ಬೆಂಗಳೂರು:ವಿಶ್ವದಲ್ಲೇ ಹಾಲು ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕದಲ್ಲಿ 50 ಲಕ್ಷಕ್ಕೂ ಹೆಚ್ಚು ಜನ ಪಶುಸಂಗೋಪನೆ ಮಾಡುತ್ತಿದ್ದಾರೆ. ಅವರಲ್ಲಿ ಸುಮಾರು 25 ಲಕ್ಷ ಜನ ಹೈನುಗಾರಿಕೆಯನ್ನು ಉದ್ಯಮವನ್ನಾಗಿಸಿಕೊಂಡಿದ್ದಾರೆ.
ವಿಶ್ವದಲ್ಲಿ ಉತ್ತಮ ಪೌಷ್ಟಿಕಾಂಶಯುಕ್ತ ಹಾಗೂ ಸರ್ವರಿಂದಲೂ ಸ್ವೀಕೃತವಾಗಿರುವ ಹಾಲಿಗೆ ಸಾಕಷ್ಟು ಬೇಡಿಕೆಯಿದೆ. ಹೀಗಾಗಿ ಪ್ರತಿವರ್ಷ ಜೂ.1ರಂದು ಅಂತಾರಾಷ್ಟ್ರೀಯ ಹಾಲು ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. 20 ವರ್ಷಗಳಿಂದೀಚೆಗೆ ಹೈನು ಗಾರಿಕೆ ಉದ್ಯಮವಾಗಿ ಬೆಳೆದಿದ್ದು, ದೇಶದಲ್ಲಿ 7 ಕೋಟಿಗೂ ಅಧಿಕ ಜನ ಇದರ ಮೇಲೆ ಅವಲಂಬಿತರಾಗಿದ್ದಾರೆ. ಶ್ರಮವಹಿಸಿ ದುಡಿವವರಿಗೆ ಇದು ಲಾಭದಾಯಕ ಉದ್ಯಮವೂ ಆಗಿದ್ದು, ಗ್ರಾಮೀಣ ಜನರಿಗೆ ಜೀವನಾಧಾರ ಸಹ ಆಗಿದೆ.
ಕೆಎಂಎಫ್​ನಲ್ಲಿ 25 ಲಕ್ಷ ಸದಸ್ಯರು:ರಾಜ್ಯದಲ್ಲಿ 1974ರಲ್ಲಿ ಕರ್ನಾಟಕ ಡೇರಿ ಅಭಿವೃದ್ಧಿ ಮಂಡಳಿ ಆರಂಭವಾಗಿ, 1984ರಲ್ಲಿ ರಾಜ್ಯ ಸರ್ಕಾರದ ಉದ್ಯಮ ಸಂಸ್ಥೆಯಾಗಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಎಂಬ ರೂಪತಾಳಿತು. ಮೊದಲು ಮನೆಗೆ ಬಳಕೆಯಾಗಿ ಉಳಿದ ಹಾಲನ್ನು ಡೇರಿಗೆ ಹಾಕುತ್ತಿದ್ದ ಜನ, ಲಾಭದ ಮಾರ್ಗ ಕಂಡುಕೊಂಡು ಅದನ್ನೇ ಆದಾಯದ ಮೂಲವಾಗಿ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ 25 ಲಕ್ಷ ಸದಸ್ಯರು ಹಾಲು ಒಕ್ಕೂಟದಲ್ಲಿದ್ದು, ಅದರಲ್ಲಿ 9 ಲಕ್ಷ ಜನ ಲಾಭದಾಯಕ ಉದ್ಯಮವಾಗಿಸಿಕೊಂಡಿದ್ದಾರೆ.
79 ಲಕ್ಷ ಲೀಟರ್ ಹಾಲು ಉತ್ಪಾದನೆ
ಕೆಎಂಎಫ್​ನಡಿ 14 ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿ 14,600 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸೇರಿ 79 ಲಕ್ಷ ಲೀಟರ್ ಸಂಗ್ರಹಣೆಯಾಗುತ್ತಿದ್ದು, ಇನ್ನೊಂದು ವಾರದಲ್ಲಿ ಹಾಲು ಉತ್ಪಾದನೆ 80 ಲಕ್ಷ ಲೀಟರ್ ತಲುಪಲಿದೆ. ನೇರ ಹಾಲು ಮಾರಾಟದ ಜತೆಗೆ ಹಾಲಿನಿಂದ ಮೊಸರು, ತುಪ್ಪ, ಬೆಣ್ಣೆ, ಸಿಹಿ ಪದಾರ್ಥಗಳು, ಬಿಸ್ಕತ್ ಸೇರಿ ವಿವಿಧ ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.
ಹಳ್ಳಿಗಳಿಗೆ ನಿತ್ಯ 21 ಕೋಟಿ ರೂ. ಆದಾಯ
ಉತ್ಪಾದಕರಿಂದ ಸಂಗ್ರಹಿಸುವ ಹಾಲನ್ನು 24 ಗಂಟೆಯೊಳಗೆ ಕೊಬ್ಬಿನಾಂಶದ ಆಧಾರದಲ್ಲಿ 4 ವಿಭಾಗದಲ್ಲಿ ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. ಪ್ರತಿ ಲೀಟರ್ ಹಾಲಿಗೆ 23 ರೂ. ನೀಡಿ ರೈತರಿಂದ ಖರೀದಿ ಮಾಡಲಾಗುತ್ತಿದ್ದು, ಸರ್ಕಾರದಿಂದ ಪ್ರತಿ ಲೀ.ಗೆ 5 ರೂ. ಪ್ರೋತ್ಸಾಹಧನ ಸಹ ನೀಡಲಾಗುತ್ತಿದೆ. ಹೀಗಾಗಿ ಪ್ರತಿನಿತ್ಯ 21 ಕೋಟಿ ರೂ. ಗ್ರಾಮೀಣ ಪ್ರದೇಶಕ್ಕೆ ಆದಾಯ ರವಾನೆಯಾಗುತ್ತಿದೆ.
ಮಾಹಿತಿಗೆ ಸಂರ್ಪಸಿ
ಪಶು ಇಲಾಖೆಯ ಉಚಿತ ಸಹಾಯವಾಣಿ: 1800425 0012, ದೂರು: 080-23417100
ಕೆಎಂಎಫ್ ಉಚಿತ ಸಹಾಯವಾಣಿ: 18004258030 ದೂರು: 080-26096800/ 080-26096820
ಹೈನೋದ್ಯಮಕ್ಕೆ ನೆರವು
ಹೈನುಗಾರಿಕೆ ಉದ್ಯಮ ಆರಂಭಿಸಲು ಯುವಕರಿಗೆ ನೆರವಾಗುವ ನಿಟ್ಟಿನಲ್ಲಿ ಹೈನುಗಾರಿಕೆ ಇಲಾಖೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಹಸು ಸಾಕಣೆಗೆ ತರಬೇತಿ, ಹಸು ಖರೀದಿಸಲು ಸಹಾಯ ಧನ ಮತ್ತು ಸಾಲ ಸೌಲಭ್ಯ, ಫಾರಂ ನಿರ್ವಣಕ್ಕೆ ನೆರವು, ಪಶು ಆಹಾರ, ಮೇವಿನ ಬೀಜಗಳು, ಮೇವಿನ ಸಸಿ, ಮೇವು ಕತ್ತರಿಸುವ ಯಂತ್ರಗಳ ಖರೀದಿಗೆ ನೆರವು ನೀಡಲಾಗುತ್ತಿದೆ. ಮಾಸಿಕ 3 ಲಕ್ಷ ಹಸುಗಳಿಗೆ ಕೃತಕ ಗರ್ಭ ಧಾರಣೆ ಮಾಡಲಾಗುತ್ತಿದೆ. ಹಸುಗಳಿಗೆ ಅನಾರೋಗ್ಯ ಮತ್ತು ಕರು ಹಾಕುವ ಸಂದರ್ಭದಲ್ಲಿ ತುರ್ತು ಪಶು ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತಿದೆ.
ಅರಿಷಿಣ ಮಿಶ್ರಿತ ಹಾಲು ಇಂದು ಮಾರುಕಟ್ಟೆಗೆ
ಬೆಂಗಳೂರು: ಕರೊನಾ ಸಂದರ್ಭದಲ್ಲಿ ಜನರಲ್ಲಿ ಆರೋಗ್ಯ ವೃದ್ಧಿಗಾಗಿ ಮತ್ತು ಪೌಷ್ಟಿಕಾಂಶ ಹೆಚ್ಚಳಕ್ಕಾಗಿ ಕೆಎಂಎಫ್ ಅರಿಷಿಣ ಮಿಶ್ರಿತ ನಂದಿನಿ ಹಾಲನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ವಿಶ್ವ ಹಾಲು ದಿನವಾಗಿ ಆಚರಿಸಲಾಗುತ್ತಿರುವ ಜೂ.1ರಂದು ಕರ್ನಾಟಕ ಹಾಲು ಒಕ್ಕೂಟ ಮಂಡಳಿ ಈ ವಿಶೇಷ ಹಾಲನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಕರೊನಾ ಪಿಡುಗಿನ ಈ ಸಂದರ್ಭದಲ್ಲಿ ಜನರು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲಿ ಎಂಬುದು ಕೆಎಂಎಫ್ ಆಶಯ ಎಂದಿದ್ದಾರೆ. ಇದೇ ವೇಳೆ ಬೆಂಗಳೂರು ನಗರದಲ್ಲಿ ಕೆಎಂಎಫ್ ಉತ್ಪನ್ನಗಳನ್ನು ಮಾರುವ ಮೊಬೈಲ್ ಪಾರ್ಲರ್ ವ್ಯಾನ್​ಗಳ ಕಾರ್ಯಾಚರಣೆಗೂ ಚಾಲನೆ ನೀಡಲಾಗುತ್ತಿದೆ. ಇದರಲ್ಲಿ ನಂದಿನಿ ಹಾಲು, ಮೊಸರು, ಐಸ್ ಕ್ರೀಂ, ಗಟ್ಟಿಹಾಲು ಸೇರಿ ಇತರ ಉತ್ಪನ್ನಗಳು ಗ್ರಾಹಕರಿಗೆ ಲಭಿಸಲಿವೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಭಾಗಗಳಲ್ಲೂ ನಂದಿನಿ ಮೊಬೈಲ್ ಪಾರ್ಲರ್ ವ್ಯಾನ್ ಸೇವೆ ವಿಸ್ತರಿಸುವ ಚಿಂತನೆ ಇದೆ ಎಂದಿದ್ದಾರೆ. ಆಹಾರ ಪದ್ಧತಿಯಲ್ಲಿ ಹಾಲಿನ ಸದ್ಬಳಕೆಗೆ ಕ್ರಮಕೈಗೊಳ್ಳುವ ಉದ್ದೇಶದಿಂದ ಆಹಾರ ಮತ್ತು ಕೃಷಿ ಸಂಸ್ಥೆ ಜೂ. 1ರಂದು ವಿಶ್ವ ಹಾಲು ದಿನಾಚರಣೆ ಆರಂಭಿಸಿತು. ಅದರಂತೆ ವಿಶ್ವದ ನಾನಾ ರಾಷ್ಟ್ರಗಳು ಹಾಲು ದಿನ ಆಚರಿಸುತ್ತಿದ್ದು, ಕೆಎಂಎಫ್ ಕೂಡ ಆಚರಿಸಿಕೊಂಡು ಬರುತ್ತಿದೆ. ಹಾಲಿನ ಮಹತ್ವವನ್ನು ಗ್ರಾಹಕರಿಗೆ ತಿಳಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದಿದ್ದಾರೆ.
| ಸತೀಶ್ ಕೆ.ಬಳ್ಳಾರಿ
ರಾಜ್ಯ ಸರ್ಕಾರದಿಂದ 5ನೇ ಹಂತದ ಲಾಕ್​ಡೌನ್​ ಮಾರ್ಗಸೂಚಿ ಪ್ರಕಟ: ಯಾರಿಗೆಲ್ಲಾ ಗುಡ್​ ನ್ಯೂಸ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
