒಗ್ಗೂಡಲು ಇದು ಸಕಾಲ.
|ಮಮತಾ ಬ್ಯಾನರ್ಜಿಪಶ್ಚಿಮಬಂಗಾಳ ಮುಖ್ಯಮಂತ್ರಿ
ರಾಜ್ಯದ ಜನರ ತೀರ್ಮಾನ ಅದ್ಭುತ ಎಂದ ಸಿಧು:ರಾಜ್ಯದ ಜನತೆಯ ತೀರ್ಮಾನ ಅದ್ಭುತ. ಹೊಸ ವ್ಯವಸ್ಥೆಗೆ ಮಣೆ ಹಾಕಿದ ಜನರು ಅಭಿನಂದನಾರ್ಹರು. ಜನರು ಬದಲಾವಣೆ ಬಯಸಿದ್ದರು. ಇದನ್ನು ತಪ್ಪೆಂದು ಹೇಳಲಾಗದು. ಜನರ ದನಿಯೇ ಭಗವಂತನ ಧ್ವನಿ. ಇದಕ್ಕೆ ತಲೆಬಾಗಬೇಕು. ರಾಜಕೀಯವೆಂದರೆ ಹೀಗಿ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ ಇದನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂದು ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದರು. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಚಲಿತವಾಗುವ ಪ್ರಶ್ನೆಯೇ ಇಲ್ಲ. ಪಂಜಾಬ್ ಅಭಿವೃದ್ಧಿಯ ಮಿಷನ್​ನಿಂದ ಹಿಂದೆ ಸರಿಯುವುದಿಲ್ಲ. ಪಂಜಾಬ್​ನಲ್ಲಿ ಇದ್ದೇನೆ, ಮುಂದೆಯೂ ಇರುತ್ತೇನೆ. ನೆಲದ ಬಗ್ಗೆ ಅತೀವ ಪ್ರೀತಿ ಹೊಂದಿರುವವರು ಸೋಲು-ಗೆಲುವಿನ ಬಗ್ಗೆ ತಲೆಕಡೆಸಿಕೊಳ್ಳುವುದಿಲ್ಲ ಎಂದರು.
ಕ್ಷೇತ್ರಕ್ಕೆ ಹೆಚ್ಚು ಸಮಯ ನೀಡಿ:ಪಂಜಾಬ್​ನಲ್ಲಿ ಅಭೂತಪೂರ್ವ ಗೆಲುವಿನ ನಂತರ ಇದೇ ಮೊದಲ ಬಾರಿಗೆ ನೂತನ ಶಾಸಕರನ್ನು ಭೇಟಿಯಾದ ಸಿಎಂ ಅಭ್ಯರ್ಥಿ ಭಗವಂತ ಮಾನ್, ರಾಜಧಾನಿಯಲ್ಲಿ ಇರುವುದಕ್ಕಿಂತ ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯುವಂತೆ ಸೂಚಿಸಿದರು. ‘ನಾವು ರಾಜ್ಯದ ಉದ್ದಗಲಕ್ಕೂ ತಲುಪಬೇಕು. ಹೀಗಾಗಿ ಚಂಡೀಗಢದಲ್ಲಿ ಇರುವುದಕ್ಕಿಂತ ಕ್ಷೇತ್ರಕ್ಕೆ ಹೆಚ್ಚಿನ ಸಮಯ ನೀಡಬೇಕು. ಮತದಾರರಿಗೆ ಗೌರವ ನೀಡಿ, ದುರಹಂಕಾರಿಗಳಾಗಬೇಡಿ. ಸಚಿವರಾಗಲು ಒತ್ತಡ, ವಶೀಲಿ ಮಾಡಬೇಡಿ. ಏಕೆಂದರೆ ಸಂಪುಟದಲ್ಲಿ ನಾನೂ ಸೇರಿ 18 ಮಂದಿಗಷ್ಟೆ ಅವಕಾಶ ಇದೆ. ಸಚಿವ ಸ್ಥಾನ ಸಿಗದವರು ನಿರಾಶರಾಗಬಾರದು. ನಾವೆಲ್ಲರೂ ಸಚಿವರೆ’ ಎಂದು ಹೇಳಿದರು.
ವಿದೇಶಿ ಮೀಡಿಯಾದಲ್ಲೂ ಬಿಜೆಪಿ ಗುಣಗಾನ:ಪಂಚ ರಾಜ್ಯಗಳ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ವಿದೇಶಿ ಮಾಧ್ಯಮಗಳು ಬಿಜೆಪಿ ಮತ್ತು ಪ್ರಧಾನಿ ಮೋದಿ ನಾಯಕತ್ವವನ್ನು ಹೊಗಳಿವೆ. ಪ್ರಧಾನಿ ಪ್ರತಿನಿಧಿಸುವ ಪಕ್ಷದ ಜನಪ್ರಿಯತೆ ಹೆಚ್ಚಿರುವುದು, 2024ರ ರಾಷ್ಟ್ರೀಯ ಚುನಾವಣೆಯ ಭವಿಷ್ಯವನ್ನು ಈ ಚುನಾವಣಾ ಫಲಿತಾಂಶ ತೋರಿಸುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಪ್ರಾದೇಶಿಕ ಪಕ್ಷಗಳಿಂದ ತೀವ್ರ ಪೈಪೋಟಿ ಎದುರಿಸಿದಂತೆ ಕಂಡರೂ ಬಿಜೆಪಿ ಜಯ ಸಾಧಿಸಿದೆ. ಆದರೆ, ಭಾರತದ ಗ್ರಾ್ಯಂಡ್ ಓಲ್ಡ್ ಪಾರ್ಟಿ ಕಾಂಗ್ರೆಸ್ ತೀರ ಮುಖಭಂಗ ಅನುಭವಿಸಿದೆ ಎಂದು ದಿ ನ್ಯೂಯಾರ್ಕ್ ಟೈಮ್್ಸ ವರದಿ ಮಾಡಿದೆ. ಬ್ರಿಟನ್ ಡೈಲಿ ಟೆಲಿಗ್ರಾಫ್, ಬಿಬಿಸಿಗಳು ಕೂಡ ಬಿಜೆಪಿಯ ಜಯವನ್ನು ಮುಂದಿನ ಲೋಕಸಭಾ ಚುನಾವಣೆಯ ಕೈಮರ ಎಂದು ಹೇಳಿವೆ.
ಆತ್ಮಹತ್ಯೆಗೆ ಯತ್ನಿಸಿದ ಎಸ್​ಪಿ ಮುಖಂಡ:ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಪರಾಭವಗೊಂಡಿದ್ದಕ್ಕೆ ನೊಂದ ಕಾನ್ಪುರದ ಮುಖಂಡ ನರೇಂದ್ರ ಸಿಂಗ್ ಅಲಿಯಾಸ್ ಪಿಂಟು ಆತ್ಮಹತ್ಯೆಗೆ ಯತ್ನಿಸಿದ್ದರು. ಲಖನೌನದ ವಿಧಾನ ಭವನದ ಮುಂದೆ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು. ಕೂಡಲೇ ಅವರನ್ನು ರಕ್ಷಿಸಲಾಯಿತು. ಆದರೂ ಶೇ. 30ರಷ್ಟು ಸುಟ್ಟಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆಯ ಅಂತ್ಯಸಂಸ್ಕಾರಕ್ಕೆಂದು ಬಂದ ಪುತ್ರನೂ ಇನ್ನಿಲ್ಲ; ಇಬ್ಬರ ಸಾವಿನಾಘಾತದ ಮಧ್ಯೆಯೂ ಅಂಗಾಂಗಗಳ ದಾನ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + fourteen =
Remember me
