ನವದೆಹಲಿ/ಲಂಡನ್:ಕರೊನಾ ಕಾಮೋಡದ ಜತೆಗೆ ವಿವಿಧ ವಿದ್ಯಮಾನಗಳಿಂದಾಗಿ ಆರ್ಥಿಕತೆಗೆ ತೀವ್ರ ಹಿನ್ನಡೆ ಆಗಿರುವ ಹೊರತಾಗಿಯೂ ಭಾರತ 2025ರ ಹೊತ್ತಿಗೆ ಪುಟಿದೆದ್ದು ಜಾಗತಿಕವಾಗಿ 5ನೇ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದು ನಿಶ್ಚಿತ ಎಂದು ಬ್ರಿಟನ್ ಮೂಲದ ಆರ್ಥಿಕತೆ ಮತ್ತು ವ್ಯವಹಾರ ಸಂಶೋಧನಾ ಕೇಂದ್ರದ (ಸಿಇಬಿಆರ್) ವಾರ್ಷಿಕ ವರದಿ ಅಂದಾಜಿಸಿದೆ.
2030ರ ಹೊತ್ತಿಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತ ಮೂರನೇ ಸ್ಥಾನಕ್ಕೆ ಜಿಗಿದರೆ, ಇನ್ನು ಎಂಟು ವರ್ಷದಲ್ಲಿ ಚೀನಾ ಅಮೆರಿಕವನ್ನು ಹಿಂದಿಕ್ಕಿ ನಂಬರ್ ಒನ್ ಆರ್ಥಿಕಶಕ್ತಿಯಾಗಿ ಬೆಳೆಯಲಿದೆ ಎಂದೂ ಸಿಇಬಿಆರ್ ವರದಿ ಮುನ್ನಂದಾಜು ಮಾಡಿದೆ.
2019ರಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿ 5ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆ ಬಳಿಕ ಕ್ಷೀಣಿಸಿತು. ಅದರಲ್ಲೂ ಕರೊನಾ ಕಾರಣಕ್ಕಾಗಿ ವಿಧಿಸಿದ್ದ ಲಾಕ್​ಡೌನ್ ಮತ್ತಷ್ಟು ಹಿನ್ನಡೆ ಉಂಟುಮಾಡಿತು. ಇದೇ ವೇಳೆ ರೂಪಾಯಿ ದುರ್ಬಲಗೊಂಡಿದ್ದರಿಂದ ಭಾರತವನ್ನು ಬ್ರಿಟನ್ ಹಿಂದಿಕ್ಕಿತು ಎಂದು ಶನಿವಾರ ಪ್ರಕಟವಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೊಂಚ ನಿಧಾನ:ಭಾರತದ ಆರ್ಥಿಕತೆ 2021ರಲ್ಲಿ ಶೇ. 9 ಹಾಗೂ 2022ರಲ್ಲಿ ಶೇ. 7ರಷ್ಟು ಹಿಗ್ಗಲಿದೆ. ಈ ಬೆಳವಣಿಗೆ ಪಥದಲ್ಲಿ 2025ರಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿ ಭಾರತ 5 ನೇ ಸ್ಥಾನ ಪಡೆಯಲಿದೆ. 2027ರಲ್ಲಿ ಜರ್ಮನಿ ಮತ್ತು 2030ರಲ್ಲಿ ಜಪಾನ್ ಅನ್ನು ಹಿಂದೂಡಿ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗಲಿದೆ. ಆದರೆ, 2035ರ ಹೊತ್ತಿಗೆ ಭಾರತದ ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ) ಶೇಕಡ 5.8 ಇರುವ ಅಂದಾಜು ಇದೆ. ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿ ಹೊಂದಲಿರುವುದರಿಂದ ಭಾರತದ ಬೆಳವಣಿಗೆ ಸಹಜವಾಗಿಯೇ ನಿಧಾನವಾಗಲಿದೆ ಎಂಬುದು ವರದಿಯ ಅಭಿಪ್ರಾಯ.
ಕರೊನಾಕ್ಕಿಂತ ಮುನ್ನ:ಭಾರತದ ಆರ್ಥಿಕತೆ ಬೆಳವಣಿಗೆ ಕರೊನಾ ದಾಂಗುಡಿಯಿಡುವುದಕ್ಕಿಂತ ಮುಂಚೆಯೇ ವೇಗ ಕಳೆದುಕೊಂಡಿತ್ತು ಎಂಬುದರತ್ತ ಸಿಇಬಿಆರ್ ವರದಿ ಗಮನ ಸೆಳೆದಿದೆ. 2019ರಲ್ಲಿ ಜಿಡಿಪಿ ಬೆಳವಣಿಗೆ ಹತ್ತು ವರ್ಷಗಳಲ್ಲೇ ಕನಿಷ್ಠವಾದ ಶೇ. 4.2ಕ್ಕೆ ಕುಸಿದಿತ್ತು. 2018ರಲ್ಲಿ ಅದು ಶೇ. 6.1 ಆಗಿತ್ತು. 2016ರಲ್ಲಿ ಶೇ. 8.3ರಷ್ಟು ದಾಖಲಾಗಿತ್ತು.
ಅಮೆರಿಕ ಚೇತರಿಕೆ:2021ರಲ್ಲಿ ಅಮೆರಿಕ ಕರೋನೋತ್ತರವಾಗಿ ಪ್ರಬಲ ರೀತಿಯಲ್ಲಿ ಚೇತರಿಸಿಕೊಳ್ಳಲಿದೆ. ಬೆಳವಣಿಗೆ 2022ರಿಂದ 24ರ ವರೆಗೆ ವಾರ್ಷಿಕವಾಗಿ ಶೇಕಡ 1.9ರಷ್ಟು ನಿಧಾನವಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ವರದಿಯಲ್ಲೇನಿದೆ?2021ರಲ್ಲಿ ಭಾರತದ ಆರ್ಥಿಕತೆ ಶೇ.9 ಬೆಳವಣಿಗೆ ಕಾಣಲಿದೆ. 2022ರಲ್ಲಿ ಇದು ಶೇ.7ಕ್ಕೆ ನಿಗದಿಯಾಗಲಿದೆ. ಭಾರತದ ಸಾಲ, ಜಿಡಿಪಿ ಅನುಪಾತ 2020ರಲ್ಲಿ ಶೇ.89ಕ್ಕೆ ಏರಿಕೆ ಆಗಿದೆ. ಹೀಗಿದ್ದರೂ ವಿಶ್ವದ ಇತರ ದೊಡ್ಡ ಆರ್ಥಿಕತೆಗಳಿಗೆ ಹೋಲಿಸಿದರೆ ಕೇಂದ್ರ ಸರ್ಕಾರ ಮಾಡಿರುವ ವಿತ್ತೀಯ ವೆಚ್ಚ ದಿಂದಾಗಿ ಭಾರತದಲ್ಲಿ ಕೋವಿಡ್ 19 ಬಿಕ್ಕಟ್ಟು ಹೆಚ್ಚು ನಿಯಂತ್ರಣಕ್ಕೆ ಬಂದಿದೆಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಬಹುದಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಮೂಲಸೌಕರ್ಯ ಕ್ಷೇತ್ರದ ಮೇಲೆ ಮಾಡಿರುವ ವೆಚ್ಚವನ್ನು ಪರಿಗಣಿಸಿ ಆರ್ಥಿಕ ಮುನ್ನೋಟವನ್ನು ನಿರ್ಧರಿಸಬಹುದು.
ಬಲಾಢ್ಯ ಆರ್ಥಿಕ ದೇಶಗಳು:ಅಮೆರಿಕ, ಚೀನಾ, ಜಪಾನ್, ಜರ್ಮನಿ, ಬ್ರಿಟನ್​, ಭಾರತ
2028ಕ್ಕೆ ಚೀನಾಗೆ ಅಗ್ರಸ್ಥಾನಚೀನಾ 2028ರಲ್ಲಿ ಅಮೆರಿಕವನ್ನು ಹಿಂದಿಕ್ಕಿ ಜಗತ್ತಿನ ದೈತ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಸಿಇಬಿಆರ್ ಹೇಳಿದೆ. ಹಿಂದೆ ಅಂದಾಜು ಮಾಡಿದಕ್ಕಿಂತ ಐದು ವರ್ಷ ಮುಂಚೆಯೇ ಚೀನಾ ಈ ಸಾಧನೆ ಮಾಡಲಿದೆ. ಅಮೆರಿಕ ಮತ್ತು ಚೀನಾ ನಡುವಣ ಆರ್ಥಿಕ -ರಾಜಕೀಯ ಅಧಿಕಾರದ ಸಂಘರ್ಷ ಸ್ವಲ್ಪ ಸಮಯ ಜಾಗತಿಕ ಆರ್ಥಿಕತೆಯ ಪ್ರಮುಖ ಅಂಶವಾಗಿತ್ತು. ಕರೊನಾ ಹಾವಳಿ ಮತ್ತು ಪರಿಣಾಮವಾಗಿ ಉಂಟಾದ ಆರ್ಥಿಕ ಸಂಕಟ ಉಭಯ ದೇಶಗಳ ನಡುವಿನ ಪೈಪೋಟಿಯಲ್ಲಿ ಪ್ರಮುಖವಾಗಿದ್ದು ನಿಸ್ಸಂಶಯವಾಗಿಯೂ ಚೀನಾದ ಪರವಾಗಿ ವಿದ್ಯಮಾನಗಳು ನಡೆದಿವೆ ಎಂದು ವರದಿ ಹೇಳಿದೆ. ಕರೊನಾ ಸಾಂಕ್ರಾಮಿಕತೆಯನ್ನು ಚೀನಾ ನಿರ್ವಹಿಸಿದ ಬಗೆಯನ್ನು ವರದಿ ವಿಶೇಷವಾಗಿ ಉಲ್ಲೇಖಿಸಿದೆ. ಆರಂಭ ಘಟ್ಟದಲ್ಲೇ ಕಟ್ಟುನಿಟ್ಟಿನ ಲಾಕ್​ಡೌನ್ ಸಹಿತ ಕೌಶಲಪೂರ್ಣವಾಗಿ ಸಾಂಕ್ರಾಮಿಕತೆಯನ್ನು ಚೀನಾ ನಿರ್ವಹಿಸಿದ್ದು ಹಾಗೂ ಪಾಶ್ಚಿಮಾತ್ಯ ದೇಶಗಳ ದೀರ್ಘಕಾಲೀನ ಬೆಳವಣಿಗೆಗೆ ಹೊಡೆತ ಉಂಟಾಗಿದ್ದು ಚೀನಾದ ಆರ್ಥಿಕ ಸುಧಾರಣೆಗೆ ವರದಾನವಾಯಿತು ಎಂಬುದು ವರದಿಯ ಅಭಿಪ್ರಾಯ. ಚೀನಾ 2021ರಿಂದ 2025ರ ವರೆಗೆ ಪ್ರತಿವರ್ಷ ಸರಾಸರಿ ಶೇಕಡ 5.7 ಬೆಳವಣಿಗೆ ಸಾಧಿಸಲಿದೆ. 2026ರಿಂದ 2030ರ ವರೆಗೆ ನಿಧಾನಗತಿಯಲ್ಲಿ ಸಾಗಿ ಶೇ. 4.5 ಆಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 14 =
Remember me
