ನವದೆಹಲಿ:ಕರೊನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಭಾರತ, ಲಸಿಕೆ ನೀಡಿಕೆಯಲ್ಲಿ ನೂರು ಕೋಟಿ ಡೋಸ್ ಪೂರ್ಣಗೊಳಿಸುವ ಹುಮ್ಮಸ್ಸಿನಲ್ಲಿದೆ. ಗುರುವಾರ ಬೆಳಗ್ಗೆ ಈ ಮೈಲುಗಲ್ಲು ಸ್ಥಾಪಿಸುವ ಸಾಧ್ಯತೆ ನಿಚ್ಚಳ ವಾಗಿದೆ. ವ್ಯಾಕ್ಸಿನ್ ವಿಕ್ರಮವನ್ನು ಸಂಭ್ರಮಿಸುವ ಸಲುವಾಗಿ ದೇಶದಾದ್ಯಂತ ಎಲ್ಲ ರೈಲುಗಳು, ವಿಮಾನಗಳು ಮತ್ತು ಹಡಗುಗಳಲ್ಲಿ ‘ಶತಕೋಟಿ ಡೋಸ್’ ಬಗ್ಗೆ ಘೋಷಣೆ ಮಾಡಲಾಗುತ್ತದೆ. ದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ಜನವರಿ 16ರಂದು ಲಸಿಕೆ ಅಭಿಯಾನ ಆರಂಭವಾದ ಒಂಬತ್ತೇ ತಿಂಗಳಲ್ಲಿ ದೇಶ ಈ ಮಹಾನ್ ಸಾಧನೆಯನ್ನು ಪೂರ್ಣಗೊಳಿಸಲಿದೆ. ಬುಧವಾರ ಮಧ್ಯಾಹ್ನದ ಹೊತ್ತಿಗೆ 99.4 ಕೋಟಿ ಡೋಸ್ ಚುಚ್ಚುಮದ್ದು ಹಾಕಲಾಗಿದ್ದು ಗುರುವಾರ ಶತಕೋಟಿ ಪೂರೈಸುವ ನಿರೀಕ್ಷೆಯಿದೆ. ಶತಕೋಟಿ ಡೋಸ್ ಪೂರೈಸುವ ಸಂದರ್ಭದಲ್ಲಿ ಲಸಿಕೆ ಕೇಂದ್ರಗಳಲ್ಲಿ ಹಾಜರಿರುವಂತೆ ಪಕ್ಷದ ನಾಯಕರಿಗೆ ಸೂಚಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಚೀನಾ ಮೊದಲು:ಶತ ಕೋಟಿ ಡೋಸ್ ದಾಟಿದ 2ನೇ ದೇಶವಾಗಿ ಭಾರತ ದಾಖಲೆ ಬರೆಯಲಿದೆ. ಚೀನಾ ಜೂನ್​ನಲ್ಲೇ ಈ ಸಾಧನೆಗೈದಿದೆ. ಎರಡೂ ದೇಶಗಳು ನೂರು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದ ದೇಶಗಳಾಗಿವೆ.
ಅಮೆರಿಕ ಪ್ರವೇಶಕ್ಕೆ ಅಡ್ಡಿಅಮೆರಿಕ ಪ್ರಕಟಿಸಿರುವ ಹೊಸ ಪ್ರಯಾಣ ನೀತಿ ಭಾರತ ಸಹಿತ ವಿದೇಶಗಳಿಂದ ಆ ದೇಶಕ್ಕೆ ತೆರಳುವವರಿಗೆ ಅಡ್ಡಿಯಾಗಲಿದೆ. ಕರೊನಾ ಸೋಂಕಿನಿಂದ ಗುಣಮುಖರಾದರೂ ಸಂಪೂರ್ಣ ಡೋಸ್ ಲಸಿಕೆ ಪಡೆಯದವರು ದೇಶ ಪ್ರವೇಶಿಸುವ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಒಂದು ಡೋಸ್ ಪಡೆದರೂ ಪ್ರವೇಶಕ್ಕೆ ಅವಕಾಶವಿಲ್ಲ. ಎರಡು ಡೋಸ್ ಲಸಿಕೆ ಸಂಪೂರ್ಣ ಡೋಸ್ ಎಂದು ಬಹಳಷ್ಟು ದೇಶಗಳು ಮಾನ್ಯ ಮಾಡಿವೆ. ಲಸಿಕೆ ಪಡೆದವರು ದೇಶ ಪ್ರವೇಶಿಸಲು ನವೆಂಬರ್ 8ರಿಂದ ಗಡಿಗಳನ್ನು ಮುಕ್ತಗೊಳಿಸಲಾಗುತ್ತದೆ ಎಂದು ಅಮೆರಿಕ ಶುಕ್ರವಾರ ಪ್ರಕಟಿಸಿತ್ತು.
ಬ್ರಿಟನ್​ನಲ್ಲಿ ಹೆಚ್ಚಿದ ಸಾವುಬ್ರಿಟನ್​ನಲ್ಲಿ ಡೆಲ್ಟಾ ಪ್ಲಸ್ ಹಾವಳಿ ಮುಂದುವರಿದಿದ್ದು ದೈನಿಕ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಒಂದೇ ದಿನ 223 ಜನರು ಬಲಿಯಾಗಿದ್ದು ಮಾರ್ಚ್ 9ರ ನಂತರ ದಾಖಲಾದ ಅಧಿಕ ದೈನಿಕ ಮರಣ ಪ್ರಮಾಣವಾಗಿದೆ. ಇದರೊಂದಿಗೆ ಮಹಾಮಾರಿಗೆ ಬಲಿಯಾದವರ ಒಟ್ಟು ಸಂಖ್ಯೆ 1,38,629ಕ್ಕೆ ಏರಿದೆ.
ಪರಿಷ್ಕೃತ ಮಾರ್ಗಸೂಚಿಸಂಪೂರ್ಣವಾಗಿ ಲಸಿಕೆ ಪಡೆದ ಪ್ರವಾಸಿಗರು ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಅಂಗೀಕೃತ ಲಸಿಕೆ ಹಾಕುವ ದೇಶಗಳೊಂದಿಗೆ ಪರಸ್ಪರ ಒಪ್ಪಂದವಿರುವ ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರು ವಿಮಾನ ನಿಲ್ದಾಣಗಳಿಂದ ನೇರವಾಗಿ ಹೊರಗೆ ಹೋಗಲು ಅವಕಾಶ ಕಲ್ಪಿಸಲಾಗುತ್ತದೆ. ಅವರು ಹೋಂ ಕ್ವಾರಂಟೈನ್ ಮತ್ತು ಪರೀಕ್ಷೆಗೆ ಒಳಪಡಬೇಕಿಲ್ಲ ಎಂಬ ಪರಿಷ್ಕೃತ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬುಧವಾರ ಹೊರಡಿಸಿದೆ. ಅಕ್ಟೋಬರ್ 25ರಿಂದ ಪರಿಷ್ಕೃತ ಮಾರ್ಗಸೂಚಿ ಅನ್ವಯವಾಗಲಿದೆ. ಪ್ರಯಾಣಿಕರು ನೆಗೆಟಿವ್ ಕೋವಿಡ್-19 ಆರ್​ಟಿ-ಪಿಸಿಆರ್ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಇದರೊಂದಿಗೆ 2021 ಫೆಬ್ರವರಿ 7 ಮತ್ತು ಅದರ ನಂತರ ವಿದೇಶ ಪ್ರಯಾಣಿಕರಿಗೆ ಸಂಬಂಧಿಸಿ ಹೊರಡಿಸಲಾದ ಇತರ ಎಲ್ಲ ಆದೇಶಗಳು ರದ್ದಾಗುತ್ತವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ 14,623 ಹೊಸ ಕೇಸ್ಬುಧವಾರ ಭಾರತದಾದ್ಯಂತ 14,623 ಸೋಂಕಿನ ಹೊಸ ಪ್ರಕರಣಗಳು ದೃಢಪಟ್ಟಿವೆ. 197 ಜನರು ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ 19,446 ಜನರು ಗುಣಮುಖರಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 1,78,098ಕ್ಕೆ ಇಳಿದಿದೆ.
ರಾಜ್ಯಗಳಿಗೆ ವ್ಯಾಕ್ಸಿನ್ ಪೂರೈಕೆರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಇದುವರೆಗೆ 102.4 ಕೋಟಿಗೂ ಅಧಿಕ ಡೋಸ್ ಲಸಿಕೆಯನ್ನು ಉಚಿತವಾಗಿ ಪೂರೈಸಿದೆ. ಒಟ್ಟು 102,48,12,565 ಡೋಸ್ ಲಸಿಕೆ ಸರಬರಾಜು ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ರಾಜ್ಯಗಳು ಹಾಗೂ ಯುಟಿಗಳೊಂದಿಗೆ ಉಳಿಕೆ ಹಾಗೂ ಬಳಕೆಯಾಗದ 10.78 ಕೋಟಿ ಡೋಸ್ ಲಸಿಕೆ ಇನ್ನೂ ಇದೆ ಎಂದಿದೆ.
11 ದೇಶಗಳೊಂದಿಗೆ ಒಪ್ಪಂದರಾಷ್ಟ್ರೀಯವಾಗಿ ಅಥವಾ ಡಬ್ಲ್ಯುಎಚ್​ಒ ಮಾನ್ಯತೆ ನೀಡಿರುವ ಕೋವಿಡ್-19 ಲಸಿಕೆಗಳ ಪರಸ್ಪರ ಮಾನ್ಯತೆ ಗಾಗಿ 11 ದೇಶಗಳೊಂದಿಗೆ ಭಾರತ ಒಡಂಬಡಿಕೆ ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ, ಈ ದೇಶಗಳಿಂದ ಬರುವ ಪ್ರಯಾಣಿಕರು ವಿಮಾನ ನಿಲ್ದಾಣ ತೊರೆಯಲು ಅನುಮತಿ ನೀಡಲಾಗುತ್ತದೆ. ಹೋಂ ಕ್ವಾರಂಟೈನ್ ಹಾಗೂ ಪರೀಕ್ಷೆಯ ಅಗತ್ಯವಿಲ್ಲ. ಬ್ರಿಟನ್, ಫ್ರಾನ್ಸ್, ಜರ್ಮನಿ, ನೇಪಾಳ, ಬೆಲಾರೂಸ್, ಲೆಬನಾನ್, ಆಮೇನಿಯಾ, ಉಕ್ರೇನ್, ಬೆಲ್ಜಿಯಂ, ಹಂಗೇರಿ ಮತ್ತು ಸೆರ್ಬಿಯಾದೊಂದಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ದೇಶಗಳು ಲಸಿಕೆ ಹಾಕಿಸಿಕೊಂಡ ಭಾರತೀಯರ ಪ್ರವೇಶಕ್ಕೆ ಅನುಮತಿ ನೀಡಲಿವೆ. ಅದೇ ರೀತಿ ಆ ದೇಶಗಳಿಂದ ಬರುವವರಿಗೂ ಇಲ್ಲಿ ಅವಕಾಶವಿದೆ. ಪರಸ್ಪರರ ಪ್ರಜೆಗಳನ್ನು ವಿಮಾನನಿಲ್ದಾಣದಲ್ಲಿ ತಡೆಯದಿರುವುದು, ಹೋಂ ಕ್ವಾರಂಟೈನ್ ಹಾಗೂ ಪರೀಕ್ಷೆಯನ್ನು ಕಡ್ಡಾಯಗೊಳಿಸದಿರುವುದು ಈ ಒಡಂಬಡಿಕೆಯ ಸಾರವಾಗಿದೆ. ಪರಸ್ಪರ ದೇಶಗಳು ವ್ಯಾಕ್ಸಿನ್ ಪ್ರಮಾಣಪತ್ರಗಳನ್ನು ಮಾನ್ಯ ಮಾಡಲಿವೆ.
ರಷ್ಯಾದಲ್ಲಿ ವೇತನಸಹಿತ ರಜೆದೇಶದಲ್ಲಿ ಸೋಂಕಿನ ಕೇಸ್ ಮತ್ತು ಸಾವಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಕಳವಳಗೊಂಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಸೋಂಕು ನಿಯಂತ್ರಣ ಕ್ರಮದ ಭಾಗವಾಗಿ ಏಳು ದಿನ ವೇತನ ಸಹಿತ ರಜೆ ಘೋಷಿಸಿದ್ದಾರೆ. ಅ. 30ರಿಂದ ನ.7ರ ವರೆಗೆ ಈ ರಜೆ ಅನ್ವಯವಾಗಲಿದೆ. ರಷ್ಯಾದಲ್ಲಿ ಒಂದೇ ದಿನ 1,028 ಜನರು ಕರೊನಾ ಮಹಾಮಾರಿಗೆ ಬಲಿಯಾಗಿದ್ದು ಈ ವರೆಗಿನ ಗರಿಷ್ಠ ದೈನಿಕ ಮರಣವಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 17 =
Remember me
