ನವದೆಹಲಿ:ಪೂರ್ವ ಲಡಾಖ್​ನ ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯಲ್ಲಿ ಅತಿಕ್ರಮಣಕ್ಕೆ ಮುಂದಾಗಿದ್ದ ಚೀನಾ ಸೇನೆಗೆ ಚಳ್ಳೆಹಣ್ಣು ತಿನಿಸಿರುವ ಭಾರತ, ವಿವಾದಿತ ಸ್ಥಳಗಳನ್ನು ಹಿಡಿತಕ್ಕೆ ತೆಗೆದುಕೊಂಡು ಗೆಲುವಿನ ನಗೆ ಬೀರಿದೆ. ಸದ್ಯ ಸರೋವರದ ಆಯಕಟ್ಟಿನ ಸ್ಥಳಗಳು ಭಾರತೀಯ ಸೇನೆಯ ವಶದಲ್ಲಿದ್ದು, ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಸುಸ್ಪಷ್ಟವಾಗಿರುವುದಾಗಿ ತಿಳಿದು ಬಂದಿದೆ. ಈ ಬೆಳವಣಿಗೆ ಬೆನ್ನಲ್ಲೇ ಚೀನಾ ಪಡೆಗಳು ಸ್ಥಳದಿಂದ ಕಾಲ್ಕಿತ್ತಿರುವುದಾಗಿ ವರದಿಯಾಗಿದೆ.
ಕಳೆದ ಶನಿವಾರ ರಾತ್ರಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ವಿುಯ (ಪಿಎಲ್​ಎ) 500 ಯೋಧರು ಯುದ್ಧ ಟ್ಯಾಂಕ್​ಗಳ ಸಹಿತ ಸರೋವರದ ದಕ್ಷಿಣ ದಂಡೆಯನ್ನು ಆಕ್ರಮಿಸಲು ಬಂದಿದ್ದರು. ಆದರೆ, ಅವರು ಮುಂದುವರಿಯದಂತೆ ನಮ್ಮ ಸೇನೆ ತಡೆಯಿತು. ಈ ವೇಳೆ ಉಭಯ ಸೇನೆಗಳು ಮುಖಾಮುಖಿಯಾದರೂ ಘರ್ಷಣೆ ನಡೆಯಲಿಲ್ಲ. ನಂತರ ಪಿಎಲ್​ಎ ತುಕಡಿ ಹಿಂದೆ ಸರಿಯಿತೆಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ವಿದೇಶಾಂಗ ಸಚಿವಾಲಯ ಕೂಡ ಚೀನಾ ಅತಿಕ್ರಮಣ ಯತ್ನವನ್ನು ದೃಢಪಡಿಸಿದೆ.
ಪ್ಯಾಂಗಾಂಗ್ ತ್ಸೊ ಸರೋವರದ ಎಲ್​ಎಸಿ ಬಳಿ ಅನೇಕ ಎತ್ತರದ ದಿಣ್ಣೆಗಳಿದ್ದು, ಚಿಕ್ಕ ಚಿಕ್ಕ ಸರೋವರಗಳನ್ನು ವಿಭಜಿಸುತ್ತವೆ. ಇವು ಶತ್ರುಗಳ ಮೇಲೆ ನಿಗಾ ಇರಿಸುವ ಮಹತ್ವದ ಸ್ಥಳಗಳಾಗಿವೆ. ಇದರಲ್ಲಿ ಪ್ರಮುಖವಾದದ್ದು ಸ್ಪಂಗ್ಗುರ್ ಗ್ಯಾಪ್. ಕಚ್ಚಾ ರಸ್ತೆಗಳಿಂದ ಕೂಡಿದ ಸರೋವರದ ದಕ್ಷಿಣ ದಂಡೆಯಲ್ಲಿ ಸೇನಾ ವಾಹನ ಚಲಿಸಲು ಇರುವ ಮಾರ್ಗ ಸ್ಪಂಗ್ಗುರ್ ಗ್ಯಾಪ್. ಈ ಮಾರ್ಗವಾಗಿಯೇ ಚೀನಾ ಪಡೆಗಳು ಬಂದು ಸ್ಪಂಗ್ಗುರ್ ಸರೋವರದ ಸುತ್ತ ಕಿರುದಾರಿಯನ್ನು ನಿರ್ವಿುಸಿದ್ದವು. ಈ ಮೂಲಕ ಸೇನಾ ಟ್ಯಾಂಕ್​ಗಳು, ಶಸ್ತ್ರಾಸ್ತ್ರ ತುಂಬಿದ ವಾಹನಗಳು ಮುಂದುವರಿಯಲು ಅವಕಾಶ ಮಾಡಿಕೊಂಡಿತ್ತು. ಆದರೆ, ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ ಭಾರತದ ಸೇನೆ ಮೊದಲೇ ಉಪಸ್ಥಿತವಾಗಿದ್ದ ಕಾರಣ ಚೀನಾದ ಕುತಂತ್ರ ಫಲಿಸಲಿಲ್ಲ.
2ನೇ ಸುತ್ತಿನ ಮಾತುಕತೆ
ಪ್ಯಾಂಗಾಂಗ್ ತ್ಸೊ ಸರೋವರದ ಮುಖಾಮುಖಿಯಿಂದ ಉಂಟಾಗಿದ್ದ ಉದ್ವಿಗ್ನತೆಯನ್ನು ಶಮನ ಮಾಡಲು ಭಾರತದ ಗಡಿಯೊಳಗೆ ಇರುವ ಚುಶುಲ್​ನಲ್ಲಿ ಸೋಮವಾರ 6 ತಾಸು ನಡೆದ ಬ್ರಿಗೇಡ್ ಕಮಾಂಡರ್ ಹಂತದ ಮೊದಲ ಸುತ್ತಿನ ಮಾತುಕತೆಯಿಂದ ಹೆಚ್ಚಿನ ಪ್ರಯೋಜನ ಆಗಲಿಲ್ಲ. ಹೀಗಾಗಿ ಮಂಗಳವಾರ ಎರಡನೇ ಸುತ್ತಿನ ಮಾತುಕತೆ ನಡೆಯಿತು.
ಭಾರತದ ವಿರುದ್ಧ ಆರೋಪ
ಪೂರ್ವ ಲಡಾಖ್​ನಲ್ಲಿ ಹೊಸದಾಗಿ ಉದ್ಭವಿಸಿದ ಉದ್ವಿಗ್ನ ಸ್ಥಿತಿಗೆ ಭಾರತವೇ ಕಾರಣ ಎಂದು ಚೀನಾ ಆರೋಪಿಸಿದೆ. ಭಾರತ ಸೇನೆಯು ಎಲ್​ಎಸಿ ಉಲ್ಲಂಘಿಸಿ ಚೀನಾದ ನೆಲೆವನ್ನು ಪ್ರವೇಶಿಸಿದ್ದರಿಂದಲೇ ಇಷ್ಟೆಲ್ಲ ಅವಾಂತರ ಆಗಿದೆ. ಉಭಯ ದೇಶಗಳ ಗಡಿಯಲ್ಲಿ ಪಾಲಿಸುತ್ತಿದ್ದ ಶಿಷ್ಟಾಚಾರ, ಶಾಂತಿ ಮತ್ತು ಸ್ಥಿರತೆಗೆ ಭಂಗ ತಂದಿದೆ ಎಂದು ದೆಹಲಿಯಲ್ಲಿನ ಚೀನಾ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
‘ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣದ ದಡ ಮಾತ್ರವಲ್ಲದೆ ಚೀನಾದ ಪಶ್ಚಿಮ ಭಾಗದ ರೆಕಿನ್ ಪಾಸ್​ನಲ್ಲೂ ಭಾರತದ ಪಡೆ ಗಡಿ ಉಲ್ಲಂಘನೆ ಮಾಡಿದೆ’ ಎಂದು ರಾಯಭಾರ ಕಚೇರಿ ವಕ್ತಾರ ಜಿ ರಾಂಗ್ ಆರೋಪಿಸಿದ್ದಾರೆ.
ದೋವಲ್ ಪರಿಶೀಲನೆ
ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯಲ್ಲಿನ ಉದ್ವಿಗ್ನತೆ ಕುರಿತಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇನೆಯ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಸ್ಥಿತಿ ಅವಲೋಕಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ ಎನ್ನಲಾಗಿದೆ. ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರಾವಣೆ ಪೂರ್ವ ಲಡಾಖ್ ಪರಿಸ್ಥಿತಿ ಕುರಿತು ಸೇನಾ ಮುಖ್ಯ ಕಾರ್ಯಾಲಯದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಅಮೆರಿಕ ಖಂಡನೆ
ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯಲ್ಲಿ ಚೀನಾದ ಆಕ್ರಮಣಕಾರಿ ನಡೆಯನ್ನು ಅಮೆರಿಕ ಖಂಡಿಸಿದೆ. ಪ್ರಾದೇಶಿಕ ಮತ್ತು ಜಲಗಡಿಯ ಸುರಕ್ಷತೆಗಾಗಿ ಕ್ವಾಡ್ ಸಭೆಯಲ್ಲಿ ಸಂಭಾವ್ಯ ಕಾರ್ಯತಂತ್ರದ ತಂತ್ರಜ್ಞಾನದ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿದೇಶಾಂಗ ಇಲಾಖೆಯ ಡೆಪ್ಯುಟಿ ಕಾರ್ಯದರ್ಶಿ ಸ್ಟೀಫನ್ ಬೈಗನ್ ತಿಳಿಸಿದ್ದಾರೆ.
ಆಕ್ರಮಣಶೀಲವಾಗಿರುವ ಚೀನಾದ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ತನ್ನದಲ್ಲದ ಭಾಗವಾದ ಮೇಲೆ ಹಕ್ಕು ಸ್ಥಾಪಿಸಲು ಅದು ಪ್ರಯತ್ನಿಸುತ್ತಿದೆ. ಅದು ಗಾಲ್ವನ್ ಕಣಿವೆ ಇರಬಹುದು ಅಥವಾ ಪ್ರಾದೇಶಿಕ ಜಲ ಮಾರ್ಗ ಇರಬಹುದು. ಇಂಥದನ್ನು ತಡೆಯಬೇಕು ಎಂದು ಬೈಗನ್ ಹೇಳಿದ್ದಾರೆ.
ಇದೇ ಮೊದಲಲ್ಲ
ಕಣ್ತಪ್ಪಿಸಿ ಗೆದ್ದ ಭಾರತ!
ಪ್ಯಾಂಗಾಂಗ್ ತ್ಸೊ ಸರೋವರದಲ್ಲಿ ಎತ್ತರ ದಿಣ್ಣೆಗಳನ್ನು ವಶಪಡಿಸಿಕೊಳ್ಳಬೇಕು ಮತ್ತು ಈ ಕಾರ್ಯಾಚರಣೆ ಭಾರತದ ಸೇನೆಗೆ ಗೊತ್ತಾಗಬಾರದೆಂದು ಚೀನಾ ಸೇನೆ ಅತ್ಯಾಧುನಿಕ ಕ್ಯಾಮರಾಗಳು, ನಿಗಾ ಉಪಕರಣಗಳು, ಹಗ್ಗ, ಬಂಡೆ ಹತ್ತುವ ಸಾಧನಗಳೊಂದಿಗೆ ಮುಂದಡಿ ಇರಿಸಿತ್ತು. ಆದರೆ, ಭಾರತದ ಸೇನೆ ಚೀನಾಗಿಂತ ಮೊದಲೇ ಆಯಕಟ್ಟಿನ ಜಾಗಗಳನ್ನು ಭದ್ರ ಮಾಡಿಕೊಂಡಿತ್ತು. ಹೀಗಾಗಿ ಚೀನಾದ ಉದ್ದೇಶ ಈಡೇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಚೀನಾ ಸೇನೆಗೆ ಚಳ್ಳೆಹಣ್ಣು ತಿನ್ನಿಸಿದ ಸಿಖ್ ಲೈಟ್ ಇನ್ಪೆಂಟ್ರಿಯ ತುಕಡಿಯ ವಿಶೇಷ ಕಾರ್ಯಾಚರಣೆ ಘಟಕ (ಎಸ್​ಎಸ್​ಎಫ್) ಚೀನಾದ ನಿಗಾ ಸಾಧನಗಳ ಕಣ್ತಪ್ಪಿಸಿ ಆಯಕಟ್ಟಿನ ದಿಣ್ಣೆಗಳಲ್ಲಿ ತನ್ನ ಧ್ವಜ ಪ್ರತಿಷ್ಠಾಪಿಸಿತ್ತು.
ಚೀನಾ ಪಡೆಗಳ ದಿಕ್ಕುತಪ್ಪಿಸಿ ಭಾರತ ಸುರಕ್ಷಿತ ಪಡಿಸಿಕೊಂಡ ‘ಟೇಬಲ್ ಟಾಪ್’ ದಿಣ್ಣೆಗಳಲ್ಲಿ ಬ್ಲಾ್ಯಕ್ ಟಾಪ್ (ಕಾಲಾ ಟಾಪ್), ಥಾಕುಂಕ್ ಹೈಟ್ಸ್ ಮುಖ್ಯವಾದವು. ಕಾಲಾ ಟಾಪ್​ನಲ್ಲಿ ಚೀನಾದ ಯುದ್ಧ ಟ್ಯಾಂಕ್ ಅತ್ಯಂತ ಸನಿಹದಲ್ಲೇ (ಫೈರಿಂಗ್ ರೇಂಜ್) ಇತ್ತು ಎನ್ನಲಾಗಿದೆ. ಭಾರತದ ಸೇನೆ ತನಗಿಂತ ವೇಗವಾಗಿರುವುದು ಕಂಡು ಚಕಿತವಾದ ಚೀನಾ ಪಡೆ ಕ್ಯಾಮೆರಾ ಮತ್ತು ನಿಗಾ ಉಪಕರಣಗಳನ್ನು ತೆರವು ಮಾಡಿದೆ ಎಂದು ಮೂಲಗಳು ಹೇಳಿವೆ. ಚೀನಾ ವಿರುದ್ಧ ಈ ಕಾರ್ಯಾಚರಣೆ ವೇಳೆ ಆಂಟಿ ಪರ್ಸನಲ್ ಮೈನ್ ಸ್ಪೋಟಗೊಂಡ ಕಾರಣ ಭಾರತದ ಓರ್ವ ಯೋಧ ಸಾವನ್ನಪ್ಪಿದ್ದಾರೆ ಎಂದೂ ತಿಳಿಸಿವೆ. ದಕ್ಷಿಣ ದಂಡೆಯ ಉದ್ವಿಗ್ನತೆಯ ನಂತರ ಗಡಿಯ ಬಳಿಗೆ ಹೆಚ್ಚಿನ ತುಕಡಿ ಮತ್ತು ಶಸ್ತ್ರಾಸ್ತ್ರಗಳನ್ನು ಭಾರತ ನಿಯೋಜಿಸಿದೆ. ಬಿಎಂಪಿ ಇನ್ಪೆಂಟ್ರಿ ಯುದ್ಧ ವಾಹನ, ವಿವಿಧ ರೀತಿಯ ಟ್ಯಾಂಕ್​ಗಳು ಈಗ ಗಡಿಯ ಬಳಿ ಜಮಾಯಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − three =
Remember me
