ನವದೆಹಲಿ:ಖಲಿಸ್ತಾನಿ ಭಯೋತ್ಪಾದಕರ ವಿಚಾರದಲ್ಲಿ ಭಾರತ ಮತ್ತು ಕೆನಡಾ ನಡುವಿನ ಸಂಘರ್ಷ ದಿನೇದಿನೇ ತಾರಕಕ್ಕೇರುತ್ತಿದ್ದು ಕೆನಡಾ ಪ್ರಜೆಗಳಿಗೆ ಗುರುವಾರ ಭಾರತೀಯ ವೀಸಾ ರದ್ದುಪಡಿಸುವ ಮೂಲಕ ಬಿಕ್ಕಟ್ಟು ಹೊಸ ಮಜಲಿಗೆ ತಲುಪಿದೆ. ಖಲಿಸ್ತಾನಿ-ಪರ ಭಯೋತ್ಪಾದಕ ಹರ್ದಿಪ್ ಸಿಂಗ್ ನಿಜ್ಜರ್ ಕೊಲೆಯಲ್ಲಿ ಭಾರತೀಯ ಏಜೆಂಟರ ಕೈವಾಡವಿರುವುದಕ್ಕೆ ತಮ್ಮ ಬಳಿ ಖಚಿತ ದಾಖಲೆಗಳಿವೆ ಎಂದು ಕೆನಡಾ ಆರೋಪಿಸಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ಬಾಂಧವ್ಯದಲ್ಲಿ ಬಿರುಕುಂಟಾಗಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡು ಅವರ ಹಲವು ಟೀಕೆ ಟಿಪ್ಪಣಿಗಳು ದ್ವಿಪಕ್ಷೀಯ ಸಂಬಂಧ ಹದಗೆಡುವುದಕ್ಕೆ ಕಾರಣವಾಗುತ್ತಿದೆ.
ಮುಂದಿನ ಸೂಚನೆವರೆಗೆ ಕೆನಡಾ ನಾಗರಿಕರಿಗೆ ವೀಸಾಗಳನ್ನು ರದ್ದುಪಡಿಸಿ ಭಾರತ ಗುರುವಾರ ಆದೇಶ ಹೊರಡಿಸಿದೆ. ಕಾರ್ಯಾಚರಣೆ ಕಾರಣಗಳಿಗಾಗಿ ಭಾರತೀಯ ವೀಸಾ ಸೇವೆಗಳನ್ನು ಮುಂದಿನ ನೋಟಿಸ್​ವರೆಗೆ ಅಮಾನತು ಮಾಡಲಾಗಿದೆ ಎಂದು ಬಿಎಲ್​ಎಸ್ ಇಂಟರ್​
ನ್ಯಾಷನಲ್ ತಿಳಿಸಿದೆ. ಬಿಎಲ್​ಎಸ್ ಇಂಟರ್​ನ್ಯಾಷನಲ್ ಕೆನಡಾ ಪ್ರಜೆಗಳ ವೀಸಾ ಅರ್ಜಿಗಳ ಪ್ರಾಥಮಿಕ ಪರಿಶೀಲನೆ ಪ್ರಕ್ರಿಯೆ ನಿರ್ವಹಿಸುವ ಖಾಸಗಿ ಸಂಸ್ಥೆಯಾಗಿದೆ. ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಆರೋಪವನ್ನು ಭಾರತ ಖಂಡತುಂಡವಾಗಿ ನಿರಾಕರಿಸಿದೆ. ಇದೊಂದು ‘ಅಸಂಗತ’ ಹಾಗೂ ‘ರಾಜಕೀಯ ಪ್ರೇರಿತ’ ಆರೋಪ ಎಂದು ಹೇಳಿದೆ. ಆದರೆ, ವೀಸಾ ರದ್ದತಿಗೂ ವಿವಾದಕ್ಕೂ ಸಂಬಂಧವಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ವಿಶ್ವ ಸಂಸ್ಥೆ ಮಹಾಧಿವೇಶನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಆಗಮಿಸಿರುವ ಟ್ರೂಡು, ವಿಶ್ವ ಸಂಸ್ಥೆ ಆವರಣದ ಎರಡು ಕಡೆ ಭಾರತೀಯ ಮಾಧ್ಯಮದವರು ಎರಡು ಪ್ರತ್ಯೇಕ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸದೆ ನುಣುಚಿಕೊಂಡರು. ನಿಜ್ಜರ್ ಹತ್ಯೆ ಸಂಬಂಧ ಮಾಡಿರುವ ಆರೋಪ ಮತ್ತು ಭಾರತ ಅದನ್ನು ತಳ್ಳಿ ಹಾಕಿರುವ ಸಂಬಂಧ ಕೇಳಿದ ಪ್ರಶ್ನೆಗೆ ಕೆನಡಾ ಪ್ರಧಾನಿ ಉತ್ತರಿಸದೇ ಹೊರಟು ಹೋದರು.
ಹಿಂದುಗಳಿಗೆ ಬೆದರಿಕೆ
ಈ ನಡುವೆ, ಉಗ್ರಗಾಮಿಗಳು ಕೆನಡಾದ ಹಿಂದುಗಳಿಗೆ ಬೆದರಿಕೆ ಹಾಕುತ್ತಿದ್ದು ಭಾರತಕ್ಕೆ ಹಿಂದಿರುಗುವಂತೆ ಆಗ್ರಹಿಸುತ್ತಿದ್ದಾರೆ ಎಂದು ಜಸ್ಟಿನ್ ಟ್ರೂಡು ಅವರ ಪಕ್ಷದ ಸಂಸದ ಚಂದ್ರ ಆರ್ಯ ಆರೋಪಿಸಿದ್ದಾರೆ. ಶಾಂತವಾಗಿರುವಂತೆ ಹಿಂದು-ಕೆನಡಿಗರಿಗೆ ಅವರು ಮನವಿ ಮಾಡಿದ್ದಾರೆ. ಯಾವುದೇ ಅನಪೇಕ್ಷಿತ ಘಟನೆಗಳನ್ನು ಕಾನೂನು ಜಾರಿ ಸಂಸ್ಥೆಗಳ ಗಮನಕ್ಕೆ ತರುವಂತೆ ಸೂಚಿಸಿದ್ದಾರೆ.
ಈಚೆಗೆ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಕೆನಡಾ ಸಹವರ್ತಿ ಟ್ರೂಡು ಜೊತೆ ನಡೆಸಿದ ಮಾತುಕತೆ ಹಿನ್ನೆಲೆಯಲ್ಲಿ ಉಭಯ ದೇಶಗಳ ಬಾಂಧವ್ಯದಲ್ಲಿ ಉದ್ವಿಗ್ನತೆ ಉಂಟಾಗಿದೆ. ಕೆನಡಾದಲ್ಲಿ ಭಾರತ-ವಿರೋಧಿ ಚಟುವಟಿಕೆಗಳು ಮುಂದುವರಿಯುತ್ತಿರುವುದಕ್ಕೆ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದರು.
45 ವರ್ಷದ ನಿಜ್ಜರ್ ಭಾರತೀಯ ಭಯೋತ್ಪಾದಕನಾಗಿದ್ದು ಖಲಿಸ್ತಾನ್ ಟೈಗರ್ ಫೋರ್ಸ್​ನ (ಕೆಟಿಎಫ್) ಮುಖ್ಯಸ್ಥನಾಗಿದ್ದ. ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಗುರುದ್ವಾರದ ಹೊರಗೆ
ಜೂನ್ 18ರಂದು ಆತನ ಹತ್ಯೆಯಾಗಿತ್ತು. ಭಾರತಕ್ಕೆ ಬೇಕಾಗಿದ್ದ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ಆತನ ತಲೆ ಮೇಲೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಸುಖಾ ದುನೇಕೆ ಎಂದೂ ಪರಿಚಿತನಾಗಿದ್ದ ಖಲಿಸ್ತಾನಿ ಭಯೋತ್ಪಾದಕ ಸುಖದೂಲ್ ಸಿಂಗ್ ಬುಧವಾರ ರಾತ್ರಿ ಕೆನಡಾದಲ್ಲಿ ನಡೆದ ಗ್ಯಾಂಗ್​ವಾರ್​ನಲ್ಲಿ ಕೊಲೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಯಾರು ಈ ದುನೇಕೆ?: ದುನೇಕೆ ಕೆನಡಾದಲ್ಲಿನ ಖಲಿಸ್ತಾನಿ ಚಳವಳಿಯ ಭಾಗವಾಗಿದ್ದ. ‘ಎ ದರ್ಜೆ’ಯ ಗ್ಯಾಂಗ್​ಸ್ಟರ್ ಆಗಿದ್ದ ಪಂಜಾಬ್​ನ ಮೋಗಾದವನಾದ ದುನೇಕೆ, 2017ರಲ್ಲಿ ನಕಲಿ ಪಾಸ್​ಪೋರ್ಟ್ ಮೇಲೆ ಕೆನಡಾಕ್ಕೆ ಪಲಾಯನ ಮಾಡಿದ್ದ. ಆತ, ಗ್ಯಾಂಗ್ ನಾಯಕ ಹಾಗೂ ಖಲಿಸ್ತಾನಿ ಭಯೋತ್ಪಾದಕ ಅರ್ಷದೀಪ್ ದಲ್ಲಾನ ನಿಕಟ ಸಹಚರನಾಗಿದ್ದ. ಖಲಿಸ್ತಾನ ಮತ್ತು ಕೆನಡಾಕ್ಕೆ ಸಂಬಂಧಿಸಿದ 43 ಗ್ಯಾಂಗ್​ಸ್ಟರ್​ಗಳ ಪಟ್ಟಿಯಲ್ಲಿ ಈತನ ಹೆಸರೂ ಸೇರಿತ್ತು. ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್​ಐಎ) ಬುಧವಾರ ಈ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ದುನೇಕೆ ಹತ್ಯೆಗೆ ತಾನೇ ಕಾರಣ ಎಂದು ಈಗ ಬಂಧನದಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯಿ ಗುರುವಾರ ಹೇಳಿಕೊಂಡಿದ್ದಾನೆ. ಬುಧವಾರ ರಾತ್ರಿ ಅಂತರ್-ಗ್ಯಾಂಗ್ ಹಿಂಸಾಚಾರದಲ್ಲಿ ದುನೇಕೆ ಸತ್ತಿದ್ದ. ದುಷ್ಟಕೂಟದ ಗುರ್​ಲಾಲ್ ಬ್ರಾರ್ ಮತ್ತು ವಿಕ್ಕಿ ಮಿಡ್ಡುಖೇರಾ ಕೊಲೆಗಳಲ್ಲಿ ದುನೇಕೆ ಪ್ರಮುಖ ಪಾತ್ರ ವಹಿಸಿದ್ದ ಎಂದು ಬಿಷ್ಣೋಯಿ ಗ್ಯಾಂಗ್ ಫೇಸ್​ಬುಕ್ ಪೋಸ್ಟ್​ನಲ್ಲಿ ಹೇಳಿದೆ.
ಭಾರತ ಮತ್ತು ಕೆನಡಾಕ್ಕೆ ತೆರಳುವ ತಮ್ಮ ತಮ್ಮ ದೇಶಗಳ ಪ್ರವಾಸಿಗಳಿಗೆ ಜಾಗ್ರತೆಯಿಂದ ಇರುವಂತೆ ಉಭಯ ಸರ್ಕಾರಗಳು ಎಚ್ಚರಿಕೆ ನೀಡಿವೆ. ಕೆನಡಾದಲ್ಲಿ ಭಾರತ-ವಿರೋಧಿ ಚಟುವಟಿಕೆ ಮತ್ತು ರಾಜಕೀಯ-ಪ್ರೇರಿತ ದ್ವೇಷಾ ಪರಾಧಗಳು ಹೆಚ್ಚುತ್ತಿರುವುದರಿಂದ ಜಾಗ್ರತೆಯಿಂದ ಇರುವುದು ಅಗತ್ಯ ಎಂದು ಭಾರತ ಬುಧವಾರ ಹೇಳಿದೆ.
ಭಾರತದಲ್ಲಿರುವ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಹೊಂದಿಸಿಕೊಳ್ಳುವುದಾಗಿ ಕೆನಡಾ ಗುರುವಾರ ಹೇಳಿದೆ. ಕೆಲವು ರಾಜತಾಂತ್ರಿಕರಿಗೆ ಬೆದರಿಕೆ ಕರೆಗಳು ಬರುತ್ತಿದ್ದು ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 8 =
Remember me
