ನವದೆಹಲಿಯಲ್ಲಿ ಈಚೆಗೆ ಜರುಗಿದ ಜಿ 20 ಶೃಂಗಸಭೆಯಲ್ಲಿ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಪಾಲ್ಗೊಂಡಿದ್ದರೂ ಶೃಂಗಸಭೆಯ ನಂತರ ಕೆನಡಾ ಹಾಗೂ ಭಾರತದ ಸಂಬಂಧಗಳು ಸಾಕಷ್ಟು ಹಳಸತೊಡಗಿವೆ. ಜಸ್ಟಿನ್ ಟ್ರುಡೊ ಅವರ ತಂದೆ ಪಿಯರ್ ಎಲಿಯಟ್ ಟ್ರುಡೊ ಕೂಡ ಈ ಹಿಂದೆ ಕೆನಡಾದ ಪ್ರಧಾನಿಯಾಗಿದ್ದರು. ಆಗ ಕೂಡ ಭಾರತದ ಜತೆಗೆ ಸಂಬಂಧ ಸಿಹಿಯಾಗಿರಲಿಲ್ಲ. ಭಾರತ- ಕೆನಡಾ ಸಂಬಂಧ ಬಿಗಡಾಯಿಸುವ ಈ ಪರಂಪರೆಗೆ ಮೂಲ ಕಾರಣ ಕೆನಡಾದಲ್ಲಿ ನೆಲೆಸಿರುವ ಖಲಿಸ್ತಾನ ಬೆಂಬಲಿಗರು.
ಜಿ 20 ಶೃಂಗಸಭೆ ಸಂದರ್ಭದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಗಳ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದಲ್ಲಿ ಖಲಿಸ್ತಾನ ಪರ ಚಟುವಟಿಕೆಗಳ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಕೆನಡಾದಲ್ಲಿ ಖಲಿಸ್ತಾನ ಪೋಷಕರು ಹಾಗೂ ಬೆಂಬಲಿಗರನ್ನು ಅಪ್ಪಿಕೊಳ್ಳುವ ಮೂಲಕ ಜಸ್ಟಿನ್ ಟ್ರುಡೊ ಅವರು ಭಾರತದ ವಿರುದ್ಧವೇ ಕೊಲೆ ಆರೋಪ ಮಾಡಿದ್ದಾರೆ. ಕಳೆದ ಜೂನ್ 18ರಂದು ಕೆನಡಾದಲ್ಲಿ ಖಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಹಾಗೂ ಖಲಿಸ್ತಾನ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್​ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ನಿಜ್ಜಾರ್ ಹತ್ಯೆಯಲ್ಲಿ ಭಾರತದ ಏಜೆಂಟರ ಪಾತ್ರವಿರುವ ಕುರಿತು ಟ್ರುಡೊ ಅವರ ಆಧಾರರಹಿತ ಹೇಳಿಕೆಯು ಉಭಯ ದೇಶಗಳ ಸಂಬಂಧವನ್ನು ಇನ್ನಷ್ಟು ಬಿಗಡಾಯಿಸಿದೆ.
ಜಸ್ಟಿನ್ ಟ್ರುಡೊ ಅವರು 2018ರಲ್ಲಿ ಮತ್ತು ನಂತರ 2023ರಲ್ಲಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೂ ಮೊದಲು 1971ರ ಜನವರಿಯಲ್ಲಿ ಅವರ ತಂದೆ ಪಿಯರ್ ಟ್ರುಡೊ ಅವರು ಐದು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದರು. ಒಂಟೆಯ ಮೇಲೆ ಸವಾರಿ ಕೂಡ ಮಾಡಿದ್ದರು, ಗಂಗಾನದಿ ದರ್ಶನ ಮಾಡಿದ್ದರು. ಲೊಕೊಮೋಟಿವ್ ಕಾರ್ಖಾನೆ ವೀಕ್ಷಿಸಿದ್ದರು. ಪ್ರೇಮದ ಸಂಕೇತ ತಾಜ್ ಮಹಲ್​ನಲ್ಲೂ ಕೆಲ ಸಮಯ ಕಳೆದಿದ್ದರು. ಭಾರತ – ಕೆನಡಾ ಸಂಬಂಧಗಳಲ್ಲಿ ಕೆಟ್ಟ ಗಳಿಗೆಗಳು ಆರಂಭವಾಗಿದ್ದೇ ಈ ಪಿಯರ್ ಟ್ರುಡೊ ಅಧಿಕಾರಾವಧಿಯಲ್ಲಿ. ಖಲಿಸ್ತಾನ ವಿಷಯ ಮಾತ್ರವದಲ್ಲದೆ, ಶಾಂತಿಯುತ ಉದ್ದೇಶಗಳಿಗಾಗಿ ಭಾರತದ ಮೊದಲ ಪರಮಾಣು ಸ್ಪೋಟವು ಕೂಡ ಸಂಬಂಧದಲ್ಲಿ ಸಾಕಷ್ಟು ಹುಳಿಯನ್ನು ಹಿಂಡಿತು.
ಕೆನಡಾ ಡ್ಯೂಟೇರಿಯಮ್ ಯುರೇನಿಯಂ ಸ್ಥಾವರವು ಅಣುಶಕ್ತಿಯನ್ನು ಉತ್ಪಾದಿಸಲು ಪುಷ್ಟೀಕರಿಸದಿರುವ ಯುರೇನಿಯಂ (ಅಂದರೆ, ನೈಸರ್ಗಿಕ ಸ್ಥಿತಿಯಲ್ಲಿರುವ ಯುರೇನಿಯಂ. ನೈಸರ್ಗಿಕ ಯುರೇನಿಯಂ ಅದಿರಿನಲ್ಲಿ ಯು 235 ಪರಮಾಣು ಅಂಶವು ಶೇಕಡಾ 0.72 ಇರುತ್ತದೆ. ಪರಮಾಣು ವಿದ್ಯುತ್ ತಯಾರಿಕೆಗಾಗಿ ಯು 35 ಅಂಶವನ್ನು ಶೇಕಡಾ 2ರಿಂದ 5ರವರೆಗೆ ಹೆಚ್ಚಿಸಲು ಪುಷ್ಟೀಕರಿಸಲಾಗುತ್ತದೆ. ಅಲ್ಲದೆ, ಮಿಲಿಟರಿ ಅಗತ್ಯಗಳಿಗೆ ಬಳಸಲು ಈ ಪುಷ್ಟೀಕರಣ ಪ್ರಮಾಣವನ್ನು ಶೇಕಡಾ 93.5ರವರೆಗೆ ಹೆಚ್ಚಿಸಲಾಗುತ್ತದೆ.) ಅನ್ನು ಬಳಸಲು ಅವಕಾಶ ಮಾಡಿಕೊಟ್ಟಿತು. ಪುಷ್ಟೀಕರಣ ಸೌಲಭ್ಯಗಳನ್ನು ಹೊಂದಿರದ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದು ಪ್ರಯೋಜನಕಾರಿಯಿತು. ಪುಷ್ಟೀಕರಿಸದಿರುವ ಯುರೇನಿಯಂ ತಂತ್ರಜ್ಞಾನವು ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಗೂ ಅವಕಾಶವನ್ನು ತೆರೆದಿಟ್ಟಿತು.
ಅಗ್ಗದ ವೆಚ್ಚದಲ್ಲಿ ಪರಮಾಣು ವಿದ್ಯುತ್ ಉತ್ಪಾದಿಸಲು ಅಮೆರಿಕ ಮತ್ತು ಕೆನಡಾ ದೇಶಗಳು ಭಾರತಕ್ಕೆ ನೆರವು ನೀಡಿದ್ದವು. ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ರಿಯಾಕ್ಟರ್​ಗಳನ್ನು ಒದಗಿಸುವ ಮೂಲಕ ಸಹಕರಿಸಿದ್ದವು. ಅಮೆರಿಕದ ಸೈರಸ್ ರಿಯಾಕ್ಟರ್ ಅನ್ನು 1960ರ ಜುಲೈನಲ್ಲಿ ಕೆನಡಾದ ಸಹಯೋಗದೊಂದಿಗೆ ಹೋಮಿ ಜಹಾಂಗೀರ್ ಭಾಭಾ ನೇತೃತ್ವದಲ್ಲಿ ಭಾರತದಲ್ಲಿ ಅಳವಡಿಸಲಾಯಿತು. ಆಗ ಕೆನಡಾದ ಪ್ರಧಾನಿಯಾಗಿದ್ದ ಪಿಯರ್ ಟ್ರುಡೊ ಅವರು, ಈ ಪರಮಾಣು ಕಾರ್ಯಕ್ರಮವನ್ನು ಶಾಂತಿಯುತ ಉದ್ದೇಶಗಳಿಗಾಗಿ ಬಳಸಬೇಕು. ಒಂದು ವೇಳೆ ಭಾರತವು ಪರಮಾಣು ಅಸ್ತ್ರವನ್ನು ಪರೀಕ್ಷಿಸಿದರೆ, ಕೆನಡಾ ತನ್ನ ಪರಮಾಣು ಸಹಕಾರವನ್ನು ಸ್ಥಗಿತಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಪಿಯರ್ ಟ್ರುಡೊ ಅವರು ಭಾರತಕ್ಕೆ ಭೇಟಿ ನೀಡಿದ ಮೂರು ವರ್ಷಗಳ ನಂತರ 1974ರಲ್ಲಿ, ಭಾರತವು ಪೋಖ್ರಾನ್​ನಲ್ಲಿ ಸೈರಸ್ ರಿಯಾಕ್ಟರ್ ಮೂಲಕ ಪ್ಲುಟೋನಿಯಂ ಅನ್ನು ಬಳಸಿಕೊಂಡು ಪರಮಾಣು ಅಸ್ತ್ರವನ್ನು ಸ್ಪೋಟಿಸಿತು. ಈ ಪರಮಾಣು ಅಸ್ತ್ರದ ಸ್ಪೋಟವು ಶಾಂತಿಯುತ ಉದ್ದೇಶವನ್ನು ಹೊಂದಿದ್ದು, ಕೆನಡಾದೊಂದಿಗಿನ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಭಾರತ ಹೇಳಿತು. ಆದರೆ, ಪಿಯರ್ ಟ್ರುಡೊ ನೇತೃತ್ವದ ಕೆನಡಾ ಸರ್ಕಾರವು ಭಾರತದ ಪರಮಾಣು ಶಕ್ತಿ ಕಾರ್ಯಕ್ರಮಕ್ಕೆ ನೀಡಿದ್ದ ಎಲ್ಲ ಬೆಂಬಲವನ್ನು ಹಿಂತೆಗೆದುಕೊಂಡಿತು.
ಭಾರತದಲ್ಲಿ ಮತ್ತೊಂದು ರಿಯಾಕ್ಟರ್​ನಲ್ಲಿ ಕೆಲಸ ಮಾಡುತ್ತಿದ್ದ ಕೆನಡಾದ ಅಧಿಕಾರಿಗಳನ್ನು ವಾಪಸು ಕರೆಯಿಸಿಕೊಳ್ಳಲಾಯಿತು. ಭಾರತ- ಕೆನಡಾ ನಡುವೆ ಹಳಸಿದ ಈ ಪರಮಾಣು ಸಂಬಂಧಗಳು ಸುಧಾರಿಸಲು ಹಲವು ವರ್ಷಗಳೇ ಹಿಡಿದವು. 2010ರಲ್ಲಿ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೆನಡಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಉಭಯ ದೇಶಗಳ ನಡುವಿನ ಸಂಬಂಧ ಹದಗೆಡಲು ಪೋಖ್ರಾನ್ ಪರಮಾಣು ಪರೀಕ್ಷೆ ಘಟನೆ ಒಂದೇ ಕಾರಣವಲ್ಲ. ಖಲಿಸ್ತಾನ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳಲು ಪಿಯರ್ ಟ್ರುಡೊ ನಿರಾಕರಿಸಿದ್ದು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಕೊಡಲಿಪೆಟ್ಟು ನೀಡಿತ್ತು. ಅಲ್ಲದೆ, ಕೆನಡಿಯನ್ನರ ಮೇಲೆ ಭಯೋತ್ಪಾದಕ ದಾಳಿಗೂ ಕಾರಣವಾಯಿತು.
ಕನಿಷ್ಕಾ ಬಾಂಬ್ ದಾಳಿ:ಖಲಿಸ್ತಾನಿ ಭಯೋತ್ಪಾದಕರಿಂದ ಸಂಭವನೀಯ ವಿಮಾನ ದಾಳಿಯ ವಿರುದ್ಧ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿ, ಭಾರತದ ಗುಪ್ತಚರ ಸಂಸ್ಥೆಗಳು 1985ರ ಜೂನ್ 1 ರಂದು ಕೆನಡಾದ ಅಧಿಕಾರಿಗಳಿಗೆ ತುರ್ತು ಸಂದೇಶವನ್ನು ಕಳುಹಿಸಿದ್ದವು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 1985ರ ಜೂನ್ 23ರಂದು ಏರ್ ಇಂಡಿಯಾ ವಿಮಾನ 182 (ಕನಿಷ್ಕಾ) ದಲ್ಲಿ ಬಾಂಬ್ ಇಡಲಾಯಿತು. ಟೊರೊಂಟೊದಿಂದ ಲಂಡನ್​ಗೆ ಸಂಚರಿಸುತ್ತಿದ್ದ ಈ ವಿಮಾನದಲ್ಲಿದ್ದ ಎಲ್ಲ 329 ಪ್ರಯಾಣಿಕರು ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದರು. ಕೊಲ್ಲಲ್ಪಟ್ಟವರಲ್ಲಿ 268 ಮಂದಿ ಕೆನಡಾ, 27 ಬ್ರಿಟಿಷ್ ಹಾಗೂ 24 ಭಾರತೀಯ ಪ್ರಜೆಗಳಿದ್ದರು. ಕನಿಷ್ಕಾ ಬಾಂಬ್ ದಾಳಿಯು ಕೆನಡಾದ ಇತಿಹಾಸದಲ್ಲಿಯೇ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿ ಉಳಿದುಕೊಂಡಿದೆ. ಪಿಯರ್ ಟ್ರುಡೊ ರಕ್ಷಣೆ ನೀಡಿದ ಪರ್ವರನೇ ಕಾನಿಷ್ಕ ಬಾಂಬ್ ಸ್ಪೋಟದ ರೂವಾರಿಯಾಗಿದ್ದ. ಪರ್ವರ್ ಸೇರಿದಂತೆ ಕಾನಿಷ್ಕ ಬಾಂಬ್ ದಾಳಿಗೆ ಸಂಬಂಧಿಸಿ ಬಂಧಿಸಲ್ಪಟ್ಟ ಪ್ರತಿಯೊಬ್ಬರನ್ನು ಬಿಡುಗಡೆ ಮಾಡಲಾಯಿತು. ಇಂದರ್​ಜಿತ್ ಸಿಂಗ್ ರಿಯಾತ್ ಎಂಬಾತನಿಗೆ ಮಾತ್ರ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
ತಂದೆಯಂತೆ ಮಗ:ಖಲಿಸ್ತಾನಿಗಳ ಬಗ್ಗೆ ಜಸ್ಟಿನ್ ಟ್ರುಡೊ ಅವರ ನೀತಿಗಳು ಅವರ ತಂದೆಯ ಹೆಜ್ಜೆಯಲ್ಲಿಯೇ ಮುಂದುವರಿದಿವೆ. ಜಗ್ಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಾರ್ಟಿಯು (ಎನ್​ಡಿಪಿ) ಜಸ್ಟಿನ್ ಟ್ರುಡೊ ಅವರ ಅಲ್ಪಸಂಖ್ಯಾತ ಸರ್ಕಾರವನ್ನು ಬೆಂಬಲಿಸುತ್ತಿದೆ. ಎನ್​ಡಿಪಿಯು ಖಲಿಸ್ತಾನ ಪರ ಸಹಾನುಭೂತಿ ಇರುವ ಪಕ್ಷ ಎಂದೇ ಪರಿಗಣಿತವಾಗಿದೆ. ಮೈತ್ರಿಕೂಟ ಸರ್ಕಾರವನ್ನು ಉಳಿಸಿಕೊಳ್ಳಲು ಟ್ರುಡೊ ಅವರು ರಾಜಕೀಯ ಲಾಭಕ್ಕಾಗಿ ಖಲಿಸ್ತಾನಿಗಳನ್ನು ಬೆಂಬಲಿಸುತ್ತಾರೆ ಎಂಬ ಆರೋಪಗಳಿವೆ.
ಖಲಿಸ್ತಾನ ಸಮರ್ಥಕರು ಶೇ. 1 ಮಾತ್ರ:ಕೆನಡಾದಲ್ಲಿ ಭಾರತೀಯ ಮೂಲದವರ ಸಂಖ್ಯೆ ಅಂದಾಜು 20 ಲಕ್ಷ. ಇದರಲ್ಲಿ 7.7 ಲಕ್ಷದಷ್ಟು ಸಿಖ್ಖರಿದ್ದಾರೆ. ಇಲ್ಲಿರುವ ಸಿಖ್ಖರೆಲ್ಲರೂ ಖಲಿಸ್ತಾನ ಬೆಂಬಲಿಗರಲ್ಲ. ಕೇವಲ ಶೇಕಡಾ 1ರಷ್ಟು ಮಾತ್ರ, ಅಂದರೆ 8-9 ಸಾವಿರ ಮಂದಿ ಮಾತ್ರ ಖಲಿಸ್ತಾನ ಪ್ರತ್ಯಕೇತಾ ವಾದವನ್ನು ಬೆಂಬಲಿಸುತ್ತಾರೆ. ಆದರೆ, ಖಲಿಸ್ತಾನಿಗಳ ಈ ಸಣ್ಣ ಗುಂಪು 12-15 ಗುರುದ್ವಾರಗಳನ್ನು ನಿಯಂತ್ರಿಸುತ್ತಿದ್ದು, ಜಸ್ಟಿನ್ ಟ್ರುಡೊ ಸರ್ಕಾರದಲ್ಲಿ ಲಾಬಿ ಮಾಡುತ್ತದೆ.
ಖಲಿಸ್ತಾನ ಪ್ರತ್ಯೇಕತಾವಾದಿಗಳಿಗೆ ಬೆಂಬಲ:ಸಿಖ್ಖರು 19ನೇ ಶತಮಾನದ ಅಂತ್ಯದಿಂದಲೂ ಕೆನಡಾ ಪ್ರದೇಶದಲ್ಲಿ ನೆಲೆಯೂರಿದ್ದಾರೆ. 1970ರ ದಶಕದ ಮಧ್ಯಭಾಗದಲ್ಲಿ ವಲಸೆ ಕಾಯ್ದೆ ಬದಲಾವಣೆಗಳೊಂದಿಗೆ ಅವರ ಸಂಖ್ಯೆಯು ಕೆನಡಾದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹೆಚ್ಚಾಯಿತು. ಭಾರತದ ನಂತರ ಅತಿಹೆಚ್ಚು ಸಿಖ್ಖರು ವಾಸವಾಗಿರುವ ದೇಶ ಕೆನಡಾ ಆಗಿದೆ. ಈಗ 7.7 ಲಕ್ಷಕ್ಕಿಂತಲೂ ಹೆಚ್ಚು ಸಿಖ್ಖರು ಕೆನಡಾದಲ್ಲಿದ್ದಾರೆ. ಅಲ್ಲಿನ ಒಟ್ಟು ಜನಸಂಖ್ಯೆಯ ಅಂದಾಜು 2 ಪ್ರತಿಶತ ಇದಾಗಿದೆ. ಪ್ರತ್ಯೇಕ ಖಲಿಸ್ತಾನ ರಾಷ್ಟ್ರಕ್ಕೆ ಆಗ್ರಹಿಸಿ ಪಂಜಾಬ್ ರಾಜ್ಯದಲ್ಲಿ ತಲೆಎತ್ತಿದ್ದ ಭಯೋತ್ಪಾದನೆ ಚಟುವಟಿಕೆಗಳನ್ನು 1980ರ ದಶಕದಲ್ಲಿ ಹತ್ತಿಕ್ಕಲಾಯಿತು. ಈ ಸಂದರ್ಭದಲ್ಲಿ ಪಂಜಾಬ್​ನ ಸಾಕಷ್ಟು ಭಯೋತ್ಪಾದಕರು ಕೆನಡಾದಲ್ಲಿ ಆಶ್ರಯ ಪಡೆದರು. ಇಂತಹ ಭಯೋತ್ಪಾದಕರಲ್ಲಿ ತಲ್ವಿಂದರ್ ಸಿಂಗ್ ಪರ್ವರ್ ಕೂಡ ಒಬ್ಬನಾಗಿದ್ದ. 1981ರಲ್ಲಿ ಪಂಜಾಬ್​ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಕೊಂದ ನಂತರ ಈತ ಕೆನಡಾಕ್ಕೆ ಪರಾರಿಯಾಗಿದ್ದ. ಖಲಿಸ್ತಾನ ಸಂಘಟನೆಯ ಬಬ್ಬರ್ ಖಾಲ್ಸಾದ ಸದಸ್ಯನಾಗಿದ್ದ ಪರ್ವರ್, ವಿದೇಶದಲ್ಲಿರುವ ಭಾರತೀಯ ಕಚೇರಿಗಳ ಮೇಲೆ ದಾಳಿಗೆ ಮತ್ತು ಕೋಮು ಹತ್ಯೆಗಳಿಗೆ ಕರೆ ನೀಡುತ್ತಿದ್ದ. ಹೀಗಾಗಿ, ಭಾರತವು ಪರ್ವರ್​ನನ್ನು ಹಸ್ತಾಂತರಿಸಬೇಕೆಂದು ಕೆನಡಾ ಸರ್ಕಾರಕ್ಕೆ ವಿನಂತಿಸಿತ್ತು. ಆದರೆ, ಪಿಯರ್ ಟ್ರುಡೊ ನೇತೃತ್ವದ ಸರ್ಕಾರವು ಈ ವಿನಂತಿಯನ್ನು ತಿರಸ್ಕರಿಸಿತ್ತು. ಖಲಿಸ್ತಾನ ಬೆಂಬಲಿಗರ ಕುರಿತಂತೆ ಕೆನಡಾದ ಸೌಮ್ಯ ಪ್ರತಿಕ್ರಿಯೆಯು 1982ರಲ್ಲಿಯೇ ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಈ ಬಗ್ಗೆ ಪಿಯರ್ ಟ್ರುಡೊಗೆ ದೂರು ನೀಡಿದ್ದರು.
ಬೆಂಗಳೂರು ಬಂದ್: ನಾಳೆ ಹೋಟೆಲ್​ಗಳು ತೆರೆದಿರುತ್ತವೆಯೇ?; ಇಲ್ಲಿದೆ ಸಂಘದ ಅಧ್ಯಕ್ಷರ ಸ್ಪಷ್ಟನೆ..

ನಾಳೆ ಇಡೀ ಬೆಂಗಳೂರು ಬಂದ್ ಆಗ್ಬೇಕು; ಅದಾಗ್ಯೂ ವ್ಯಾಪಾರ ಮಾಡಿದ್ರೆ ಮುಂದಾಗುವ ತೊಂದರೆಗೆ ನೀವೇ ಹೊಣೆ: ಬಿಎಸ್​ವೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
