ಎನ್. ಪಾರ್ಥಸಾರಥಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭೇಟಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅಧಿಕಾರದ ಎರಡೂ ಅವಧಿಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಭಾರತ ಮತ್ತು ಅಮೆರಿಕ, 21ನೇ ಶತಮಾನದ ‘ಮಹತ್ವದ ಸಹಭಾಗಿ ದೇಶಗಳಾಗಲಿವೆ’ ಎಂದು ಒಬಾಮ ಭವಿಷ್ಯ ನುಡಿದಿದ್ದರು.
ಅಮೆರಿಕವು ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಪಾಲುದಾರ ದೇಶವಾಗಿದೆ. 2018ರಲ್ಲಿ ದ್ವಿಪಕ್ಷೀಯ ಸರಕು ಮತ್ತು ಸೇವಾ ವ್ಯವಹಾರವು ದಾಖಲೆಯ 142.6 ಬಿಲಿಯನ್ ಡಾಲರ್​ಗೆ ಜಿಗಿದಿತ್ತು. ಅಮೆರಿಕಕ್ಕೆ ಭಾರತದ ಸರಕುಗಳ ರಫ್ತು ಸುಮಾರು 54.3 ಬಿಲಿಯನ್ ಡಾಲರ್ ಮತ್ತು ಅಮೆರಿಕದಿಂದ ಭಾರತ ಆಮದು ಮಾಡಿಕೊಂಡ ಸರಕಿನ ಮೌಲ್ಯ 33.5 ಬಿಲಿಯನ್ ಡಾಲರ್. ಹೀಗಾಗಿ, 20.8 ಬಿಲಿಯನ್ ಡಾಲರ್ ಹೆಚ್ಚುವರಿ ವ್ಯವಹಾರವನ್ನು ಭಾರತವೇ ಮಾಡಿದ್ದು ವಾಣಿಜ್ಯ ವ್ಯವಹಾರ ಸಮತೋಲನ (ಟ್ರೇಡ್ ಬ್ಯಾಲನ್ಸ್) ಭಾರತದ ಪರವಾಗಿಯೇ ಇದೆ. ಅಮೆರಿಕ 2018ರಲ್ಲಿ ಭಾರತದೊಂದಿಗೆ 4.4 ಬಿಲಿಯನ್ ಡಾಲರ್ ವಾಣಿಜ್ಯ ಕೊರತೆ ಹೊಂದಿತ್ತು.
ಭಾರತದೊಂದಿಗೆ ಸ್ವಲ್ಪ ಮಟ್ಟದ ವಾಣಿಜ್ಯ ಕೊರತೆಯಿದ್ದರೂ ಭಾರತದಂಥ ಮಿತ್ರದೇಶಗಳೊಂದಿಗಿನ ಬಾಂಧವ್ಯಕ್ಕೆ ಕುತ್ತು ತಂದುಕೊಂಡಾದರೂ ಗರಿಷ್ಠ ಲಾಭ ಪಡೆಯಲು ಟ್ರಂಪ್ ಗಮನ ಕೇಂದ್ರೀಕರಿಸಿದ್ದಾರೆ. ಭಾರತ ಸೇರಿ ಹಲವು ದೇಶಗಳಿಂದ ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ಅಮೆರಿಕ ಈಗಾಗಲೆ ನಿರ್ಬಂಧಿಸಿದೆ. ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸಸ್ (ಜಿಎಸ್​ಪಿ), ಅಂದರೆ ಸುಮಾರು ಎರಡುಸಾವಿರ ಉತ್ಪನ್ನಗಳಿಗೆ ಶೂನ್ಯ-ಸುಂಕದ (ಜೀರೋ ಟ್ಯಾರಿಫ್) ನಿಯಮದಡಿ ಭಾರತ ಪಡೆಯಬೇಕಾಗಿದ್ದ ಎಲ್ಲ ಲಾಭಗಳನ್ನು ಅಮೆರಿಕ ರದ್ದುಪಡಿಸಿದೆ. ಇದರಿಂದ ಅಮೆರಿಕಕ್ಕೆ ಅಪಾರ ಲಾಭ ಸಿಗಲಿದೆ. ಕಳೆದ ವರ್ಷ ಟೆಕ್ಸಾಸ್​ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದ ವೇಳೆ, ಅಮೆರಿಕ ಮತ್ತು ಭಾರತ ಮಹತ್ವದ ವಾಣಿಜ್ಯ ಒಡಂಬಡಿಕೆಗೆ ಸಹಿ ಹಾಕಲಿವೆ ಎಂಬ ಭಾರಿ ನಿರೀಕ್ಷೆ ಗರಿಗೆದರಿತ್ತು. ಪ್ರಧಾನಿ ಮೋದಿ ‘ಒಡೆದು ಹೋದ ಭಾರತವನ್ನು ಏಕೀಕೃತಗೊಳಿಸಿದ’ ‘ಭಾರತದ ರಾಷ್ಟ್ರಪಿತ’ ಎಂದು ಕರೆಯುವ ಮಟ್ಟಕ್ಕೂ ಟ್ರಂಪ್ ಹೋಗಿದ್ದರು. ಅಷ್ಟಾದರೂ ಯಾವುದೇ ವಾಣಿಜ್ಯ ಒಪ್ಪಂದ ಸಾಕಾರಗೊಳ್ಳಲಿಲ್ಲ.
ಅಪಾರ ಒತ್ತಡ: ಕೃಷಿ ಉತ್ಪನ್ನಗಳು, ವೈದ್ಯಕೀಯ ಉಪಕರಣಗಳು, ಇಲೆಕ್ಟ್ರಾನಿಕ್ ಮತ್ತು ಡಿಜಿಟಲ್ ವಾಣಿಜ್ಯದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವಂತೆ ಟ್ರಂಪ್ ಆಡಳಿತ ಭಾರತದ ಮೇಲೆ ಅಪಾರ ಒತ್ತಡ ಹೇರುತ್ತಿದೆ. ಅಮೆರಿಕದ ಬಾದಾಮಿ ಖರೀದಿಸುವ ಅತಿ ದೊಡ್ಡ ದೇಶ ಭಾರತ. ಅದೇ ರೀತಿ ಆ ದೇಶದ ಸೇಬಿಗೆ ಎರಡನೇ ದೊಡ್ಡ ಗ್ರಾಹಕವಾಗಿದೆ. ಬಾದಾಮಿ, ವಾಲ್​ನಟ್ಸ್, ಹಂದಿ ಮಾಂಸ, ಹಾಲಿನ ಉತ್ಪನ್ನಗಳು, ಚೆರಿ, ಸೇಬು ಮತ್ತಿತರ ವಸ್ತುಗಳ ಮೇಲಿನ ಸುಂಕ ಕಡಿಮೆ ಮಾಡಬೇಕೆೆಂದು ಅಮೆರಿಕ ಆಗ್ರಹಿಸುತ್ತಿದೆ. ಆನ್​ಲೈನ್ ವಾಣಿಜ್ಯ (ಇ-ಕಾಮರ್ಸ್) ಮೇಲಿನ ನಿರ್ಬಂಧಗಳ ಸಡಿಲಿಕೆಗೂ ಒತ್ತಾಯಿಸುತ್ತಿದೆ. ಅಮೆಜಾನ್, ಫ್ಲಿಪ್​ಕಾರ್ಟ್ ಮತ್ತಿತರ ಅಮೆರಿಕದ ಕಂಪನಿಗಳ ಸ್ವಚ್ಛಂದ ಬೆಳವಣಿಗೆಗೆ ಭಾರತದ ನಿರ್ಬಂಧಗಳು ಅಡ್ಡಿಯಾಗಿರುವುದರಿಂದ ಈ ರೀತಿಯ ಒತ್ತಡ. ಒಂದು ಸೀಮಿತ ವಾಣಿಜ್ಯ ಒಪ್ಪಂದವನ್ನಾದರೂ ಮಾಡಿಕೊಳ್ಳೋಣ ಎಂದು ಭಾರತ ಈಗಲೂ ಪ್ರಯತ್ನಿಸುತ್ತಿದೆ. ಆದರೆ, ಭಾರತ ಭೇಟಿ ವೇಳೆ ಇಂಥ ಯಾವುದೇ ಒಡಂಬಡಿಕೆ ಮಾಡಿಕೊಳ್ಳುವ ಸಂಭವವನ್ನು ಸ್ವತಃ ಟ್ರಂಪ್ ತಳ್ಳಿಹಾಕಿದ್ದಾರೆ. ಹೀಗಾಗಿ ಭೇಟಿಯ ಫಲಶ್ರುತಿ ಕುತೂಹಲ ಮೂಡಿಸಿದೆ.
(ಲೇಖಕರು ಮಾಜಿ ರಾಯಭಾರಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು)
ಭಾರತದ ಕಾಳಜಿ
ಭಾರತದ ಕಳವಳಕ್ಕೆ ಸಕಾರಣಗಳಿವೆ. ಅಂತಾರಾಷ್ಟ್ರೀಯವಾಗಿ ಸ್ಪರ್ಧಾತ್ಮಕವಲ್ಲದ ಕೃಷಿ, ಡೇರಿ ಮತ್ತು ಉತ್ಪಾದನಾ ವಲಯಗಳನ್ನು ರಕ್ಷಿಸುವುದು ಭಾರತದ ಉದ್ದೇಶವಾಗಿದೆ. ಇದೇ ಕಾರಣಕ್ಕೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್​ಸಿಇಪಿ) ಒಪ್ಪಂದಕ್ಕೆ ಸಹಿ ಹಾಕುವುದರಿಂದ ಪ್ರಧಾನಿ ಮೋದಿ ಹಿಂದೆ ಸರಿದಿದ್ದನ್ನು ಇಲ್ಲಿ ಸ್ಮರಿಸಬಹುದು. ಎಂಟು ವರ್ಷಗಳ ಸತತ ಮಾತುಕತೆ ನಂತರ ಈ ಒಡಂಬಡಿಕೆ ರೂಪುಗೊಂಡಿತ್ತು. ಅದಕ್ಕೆ ಸಹಿ ಹಾಕದಿರುವುದು ಭಾರತದ ಆರ್ಥಿಕತೆಗೆ ಒಳ್ಳೆಯದಲ್ಲ. ಭಾರತ ತನ್ನ ದುರ್ಬಲ ಕ್ಷೇತ್ರಗಳನ್ನು ಜಾಗತಿಕ ಸ್ಪರ್ಧೆಗೆ ಒಡ್ಡಿಕೊಳ್ಳಬೇಕು. ಒಂದು ನಿರ್ದಿಷ್ಟ ಅವಧಿವರೆಗಿನ ನೋವು, ಸಾಂಸ್ಥಿಕ ಮರುಹೊಂದಾಣಿಕೆಯ ನಂತರ ಭಾರತದ ವಲಯಗಳು ಜಾಗತಿಕ ಕ್ಷೇತ್ರದ ಸ್ಪರ್ಧೆಗೆ ಒಗ್ಗಿಕೊಳ್ಳುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಮೆರಿಕ-ಭಾರತ ವಾಣಿಜ್ಯ ಸಾಧ್ಯತೆ ಅಪಾರವಾಗಿದ್ದು ಈಗ ನಡೆಯುತ್ತಿರುವ ವಹಿವಾಟು ಅದರಲ್ಲಿ ಒಂದು ಸಣ್ಣ ಭಾಗವಷ್ಟೆ ಆಗಿದೆ. ಆದರೆ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವುದು ಅಮೆರಿಕಕ್ಕಿಂತ ಭಾರತಕ್ಕೇ ಹೆಚ್ಚು ಮುಖ್ಯವಾದುದು. ಆದ್ದರಿಂದ ಅಮೆರಿಕದೊಂದಿಗೆ ಒಂದು ಸಮಗ್ರ ವಾಣಿಜ್ಯ ಒಪ್ಪಂದ ಮಾಡಿಕೊಳ್ಳುವ ಯತ್ನವನ್ನು ಭಾರತ ಮುಂದುವರಿಸಬೇಕು.
ಕನಸಿಗೆ ಹಿನ್ನಡೆ
ವಾಣಿಜ್ಯ ದೃಷ್ಟಿಯಿಂದ ಭಾರತ ‘ಅಭಿವೃದ್ಧಿ ದಿದ’ ದೇಶ ಎಂದು ಪರಿಗಣಿಸಲು ಟ್ರಂಪ್ ಆಡಳಿತ ನಿರ್ಧರಿಸಿರುವುದರಿಂದ 2024ರೊಳಗೆ ದೇಶವನ್ನು ಐದು ಟ್ರಿಲಿಯನ್ ಆರ್ಥಿಕತೆ ಮಾಡಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಕನಸಿಗೆ ದೊಡ್ಡ ಹೊಡೆತ ಬಿದ್ದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + fourteen =
Remember me
