ನವದೆಹಲಿ:ಸಿಕ್ಕಿಂನ ತ್ರಿರಾಷ್ಟ್ರ ಗಡಿ ಬಿಂದು ಡೋಕ್ಲಾಂನಲ್ಲಿ 2017ರಲ್ಲಿ ಉದ್ಭವಿಸಿದ್ದ 73 ದಿನಗಳ ಭಾರತ- ಚೀನಾ ಸೇನೆಯ ಮುಖಾಮುಖಿಗಿಂತಲೂ ದೊಡ್ಡ ಮಟ್ಟದ ಉದ್ವಿಗ್ನ ಸ್ಥಿತಿ ಲಡಾಖ್​ನ ಪೂರ್ವಭಾಗದಲ್ಲಿ ನಿರ್ವಣವಾಗುವ ಸಾಧ್ಯತೆ ಹೆಚ್ಚಿದೆ. ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಕ್ಷಣಾ ಇಲಾಖೆಯ ಪ್ರಮುಖರೊಂದಿಗೆ ಮಂಗಳವಾರ ಪ್ರತ್ಯೇಕ ಸಭೆ ನಡೆಸಿದ್ದಾರೆ. ಎರಡು ವಾರದ ಹಿಂದೆ ಸಿಕ್ಕಿಂ ಮತ್ತು ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ನಡೆದ ಘರ್ಷಣೆ ಬೆನ್ನಲ್ಲೇ ಲಡಾಖ್ ಪೂರ್ವಭಾಗದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಬಳಿ ಚೀನಾ ಸೇನೆಯ ಐದು ಸಾವಿರ ಯೋಧರು ಜಮಾವಣೆ ಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಆಯಕಟ್ಟಿನ ಸ್ಥಳಗಳಾದ ದೌಲತ್ ಬೇಗ್ ಓಲ್ಡಿ, ದೇಮ್ೌಕ್​ಗಳ ಪ್ಯಾಂಗೊಂಗ್ ತ್ಸೊ ಸರೋವರ ಮತ್ತು ಗಾಲ್ವಾನ್ ನಾಲಾದ ಕೆಎಂ 120 ಪಾಯಿಂಟ್​ಗಳಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ಬಲ ಹೆಚ್ಚಳ ಮಾಡಿದೆ. ಮಿಲಿಟರಿ ಸಾಧನಾ- ಸಲಕರಣೆಗಳನ್ನು ಒಟ್ಟುಗೂಡಿಸಿದೆ.
ಗಡಿಯಲ್ಲಿ ವಾಯುನೆಲೆ
ಎಲ್​ಎಸಿ ಹೊಂದಿಕೊಂಡಂತೆ ಚೀನಾ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ. ರಸ್ತೆ, ವಾಯುನೆಲೆ ನಿರ್ವಣ, ಬಂಕರ್, ಶಿಬಿರಗಳನ್ನು ಸ್ಥಾಪಿಸುತ್ತಿದೆ. ಜತೆಗೆ ಅಪಾರ ಪ್ರಮಾಣದ ಭದ್ರತಾ ಸಲಕರಣೆಗಳನ್ನೂ ಜಮಾಯಿಸುತ್ತಿದೆ. ಎಆರ್500ಸಿ ಹೆಸರಿನ ಮಾನವ ರಹಿತ ಅತ್ಯಾಧುನಿಕ ಹೆಲಿಕಾಪ್ಟರ್-ಡ್ರೋನ್​ನನ್ನು ಆಕ್ಸಾಯ್ ಚೀನಾ ಭಾಗಕ್ಕೆ ನಿಯೋಜಿಸುತ್ತಿದೆ ಎನ್ನಲಾಗಿದೆ.
ಉದ್ವಿಗ್ನತೆ ಹೇಗೆ?
ಲಡಾಖ್​ನ ಪ್ಯಾಂಗೊಂಗ್ ತ್ಸೊ ಸರೋವರ ಪ್ರದೇಶದಲ್ಲಿ ಮೇ 5ರಂದು ಉಭಯ ಸೇನೆಗಳ ಮಧ್ಯೆ ಘರ್ಷಣೆ ನಡೆಯಿತು. ಇದರಿಂದ ಎರಡೂ ಕಡೆಯಿಂದ ಸುಮಾರು 100 ಯೋಧರು ಗಾಯಗೊಂಡರು. ಇದಾದ ನಾಲ್ಕು ದಿನ ಬಳಿಕ ಉತ್ತರ ಸಿಕ್ಕಿಂನ ನಾಕು ಲಾ ಪಾಸ್​ನಲ್ಲೂ ಉಭಯ ಸೇನೆಗಳ ಮಧ್ಯೆ ಘರ್ಷಣೆ ನಡೆಯಿತು. 10ಕ್ಕೂ ಹೆಚ್ಚು ಯೋಧರು ಎರಡೂ ಕಡೆ ಗಾಯಗೊಂಡರು. ಈ ಎರಡೂ ಘಟನೆಗಳ ಬಳಿಕ ಭಾರತ- ಚೀನಾದ ಹಿರಿಯ ಸೇನಾಧಿಕಾರಿಗಳ ಮಧ್ಯೆ 6 ಸುತ್ತು ಮಾತುಕತೆ ನಡೆದಿದೆ. ಆದರೆ, ಪರಿಸ್ಥಿತಿ ತಿಳಿಗೊಳಿಸುವ ನಿರ್ಧಾರಕ್ಕೆ ಬರಲು ಆಗಿಲ್ಲ. ಗಡಿಯಲ್ಲಿ ಸಹಜ ಗಸ್ತು ತಿರುಗುವಿಕೆಗೆ ಚೀನಾ ಯೋಧರು ಅಡ್ಡಿ ಪಡಿಸುತ್ತಿದ್ದಾರೆಂದು ಭಾರತ ದೂರಿತು. ಭಾರತದ ಯೋಧರು ಗಡಿ ಉಲ್ಲಂಘಿಸಿದ್ದಾರೆಂದು ಚೀನಾ ಆರೋಪಿಸಿತು. ಈ ನೆಪದಿಂದ ಆರಂಭವಾದ ಜಗಳ ಈಗ ಮುಖಾಮುಖಿ ಹಂತಕ್ಕೆ ತಲುಪಿದೆ.
ಡೋಕ್ಲಾಂನಲ್ಲಿ ಏನಾಗಿತ್ತು?
2017ರಲ್ಲಿ ಸಿಕ್ಕಿಂನ ಡೋಕ್ಲಾಂ ಪ್ರಸ್ಥಭೂಮಿಯಲ್ಲಿ ರಸ್ತೆ ಅಭಿವೃದ್ಧಿ ಕಾರ್ಯವನ್ನು ಚೀನಾ ಸೇನೆ ಕೈಗೊಂಡಿತು. ಈ ಭಾಗ ತನ್ನದೆಂದ ಭೂತಾನ್, ಕಾಮಗಾರಿಗೆ ಅಡ್ಡಿ ಪಡಿಸಿತು. ಚೀನಾ ಹೆಚ್ಚುವರಿ ತುಕಡಿ ಸ್ಥಳಕ್ಕೆ ಆಗಮಿಸಿತು. ಆಗ ಭೂತಾನ್, ಭಾರತದ ನೆರವು ಕೋರಿತು. ಭಾರತದ ಸೇನೆ ಚೀನಾ ಕಾಮಗಾರಿ ತಡೆಯಲು ತ್ರಿರಾಷ್ಟ್ರ ಗಡಿಬಿಂದುವಿನಲ್ಲಿ ಬೀಡುಬಿಟ್ಟಿತು. ಜೂನ್ 16ರಿಂದ ಆಗಸ್ಟ್ 28ರವರೆಗೆ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯಿತ್ತು.
ಸೇನಾ ಮುಖ್ಯಸ್ಥ ಚರ್ಚೆ
ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರಾವಣೆ ಪ್ರಮುಖ ಕಮಾಂಡರ್​ಗಳ ಜತೆ ಬುಧವಾರ ಮತ್ತು ಗುರುವಾರ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ಅವರು ಲಡಾಖ್​ನ ಲೇಹ್ ಸೇನಾ ನೆಲೆಗೆ ಭೇಟಿ ನೀಡಿ ಎಲ್​ಎಸಿಯ ಪರಿಸ್ಥಿತಿ ಅವಲೋಕಿಸಿದ್ದರು.
ಪ್ರಧಾನಿ ಮೋದಿ ಸಭೆ
ಲಡಾಖ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ವಣವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮೂರೂ ಪಡೆಗಳ ಪ್ರಧಾನ ದಂಡನಾಯಕ ಮತ್ತು ರಕ್ಷಣಾ ಸಿಬ್ಬಂದಿ (ಸಿಡಿಎಸ್) ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಮೂರೂ ಪಡೆಗಳ ಮುಖ್ಯಸ್ಥರು ಜತೆ ಮಂಗಳವಾರ ರಾತ್ರಿ ತುರ್ತು ಸಭೆ ನಡೆಸಿದ್ದಾರೆ. ನಂತರ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಜತೆಯೂ ಚರ್ಚೆ ನಡೆಸಿದ್ದಾರೆ. ಈ ಎರಡೂ ಸಭೆಗಳು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಡಿಎಸ್ ರಾವತ್ ಮತ್ತು ಮೂರೂ ಪಡೆಗಳ ಮುಖ್ಯಸ್ಥರ ಜತೆ ಚರ್ಚೆ ನಡೆಸಿದ ಬಳಿಕ ನಡೆದಿದೆ. ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕಿದ್ದರೆ ನಾವೂ ಗಡಿ ರಸ್ತೆಗಳ ಅಭಿವೃದ್ಧಿ ಕಾರ್ಯ ತೀವ್ರಗೊಳಿಸಬೇಕು ಮತ್ತು ಚೀನಾ ಸೇನಾ ಸಮರ್ಥ್ಯಕ್ಕೆ ಅನುಗುಣವಾಗಿ ಎಲ್​ಎಸಿಯಲ್ಲಿ ಸೇನಾ ಬಲ ಹೆಚ್ಚಿಸಬೇಕು ಎಂಬ ನಿರ್ಧಾರವನ್ನು ರಾಜನಾಥ್ ಸಿಂಗ್ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ದೊಣ್ಣೆ, ಕಲ್ಲುಗಳಿಂದ ಹಲ್ಲೆ
ಪ್ಯಾಂಗೊಂಗ್ ತ್ಸೊ ಸರೋವರದ ಎಲ್​ಎಸಿ ಬಳಿ ಘರ್ಷಣೆ ನಡೆಸಿದ ಚೀನಾ ಯೋಧರು ದೊಣ್ಣೆ, ಮುಳ್ಳುತಂತಿ ಸುತ್ತಿಗೆ ಬಡಿಗೆಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿದ್ದಾರೆ. ಕಲ್ಲುತೂರಾಟ ಕೂಡ ನಡೆದಿದೆ. ಉಭಯ ದೇಶಗಳ ಯೋಧರ ಬಳಿ ರೈಫಲ್​ಗಳಿದ್ದರೂ ಗುಂಡು ಹಾರಿಸುವುದಿಲ್ಲ. ಏಕೆಂದರೆ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವ ಸಲುವಾಗಿ ಏರ್ಪಟ್ಟ ಶಾಂತಿ ಒಪ್ಪಂದದ ಅನ್ವಯ 1967ರಿಂದ ಗಡಿಯಲ್ಲಿ ಗುಂಡಿನ ಕಾಳಗ ನಡೆದಿಲ್ಲ. ಆದರೆ, ಘರ್ಷಣೆ ನಡೆದಾಗಲೆಲ್ಲ ಕಲ್ಲುತೂರಾಟ, ಬಡಿಗೆಗಳಿಂದ ಹೊಡೆದಾಟ ನಡೆಯುತ್ತದೆ.
ತೈವಾನ್ ಅಧ್ಯಕ್ಷೆ ಪ್ರಮಾಣವಚನದಲ್ಲಿ ಬಿಜೆಪಿ ಸಂಸದರು
ತೈವಾನ್ ಅಧ್ಯಕ್ಷೆ ತ್ಸೈ ಇಂಗ್-ವೆನ್​ರ ಪ್ರಮಾಣ ವಚನ ಸಮಾರಂಭದಿಂದ ದೂರ ಉಳಿಯುವಂತೆ ಚೀನಾ ಮನವಿಯ ಹೊರತಾಗಿ ಬಿಜೆಪಿ ಸಂಸದರಾದ ಮೀನಾಕ್ಷಿ ಲೇಖಿ ಮತ್ತು ರಾಹುಲ್ ಕಸ್ವಾನ್ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗಿಯಾಗಿದ್ದರು. ಇದರಿಂದ ಚೀನಾ ಆಕ್ರೋಶಗೊಂಡಿದೆ. ಸತತ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ತ್ಸೈ, ಚೀನಾ ವಿರೋಧಿ ನೀತಿ ಹೊಂದಿದ್ದಾರೆ. ತ್ಸೈ ಪ್ರಮಾಣ ವಚನದಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೇರಿ 41 ದೇಶಗಳ ಗಣ್ಯರು ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗಿಯಾಗಿದ್ದರು.
ತನ್ನ ದೇಶದ ನರಿಬುದ್ಧಿಯ ವಿರುದ್ಧವೇ ತಿರುಗಿಬಿದ್ದ ಚೀನಾ ಜನತೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − three =
Remember me
