ನವದೆಹಲಿ:ಭಾರತ ಮಾನವಸಹಿತ ಗಗನಯಾನಕ್ಕೆ ಸಜ್ಜಾಗುತ್ತಿರುವ ನಡುವೆಯೇ, ಸದ್ದಿಲ್ಲದೆ ಮಾನವಸಹಿತ ‘ಸಮುದ್ರಯಾನ’ವನ್ನೂ ಕೈಗೊಳ್ಳಲು ಸಜ್ಜಾಗಿದೆ. ಆಳ ಸಾಗರ ಮತ್ತು ಅದರ ಸಂಪನ್ಮೂಲಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿರುವ ಈ ಯೋಜನೆ 2026ರಲ್ಲಿ ಸಾಕಾರಗೊಳ್ಳಲಿದೆ. ಜಲಾಂತರ್ಗಾಮಿ (ಸಬ್​ವುರ್ಸಿಬಲ್) ವಾಹನದ ಮೂಲಕ ಮೂವರನ್ನು ಸಮುದ್ರದಲ್ಲಿ 6,000 ಮೀಟರ್ ಆಳಕ್ಕೆ ಕಳುಹಿಸಿಕೊಡಲು ಮಾಡ್ಯೂಲ್ ಸಿದ್ಧವಾಗಿದೆ. ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಗುರುವಾರ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಘೊಷಣೆ ಮಾಡಿದ್ದಾರೆ.
ಸಮುದ್ರಯಾನ ಭಾರತದ ಮೊದಲ ಮಾನವಸಹಿತ ಸಾಗರ ಯೋಜನೆಯಾಗಿದ್ದು, ಆಳ ಸಮುದ್ರದ ಸಂಪನ್ಮೂಲಗಳನ್ನು ಅಧ್ಯಯನ ಮಾಡಲು ಮತ್ತು ಜೀವವೈವಿಧ್ಯ ಮೌಲ್ಯಮಾಪನ ಕೈಗೊಳ್ಳಲು ವಿನ್ಯಾಸಗೊಳಿಸಲಾಗಿದೆ. ಜಲಾಂತರ್ಗಾಮಿ ವಾಹನವನ್ನು ಕೇವಲ ಪರಿಶೋಧನೆಯ ಉದ್ದೇಶಗಳಿಗಾಗಿ ಮಾತ್ರ ಬಳಸುವುದರಿಂದ ಈ ಯೋಜನೆಯಿಂದ ಯಾವುದೇ ಪರಿಸರ ಹಾನಿ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದನ್ನು ಚೆನ್ನೈನಲ್ಲಿರುವ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಸಾಗರ ತಂತ್ರಜ್ಞಾನ ರಾಷ್ಟ್ರೀಯ ಸಂಸ್ಥೆ- ಎನ್​ಐಒಟಿ) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುತ್ತಿದೆ.
ಇದುವರೆಗೂ ಅನ್ವೇಷಣೆ ಮಾಡಲಾಗದ ಆಳ ಸಮುದ್ರ ಪ್ರದೇಶಗಳನ್ನು ವೈಜ್ಞಾನಿಕ ಸಿಬ್ಬಂದಿಗೆ ನೇರವಾಗಿ ವೀಕ್ಷಿಸಲು ಮತ್ತು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುವ ಉದ್ದೇಶವಿರುವುದರಿಂದ ಈ ಯೋಜನೆಯು ಮಹತ್ವದ್ದಾಗಿದೆ. ಇದು ಕೇಂದ್ರ ಸರ್ಕಾರದ ’ಹೊಸ ಭಾರತ’ದ ದೃಷ್ಟಿಕೋನಕ್ಕೆ ಅನುರೂಪವಾಗಿದ್ದು, ನೀಲಿ ಆರ್ಥಿಕತೆಯ ಬೆಳವಣಿಗೆಯ ಹತ್ತು ಪ್ರಮುಖ ಆಯಾಮಗಳಲ್ಲಿ ಒಂದಾಗಿ ಎತ್ತಿ ತೋರಿಸುತ್ತದೆ.
ಎಲೈಟ್ ಕ್ಲಬ್​ಗೆ ಭಾರತ
ಅಮೆರಿಕ, ರಷ್ಯಾ, ಫ್ರಾನ್ಸ್, ಜಪಾನ್ ಮತ್ತು ಚೀನಾ ಸೇರಿದಂತೆ ಆಳ ಸಮುದ್ರಯಾನಗಳನ್ನು ನಡೆಸಲು ವಿಶೇಷ ತಂತ್ರಜ್ಞಾನ ಮತ್ತು ವಾಹನಗಳನ್ನು ಹೊಂದಿರುವ ದೇಶಗಳ ಗಣ್ಯ ಗುಂಪಿಗೆ ಭಾರತವು ಈ ಯೋಜನೆಯ ಮೂಲಕ ಸೇರ್ಪಡೆಯಾಗಲಿದೆ.
ಮತ್ಸ್ಯ 6000
ಈ ಯಾನಕ್ಕಾಗಿ ನಿರ್ವಿುಸಲಾಗುತ್ತಿರುವ ವಾಹನಕ್ಕೆ ‘ಮತ್ಸ್ಯ 6000’ ಎಂದು ನಾಮಕರಣ ಮಾಡಲಾಗಿದೆ. ಈ ವಾಹನವು ಸಾಮಾನ್ಯ ಕಾರ್ಯಾಚರಣೆಯಲ್ಲಿ 12 ಗಂಟೆಗಳ ಕಾಲ ಮತ್ತು ಮಾನವ ಸುರಕ್ಷತೆಗಾಗಿ ತುರ್ತು ಸಂದರ್ಭದಲ್ಲಿ 96 ಗಂಟೆಗಳ ಕಾಲ ಕಾರ್ಯಾಚರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
4,077 ಕೋಟಿ ರೂ. ವೆಚ್ಚ
ಸಮುದ್ರಯಾನ ಯೋಜನೆಯನ್ನು ಒಳಗೊಂಡಿರುವ ಡೀಪ್ ಓಷನ್ ಮಿಷನ್​ನ (ಆಳ ಸಾಗರ ಕಾರ್ಯಯೋಜನೆ) ವೆಚ್ಚವನ್ನು ಐದು ವರ್ಷಗಳ ಅವಧಿಗೆ 4,077 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಇದನ್ನು ಹಂತಹಂತವಾಗಿ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 1 =
Remember me
