ನವದೆಹಲಿ:ಚೀನಾ ಬಿಕ್ಕಟ್ಟು ಕುರಿತು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆಯಲ್ಲಿ ಮಾಡಿದ ಭಾಷಣ ವಿವಾದಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ಸ್ಪಷ್ಟನೆ ನೀಡಿದ್ದು, ಪೂರ್ವ ಲಡಾಖ್​ನಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಉಲ್ಲಂಘಿಸಲು ಪ್ರಯತ್ನಿಸಿದ ಚೀನಿ ಯೋಧರ ಉದ್ಧಟತನಕ್ಕೆ ಭಾರತೀಯ ಸೇನೆ ಪ್ರತ್ಯುತ್ತರ ನೀಡಿ ಹಿಮ್ಮೆಟ್ಟಿಸಿದೆ ಎಂದು ತಿಳಿಸಿದೆ. ಪ್ರಧಾನಿ ಹೇಳಿಕೆಯನ್ನು ಕೆಲವರು ಉದ್ದೇಶಪೂರ್ವಕವಾಗಿ ವಿವಾದ ಮಾಡುತ್ತಿದ್ದಾರೆ ಎಂದು ಹೇಳಿದೆ. ಗಲ್ವಾನ್ ಕಣಿವೆಯ 14ನೇ ಗಸ್ತು ಪಾಯಿಂಟ್​ನ ಎಲ್​ಎಸಿ ಬಳಿ ಜೂನ್ 15ರಂದು ಚೀನಿ ಪಡೆ ಕೆಲವು ಆಕ್ಷೇಪಾರ್ಹ ಚಟುವಟಿಕೆಯಲ್ಲಿ ತೊಡಗಿತ್ತು. ಇದನ್ನು ನಿಲ್ಲಿಸುವಂತೆ ಭಾರತೀಯ ಪಡೆ ಸೂಚಿಸಿದರೂ ಕೇಳಿಲ್ಲ. ಹೀಗಾಗಿ ನಮ್ಮ ಯೋಧರು ಚೀನಿ ಪಡೆಗಳನ್ನು ತಡೆದವು. ಆಗ ಉಂಟಾದ ಘರ್ಷಣೆಯಿಂದ 16 ಬಿಹಾರ ರೆಜಿಮೆಂಟ್​ನ 20 ಯೋಧರು ಹುತಾತ್ಮರಾದರು. ಭಾರತದ ಯೋಧರ ಕೆಚ್ಚೆದೆಯ ಹೋರಾಟದ ಪರಿಣಾಮ ಭಾರತದ ಗಡಿಗೆ ಪ್ರವೇಶಿಸುವ ಚೀನಿ ಯೋಧರ ಪ್ರಯತ್ನ ವಿಫಲವಾಯಿತು ಎಂಬುದು ಪ್ರಧಾನಿ ಮೋದಿಯವರ ಅಭಿಪ್ರಾಯವೆಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.
ವಿವಾದದ ಹಿನ್ನೆಲೆ:ಗಲ್ವಾನ್ ಕಣಿವೆಯ ಎಲ್​ಎಸಿ ಬಳಿ ಘರ್ಷಣೆಗೆ ಏನು ಕಾರಣವೆಂಬುದನ್ನು ಪ್ರಧಾನಿ ಮೋದಿ ಶುಕ್ರವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪರಿಪೂರ್ಣವಾಗಿ ತಿಳಿಸಲಿಲ್ಲ. ಚೀನಿ ಯೋಧರು ಗಡಿ ಅತಿಕ್ರಮಣ ಮಾಡಲಿಲ್ಲವೆಂದ ಮೇಲೆ ಘರ್ಷಣೆ ಏಕೆ ನಡೆಯಿತು? ನಮ್ಮ ಯೋಧರು ಹುತಾತ್ಮರಾಗಲು ಏನು ಕಾರಣ? ಎಂದು ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಸ್ಪಷ್ಟನೆ ನೀಡಿದೆ. ‘ನಮ್ಮ ನೆಲಕ್ಕೆ ಯಾರೊಬ್ಬರು ನುಗ್ಗಿಲ್ಲ ಮತ್ತು ಯಾವುದೇ ಗಡಿ ಚೌಕಿಯನ್ನು ವಶಪಡಿಸಿಕೊಂಡಿಲ್ಲ. ನಾವು ಶಾಂತಿ ಮತ್ತು ಸ್ನೇಹವನ್ನು ಬಯಸುತ್ತೇವೆ. ಇದೇ ವೇಳೆಗೆ ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವುದು ನಮ್ಮ ಧ್ಯೇಯ’ ಎಂದು ಮೋದಿ ಸರ್ವಪಕ್ಷಗಳ ಸಭೆಯಲ್ಲಿ ಹೇಳಿದ್ದರು.
ಬಾಂಗ್ಲಾ ಎತ್ತಿಕಟ್ಟಲು ಚೀನಾ ಯತ್ನ:ಭಾರತದ ಜತೆಗೆ ಆಪ್ತವಾಗಿರುವ ಬಾಂಗ್ಲಾದೇಶವನ್ನು ತನ್ನತ್ತ ಸೆಳೆದುಕೊಳ್ಳಲು ಚೀನಾ ಬೇರೊಂದು ಮಾರ್ಗದಲ್ಲಿ ಪ್ರಯತ್ನಿಸುತ್ತಿದೆ. ಬಾಂಗ್ಲಾದೇಶಕ್ಕೆ ಐದು ಸಾವಿರಕ್ಕೂ ಹೆಚ್ಚು ಸರಕುಗಳನ್ನು ಶೇ. 97ರಷ್ಟು ರಿಯಾಯಿತಿ ದರದಲ್ಲಿ ಪೂರೈಕೆ ಮಾಡುವುದಾಗಿ ಚೀನಾ ಆಮಿಷ ಒಡ್ಡಿದೆ. ಚೀನಾದ ಹಣಕಾಸು ಸಚಿವಾಲಯದ ದರ ನಿಯಂತ್ರಣ ಆಯೋಗವು 5,161 ಸರಕುಗಳಿಗೆ ಶೇ. 97ರಷ್ಟು ದರ ವಿನಾಯಿತಿ ನೀಡಲು ಸಮ್ಮತಿಸಿದೆ. ಇದು ಜುಲೈ 1ರಿಂದಲೇ ಜಾರಿಗೆ ಬರಲಿದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಇಲಾಖೆ ತಿಳಿಸಿದೆ. ಈ ಮೂಲಕ ಏಷ್ಯಾ-ಪೆಸಿಫಿಕ್ ವಾಣಿಜ್ಯ ಒಪ್ಪಂದ ಅನ್ವಯ ಚೀನಾದ 3,095 ಉತ್ಪನ್ನಗಳು ದರ ಮುಕ್ತ ಪಟ್ಟಿಗೆ ಹೊಸದಾಗಿ ಸೇರಲಿವೆ ಎಂದೂ ಹೇಳಿದೆ. ಈ ಬೆಳವಣಿಗೆಯಿಂದ ಚೀನಾ ಮತ್ತು ಬಾಂಗ್ಲಾದೇಶದ ಒಡನಾಟ ನಿಕಟವಾಗಲಿದೆ.
ಗಲ್ವಾನ್​ ಕಣಿವೆ ಭಾರತಕ್ಕೆ ಸೇರಿದ್ದು:ಭಾರತ- ಚೀನಾ ಮಧ್ಯೆ ವಿವಾದಕ್ಕೆ ಕಾರಣವಾಗಿರುವ ಗಲ್ವಾನ್ ಕಣಿವೆ ತನ್ನ ಭೂಭಾಗವೆಂದ ಚೀನಾಕ್ಕೆ ಭಾರತ ತಿರುಗೇಟು ನೀಡಿದೆ. ಗಲ್ವಾನ್ ಕಣಿವೆ ಭಾರತಕ್ಕೆ ಸೇರಿದ್ದು ಎಂಬುದು ಚಾರಿತ್ರಿಕವಾಗಿ ಈ ಹಿಂದೆಯೇ ಸ್ಪಷ್ಟವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟ ಪಡಿಸಿದೆ. ಈ ವಿಚಾರದಲ್ಲಿ ಚೀನಾ ಉತ್ಪ್ರೇಕ್ಷೆ ಮಾಡುತ್ತಿರುವುದನ್ನು ಒಪ್ಪಲಾಗದು. ಈ ಕಣಿವೆ ಯಾವತ್ತೂ ಚೀನಾ ಭಾಗವಾಗಿರಲಿಲ್ಲ. ಗಲ್ವಾನ್ ಕಣಿವೆಯಲ್ಲಿ ಭಾರತ ನಿರ್ವಿುಸಿರುವ ಸೌಕರ್ಯಗಳೆಲ್ಲವೂ ಎಲ್​ಎಸಿಯ ಒಳಗೆ ಇದೆ ಎಂದು ಸಚಿವಾಲಯ ಹೇಳಿದೆ. ಭಾರತ ಪೂರ್ವ ಲಡಾಖ್​ಗೆ ಸಮೀಪವಿರುವ ಗಲ್ವಾನ್ ಕಣಿವೆ ಚೀನಾಕ್ಕೆ ಸೇರಿದೆ. ಈ ಸ್ಥಳದಲ್ಲಿ ಚೀನಾ ಸೇನೆ ಬಹಳ ವರ್ಷದಿಂದ ಗಸ್ತು ತಿರುಗುತ್ತಿದೆ. ಆದರೆ, ಭಾರತ ಈ ಭಾಗದಲ್ಲಿ ಕಳೆದ ಏಪ್ರಿಲ್​ನಲ್ಲಿ ಏಕಪಕ್ಷೀಯವಾಗಿ ರಸ್ತೆ, ಸೇತುವೆ ನಿರ್ಮಾಣ ಇನ್ನಿತರ ಮೂಲಸೌಕರ್ಯವನ್ನು ಕಲ್ಪಿಸಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಹಾವೊ ಲಿಜಿಯಾನ್ ಹೇಳಿದ್ದರು.
ರಾಹುಲ್ ಗಾಂಧಿಗೆ ಅಮಿತ್ ಷಾ ತಿರುಗೇಟು:20 ಯೋಧರು ಹುತಾತ್ಮರಾಗಲು ಸರ್ಕಾರದ ಬೇಜವಾಬ್ದಾರಿಯೇ ಕಾರಣ ಎಂದು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿಡಿಯೊವೊಂದನ್ನು ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ. ವೀರಯೋಧರ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ಯೋಧನ ತಂದೆಯೊಬ್ಬರು ರಾಹುಲ್ ಗಾಂಧಿಗೆ ಉತ್ತರ ನೀಡಿರುವ ವೀಡಿಯೊ ಇದಾಗಿದೆ. ಈ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಇಡೀ ದೇಶ ಒಮ್ಮತದಿಂದ ಇದೆ. ರಾಹುಲ್ ಕೂಡ ಕ್ಷುಲ್ಲಕ ರಾಜಕೀಯ ಮಾಡುವುದನ್ನಿಟ್ಟು ಯೋಧರು ಮತ್ತು ರಾಷ್ಟ್ರದ ಹಿತಾಸಕ್ತಿ ಪರವಾಗಿ ವರ್ತಿಸುವುದನ್ನು ಕಲಿಯಬೇಕು ಎಂದು ಷಾ ಹೇಳಿದ್ದಾರೆ. ಭಾರತೀಯ ಸೇನೆ ಬಲಿಷ್ಠವಾಗಿದ್ದು, ಚೀನಾ ಅಥವಾ ಇನ್ಯಾವುದೇ ದೇಶವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ರಾಹುಲ್ ಗಾಂಧಿಯವರು ವೀರಯೋಧರ ವಿಷಯದಲ್ಲಿ ರಾಜಕೀಯ ಮಾಡಬಾರದು. ನನ್ನ ಮಗ ಹೋರಾಟ ಮಾಡುತ್ತಿದ್ದಾನೆ. ಮುಂದೆಯೂ ಮಾಡುತ್ತಾನೆ ಎಂದು ಯೋಧನ ತಂದೆ ವಿಡಿಯೋದಲ್ಲಿ ಹೇಳಿದ್ದಾರೆ. ಪೂರ್ವ ಲಡಾಖ್​ನಲ್ಲಿ ಘರ್ಷಣೆ ಕುರಿತಂತೆ ಪ್ರತಿದಿನ ಒಂದಿಲ್ಲೊಂದು ಟ್ವೀಟ್ ಮಾಡುತ್ತಿರುವ ರಾಹುಲ್ ಗಾಂಧಿ, ಸರ್ಕಾರದ ಗಾಢ ನಿದ್ರೆಗೆ ಗಡಿಯಲ್ಲಿ ನಮ್ಮ ಯೋಧರು ಬೆಲೆ ತೆರುತ್ತಿದ್ದಾರೆ, ದೇಶ ಭೂಮಿಯನ್ನು ಪ್ರಧಾನಿಯವರು ಚೀನಾದ ಅತಿಕ್ರಮಣಕಾರರಿಗೆ ಒಪ್ಪಿಸಿದ್ದಾರೆ ಎಂದು ಆರೋಪಿಸಿದ್ದರು.
ಚೀನಾ ಸರಕಿನ ಪಟ್ಟಿ ನೀಡುವಂತೆ ಕೇಂದ್ರ ಸೂಚನೆ :ಚೀನಾದಿಂದ ಯಾವ್ಯಾವ ಸರಕುಗಳನ್ನು ಖರೀದಿಸಲಾಗುತ್ತಿದೆ ಎಂಬುದರ ಪೂರ್ಣ ಪಟ್ಟಿಯನ್ನು ಸೋಮವಾರದ ಒಳಗೆ ನೀಡುವಂತೆ ವಾಣಿಜ್ಯ ಸಂಘಟನೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಅತ್ಯಾವಶ್ಯಕವಲ್ಲದ ಸರಕುಗಳ ಆಮದನ್ನು ನಿಲ್ಲಿಸುವುದು ಮತ್ತು ಇದರಿಂದ ಉಂಟಾಗುವಂಥ ಕೊರತೆಯನ್ನು ಸ್ಥಳೀಯ ಉತ್ಪಾದನೆ ಮೂಲಕ ಸರಿದೂಗಿಸ ಬಹುದು ಎಂಬುದು ಸರ್ಕಾರದ ಚಿಂತನೆಯಾಗಿದೆ. ಈ ಮೂಲಕ ಚೀನಾ ವಸ್ತುಗಳ ಬಹಿಷ್ಕಾರದ ಆಂದೋಲನಕ್ಕೆ ಬಲ ಬರುತ್ತದೆ ಜತೆಗೆ ಸ್ವಾವಲಂಬಿ ಭಾರತದ ಆಂದೋಲನಕ್ಕೆ ಒತ್ತು ಸಿಗುತ್ತದೆ ಎಂಬುದು ಸರ್ಕಾರದ ಆಶಯ. ಪೂರ್ವ ಲಡಾಖ್​ನ ಗಡಿ ಬಿಕ್ಕಟ್ಟಿನ ನಂತರ ಚೀನಾದ ಮೇಲಿನ ಅವಲಂಬನೆ ಕಡಿಮೆಗೊಳಿಸುವ ಉದ್ದೇಶದಿಂದ ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆ (ಡಿಪಿಐಐಟಿ) ಈ ಮಾಹಿತಿಯನ್ನು ಕೋರಿದೆ. ಆಟೋಮೊಬೈಲ್, ಔಷಧ, ಆಟಿಕೆ, ಪ್ಲಾಸ್ಟಿಕ್, ಪೀಠೋಪಕರಣ ಇನ್ನಿತರ ಅತ್ಯಾವಶ್ಯಕವಲ್ಲದ ಸಾಮಗ್ರಿಗಳ ಪಟ್ಟಿ ನೀಡುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಸಂಘರ್ಷದ ನಡುವೆಯೇ ಮಹೋನ್ನತ ಸಾಹಸ; 72 ತಾಸುಗಳಲ್ಲಿ ಗಾಲ್ವಾನ್​ ನದಿ ಸೇತುವೆ ಕಾಮಗಾರಿ ಪೂರ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
