ನವದೆಹಲಿ:ರೈತರ ಆಕ್ರೋಶ, ದೇಶದ ಹಿತಾಸಕ್ತಿಗೆ ಮಣಿದು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದಿಂದ (ಆರ್​ಸಿಇಪಿ) ಹಿಂದೆ ಸರಿದಿದ್ದ ಕೇಂದ್ರ ಸರ್ಕಾರ ಇದೀಗ ಹೈನುಗಾರಿಕೆ ಹಾಗೂ ಕುಕ್ಕುಟೋದ್ಯಮವನ್ನು ಅಮೆರಿಕದ ಆಮದಿಗೆ ಮುಕ್ತವಾಗಿಸುವತ್ತ ಚಿತ್ತ ಹರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಪ್ರವಾಸದ ವೇಳೆ ಇಂಥದ್ದೊಂದು ಒಪ್ಪಂದ ಏರ್ಪಡುವ ಸುಳಿವು ಬಹಿರಂಗವಾದ ಬೆನ್ನಲ್ಲೇ ಕ್ಷೀರೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿರುವ 80 ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ ಸಣ್ಣ ಮಟ್ಟಿನ ಕಂಪನ ಶುರುವಾಗಿದೆ.
ಡೊನಾಲ್ಡ್ ಟ್ರಂಪ್ ಫೆ.24-25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈಗಾಗಲೇ ಕಾರ್ಯಕ್ರಮಕ್ಕೆ ಗುಜರಾತ್​ನಲ್ಲಿ ಭಾರಿ ಸಿದ್ಧತೆ ನಡೆದಿವೆ. ಟ್ರಂಪ್ ಭೇಟಿ ವೇಳೆ ಭಾರತದ ಜತೆ ಸಾವಿರಾರು ಕೋಟಿ ರೂ. ಒಪ್ಪಂದಗಳಿಗೂ ಅಂಕಿತ ಬೀಳಲಿದೆ. ಪ್ರಸ್ತುತ ಭಾರತಕ್ಕೆ ಅಗತ್ಯವಾಗಿರುವ ವಿಮಾನ, ಹೆಲಿಕಾಪ್ಟರ್ ಹಾಗೂ ರಕ್ಷಣಾ ಉತ್ಪನ್ನಗಳ ಖರೀದಿಯಷ್ಟೇ ಚರ್ಚೆಯಲ್ಲಿತ್ತಾದರೂ ಇದೀಗ ಅಮೆರಿಕದ ಹಾಲು ಹಾಗೂ ಕೋಳಿ ಉತ್ಪನ್ನಗಳ ಆಮದಿಗೂ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಗೋಚರಿಸಿದೆ. ಈ ಕ್ಷೇತ್ರವನ್ನು ಅಮೆರಿಕಕ್ಕೆ ಭಾಗಶಃ ಮುಕ್ತವಾಗಿಸಿದರೆ ಮುಂದಾಗುವ ಪರಿಣಾಮಗಳ ಲೆಕ್ಕಾಚಾರ ಶುರುವಾಗಿದೆ.
ಮೂಡದ ಸ್ಪಷ್ಟತೆ:ಅಮೆರಿಕದ ಡೇರಿ ಉತ್ಪನ್ನಗಳ ಆಮದಿಗೆ ಭಾರತ ಅವಕಾಶ ಮಾಡಿಕೊಡುವ ಸುಳಿವು ಸಿಕ್ಕಿದೆಯಾದರೂ ಇದರ ಪ್ರಮಾಣ, ಒಪ್ಪಂದದ ಹಿಂದಿರುವ ನಿಯಮಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಹೀಗಾಗಿ ಒಪ್ಪಂದ ಅಧಿಕೃತಗೊಂಡ ಬಳಿಕವಷ್ಟೇ ಇದು ಎಷ್ಟರ ಮಟ್ಟಿಗೆ ಭಾರತಕ್ಕೆ ಹಾನಿಯಾಗಬಹುದೆಂಬುದು ಸ್ಪಷ್ಟವಾಗುತ್ತದೆ ಎನ್ನುತ್ತಾರೆ ತಜ್ಞರು.
ಆಮದು ಸುಂಕ ಇಳಿಕೆೆ:ಸಾಮಾನ್ಯವಾಗಿ ಅಮೆರಿಕ ತನ್ನ ಕೆಲವು ಉತ್ಪನ್ನಗಳ ಮೇಲೆ ಅತಿ ಹೆಚ್ಚು ಅಂದರೆ ಶೇ.100 ತೆರಿಗೆ ವಿಧಿಸುತ್ತದೆ.
ಪ್ರಸ್ತುತ ಕೋಳಿ ಉತ್ಪನ್ನಗಳ ಮೇಲೆ ಶೇ.100 ತೆರಿಗೆ ಇದ್ದು, ಇದನ್ನು ಶೇ.25 ಇಳಿಸಲು ಮುಂದಾಗಿದೆ. ಆದರೆ, ಇದನ್ನು ಶೇ.10ಕ್ಕೆ ಇಳಿಸಬೇಕೆಂದು ಅಮೆರಿಕ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಬ್ಲ್ಯೂಬೆರ್ರಿ, ಚೆರ್ರಿ ಹಣ್ಣುಗಳ ಆಮದು ಶುಲ್ಕ ಇಳಿಸಲಿದೆ.
ವ್ಯಾಪಾರ ಲೆಕ್ಕಾಚಾರ:ಇತ್ತೀಚೆಗೆ ಮೋದಿ ಸರ್ಕಾರ ಅಮೆರಿಕದಿಂದ ಆಮದಾಗುವ ವೈದ್ಯಕೀಯ ಉಪಕರಣಗಳ ದರ ನಿಯಂತ್ರಿಸಿದೆ. ಇ-ಕಾಮರ್ಸ್ ತಾಣಗಳಿಗೂ ಕಡಿವಾಣ ಹಾಕಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಭಾರತದಲ್ಲಿ ತನ್ನ ವಹಿವಾಟು ವೃದ್ಧಿಗೆ ಅವಕಾಶ ಕಲ್ಪಿಸಿಕೊಳ್ಳಲು ಮುಂದಾಗಿದೆ.
ಚೀನಾದ ಬಳಿಕ ಭಾರತ ಅತಿ ಹೆಚ್ಚು ವಹಿವಾಟು ನಡೆಸುವ ರಾಷ್ಟ್ರವೆಂದರೆ ಅಮೆರಿಕ. ಅಮೆರಿಕ ಇತರ ರಾಷ್ಟ್ರಗಳೊಂದಿಗೆ ನಡೆಸುವ ಒಟ್ಟು ವಹಿವಾಟಿನಲ್ಲಿ ಭಾರತ 9ನೇ ಸ್ಥಾನದಲ್ಲಿದೆ. 2018ರಲ್ಲಿ ಭಾರತದೊಂದಿಗಿನ ಅಮೆರಿಕ ವಹಿವಾಟು ಪ್ರಮಾಣ 142.6 ಬಿಲಿಯನ್ ಡಾಲರ್​ಗಳಷ್ಟಾಗಿತ್ತು. ಆದರೆ, 2019ರಲ್ಲಿ ಅಮೆರಿಕ 23.2 ಬಿಲಿಯನ್ ಡಾಲರ್​ಗಳಷ್ಟು ವಹಿವಾಟು ಕೊರತೆ ಎದುರಿಸುತ್ತಿದೆ.
ಷರತ್ತು ಅನ್ವಯ:ಅಮೆರಿಕದ ಡೇರಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲು ಮುಂದಾಗಿರುವ ಭಾರತ ಅವುಗಳ ಮೇಲೆ ಶೇ.5 ಆಮದು ಸುಂಕ ಪಡೆಯಲಿದೆ. ಇದರ ಹೊರತಾಗಿಯೂ ಕೆಲ ನಿರ್ಬಂಧಗಳನ್ನು ಹೇರಿದೆ. ಮಾಂಸ ಹಾಗೂ ಮತ್ತಿತರ ಪ್ರಾಣಿ ತ್ಯಾಜ್ಯದಿಂದ ತಯಾರಿಸಿದ ಪಶು ಆಹಾರ ಸೇವಿಸಿದ ಜಾನುವಾರುಗಳ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರುವಂತಿಲ್ಲ ಎಂದು ಹೇಳಿದೆ. ಇದಕ್ಕಾಗಿ ಸಂಬಂಧಿಸಿದ ಇಲಾಖೆಯಿಂದ ಪ್ರಮಾಣಪತ್ರ ಕಡ್ಡಾಯವಾಗಿ ಪಡೆಯಬೇಕೆಂದು ತಿಳಿಸಿದೆ.
ಕಾರಣಗಳೇನು…
# ಅಮೆರಿಕದ ಕೆಲವು ಉತ್ಪನ್ನಗಳಿಗೆ ಭಾರತ ಹೆಚ್ಚಿನ ತೆರಿಗೆ ವಿಧಿಸುತ್ತಿದೆ. ಹಾಗೆಯೇ ಭಾರತದ ವಸ್ತುಗಳಿಗೂ ಅಮೆರಿಕದಲ್ಲಿ ತೆರಿಗೆ ಭಾರವಿದೆ. ಹೀಗಾಗಿ ಕೆಲವು ಕ್ಷೇತ್ರಗಳನ್ನು ಪರಸ್ಪರ ಮುಕ್ತವಾಗಿಸಿಕೊಂಡು ತೆರಿಗೆ ಹೊರೆ ಇಳಿಸಿಕೊಳ್ಳುವುದು ಉಭಯ ರಾಷ್ಟ್ರಗಳ ಲೆಕ್ಕಾಚಾರ
# ಡೇರಿ ಉತ್ಪನ್ನಗಳಿಗೆ ತೆರಿಗೆ ಹೊರೆ ಇಳಿಸಬೇಕೆಂಬುದು ಅಮೆರಿಕದ ಬಹುದಿನಗಳ ಕೋರಿಕೆಯಾಗಿದೆ
ವ್ಯಾಪಾರ ಮುನಿಸು
ಭಾರತವೇ ನಂಬರ್ 1
ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶಗಳಲ್ಲಿ ಸದ್ಯ ಭಾರತ ಮೊದಲನೇ ಸ್ಥಾನದಲ್ಲಿದೆ. ಗ್ರಾಮೀಣ ಪ್ರದೇಶದ 80 ಲಕ್ಷಕ್ಕೂ ಅಧಿಕ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿದ್ದು, ಹಾಲನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ಇವುಗಳ ಹಿತ ರಕ್ಷಣೆಗಾಗಿಯೇ ಭಾರತ ಈವರೆಗೆ ಡೇರಿ ಉತ್ಪನ್ನಗಳ ಆಮದಿಗೆ ನಿರ್ಬಂಧ ಹೇರಿತ್ತು. ಇದೇ ಕಾರಣಕ್ಕಾಗಿ ಚೀನಾ ಸಾರಥ್ಯದ 15 ರಾಷ್ಟ್ರಗಳ ಮುಕ್ತ ವ್ಯಾಪಾರ ಒಪ್ಪಂದದಿಂದಲೂ ಹಿಂದೆ ಸರಿದಿತ್ತು. ಆದರೆ ಅಮೆರಿಕ ಜತೆ ಈ ಹೊಸ ಬಂಧ ಏರ್ಪಡುತ್ತಿರುವುದೇಕೆಂಬ ಪ್ರಶ್ನೆ ಕಾಡುತ್ತಿದೆ.
ರಾಜ್ಯದ ಸ್ಥಿತಿ ಏನು?
ಕರ್ನಾಟಕದಲ್ಲಿ ಕೆಎಂಎಫ್ 22 ಸಾವಿರ ಹಳ್ಳಿಗಳ 23 ಲಕ್ಷ ಹಾಲು ಉತ್ಪಾದಕರಿಂದ 14 ಸಾವಿರ ಹಾಲು ಸಹಕಾರಿ ಸಂಘಗಳ ಮೂಲಕ ಪ್ರತಿ ದಿನ 84 ಲಕ್ಷ ಲೀಟರ್ ಸಂಗ್ರಹಿಸುತ್ತಿದೆ. ಇದೇ ರೀತಿ ದೇಶಾದ್ಯಂತ ಸಹಕಾರಿ ಹಾಗೂ ಖಾಸಗಿ ಡೈರಿಗಳು ಗ್ರಾಮೀಣ ಭಾಗದಿಂದ ಹಾಲು ಸಂಗ್ರಹಿಸಿ ಹೈನೋದ್ಯಮವನ್ನು ಬೆಳೆಸಿದೆ. ಒಂದು ವೇಳೆ ಅಮೆರಿಕದ ಡೈರಿ ಉತ್ಪನ್ನ ಭಾರತಕ್ಕೆ ಬಂದರೆ ಈ ದೇಶೀ ಮಾರುಕಟ್ಟೆಗೆ ದೊಡ್ಡ ಪೈಪೋಟಿ ಸೃಷ್ಟಿಯಾಗಲಿದೆ. ಇಲ್ಲಿರುವ ಮಾರುಕಟ್ಟೆಯನ್ನು ಸಡಿಲ ಮಾಡುವುದಕ್ಕಾದರೂ ಅಮೆರಿಕ ಕಂಪನಿಗಳು ಪೈಪೋಟಿ ದರ ನೀಡಿ ಹಾಲಿನ ಉತ್ಪನ್ನ ಮಾರಾಟ ಮಾಡಿದರೂ ಕಷ್ಟವಾಗುತ್ತದೆ.
ಅಮೆರಿಕದಿಂದ ಹಾಲು ಮತ್ತು ಹಾಲಿನ ಉತ್ಪನ್ನ ಭಾರತಕ್ಕೆ ಬರುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆ ದೇಶದ ಉತ್ಪನ್ನ ಅಲ್ಲಿಗೆ ಸೀಮಿತವಾಗುವಷ್ಟಿದೆ. ಹೀಗಾಗಿ ಬರುವುದು ಅನುಮಾನ. ಒಂದು ವೇಳೆ ಬಂದಿದ್ದೇ ಆದರೆ, ಇಲ್ಲಿ ಪೈಪೋಟಿ ಶುರುವಾಗಲಿದೆ. ಹೈನೋದ್ಯಮಕ್ಕೆ ಪೆಟ್ಟು ಬೀಳಬಹುದು.
| ಜಿ.ಟಿ. ಗೋಪಾಲ್ ಎಂಡಿ, ಬೆಂಗಳೂರು ಡೈರಿ
ಪ್ರತಿಸ್ಪರ್ಧಿಯಾದ ಭಾರತ
ಅಮೆರಿಕ ತನ್ನ ಟ್ರೇಡ್ ರೆಪ್ರಸೆಂಟಿಟೀವ್ಸ್ ಪಟ್ಟಿಯಿಂದ (ಯುಎಸ್​ಟಿಆರ್) ಭಾರತವನ್ನು ಹೊರಗಿಟ್ಟಿದೆ. ಅಭಿವೃದ್ಧಿಶೀಲ ಹಾಗೂ ಸಣ್ಣ ಪ್ರಮಾಣದ ವಾಣಿಜ್ಯ ವಹಿವಾಟು ನಡೆಸುವ ರಾಷ್ಟ್ರಗಳನ್ನು ಈ ಪಟ್ಟಿಯಲ್ಲಿ ಹೆಸರಿಸಿ, ಆ ರಾಷ್ಟ್ರಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತಿತ್ತು ಹಾಗೂ ರಪ್ತು ಹಾಗೂ ಆಮದಿನ ಮೇಲೆ ಯಾವುದೇ ನಿರ್ಬಂಧ ವಿಧಿಸುತ್ತಿರಲಿಲ್ಲ. ಆದರೆ, ಈಗ ಭಾರತವನ್ನು ಈಗ ವಾಣಿಜ್ಯ ವಹಿವಾಟಿನ ಪ್ರತಿಸ್ಪರ್ಧಿ ಎಂದೇ ಅಮೆರಿಕ ಪರಿಗಣಿಸಲಿದೆ.
ಭಾರತದ ಕ್ಷೀರನಂಟು
2. ದಿನಬಳಕೆಗೆ ಹಾಲಿನ ಹೊರತಾಗಿ ಮೊಸರು, ಮಜ್ಜಿಗೆ, ಹಾಲಿನ ಪೌಡರ್, ಚೀಸ್, ಸಿಹಿ ತಿಂಡಿ ಸೇರಿ ವಿವಿಧ ಉತ್ಪನ್ನಗಳು ಉತ್ತಮ ಮಾರುಕಟ್ಟೆ ಹೊಂದಿದೆ.
3. ಪ್ರತಿನಿತ್ಯ ರೈತರಿಂದ ಸಂಗ್ರಹವಾಗುವ ಹಾಲು ನಷ್ಟವಾಗದಂತೆ ಆದ್ಯತೆ ಮೇಲೆ ಹಾಲಿನ ಪೌಡರ್ ಅನ್ನು ತಯಾರಿಸಲಾಗುತ್ತದೆ.
4. ಹಾಲಿನ ಉತ್ಪನ್ನಗಳು ಬೇಕರಿ, ಸಿಹಿ ತಿನಿಸು, ಚಾಕೋಲೇಟ್ ಉತ್ಪನ್ನಗಳಲ್ಲಿ ಪ್ರಮುಖವಾಗಿ ಬಳಕೆಯಾಗುತ್ತದೆ.
5. ಡೈರಿ ಎಂದರೆ ಹಾಲು ಎಂದಷ್ಟೆ ಭಾವಿಸಬೇಕಿಲ್ಲ, ಹಾಲಿನ ಪುಡಿ, ತುಪ್ಪ ಕೂಡ ದೊಡ್ಡ ಮಟ್ಟದ ಮಾರುಕಟ್ಟೆ ಹೊಂದಿದೆ.
ಮಾಂಸೋದ್ಯಮದ ಬಗ್ಗೆ ಅಮೆರಿಕಾ ಒಡಂಬಡಿಕೆ ಮಾಡಿಕೊಳ್ಳುವ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಅಮೆರಿಕಾ ಉತ್ಪನ್ನ ದೇಶದ ಮಾರುಕಟ್ಟೆಗೆ ಬಂದರೆ ಸಹಜವಾಗಿ ಪೈಪೋಟಿ ನಡೆಯುತ್ತದೆ.
| ಡಿ.ಕೆ. ಕಾಂತರಾಜು ಅಧ್ಯಕ್ಷರು, ಕರ್ನಾಟಕ ಸಹಕಾರ ಕುಕ್ಕಟ ಮಹಾ ಮಂಡಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + eight =
Remember me
